ಲಾಕ್‌ಡೌನ್‌ ಹೊಡೆತಕ್ಕೆ ತತ್ತರಿಸಿದ ಜವಳಿ ಕ್ಷೇತ್ರ

ಲಾಕ್‌ಡೌನ್‌ ಹೊಡೆತಕ್ಕೆ ತತ್ತರಿಸಿದ ಜವಳಿ ಕ್ಷೇತ್ರ

ಬಾರದ ಕಾರ್ಮಿಕರು, ಉತ್ಪಾದಿತ ವಸ್ತುಗಳಿಗೆ ಬೇಡಿಕೆ ಕೊರತೆ ಆತಂಕ

ಇಲ್ಲದ ಬೇಡಿಕೆ, ಸಲ್ಲದ ನಿಯಮಗಳು, ಕಾರ್ಮಿಕರ ಕೊರತೆಯ ಕಾರಣಕ್ಕಾಗಿ ಜಿಲ್ಲೆ ಯಲ್ಲಿನ ಟೆಕ್ಸ್‌ಟೈಲ್ಸ್ ಮಿಲ್‌ಗಳು ಲಾಕ್‌ಡೌನ್ ಗ್ರಹಣದಿಂದ ವಿಮೋಚನೆ ಪಡೆಯುವ ಸೂಚನೆಗಳಂತೂ ಸದ್ಯಕ್ಕೆ ಕಾಣ ಸಿಗುತ್ತಿಲ್ಲ.

ಕೊರೊನಾ ಸೋಂಕು ನಿಯಂತ್ರಿಸಲು ಲಾಕ್‌ಡೌನ್‌ ಘೋಷಣೆ ಆದಾಗಿನಿಂದ ಟೆಕ್ಸ್ ಟೈಲ್‌ ಪಾರ್ಕುಗಳು ಬಾಗಿಲು ಮುಚ್ಚಿವೆ. ಇದನ್ನೇ ನೆಚ್ಚಿಕೊಂಡಿದ್ದ ಸಾವಿರಾರು ಕಾರ್ಮಿಕರ ಬದುಕು ಬರಡಾಗಿದೆ.  ಹಲವಾರು ಕಾರ್ಮಿಕರು ತರಕಾರಿ, ಹಣ್ಣು ಮಾರಾಟ ಮಾಡಲಾರಂಭಿಸಿದ್ದಾರೆ.

ನಗರದ ಹೊರ ವಲಯದ ಕರೂರು ಕೈಗಾರಿಕಾ ಪ್ರದೇಶದಲ್ಲಿ 82 ಎಕರೆ ವಿಸ್ತೀರ್ಣ ದಲ್ಲಿ 2009ರಲ್ಲಿ ಟೆಕ್ಸಟೈಲ್ ಪಾರ್ಕ್ ಆರಂಭಿ ಸಲಾಗಿತ್ತು. 60ಕ್ಕೂ ಹೆಚ್ಚು ಘಟಕಗಳು ಇಲ್ಲಿ ಕಾರ್ಯ ನಿರ್ವಹಿಸುತ್ತಿವೆ. ಮೂಲ ಸೌಕರ್ಯ ಗಳ ಕೊರತೆಯ ಹೊರತಾ ಗಿಯೂ ಸಂಕಷ್ಟ ದಲ್ಲಿ ಕಾರ್ಯೋನ್ಮುಖವಾಗಿದ್ದ ಈ ಉದ್ಯಮ ಲಾಕ್‌ಡೌನ್‌ ಕಾರಣದಿಂದ ತತ್ತರಿಸಿದೆ.

ಸರ್ಕಾರ  ಲಾಕ್‌ಡೌನ್ ಸಡಿಲಗೊಳಿಸಿ ಉದ್ಯಮಗಳನ್ನು ಆರಂಭಿಸಲು ಅನುಮತಿ ನೀಡಿದೆಯಾದರೂ, ಟೆಕ್ಸ್ ಟೈಲ್ ಮಿಲ್‌ಗಳು ಬಾಗಿಲು ತೆರೆಯಲು ಹಲವಾರು ಸಮಸ್ಯೆಗಳು ತಳುಕು ಹಾಕಿಕೊಂಡಿವೆ.

ಸದ್ಯ ಉದ್ಯಮಗಳ ಆರಂಭಕ್ಕೆ ದಾವಣಗೆರೆ ಇಂಡಸ್ಟ್ರೀಯಲ್ ಕಾರ್ಪೊರೇಷನ್ ವತಿಯಿಂದ ಷರತ್ತುಗಳಿಗೆ ಬದ್ಧವಾಗಿ ಅನುಮತಿ ಪಡೆಯಬೇಕಿದೆ. ಈ ಷರತ್ತುಗಳು ಟೆಕ್ಸ್‌ಟೈಲ್‌ ಮಿಲ್‌ಗಳಿಗೆ ಕಠಿಣವಾಗಿವೆ ಎಂಬುದು ಮಾಲೀಕರು ಮಾತು.

ಮಾಸ್ಕ್, ಸ್ಯಾನಿಟೈಸರ್, ಸಾಮಾಜಿಕ ಅಂತರ ಸೇರಿದಂತೆ ಎಚ್ಚರಿಕೆ ವಹಿಸಬಹುದು. ಆದರೆ ಸಿಬ್ಬಂದಿಗಳ ಸಂಖ್ಯೆಯನ್ನು ಮಿತಿಗೊ ಳಿಸಿ ಕಾರ್ಯನಿರ್ವಹಿಸಬೇಕೆಂಬ ಸರ್ಕಾರದ ನಿಯಮವನ್ನು ಟೆಕ್ಸ್‌ಟೈಲ್‌ ಮಿಲ್‌ಗಳಲ್ಲಿ ಪಾಲಿಸುವುದು ಕಷ್ಟ. ಇಲ್ಲಿ ಎಲ್ಲರೂ ಕಾರ್ಯ ನಿರ್ವಹಿಸಬೇಕಾಗುತ್ತದೆ. ಸಿಬ್ಬಂದಿ ಕಡಿತ ಗೊಳಿಸಿ ಬಟ್ಟೆಗಳನ್ನು ತಯಾರಿಸುವುದು ಕಷ್ಟ.

ಬೇಡಿಕೆ ಕುಸಿತ:  ಲಾಕ್‌ಡೌನ್‌ ಕಾರಣ ಬಟ್ಟೆ ಅಂಗಡಿಗಳ ಆರಂಭಕ್ಕೆ ಅನುಮತಿ ಇರಲಿಲ್ಲ. ಬೇರೆ ಜಿಲ್ಲೆಗಳಲ್ಲಿ ತುಸು ಸಡಿಲ ಮಾಡಿದ್ದರೂ, ದಾವಣಗೆರೆ  ಜಿಲ್ಲೆಯಲ್ಲಂತೂ ಬಟ್ಟೆ ಅಂಗಡಿಗಳಿಗೆ ಅನುಮತಿ ನೀಡಿರುವುದು ಮೊನ್ನೆ ಮಾತ್ರ. ಅದೂ  ಷರತ್ತುಗಳೊಂದಿಗೆ.

ಬಟ್ಟೆ ಅಂಗಡಿಗಳು ವ್ಯಾಪಾರ ನಡೆಸದ ಕಾರಣ ಅವರಲ್ಲಿ ಸಾಕಷ್ಟು ದಾಸ್ತಾನಿದೆ. ಇರುವ ದಾಸ್ತಾನನ್ನೇ ಖಾಲಿ ಮಾಡಿದರೆ ಸಾಕು ಎಂಬ ಆಲೋಚನೆಯಲ್ಲಿ ಅಂಗಡಿ ಮಾಲೀಕರಿದ್ದಾರೆ. ಸದ್ಯ ಕೊರೊನಾ ಸೋಂಕಿನ ಭಯದಲ್ಲಿರುವ ಜನತೆ ಅಂಗಡಿಗಳತ್ತ ಮುಖ ಮಾಡುತ್ತಿಲ್ಲ. ಇಂತಿಷ್ಟೇ ಜನರನ್ನು ಒಳ ಬಿಡಬೇಕೆಂಬ ನಿಯಮಗಳಿಂದ ವ್ಯವಹಾರವೂ ಮೊದಲಿ ನಂತಿಲ್ಲ. ಈ ಎಲ್ಲಾ ಕಾರಣಗಳಿಂದ ಜವಳಿ ವ್ಯಾಪಾರ ಕುಸಿತ ಕಂಡಿದೆ.

ನಗರಗಳಲ್ಲಿ ವ್ಯವಹಾರ ಮೊದಲಿನಂತಾ ಗದ ಹೊರತು ಹೋಲ್ ಸೇಲ್ ವ್ಯಾಪಾರಿಗಳು ನಮ್ಮ ಬಳಿ ಬರುವುದಿಲ್ಲ. ಇಂತಹ ಸಂಕಷ್ಟದ ಸಮಯದಲ್ಲೂ ಕಷ್ಟ ಪಟ್ಟು ನಾವು ಬಟ್ಟೆ ಉತ್ಪಾದಿಸಿದರೂ ಬೇಡಿಕೆ ಇಲ್ಲವೆಂದರೆ ಏನು ಮಾಡುವುದು? ಎಂಬುದು ಮಾಲೀಕರ ಪ್ರಶ್ನೆ.

ಕಚ್ಚಾ ವಸ್ತುಗಳ ಕೊರತೆ: ಟೆಕ್ಸ್ ಟೈಲ್ ಮಿಲ್‌ಗಳಿಗೆ ಅಗತ್ಯವಾದ ಕಚ್ಚಾ ವಸ್ತುಗಳನ್ನು ತರಿಸುವುದು ಹೊರ ರಾಜ್ಯಗಳಿಂದ. ಅಲ್ಲಿಯೂ ಲಾಕ್‌ಡೌನ್ ಪರಿಣಾಮ ಕಚ್ಚಾ ವಸ್ತುಗಳ ತಯಾರಿಕೆ, ಮಾರಾಟ ಸ್ಥಗಿತವಾಗಿದೆ. ಇದ್ದರೂ ದುಪ್ಪಟ್ಟು ಬೆಲೆ ಕೊಟ್ಟು ತಂದು ಉತ್ಪಾದಿಸಿದರೂ ಲಾಭ ಸಿಗುವ ನಿರೀಕ್ಷೆ ಇಲ್ಲ.

ಕಾರ್ಮಿಕರ ಕೊರತೆ: ಸದ್ಯ ನಗರದ ಹೊರವಲಯದಲ್ಲಿನ ಟೆಕ್ಸ್‌ಟೈಲ್ಸ್ ಮಿಲ್‌ಗಳಿಗೆ ಕಾರ್ಮಿಕರ ಕೊರತೆ ತೀವ್ರವಾಗಿ ಕಾಡುತ್ತಿದೆ. ಇಲ್ಲಿಗೆ ಬರಬೇಕಾದ ಕಾರ್ಮಿಕರಲ್ಲಿ ಹೊರ ಜಿಲ್ಲೆ, ರಾಜ್ಯದವರೇ ಹೆಚ್ಚು. ಅವರಂತೂ ಸದ್ಯ ಇತ್ತ ಮುಖಮಾಡುತ್ತಿಲ್ಲ. ಇವರನ್ನು ಹೊರತು ಪಡಿಸಿದರೆ  ನಗರ ಹಾಗೂ ಸುತ್ತ ಮುತ್ತಲಿನ ಗ್ರಾಮದವರು ಬರುತ್ತಿದ್ದರು. ಆದರೆ ನಗರದಲ್ಲಿ ಕೆಲ ಪ್ರದೇಶಗಳು ಸೀಲ್ ಡೌನ್‌ ಆದ ಕಾರಣ ಅಲ್ಲಿನ ಜನರು ಕೆಲಸಕ್ಕೆ ಬರಲಾಗುತ್ತಿಲ್ಲ.

ಸುತ್ತ ಮುತ್ತಲಿನ ಗ್ರಾಮಗಳಲ್ಲಿ ದಾವಣಗೆ ರೆಯಿಂದ ಒಳ ಬಾರದಂತೆ ಹಾಗೂ ಗ್ರಾಮ ಗಳಿಂದ ದಾವಣಗೆರೆಗೆ ತೆರಳದಂತೆ ಬೇಲಿ ಹಾಕಿಕೊಂಡು ಕುಳಿತಿದ್ದಾರೆ. ಇದರಿಂದಾಗಿ ಕಾರ್ಮಿಕರ ಕೊರತೆ ತಲೆದೋರಿದೆ.


ಕೆ.ಎನ್. ಮಲ್ಲಿಕಾರ್ಜುನ ಮೂರ್ತಿ
9964930983
knmallu@gmail.com

Leave a Reply

Your email address will not be published.