ಜಿಲ್ಲಾಸ್ಪತ್ರೆ ಕೊರೊನಾ ಚಿಕಿತ್ಸೆಗೆ ಮಾತ್ರ

ದಾವಣಗೆರೆ, ಮೇ 9-ನಗರದ ಜಿಲ್ಲಾ ಚಿಗಟೇರಿ ಆಸ್ಪತ್ರೆಯಲ್ಲಿ ಕೋವಿಡ್ ಸೋಂಕು ಇರುವ ರೋಗಿ ಗಳಿಗೆ ಮಾತ್ರ ಚಿಕಿತ್ಸೆ ನೀಡಲು ಜಿಲ್ಲಾಧಿಕಾರಿಗಳಿಗೆ ಸೂಚಿಸಿರುವುದಾಗಿ ನಗರಾಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಿ.ಎ.ಬಸವರಾಜ್ ತಿಳಿಸಿದರು.

ಜಿಲ್ಲಾಧಿಕಾರಿ ಕಚೇರಿಯಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು,  ಕೋವಿಡ್ ಬಿಟ್ಟು ಉಳಿದ ಕಾಯಿಲೆಗಳಿಗೆ ಬಾಪೂಜಿ, ಎಸ್‍ಎಸ್ ಆಸ್ಪತ್ರೆ ಸೇರಿದಂತೆ ಬೇರೆ ಆಸ್ಪತ್ರೆಗಳಲ್ಲಿ ತಯಾರಿ ಮಾಡಿಕೊಳ್ಳಲು ಸೂಚಿಸಿರುವುದಾಗಿ ಹೇಳಿದರು.

ಹೆರಿಗೆಗಾಗಿ ದಾಖಲಾಗುವ ಗರ್ಭಿಣಿಯರು ಸೇರಿದಂತೆ ಇತರೆ ಕಾಯಿಲೆಗಳಿಗೆ ತೋರಿಸಿಕೊಳ್ಳಲೆಂದು ಚಿಗಟೇರಿ ಆಸ್ಪತ್ರೆಗೆ ಬರಲು ರೋಗಿಗಳು ಭಯಭೀತರಾಗಿದ್ದರು. ಈ ನಿಟ್ಟಿನಲ್ಲಿ ಪ್ರತ್ಯೇಕವಾಗಿ ನಾನ್ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲು ಕ್ರಮ ಕೈಗೊಳ್ಳಲಾಗಿದೆ ಎಂದರು. ಕಳೆದ ಬಾರಿ ಸಭೆ ಮಾಡಿ ನಿರ್ಗಮಿಸಿದ ಸಂದರ್ಭದಲ್ಲಿ ದಾವಣಗೆರೆ ಗ್ರೀನ್ ಜೋನ್‌ನಲ್ಲಿತ್ತು.  ಆದರೆ ಕೆಲವೇ ದಿನಗಳಲ್ಲಿ ರೆಡ್ ಜೋನ್ ಆಗಿ ಮಾರ್ಪಟ್ಟಿದೆ. ಈ ವಿಷಯದಿಂದ ನನಗೂ ಆಘಾತವಾಗಿದೆ. ಕೊರೊನಾ ನಿಯಂತ್ರಿಸಲು ಜಿಲ್ಲೆಯ ಜನರು ಸಹಕರಿಸಬೇಕೆಂದು ಕೈ ಮುಗಿದು ಕೇಳುವುದಾಗಿ ಹೇಳಿದರು.

ಸರ್ಕಾರಿ ಆಸ್ಪತ್ರೆಯಲ್ಲಿ ಒಂದು ಲ್ಯಾಬ್ ಮಾಡುವ ಬಗ್ಗೆ ಮಾಹಿತಿ ನೀಡಿದ್ದೇವು. ಅದರಂತೆ ಇನ್ನೆರಡು ದಿನದಲ್ಲಿ ಆರಂಭಿಸಲು ಸಚಿವರು ಅನುಮತಿ ನೀಡಿದ್ದಾರೆ. ಆ ನಿಟ್ಟಿನಲ್ಲಿ ಕೋವಿಡ್ ನಿಯಂತ್ರಣಕ್ಕೆ ಲ್ಯಾಬ್ ಸಹಕಾರಿಯಾಗಲಿದೆ ಎಂದರು.

ಜಿಲ್ಲೆಯಲ್ಲಿ ಇನ್ನೂ ಹೆಚ್ಚಿನ ಕಟ್ಟುನಿಟ್ಟಾದ ಕ್ರಮಕ್ಕೆ ಸೂಚಿಸಲಾಗಿದೆ. ನಗರದ ಎಲ್ಲಾ ಒಳ ಬರುವ ಹಾಗೂ ಹೊರ ಹೋಗುವ ಜನರನ್ನು ಚೆಕ್‍ಪೋಸ್ಟ್‍ಗಳಲ್ಲಿ ಹೆಚ್ಚು ತಪಾಸಣೆ ನಡೆಸುವಂತೆ ಸೂಚಿಸಲಾಗಿದೆ ಎಂದು ತಿಳಿಸಿದರು. 

ಕೊರೊನಾ ಸೋಂಕಿನ ಮೂಲದ ಪತ್ತೆ ಬಗ್ಗೆ ಎಸ್‍ಪಿ ಅವರು ಈಗಾಗಲೇ ಕ್ರಮ  ಕೈಗೊಂಡಿದ್ದಾರೆ. ಈರುಳ್ಳಿ ಮಾರುವ ವ್ಯಕ್ತಿಯಿಂದ ಸೋಂಕು ಕಂಡು ಬಂದಿದೆ ಎಂದು ತಿಳಿದು ಬಂದಿದೆ. ಸದ್ಯದಲ್ಲಿಯೇ ಬಗ್ಗೆ ಮಾಹಿತಿ ನೀಡಲಾಗುವುದು ಎಂದು ತಿಳಿಸಿದರು.

ಸಂಸದ ಜಿ.ಎಂ.ಸಿದ್ದೇಶ್ವರ, ಶಾಸಕರುಗಳಾದ ಎಸ್.ಎ.ರವೀಂದ್ರನಾಥ್, ಶಾಮನೂರು ಶಿವಶಂಕರಪ್ಪ, ಮಾಡಾಳ್ ವಿರೂಪಾಕ್ಷಪ್ಪ,
ಪ್ರೊ.ಲಿಂಗಣ್ಣ, ಎಸ್.ವಿ.ರಾಮಚಂದ್ರ, ಮೇಯರ್ ಅಜಯ್ ಕುಮಾರ್, ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ, ಎಸ್‍ಪಿ ಹನುಮಂತರಾಯ, ಸಿಇಒ ಶ್ರೀಮತಿ ಪದ್ಮಾ ಬಸವಂತಪ್ಪ ಇದ್ದರು.