ಕಾಡಜ್ಜಿಯಲ್ಲಿ ಪ್ರಾಚೀನ ಕೃಷಿ ಪರಿಕರ ಮ್ಯೂಸಿಯಂ

ಕಾಡಜ್ಜಿಯಲ್ಲಿ ಪ್ರಾಚೀನ ಕೃಷಿ ಪರಿಕರ ಮ್ಯೂಸಿಯಂ

ದಾವಣಗೆರೆ:  ಇಂದಿನ ಯಾಂತ್ರೀಕರಣ ಯುಗ ದಲ್ಲಿರುವ ಯುವ ಕೃಷಿಕರಿಗೆ, ಶಾಲಾ – ಕಾಲೇಜಿನ ವಿದ್ಯಾರ್ಥಿಗಳಿಗೆ ಹಳೆಯ ಕಾಲದ ಕೃಷಿ ಪರಿಕರಗಳನ್ನು ಪರಿಚಯಿಸಲು ಒಂದು ವಸ್ತು ಸಂಗ್ರ ಹಾಲಯವನ್ನು ಸ್ಥಾಪಿಸಲು ಜಂಟೀ ಕೃಷಿ ನಿರ್ದೇಶಕ ಡಾ.ಶರಣಪ್ಪ ಬಿ. ಮುದಗಲ್ ಸೇರಿದಂತೆ ಕೃಷಿ ಇಲಾಖೆ ಅಧಿಕಾರಿಗಳು ಉತ್ಸುಕರಾಗಿದ್ದಾರೆ.

ದೇಶದಲ್ಲಿ ವಾರ್ ಮ್ಯೂಸಿಯಂ, ಕಾರ್ ಮ್ಯೂಸಿಯಂ, ವಾಸ್ತು ಶಿಲ್ಪದ ವಸ್ತು ಸಂಗ್ರಹಾಲ ಯಗಳಿವೆ. ಧರ್ಮಸ್ಥಳದ ಮಂಜೂಷಾದಂತಹ ವಿವಿಧ ವಸ್ತುಗಳ ಸಂಗ್ರಹಾಲಯವೂ ಇದೆ. ಅದೇ ರೀತಿ ಕೃಷಿ ಪರಿಕರಗಳ ದೊಡ್ಡ ವಸ್ತು ಸಂಗ್ರಹಾಲ ಯವನ್ನೂ ಮಾಡಿದಲ್ಲಿ ಯುವ ಪೀಳಿಗೆಗೆ ಅನುಕೂ ಲವಾಗಿದೆ ಎಂಬುದು ಕೃಷಿ ಅಧಿಕಾರಿಗಳ ಆಶಯ.

ಜಿಲ್ಲಾ ಕೃಷಿ ತರಬೇತಿ ಕೇಂದ್ರ, ಕಾಡಜ್ಜಿಯಲ್ಲಿ ಕೃಷಿ ಪರಿಕರಗಳನ್ನು ತಂದು ಜೋಡಿಸಲು ಚಿಂತನೆ ನಡೆಸಿದ್ದು, ರೈತರ, ಸಾರ್ವಜನಿಕರ ಮನೆಯಲ್ಲಿ ಬಳಸದೇ ಮೂಲೆ ಸೇರಿರುವ ಅಥವಾ ಅಟ್ಟಕ್ಕೆ ಏರಿಸಿಟ್ಟಿರುವ ಹಳೆಯ ಕಾಲದ ಕೃಷಿ ಪರಿಕರಗಳನ್ನು ಮ್ಯೂಸಿಯಂಗೆ ನೀಡಬಹುದು.
– ಶರಣಪ್ಪ ಬಿ. ಮುದಗಲ್, ಜಂಟಿ ಕೃಷಿ ನಿರ್ದೇಶಕ

ಕೃಷಿ ಅಧಿಕಾರಿಗಳ ಆಶಯಕ್ಕೆ ಅಷ್ಟೇ ಉತ್ಸುಕತೆಯಿಂದ ಸ್ಪಂದಿಸಿರುವ ರೈತ ಸಮೂಹ ಈಗಾಗಲೇ ಹಲವಾರು ಹಳೆಯ ಪರಿಕರಗಳನ್ನು ಕೃಷಿ ಇಲಾಖೆಗೆ ನೀಡಿದೆ. ಮತ್ತಷ್ಟು ರೈತರು ಮನೆ ಯಲ್ಲಿದ್ದ ಪರಿಕರಗಳನ್ನು ತೆಗೆದುಕೊಂಡು ಹೋಗುವಂತೆ ಕೃಷಿ ಅಧಿಕಾರಿಗಳಿಗೆ ಕರೆ ಮಾಡುತ್ತಲೇ ಇದ್ದಾರೆ. ಹಾಗಾಗಿ ರೈತರು ನೀಡುವ ಪರಿಕರಗಳನ್ನು ಅಲ್ಲಲ್ಲಿ ಒಂದೆಡೆ ಸಂಗ್ರಹಿಸಿ, ನಂತರ ಒಟ್ಟಿಗೆ ತಂದು ಶೇಖರಣೆ ಮಾಡುವ ಕಾರ್ಯದಲ್ಲೂ ಅಧಿಕಾರಿಗಳು ಮಗ್ನರಾಗಿದ್ದಾರೆ.

ರೈತರು, ಸಾರ್ವಜನಿಕರು ಏನೇನು ಕೊಡಬಹುದು ?

ಬೇಸಾಯಕ್ಕೆ ಬಳಸುತ್ತಿದ್ದ ನೇಗಿಲು, ಕೂರಿಗೆ, ಕುಂಟೆ, ಕೊಯ್ಲು ಮಾಡಲು ಬಳಸುತ್ತಿದ್ದ ಕುಡುಗೋಲು, ಕತ್ತಿ, ಮಚ್ಚು, ಅಳತೆಗೆ ಬಳಸುತ್ತಿದ್ದ ಸೇರು, ಪಾವು, ಚಟಾಕು, ಬಳಗ, ಕಂಡಗ., ಕಣ ಮಾಡಲು ಬಳಸುವ ರೋಣಗಲ್ಲು, ಕವಳಗಡ್ಡಿ ಪ್ರಾಣಿಗಳನ್ನು ಓಡಿಸುವ ಉಪಕರಣಗಳು, ರಾಸುಗಳಿಗೆ ಬಳಸುತ್ತಿದ್ದ  ಕೋಡು ಅಣಸು, ಬೆನ್ನ ಮೇಲೆ ಹೊದಿಸುವ ಬಟ್ಟೆ, ಕುಚ್ಚು, ಬಣ್ಣದ ಟೇಪು, ಶಂಖ, ಪುಂಡಕರು/ ರಾಸುಗಳನ್ನು ನಿಯಂತ್ರಿಸಲು ಬಳಸುವ ದೊಗ್ಗಾಲಿನ ಕೋಲು, ಮುಳ್ಳಿನ ಮುಖಕವಚ, ಬಾರಕೋಲು, ಕೇರುವ ಮೊರ, ಜಾಲಿಸುವ ವನ್ರಿ (ಜಾಲರಿ), ಕುಟ್ಟುವ ಒನಕೆ, ಹಾರೆ, ಆಲೆಮನೆಗೆ ಬಳಸುವ ವಸ್ತುಗಳು. ಹೀಗೆ ಕೃಷಿ ಚಟುವಟಿಕೆಗೆ ಸಂಬಂಧಿಸಿದ ಯಾವುದೇ ಪರಿಕರಗಳಿದ್ದರೂ ಮ್ಯೂಸಿಯಂಗೆ ತಂದುಕೊಡ ಬಹುದು.

ರೈತರು ಕೊಡುವ ಈ ಪರಿಕರಗಳು ಚಾಲನೆಯಲ್ಲಿರಬೇಕು, ಕೆಲಸ ಮಾಡುತ್ತಿರಬೇಕು ಎಂಬ ನಿಯಮವಿಲ್ಲ. ಅವು ಕೆಟ್ಟು ಹೋಗಿದ್ದರೆ, ಮುರಿದು ಹೋಗಿದ್ದರೆ, ಯಾವುದಕ್ಕೂ ಉಪಯೋಗಬಾರದೇ ಆಟಿಕೆ ರೀತಿ ಇದ್ದರೂ, ಅಂತಹವುಗಳನ್ನು ಸ್ವೀಕರಿಸಲಾಗುತ್ತಿದೆ.

ಮ್ಯೂಸಿಯಂ ಯಾರಿಗೆ ಉಪಯೋಗ : ಕಾಡಜ್ಜಿಯ ಜಿಲ್ಲಾ ಕೃಷಿ ತರಬೇತಿ ಕೇಂದ್ರದಲ್ಲಿ ರೈತರು, ರೈತ ಮಹಿಳೆಯರು, ಕೃಷಿ ಇಲಾಖೆಯ ಪ್ರೊಬೇಷನರಿ ಅಧಿಕಾರಿಗಳು, ಕೃಷಿ ಮತ್ತು ಸಹೋ ದರ ಇಲಾಖೆಗಳಲ್ಲಿ ಕೆಲಸ ಮಾಡುವ ತಾಂತ್ರಿಕ ವರ್ಗದವರು, ಕೃಷಿ ವಿಶ್ವವಿದ್ಯಾಲಯದಲ್ಲಿ ಪದವಿ ಮತ್ತು ಸ್ನಾತಕೋತ್ತರ ಪದವಿ ಪಡೆಯುತ್ತಿರುವ, ಸಂಶೋಧನೆ ನಡೆಸುತ್ತಿರುವ ವಿದ್ಯಾರ್ಥಿಗಳಿಗೆ ತರಬೇತಿ ನೀಡಲಾಗುತ್ತದೆ. ಹೀಗೆ ತರಬೇತಿಗೆ ಬರುವಂತವರಿಗೆ, ಹಿಂದಿನ ಕಾಲದಲ್ಲಿ ಎಂತಹ ಉಪಕರಣಗಳನ್ನು ಬಳಸುತ್ತಿದ್ದರು ಎಂಬುದನ್ನು ಪರಿಚಯಿಸಲು ಈ ಮ್ಯೂಸಿಯಂ ನೆರವಾಗಲಿದೆ.

ವಿಶೇಷವಾಗಿ ಕೃಷಿ, ತೋಟಗಾರಿಕೆ, ರೇಷ್ಮೆ ಕೃಷಿಯಂತಹ ಪದವಿ ತರಗತಿಗಳಿಗೆ ಪ್ರವೇಶ ಬಯಸುವ ವಿದ್ಯಾರ್ಥಿಗಳಿಗೆ, ಸಿಇಟಿ ಪರೀಕ್ಷೆ ಇರುತ್ತದೆ. ಅದರಲ್ಲಿ ಒಂದು ಸಬ್ಜೆಕ್ಟ್ ಈ ಕೃಷಿ ಪರಿಕರಗಳನ್ನು ಗುರುತಿಸುವುದಕ್ಕೆ ಮೀಸಲಿರುತ್ತದೆ. ಹಾಗಾಗಿ ಪ್ರತಿ ವರ್ಷ ನಮ್ಮ ಜಿಲ್ಲೆಯಲ್ಲಿ ಈ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ, ಮ್ಯೂಸಿಯಂ ಮೂಲಕ ಕೃಷಿ ಪರಿಕರಗಳನ್ನು ಪರಿಚಯಿಸಲು ಸಾಧ್ಯವಾಗಲಿದೆ ಎಂದು ಜಂಟಿ ಕೃಷಿ ನಿರ್ದೇಶಕ ಶರಣಪ್ಪ ಮುದಗಲ್ ತಿಳಿಸಿದ್ದಾರೆ.