ಸಾರ್ವಜನಿಕ ತೆರಿಗೆ ಹಣದಲ್ಲಿ ಕಿಟ್ ವಿತರಣೆ : ಸಮಂಜಸವೇ?

ಸಾರ್ವಜನಿಕ ತೆರಿಗೆ ಹಣದಲ್ಲಿ ಕಿಟ್ ವಿತರಣೆ : ಸಮಂಜಸವೇ?

ಸೋಂಕಿನ ರೋಗ ಕೊರೊನಾ ವೈರಸ್ ಹಿನ್ನೆಲೆಯಲ್ಲಿ ಆಗಿರುವ ಲಾಕ್ ಡೌನ್ ಪರಿಣಾಮ ಅಗತ್ಯತೆಯುಳ್ಳವರಿಗೆ ಹಸಿವು ನೀಗಿಸುವ ನಿಟ್ಟಿನಲ್ಲಿ ದಾವಣಗೆರೆ ಮಹಾನಗರ ಪಾಲಿಕೆಯು ಆಹಾರ ಪದಾರ್ಥಗಳ ಕಿಟ್ ಗಳನ್ನು ನೀಡುತ್ತಿರುವುದು ಸ್ವಾಗತಾರ್ಹ.
ನಗರ ಪಾಲಿಕೆ ವತಿಯಿಂದ ಕೋಟ್ಯಾಂತರ ರೂ.ಗಳ ವೆಚ್ಚದಲ್ಲಿ 30 ಸಾವಿರ ಕಿಟ್ ಗಳನ್ನು ಸಿದ್ಧಪಡಿಸಿ, ಪಾಲಿಕೆ ವ್ಯಾಪ್ತಿಯ ಎಲ್ಲಾ 45 ವಾರ್ಡುಗಳಿಗೂ ವಾರ್ಡೊಂದಕ್ಕೆ 500 ಕಿಟ್ ಗಳಂತೆ ಆಯಾ ವಾರ್ಡುಗಳ ಪಾಲಿಕೆ ಸದಸ್ಯರ ನೇತೃತ್ವ ದಲ್ಲಿ ವಿತರಿಸುವ ಕಾರ್ಯವನ್ನು ಈಗಾಗಲೇ ಆರಂಭಿಸಲಾಗಿದೆ.
ಕೊಡುಗೈ ನಗರ – ದಾನಿಗಳ ಊರು ಎಂಬ ಬಿರುದುಗಳನ್ನು ಪಡೆದಿರುವ ದಾವಣಗೆರೆಯಲ್ಲಿ ಸಾಕಷ್ಟು ದಾನಿಗಳು ತಮ್ಮ – ತಮ್ಮ ವೈಯಕ್ತಿಕವಾಗಿ ಮತ್ತು ಹಲವಾರು ಸಂಘ – ಸಂಸ್ಥೆಗಳು ಆಹಾರದ ಕಿಟ್ ಗಳನ್ನು ವಿತರಿಸುವಲ್ಲಿ ನಾ ಮುಂದೆ, ತಾ ಮುಂದೆ ಎಂದು ಪರದಾಡುತ್ತಿವೆ. ಇದರ ಜೊತೆಗೆ ಪಾಲಿಕೆಯೂ ಹೊರತಲ್ಲ; ಇಂತಹ ಸಮಾಜ ಮುಖಿ ಸೇವೆ ಶ್ಲ್ಯಾಘನೀಯ ಮತ್ತು ಅರ್ಥಪೂರ್ಣ.
ಆದರೆ, ನಾಗರಿಕರಿಗೆ ಮೂಲಭೂತ ಸೌಲಭ್ಯ ಒದಗಿಸುವ ನಿಟ್ಟಿನಲ್ಲಿ ಸಾರ್ವಜನಿಕರಿಂದ ಸಂಗ್ರಹಿಸಿದ ಸ್ವಯಂ ಆಸ್ತಿ ತೆರಿಗೆ ಮತ್ತು ನೀರಿನ ಕಂದಾಯದ ಹಣದಲ್ಲಿ ಕಿಟ್ ಗಳನ್ನು ವಿತರಿಸುತ್ತಿರುವುದು ಅಷ್ಟೊಂದು ಸಮಂಜಸವಲ್ಲ ಎನಿಸುತ್ತದೆ. ವರ್ಷಾನುಗಟ್ಟಲೇ ಸಾರ್ವಜನಿಕರು ಕಷ್ಟಪಟ್ಟು ಕಟ್ಟಿದ ತೆರಿಗೆಯ ಹಣದಲ್ಲಿ ಸಾರ್ವಜನಿಕರಿಗೆ ಅಗತ್ಯ ಸೇವೆ ಒದಗಿಸುವುದು ಪಾಲಿಕೆಯ ಆದ್ಯ ಕರ್ತವ್ಯ.
ಅಲ್ಲದೇ, ದಿನ – ದಿನಕ್ಕೂ ಬೆಳೆಯುತ್ತಿರುವ ದಾವಣಗೆರೆ ಮಹಾನಗರಕ್ಕೆ ಕುಡಿಯುವ ನೀರು, ಸ್ವಚ್ಛತೆ, ರಸ್ತೆ, ವಿದ್ಯುತ್ ಸೇರಿದಂತೆ ಮೂಲಭೂತ ಸೌಲಭ್ಯಗಳನ್ನು ನೀಡಲು ಸಾರ್ವಜನಿಕರಿಂದ ವಸೂಲಿಯಾದ ತೆರಿಗೆಯ ಹಣ ಯಾವುದಕ್ಕೂ ಸಾಕಾಗುವುದಿಲ್ಲ. ಸರ್ಕಾರಗಳಿಂದ ವಿವಿಧ ಯೋಜನೆಗಳಡಿಯಲ್ಲಿ ಅನುದಾನಗಳನ್ನು ಪಡೆದು ನಿರ್ವಹಿಸುವುದು ಅನಿವಾರ್ಯ.
ಕೊರೊನಾ ವೈರಸ್ ಕಾರಣ ಆಗಿರುವ ಲಾಕ್ ಡೌನ್ ಪರಿಣಾಮ, ಕಳೆದ ಎರಡು ತಿಂಗಳಿಂದ ತೆರಿಗೆ ಹಣ ಬರುತ್ತಿರುವುದು ಅಷ್ಟಕ್ಕಷ್ಟೇ ಎನ್ನಲಾಗುತ್ತಿದೆ. ಜೊತೆಗೆ, ನಗರ ಮಾತ್ರವಲ್ಲದೇ ರಾಜ್ಯ, ರಾಷ್ಟ್ರದ ಪ್ರಸ್ತುತ ಪರಿಸ್ಥಿತಿಯನ್ನು ಅವಲೋಕಿಸಿದರೆ ಮುಂದಿನ ಕನಿಷ್ಠ  ಎರಡು ವರ್ಷಗಳಾದರೂ ಸರ್ಕಾರದಿಂದ ಯಾವುದೇ ಅನುದಾನ ನಿರೀಕ್ಷಿಸುವುದು ಅಸಾಧ್ಯದ ಮಾತು. ಇದರಿಂದ ಮುಂಬರುವ ದಿನಗಳಲ್ಲಿ ನಗರದ ಅಭಿವೃದ್ಧಿ ಕಾರ್ಯಗಳು ಕುಂಠಿತಗೊಳ್ಳುವಲ್ಲಿ ಅನುಮಾನವೇ ಇಲ್ಲ.

ಇಂತಹ ಕ್ಲಿಷ್ಟಕರ ಪರಿಸ್ಥಿತಿಯಲ್ಲಿ  ಸುಮಾರು ಒಂದು ಕೋಟಿ ರೂ.ಗಳಿಗೂ ಹೆಚ್ಚು  ವ್ಯಯ ಮಾಡಿ ಕಿಟ್ ಗಳನ್ನು ವಿತರಿಸುವುದರ ಬದಲು, ಕೊರೊನಾ ವೈರಸ್ಸನ್ನು ನಿಯಂತ್ರಿಸಲು ಸಹಕಾರಿಯಾಗುವಂತಹ ಸಾರ್ವಜನಿಕರಿಗೆ ಅನುಕೂಲವಾಗುವಂತಹ ಶಾಶ್ವತ ಯೋಜನೆಗಳನ್ನು ರೂಪಿಸಿದ್ದರೆ ಹೆಚ್ಚು ಸೂಕ್ತವಾಗುತ್ತಿತ್ತು.
ಅಗತ್ಯತೆಯುಳ್ಳವರಿಗೆ ಆಹಾರದ ಕಿಟ್ ಗಳನ್ನು ವಿತರಿಸುವುದು ತಪ್ಪಲ್ಲ. ಅದಕ್ಕಾಗಿ ಸಾಕಷ್ಟು ಸಂಘ-ಸಂಸ್ಥೆಗಳು, ದಾನಿಗಳು ಮುಂದೆ ಬಂದಿದ್ದಾರೆ. ಕಿಟ್ ಗಳನ್ನು ಕೊಡಲೇ ಬೇಕಿದ್ದರೆ ಪೂಜ್ಯ ಮಹಾಪೌರರು, ಉಪ ಮಹಾಪೌರರು, ಪಾಲಿಕೆ ಸದಸ್ಯರು ತಮಗೆ ಬರುವ ಗೌರವ ಧನ ಹಾಗೂ ಅಧಿಕಾರಿಗಳು, ಸಿಬ್ಬಂದಿ ವರ್ಗದವರು ತಮಗೆ ಬರುವ ವೇತನದಲ್ಲಿ ಸ್ವಲ್ಪ ಹಣವನ್ನು ಸಂಗ್ರಹಿಸಿ ಕೊಟ್ಟಿದ್ದರೆ ಅದೊಂದು ಮಾದರಿ ಸಾಮಾಜಿಕ ಸೇವೆಯಾಗಿರುತ್ತಿತ್ತು.
ಮಹಾನಗರ ಪಾಲಿಕೆಯ ಸದಸ್ಯರುಗಳ ಪೈಕಿ ಕೆಲವರು ಕೋಟ್ಯಾಧಿಪತಿಗಳಿದ್ದರೆ ಮತ್ತೆ ಕೆಲವರು ಲಕ್ಷಾಧಿಪತಿಗಳಿದ್ದಾರೆ. ಅವರೆಲ್ಲರೂ ಮನಸ್ಸು ಮಾಡಿ ಸಂಕಷ್ಟಕ್ಕೊಳಗಾದವರಿಗೆ ಕಿಟ್ ಗಳನ್ನು ವಿತರಿಸುವುದರ ಮೂಲಕ ಸಮಾಜ ಸೇವೆಗೆ ಕೈ ಚಾಚುವಂತಾಗಲಿ ; ಆ ಸೇವೆಯಿಂದ ಸಂತೃಪ್ತಿಗೊಳಗಾಗಲಿ.
ಈಗಲಾದರೂ ಕಾಲ ಮಿಂಚಿಲ್ಲ; ಪಾಲಿಕೆಯಿಂದ ಖರ್ಚು ಮಾಡಿರುವ ಲಕ್ಷಾಂತರ ಹಣವನ್ನು ಪಾಲಿಕೆ ಸದಸ್ಯರು, ಅಧಿಕಾರಿಗಳು, ಸಿಬ್ಬಂದಿಗಳು ಸೇರಿ ಪಾಲಿಕೆಗೆ ಜಮಾ ಮಾಡಿ, ಪಾಲಿಕೆಯಿಂದ ಕೊರೊನಾ ವೈರಸ್ ನಿಯಂತ್ರಿಸುವ ಶಾಶ್ವತ ಯೋಜನೆ ರೂಪಿಸಲಿ ; ಆ ಮೂಲಕ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಲಿ. ಶಾಶ್ವತ ಯೋಜನೆ ಸಾಧ್ಯವಾಗದಿ ದ್ದರೆ ಕೊರೊನಾ ವೈರಸ್ ಸೋಂಕು ಹರಡದಂತೆ, ಅದನ್ನು ನಿಯಂತ್ರಿಸುವಲ್ಲಿ ಹಗಲಿರುಳು ಶ್ರಮಿಸುತ್ತಿರುವ ಪೊಲೀಸರು, ಆರೋಗ್ಯ ಸೇವಕರು, ಆಶಾ ಕಾರ್ಯಕರ್ತರಿಗೆ ಅನುಕೂಲ ವಾಗುವಂತಹ ಕೊಡುಗೆ ನೀಡಲಿ ; ಈ ಬಗ್ಗೆ ಮಹಾನಗರ ಪಾಲಿಕೆಯು ವಿಶೇಷವಾಗಿ ಗಮನ ಹರಿಸುವುದು ಸೂಕ್ತ.


ಇ.ಎಂ. ಮಂಜುನಾಥ
9448277772
shivajyothi.manju@gmail.com