March 31, 2020

144 ಸೆಕ್ಷನ್ ಉಲ್ಲಂಘಿಸಿದರೆ ಜೈಲು

ಹಬ್ಬ, ಪ್ರಾರ್ಥನೆಗಾಗಿ ಒಗ್ಗೂಡುವುದನ್ನು ತಡೆಯಲು ರಾಜ್ಯ ಸರ್ಕಾರ ಸೂಚಿಸಿರುವ ಹಿನ್ನೆಲೆಯಲ್ಲಿ ಕ್ರಮ

ದಾವಣಗೆರೆ, ಮಾ. 23 – ಕೊರೊನಾ ವೈರಸ್ ಹರಡುವುದನ್ನು ತಡೆಯಲು ಸಾಮಾಜಿಕ ಅಂತರವೇ ಪ್ರಮುಖವಾಗಿದೆ. ಈ ದಿಸೆಯಲ್ಲಿ 144 ಸೆಕ್ಷನ್ ಹೇರಲಾಗಿದ್ದು, ಅದನ್ನು ಉಲ್ಲಂಘಿಸುವವರ ವಿರುದ್ಧ 188 ಕಲಂ ಅಡಿ ಕ್ರಮ ತೆಗೆದುಕೊಳ್ಳುವುದಾಗಿ ಜಿಲ್ಲಾಡಳಿತ ಎಚ್ಚರಿಕೆ ನೀಡಿದೆ.

ಮಂಗಳವಾರದಿಂದ ಏಪ್ರಿಲ್ 1ರವರೆಗೆ ದಾವಣಗೆರೆ ಜಿಲ್ಲಾದ್ಯಂತ 144 ಸೆಕ್ಷನ್ ಹೇರಿಕೆ ಮಾಡಲಾಗಿದೆ. ಈ ಅವಧಿಯಲ್ಲಿ ಒಂದೇ ಸ್ಥಳದಲ್ಲಿ ಐವರಿಗಿಂತ ಹೆಚ್ಚು ಜನರು ಸೇರುವುದನ್ನು ನಿಷೇಧಿಸಲಾಗಿದೆ.

ಇದನ್ನು ಉಲ್ಲಂಘಿಸುವವರ ವಿರುದ್ಧ ಭಾರತೀಯ ದಂಡ ಸಂಹಿತೆಯ ಕಲಂ 188ರ ಅನ್ವಯ ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿ ಹೇಳಿದ್ದಾರೆ.

188ರ ಕಲಂ ಅಡಿ ಪ್ರಕರಣ ದಾಖಲಿಸಿದಾಗ ಒಂದು ತಿಂಗಳವರೆಗೆ ಜೈಲು, ದಂಡ ಇಲ್ಲವೇ ಎರಡನ್ನೂ ವಿಧಿಸಲು ಅವಕಾಶವಿದೆ. ಇದರ ಜೊತೆಗೆ ಸೋಂಕು ತಡೆ ಕಾಯ್ದೆಯನ್ನೂ ಅನ್ವಯ ಮಾಡಿದರೆ ಜೈಲು ಶಿಕ್ಷೆ 6 ತಿಂಗಳವರೆಗೆ ವಿಸ್ತರಣೆಯಾಗಲಿದೆ.

ಸಾಂಕ್ರಾಮಿಕ ರೋಗಗಳ ಅಧಿನಿಯಮ 1897ರ 2ನೇ ಪ್ರಕರಣದ ಅಡಿಯಲ್ಲಿ ಅಧಿಕಾರಗಳನ್ನು ಚಲಾಯಿಸಿ ವಿಪತ್ತು ನಿರ್ವಹಣಾ ಅಧಿನಿಯಮ 2005ರ ಸಾಧ್ಯವಾಗಿಸುವ ಉಪ ಬಂಧಗಳೊಂದಿಗೆ ರಾಜ್ಯ ಸರ್ಕಾರ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಹಾಗೂ ಪ್ರತ್ಯೇಕತೆಯನ್ನು ಅಳವಡಿಸಿಕೊಳ್ಳುವಂತೆ ಈಗಾಗಲೇ ತಿಳಿಸಿದೆ.

ಸಾಮೂಹಿಕ ಒಗ್ಗೂಡುವಿಕೆ ನಿಷೇಧದಲ್ಲಿ ಧರ್ಮಗಳ ಪ್ರಾರ್ಥನಾ ಒಗ್ಗೂಡುವಿಕೆ ಹಾಗೂ ಹಬ್ಬಗಳಿಗಾಗಿ ಒಗ್ಗೂಡುವಿಕೆಯನ್ನು ನಿಲ್ಲಿಸಬೇಕಿದೆ ಎಂದು ರಾಜ್ಯ ಸರ್ಕಾರ ತಿಳಿಸಿದೆ.