ಕೊರೊನಾ ಒಂದು ಕೆಮ್ಮು ಅಷ್ಟೇ!

ಕೊರೊನಾ ಒಂದು ಕೆಮ್ಮು ಅಷ್ಟೇ!

ಈರ : ಏನಪಾ ಕೊಟ್ರ ನಮ್ಮ ಕೋವಿಡ್ ಸ್ಕೋರ್ ಹಾಫ್ ಸೆಂಚುರಿ ದಾಟ್ತಲ್ಲಾ!

ಕೊಟ್ರ: ನಾನು ಮೊದಲೇ ಹೇಳಿರಲಿಲ್ಲ. ನೋಡೋ ಸೆಂಚುರೀನು ಆಗಬಹುದು ಹೇಳಕ್ಕಾಗಲ್ಲ. ಗುಪ್ತವಾಗಿ ಬಾಳ ಅದಾವು. ಒಂದೊಂದಾಗಿ ಹೊರಗೆ ಬರ್ತಾವು.

ಈರ: ನೀನು ಗುಪ್ತ ಅಂದು ಕೂಡ್ಲೇ ನೆನಪಾತು ನೋಡು. ಒಂದೇ ಸಲಕ್ಕೆ ನಮ್ಮೂರು ಸ್ಕೋರು ಇಷ್ಟೊಂದು ಜೋರಾಗೇತಿ. ಈಗ ಇದು ಮೊದಲು ಕಾಣಿಸಿಕೊಂಡವರಿಗೆ ಎಲ್ಲಿಂದ ಯಾರಿಂದ ಬಂತು ಅನ್ನೋದೂ ಗುಪ್ತವಾಗಿದೆ. ಇದರ ಮೂಲ ಎಲ್ಲೈತಿ?

ಕೊಟ್ರ: ನೋಡಪಾ ತಮ್ಮಾ ಈ ನದಿ ಮೂಲ, ಋಷಿ ಮೂಲ ಹುಡಕ್ಕಕ್ಕೆ ಹೋಗಬಾರದಂತೆ. ಹಂಗೇ ಈ ಕೋವಿಡ್ ಮೂಲ. ಇದರ ಬಗ್ಗೆ ತಲೆ ಕೆಡಿಸ್ಕ್ಯಾಬೇಡ.

ಈರ: ಹಂಗಲ್ಲಪಾ. ತೀರಾ ಇದನ್ನು ಪತ್ತೇ ಹಚ್ಚಕ್ಕಾಗಿಲ್ಲ ಅಂದ್ರೆ ಹೆಂಗೆ?

ಕೊಟ್ರ :  ತಮ್ಮಾ ಪತ್ತೇ ಹಚ್ಚಿರ್ತಾರೆ. ಗೊತ್ತಾಗಿರ್ತತಿ. ಆದರೆ ಅವರು ಬಹಿರಂಗ ಪಡಿಸ್ತಿಲ್ಲ ಅಷ್ಟೇ!

ಈರ: ಯಾಕೆ?.

ಕೊಟ್ರ: ಈ ಕೋವಿಡ್ ಮೂಲ ಬಹಿರಂಗ ಪಡಿಸಿದರೆ ಅವರಿಗೆ ಮೂಲ ಆಗಬಹುದು.             

ಈರ: ಹೋಗ್ಲಿ ಬಿಡು. ಈಗ ದಿನದಿಂದ ದಿನಕ್ಕೆ ಈ ಕೊರೊನಾ ಬಹಳ ಜನಕ್ಕೆ ಮೆತ್ತಿಗೆಂತಾ ಹೋದರೆ ನಮ್ಮ ಮುಂದಿನ ಜೀವನ ಹೆಂಗಪಾ?

ಕೊಟ್ರ: ಲೇ ನಮ್ಮ ಕಲಾ ಮಂಜಣ್ಣ ಹೇಳಿಲ್ಲೇನು. ಕೊರೊನಾ ಜೊತೆಗೇ ಜೀವನ ಸಾಗಿಸೋದನ್ನ ನಾವೂ ಕಲೀ ಬೇಕು. ದಿಲ್ಲಿ ಕೇಜ್ರಿವಾಲ್ ಕೂಡ ಅದನ್ನೇ ಹೇಳ್ಯಾರೆ.

ಈರ: ಕೊರೊನಾ ಜೊತೇನೆ ಜೀವನ ಸಾಗಿಸೋಕೆ ಸಾಧ್ಯ ಐತಿ ಅಂತಿಯಾ?

ಕೊಟ್ರ: ನೋಡೋ ಕೊರೊನಾ ಒಂದು ಕೆಮ್ಮಿದ್ದಂಗೆ ಅಷ್ಟೇ. ಎಲ್ಲರೂ ಯಾಕೆ ಹೆದರಕ್ಕತ್ತೇವಿ ಅಂದ್ರೆ ಅದಕ್ಕಿನ್ನೂ ಔಷಧಿ ಕಂಡು ಹಿಡಿದಿಲ್ಲ. ಹಿಂಗಾಗಿ ಅದು ವಕ್ಕರಿಸ್ತೂ ಅಂದ್ರೆ ಶುರು ಆಕ್ಕೇತಿ ಕೆಮ್ಮು. ಅದರ ಎಂಟ್ರಿ ಏನಿದ್ರೂ ಡೈರೆಕ್ಟ್ ಶ್ವಾಸಕೋಶಕ್ಕೆ. ಅಲ್ಲಿ ಅದು ಫ್ಯಾಮಿಲಿ ಪ್ಲಾನಿಂಗ್ ಮಾಡದೇ ಪುತುಪುತು ಮರಿ ಹಾಕ್ತತಿ. ಆಗ ಶುರು ಆಕ್ಕೇತಿ ದಮ್ಮು. ಅದನ್ನು ತಡಕೋಳ ದಮ್ಮಿದ್ದೋನು ಸ್ವಲ್ಪ ದಿನ ಕೆಮ್ಮಿ ಕೆಮ್ಮಿ ಉಳ್ಕೊಂತಾನ. ದಮ್ಮಿಲ್ಲದೋನು ಸೀದಾ ಮೇಲಕ್ಕೆ ಢಂ!

ಈರ: ಅದನ್ನು ತಡ್ಕೋಳೋಕ್ಕೆ ಸಾಧ್ಯ ಐತಿ ಅಂತಿಯಾ?

ಕೊಟ್ರ: ತಮ್ಮಾ ನೀನೇ ಲೆಕ್ಕ ಹಾಕು. ನೂರು ಜನಕ್ಕೆ ಕೊರೊನಾ ಬಂದೇತಿ ಅಂದ್ರೆ. ಸತ್ತವರ ಸಂಖ್ಯೆ ಹತ್ತು ದಾಟಿರಲ್ಲ. ಯಾರಿಗೆ ಬಹಳ ವಯಸ್ಸಾಗೇತಿ, ಸಕ್ಕರೆ ಕಾಯಿಲೆ ಐತಿ, ಅಸ್ತಮಾ ಇಂತಹ ಫಜೀತಿ ಅದಾವೋ ಅವರು ಉಳಿಯೋದಿಕ್ಕೆ ಫಜೀತಿ ಪಡ್ತಾ ಅದಾರ. ಇನ್ನು ಎಷ್ಟೊಂದು ಜನ ಅದರಿಂದ ಹೊರಗೆ ಬಂದಿಲ್ಲೇನು?

ಈರ: ಅದು ನಿಜ. ಹಂಗಾರೇ, ನಾವು ಹೆದರದೇ ಆರಾಮಾಗಿ ಓಡಾಡಬಹುದಲ್ಲಾ?

ಕೊಟ್ರ : ಲೇ ಹೆದರಬಾರದು ನಿಜ. ಆದರೆ ಎಚ್ಚರಿಕೆಯಿಂದ ಇರಬೇಕು. ನಮಗೇನು ಬಿಡು ತಡಕೊಳ್ಳ ಶಕ್ತಿ ಐತಿ ಅಂತಾ ಹೊರಗೆ ಅಡ್ಡಾಡಿದ್ವಿ ಅಂದ್ಕಾ. ಒಂದೊಂದು ಸಲ ಅದು ನಮಗೆ ಮೆತ್ತಗೆಂಡಿದ್ರೂ ನಮಗೆ ಗೊತ್ತಿರಂಗಿಲ್ಲ. ಆದರೆ, ಅದು ನಮ್ಮಿಂದ ಬೇರೆಯವರಿಗೆ ಗೊತ್ತಿಲ್ಲದಂಗೆ ಅಂಟಿಕೊಳ್ತತಿ. ಅವರು ಶಿವಾಯ ನಮಃ ಆದ್ರೇ! ತಪ್ಪಲ್ಲೇನು? ಅದಕ್ಕೇ ನಾವು ಮುಚ್ಚಿಕೆಂಡು ಮನಿಯಾಗೆ ಕೂತ್ಕೋಬೇಕು. ಈಗ ಕೊರೊನಾದಿಂದ ಬದುಕಿ ಬಂದವರ ಕಥೆ ಕೇಳು.ಅವರು ಒಂದೆರಡು ವಾರ ಒಬ್ಬರೇ ಆಸ್ಪತ್ರೇಲಿ ಕೆಮ್ಮು ದಮ್ಮಿಂದ ಸಂಕಟ ಪಟ್ಟಿರ್ತಾರಲ್ಲ ಅದೂ ಅಕಟಕಟಾ. ಆ ಸಂಕಟ ಅವರಿಗೇ ಗೊತ್ತು.

ಈರ : ಹೌದು ಬಿಡು. ಅಲ್ಲಾ ಈಗ ನಮ್ಮ ಕೆಲವು ಜನ ಹುಷಾರಾಗಿ ಬಂದವರನ್ನಾ ಮಾತಾಡಿಸೋಕೆ ಹೆದರ್ತಾರಲ್ಲಾ?

ಕೊಟ್ರ : ಲೇ ಅಂತಾ ಜನಕ್ಕೆ ಮೂರ್ಖರು ಅನ್ನಬೇಕು. ಕೊರೊನಾ ಮುಕ್ತರು ಅಂದರೇ ಅವರು ಜಯಶಾಲಿಗಳು. ಬಲೇ ಭೀಮರು. ಅವರ ಸಹವಾಸ ಹೆಚ್ಚು ಮಾಡಬೇಕು.

ಈರ : ಯಾಕೆ?

ಕೊಟ್ರ: ಅವರ ಜೊತೆಯಾಗಿ ಇರೋದು ನೋಡಿ ಕೊರೊನಾ ನಮ್ಮ ಹತ್ತಿರ ಬರೋದಿಕ್ಕೆ ಹೆದರತೈತಿ.

ಈರ: ಸರಿ ಹಂಗಾರೆ. ನನ್ನ ಮಗನಿಗೆ ಕೊರೊನಾ ಜಯಿಸಿಕೊಂಡ ಹುಡುಗಿಯನ್ನೇ ಹುಡುಕ್ತೀನಿ.

ಕೊಟ್ರ : ಭೇಷ್! ನಮ್ಮ ಜ್ಯೋತಿಷಿ ಜೀವನ ಶಾಸ್ತ್ರೀ ಇದನ್ನೇ ಹೇಳ್ತಿದ್ದ. ಮದುವೆಯಾಗೋ ಹುಡುಗೀಲಿ ಗುರು, ಶುಕ್ರ, ಶನಿ ಬಲಕ್ಕಿಂತಾ ಹೆಚ್ಚಿನ ಬಲ ಯಾವುದೂ ಅಂದ್ರೇ?

ಈರ: ಯಾವುದೋ?

ಕೊಟ್ರ: ಕೊರೊನಾ ಬಲ ! ಅದೇ ಕಂಕಣ ಬಲ !!

 

ಆರ್.ಟಿ. ಅರುಣ್‌ಕುಮಾರ್
arunartist@gmail.com

Leave a Reply

Your email address will not be published.