ದುಗ್ಗಮ್ಮನ ಜಾತ್ರೆಯಲ್ಲಿ ಪ್ರಾಣಿ ಬಲಿ ತಡೆಯಿರಿ: ದಯಾನಂದ ಸ್ವಾಮೀಜಿ

ದಾವಣಗೆರೆ, ಮಾ.2- ಧರ್ಮ ಹಾಗೂ ದೇವರ ಹೆಸರಿನಲ್ಲಿ ಕೋಣ ಅಥವಾ ಇತರೆ ಪ್ರಾಣಿಗಳನ್ನು ಬಲಿ ಕೊಡುವ ಪರಂಪರೆ ನಿಲ್ಲಿಸಬೇಕು ಎಂದು ಕಾನೂನು ಬಂದು 61 ವರ್ಷಗಳಾದರೂ ಅದು ಜಾರಿಗೆ ಬಂದಿಲ್ಲ. ವರ್ಷಕ್ಕೆ ದೇವರ ಹೆಸರಿನಲ್ಲಿ ಒಂದೂವರೆ ಕೋಟಿಗೂ ಹೆಚ್ಚು ಪ್ರಾಣಿ ಬಲಿ ನಡೆಯುತ್ತಿರುವುದು ದುರ್ದೈವ ಎಂದು ವಿಶ್ವ ಪ್ರಾಣಿ ಕಲ್ಯಾಣ ಮಂಡಳಿ ಹಾಗೂ ಬೆಂಗಳೂರಿನ ಬಸವ ಧರ್ಮ ಜ್ಞಾನಪೀಠದ ಅಧ್ಯಕ್ಷ ದಯಾನಂದ ಸ್ವಾಮೀಜಿ ಬೇಸರ ವ್ಯಕ್ತಪಡಿಸಿದರು.

ಪತ್ರಿಕಾಗೋಷ್ಠಿಯಲ್ಲಿ  ಮಾತನಾಡಿದ ಅವರು, ದಾವಣಗೆರೆ ದುಗ್ಗಮ್ಮ ಜಾತ್ರೆ ಹಿನ್ನೆಲೆಯಲ್ಲಿ ಮಂಗಳವಾರ ಮಧ್ಯರಾತ್ರಿ ನಂತರ ಬುಧವಾರ ಬೆಳಗಿನ ಜಾವ ಹರಕೆ ಹೆಸರಿನಲ್ಲಿ ದೇವಿಗೆ ದೇವಾಲಯದ ಮುಂಭಾಗ ಕೋಣ ಬಲಿ ಕೊಡುವ ಪರಂಪರೆ ಹಲವು ದಶಕಗಳಿಂದ ನಡೆದುಕೊಂಡು ಬಂದಿದ್ದು, ಬಲಿ ತಡೆ ಕುರಿತು ಮುಂಜಾಗ್ರತಾ ಕ್ರಮ ಕೈಗೊಳ್ಳಲು ರಾಜ್ಯ ಉಚ್ಛನ್ಯಾಯಾಲಯ ನೀಡಿದ ಆದೇಶದಂತೆ ಸರ್ಕಾರ ಹಾಗೂ ಜಿಲ್ಲಾಡಳಿತ, ಪೊಲೀಸ್ ಇಲಾಖೆ ಪ್ರಾಣಿ ಬಲಿ ನಡೆಯದಂತೆ ನೋಡಿಕೊಳ್ಳಬೇಕು ಎಂದು ಹೇಳಿದರು.


ಪ್ರಾಣಿ ಬಲಿ ನಿಲ್ಲಿಸಲು ಧರ್ಮ ಗುರುಗಳು, ಮಠಾಧೀಶರು, ಚಿಂತಕರು, ಸಂಘ-ಸಂಸ್ಥೆಗಳು ಸಾರ್ವಜನಿಕ ಜಾಗೃತಿ ಅಂದೋಲನ ಮಾಡುವ ಅಗತ್ಯವಿದೆ. ಆದರೆ ಇದಕ್ಕೆ ಯಾರೂ ಮುಂದೆ ಬರುತ್ತಿಲ್ಲ.
– ದಯಾನಂದ ಸ್ವಾಮೀಜಿ


ರಾಜ್ಯ ಹೈಕೋರ್ಟ್ 2019 ಸೆಪ್ಟೆಂಬರ್ 3ರಂದು ನೀಡಿರುವ ಹೊಸ ಆದೇಶದ ಪ್ರಕಾರ ಪ್ರಾಣಿ ಬಲಿಗೆ ಅವಕಾಶ ಕೊಡಬಾರದು ಎಂದೂ ಸೂಚಿಸಿದೆ ಎಂದು ಹೇಳಿದರು.

ದೇವಾಲಯಗಳು ವಧಾಲಯಗಳಾಗದೇ, ದಿವ್ಯಾಲಯಗಳಾಗಬೇಕು. ಪ್ರಜ್ಞಾವಂತರೇ ಹೆಚ್ಚಾಗಿರುವ ದಾವಣಗೆರೆಯಲ್ಲಿ ದೇವತೆ ಹೆಸರಿನಲ್ಲಿ ರಕ್ತದ ಕೋಡಿಯೇ ಹರಿಯುತ್ತದೆ. ಇದಕ್ಕೆ ಇತಿಶ್ರೀ ಹಾಡಬೇಕಿದೆ. ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ದೇವಾಲಯದ ಆವರಣದ ಲ್ಲಿದ್ದರೂ ಬಲಿ ಸಮಯದಲ್ಲಿ ಕರೆಂಟ್ ತೆಗೆದು ಕಣ್ಣು ತಪ್ಪಿಸಿ ಬಲಿ ಕೊಡುವ ತಂತ್ರ ನಡೆಯುತ್ತದೆ ಎಂದು ಹೇಳಿದರು.

Leave a Reply

Your email address will not be published.