ಎಪಿಎಂಸಿ ಕಾಯ್ದೆ ತಿದ್ದುಪಡಿ ವಿರೋಧಿಸಿ ಪ್ರತಿಭಟನೆ

ಎಪಿಎಂಸಿ ಕಾಯ್ದೆ ತಿದ್ದುಪಡಿ ವಿರೋಧಿಸಿ ಪ್ರತಿಭಟನೆ

ಹರಪನಹಳ್ಳಿ, ಮೇ 15- ಎಪಿಎಂಸಿ ಸುಗ್ರೀವಾಜ್ಞೆಗೆ ರಾಜ್ಯ ಸಂಪುಟ ಸಭೆಯಲ್ಲಿ ಒಪ್ಪಿಗೆ ನೀಡಿರುವುದನ್ನು ಖಂಡಿಸಿ ಪಟ್ಟಣದಲ್ಲಿ ರೈತರು ಶುಕ್ರವಾರ  ಪ್ರತಿಭಟನೆ ನಡೆಸಿ ತಹಶೀಲ್ದಾರ್ ಅವರಿಗೆ ಮನವಿ ಪತ್ರ ಸಲ್ಲಿಸಿದರು.

ಈ ಸಂದರ್ಭದಲ್ಲಿ ರೈತ ಸಂಘ ಮತ್ತು ಹಸಿರು ಸೇನೆಯ (ಹುಚ್ಚವ್ವನ ಹಳ್ಳಿ ಮಂಜುನಾಥ ಬಣ) ದಾವಣಗೆರೆ ಜಿಲ್ಲಾಧ್ಯಕ್ಷ ಅರಸನಾಳು ಜಿ. ಸಿದ್ದಪ್ಪ ಮಾತನಾಡಿ, ರಾಜ್ಯ ಸರ್ಕಾರ ತರಾತುರಿ ಯಲ್ಲಿ ಸುಗ್ರೀವಾಜ್ಞೆಗೆ ಮುಂದಾಗಿರುವುದು ಹಲವು ಶಂಕೆ, ಪ್ರಶ್ನೆಗಳನ್ನು ಹುಟ್ಟು ಹಾಕಿದೆ. ಕೃಷಿ ಉತ್ಪನ್ನಗಳ ಮಾರುಕಟ್ಟೆ ಕೆಲವೇ ಸಂಸ್ಥೆಗಳ ಹಿಡಿತಕ್ಕೆ ಸಿಕ್ಕು ಏಕಸ್ವಾಮ್ಯ ಸ್ಥಿತಿಗೆ ತಲುಪುವ ಅಪಾಯದಲ್ಲಿದೆ ಎಂದು ಅವರು ದೂರಿದರು.

ರೈತರು ಎಪಿಎಂಸಿಯಲ್ಲಿಯೇ ಮಾರಬೇಕು ಎಂಬ ನಿಯಮ ರದ್ದು ಮಾಡಿರುವುದು, ಖಾಸಗಿಯವರು ಮಾರುಕಟ್ಟೆಗಳನ್ನು ಸ್ಥಾಪಿಸಿ ಕೊಳ್ಳಬಹುದು ಎಂಬ ಧೋರಣೆ ಸರಿಯಲ್ಲ. ಈ ಪಾಲಿಸಿ ರೈತರನ್ನು ಇನ್ನಷ್ಟು ತೊಂದರೆಗೀಡು ಮಾಡಿದಂತೆ ಎಂದು ಅವರು ಆರೋಪಿಸಿದರು.

ಖರೀದಿ, ಮಾರಾಟದಲ್ಲಿ ಎಪಿಎಂಸಿಗೆ ನಿಯಂತ್ರಣ ಇಲ್ಲದಿರುವಂತೆ ಮಾಡಿರುವುದು ಖಂಡನೀಯ ಎಂದ ಅವರು, ಒಟ್ಟಿನಲ್ಲಿ ಎಪಿಎಂಸಿ ಖಾಸಗೀಕರಣದ ಮರಣ ಶಾಸನವನ್ನು ಕೂಡಲೇ ವಾಪಸ್‌ ಪಡೆಯಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ಬಳ್ಳಾರಿ ಜಿಲ್ಲಾ ಮುಖಂಡ ಎಸ್.ಎಂ. ಮಹೇಶ್ವರಪ್ಪ, ನೀಲಗುಂದ ಚೆನ್ನಪ್ಪ, ತಲವಾಗಲು ಕರಿಯಪ್ಪ, ಅರಸನಾಳು ಜಿ.ಶಿವಕುಮಾರ್  ಪಾಲ್ಗೊಂಡಿದ್ದರು. 

Leave a Reply

Your email address will not be published.