ನೆಲಕಚ್ಚಿದ ಭತ್ತದ ಬೆಳೆ, ನೆಲಕ್ಕುರುಳಿದ ಅಡಿಕೆ, ತೆಂಗು, ಬಾಳೆ

ನೆಲಕಚ್ಚಿದ ಭತ್ತದ ಬೆಳೆ, ನೆಲಕ್ಕುರುಳಿದ ಅಡಿಕೆ, ತೆಂಗು, ಬಾಳೆ

ಮಲೆಬೆನ್ನೂರು ಸುತ್ತಮುತ್ತ ಭಾರೀ ಬಿರುಗಾಳಿ ಸಹಿತ ಮಳೆ 

ಮಲೇಬೆನ್ನೂರು, ಮೇ 14- ನಿನ್ನೆ ಸಂಜೆ ಸುರಿದ ಭಾರೀ ಬಿರುಗಾಳಿ ಸಹಿತ ಮಳೆಯಿಂದಾಗಿ ಕುಂಬಳೂರು, ನಿಟ್ಟೂರು, ಕೊಮಾರನಹಳ್ಳಿ,  ಮಲೇಬೆನ್ನೂರಿನಲ್ಲಿ ನೂರಾರು ಎಕರೆ ಭತ್ತದ ಬೆಳೆ, ಅಡಿಕೆ, ತೆಂಗು, ಬಾಳೆ ಮತ್ತು ತ್ಯಾಗದ ಮರಗಳು ನೆಲಕಚ್ಚಿವೆ.
ಅಲ್ಲದೇ, ಮಲೇಬೆನ್ನೂರು ಪಟ್ಟಣದಲ್ಲಿ 10 ಮನೆಗಳಿಗೆ ಭಾಗಶಃ ಹಾನಿಯಾಗಿದ್ದು, ವಿದ್ಯುತ್‌ ಕಂಬಗಳು ಮುರಿದು ಬಿದ್ದಿರುವ ಕಾರಣ ನಿನ್ನೆ ಸಂಜೆಯಿಂದ ಮಲೇಬೆನ್ನೂರು ಹಾಗೂ ಸುತ್ತಮುತ್ತಲಿನ ಹಳ್ಳಿಗಳಲ್ಲಿ ವಿದ್ಯುತ್‌ ಸಂಪರ್ಕ ಕಡಿತಗೊಂಡಿದೆ.
ಕಟಾವಿಗೆ ಬಂದಿದ್ದ ಭತ್ತದ ಬೆಳೆ ಮತ್ತು 7, 8 ವರ್ಷಗಳಿಂದ ಪೋಷಣೆ ಮಾಡಿ ಬೆಳೆಸಿದ್ದ ಅಡಿಕೆ, ತೆಂಗು, ತ್ಯಾಗದ ಮರಗಳು ಬಿರುಗಾಳಿ ಹೊಡೆತಕ್ಕೆ ನೆಲಕ್ಕುರುಳಿರುವುದನ್ನು ನೋಡಿದರೆ ಎಂತಹವರ ಮನಸ್ಸಿಗೂ ನೋವು ಆಗುವಂತಿದೆ.
ಇನ್ನೂ ಬೆಳೆ ಕಳೆದುಕೊಂಡ ರೈತರ ನೋವು ಹೇಳ ತೀರದು. ಆದರೆ ಪ್ರಕೃತಿ ಕೊಡುವ ನೋವು – ನಲಿವು ಎರಡನ್ನೂ ಸಹಿಸಿಕೊಳ್ಳುವ ಶಕ್ತಿ ರೈತರಿಗಿದೆ ಎಂದು ಶಾಸಕ ಎಸ್‌. ರಾಮಪ್ಪ ಅವರು ಬೆಳೆ ಹಾನಿ ವೀಕ್ಷಿಸಿದ ಸಂದರ್ಭದಲ್ಲಿ ರೈತರಿಗೆ ಧೈರ್ಯ ತುಂಬಿದರು.
ಬೆಳೆ ನಷ್ಟದ ಬಗ್ಗೆ ಕೂಡಲೇ ವರದಿ ತಯಾರಿಸಿ, ಜಿಲ್ಲಾಧಿಕಾರಿಗಳಿಗೆ ಸಲ್ಲಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ ಶಾಸಕರು ನೆರವಿನ ಭರವಸೆ ನೀಡಿದರು.
ಮನೆಗಳಿಗೆ ಹಾನಿ ಆಗಿರುವುದನ್ನು ಪರಿಶೀಲಿಸಿದ ಶಾಸಕರು, ತಕ್ಷಣ ತಾತ್ಕಾಲಿಕ ವ್ಯವಸ್ಥೆ ಮಾಡಿ, ನಂತರ  ಸರ್ಕಾರದಿಂದ ಮನೆ ನಿರ್ಮಾಣಕ್ಕೆ ಅನುದಾನ ಕೊಡಿಸುವುದಾಗಿ ಹೇಳಿದರು.
ತಹಶೀಲ್ದಾರ್‌ ರಾಮಚಂದ್ರಪ್ಪ, ಪುರಸಭೆ ಮುಖ್ಯಾಧಿಕಾರಿ ಧರಣೇಂದ್ರ ಕುಮಾರ್, ಉಪತಹಶೀಲ್ದಾರ್‌ ರವಿ, ಕಂದಾಯ ನಿರೀಕ್ಷಕ ಸಮೀರ್‌, ಗ್ರಾಮ ಲೆಕ್ಕಾಧಿಕಾರಿ ಕೊಟ್ರೇಶ್‌,  ಸಹಾಯಕ ಕೃಷಿ ನಿರ್ದೇಶಕ ಡಾ. ಗೋವರ್ಧನ್‌, ಎಪಿಎಂಸಿ ಸದಸ್ಯ ಜಿ. ಮಂಜುನಾಥ ಪಟೇಲ್‌, ಪುರಸಭೆ ಸದಸ್ಯ ಬಿ. ಸುರೇಶ್‌, ಬಿ. ವೀರಯ್ಯ, ಎಳೆಹೊಳೆ ಕುಮಾರ್‌, ಎಂ.ಬಿ. ಫೈಜು, ಕೆ.ಜಿ. ಲೋಕೇಶ್‌, ಮತ್ತಿತರರು ಈ ವೇಳೆ ಹಾಜರಿದ್ದರು.
ಇದಕ್ಕೂ ಮುನ್ನ ಜಿ.ಪಂ. ಸದಸ್ಯ ಬಿ.ಎಂ. ವಾಗೀಶ್‌ಸ್ವಾಮಿ, ಜಿಲ್ಲಾ ಬಿಜೆಪಿ ಅಧ್ಯಕ್ಷ ಹನಗವಾಡಿ ವೀರೇಶ್‌ ಅವರು ತಹಶೀಲ್ದಾರ್‌ ರಾಮಚಂದ್ರಪ್ಪ ಅವರೊಂದಿಗೆ ಕುಂಬಳೂರು, ಮಲೇಬೆನ್ನೂರು, ನಿಟ್ಟೂರಿನಲ್ಲಿ ಬೆಳೆ ಹಾನಿ ವೀಕ್ಷಿಸಿ ರೈತರಿಗೆ ಪರಿಹಾರ ಕೊಡಿಸುವುದಾಗಿ ಭರವಸೆ ನೀಡಿದರು.
ಬೆಳೆ ಹಾನಿ ಮಾಹಿತಿ : ಮಲೇಬೆನ್ನೂರಿನಲ್ಲಿ 175 ಎಕರೆ, ಕುಂಬಳೂರಿನಲ್ಲಿ 475 ಎಕರೆ, ನಿಟ್ಟೂರಿನಲ್ಲಿ 250 ಎಕರೆ, ಆದಾಪುರದಲ್ಲಿ 80 ಎಕರೆ ಭತ್ತದ ಬೆಳೆ ನೆಲಕಚ್ಚಿದೆ ಎಂದು ಉಪ ತಹಶೀಲ್ದಾರ್‌ ರವಿ ಮಾಹಿತಿ ನೀಡಿದರು.
ಜೊತೆಗೆ ಮಲೇಬೆನ್ನೂರಿನಲ್ಲಿ 3 ಎಕರೆ ಬಾಳೆ ತೋಟ, 150 ಅಡಿಕೆ, 50 ತೆಂಗು, 30 ತ್ಯಾಗದ ಮರಗಳು ನೆಲಕ್ಕುರುಳಿವೆ.
ಮಲೇಬೆನ್ನೂರು ಪಟ್ಟಣದಲ್ಲಿ ಫಹೀಂ ಉನ್ನೀಸಾ ರಫೀಕ್‌, ಎಂ. ಕುಮಾರ್‌, ಮಹಬೂಬ್‌ ಸಾಬ್‌, ಅಜೀಜ್ ಸಾಬ್‌, ಕವಿತಾ ಮಂಜಪ್ಪ, ಈರಣ್ಣ ನಾಗೇಂದ್ರಚಾರಿ, ರಜೀಯಾ, ಹನೀಫ್‌ಸಾಬ್‌, ಜಾರೀನ್‌ಭಾನು ಇವರ ಮನೆಗಳ ಮೇಲ್ಛಾವಣೆ ಹಾರಿ ಹೋಗಿವೆ ಎಂದು ತಿಳಿಸಿದರು.

Leave a Reply

Your email address will not be published.