August 17, 2019

ಹೈಕಮಾಂಡ್‌ ಒಪ್ಪಿದರೆ ನಾನೇ ಸ್ಪರ್ಧಿಸುವೆ: ಎಸ್ಸೆಸ್ಸೆಂ

ದಾವಣಗೆರೆ : ಕಾಂಗ್ರೆಸ್‌ ಪಕ್ಷದ ಹೈಕಮಾಂಡ್‌ ಒಪ್ಪಿದರೆ ನಾನೇ ಲೋಕಸಭಾ ಚುನಾವಣೆಯ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತೇನೆ. ಆದರೆ, ಇನ್ನೂ ಯಾವುದೇ ತೀರ್ಮಾನವಾಗಿಲ್ಲ ಎಂದು ಮಾಜಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ತಿಳಿಸಿದರು.

ಇಂದಿಲ್ಲಿ ತಮ್ಮ ಸ್ವಗೃಹದಲ್ಲಿ ತಮ್ಮನ್ನು ಭೇಟಿ ಮಾಡಿದ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ನಿಲ್ಲುತ್ತೇನೆ, ನಿಲ್ಲುವುದಿಲ್ಲ, ಆಸಕ್ತಿ ಇದೆ, ಇಲ್ಲ ಎಂಬ ಪ್ರಶ್ನೆ ಮುಖ್ಯವಲ್ಲ. ಹೈಕಮಾಂಡ್ ಹೇಳಿದರೆ ನಾನೂ ನಿಲ್ಲಬೇಕು. ನಿಲ್ಲಬೇಕಾಗುತ್ತದೆ. ನಮಗೆ ಏಪ್ರಿಲ್ 3 ರವರೆಗೆ ಸಮಯವಿದೆ ಎಂದು ಹೇಳಿದರು.

ನಾಳೆ ಬೆಂಗಳೂರಿಗೆ ರಾಹುಲ್‌ ಗಾಂಧಿ ಬರುತ್ತಿದ್ದು, ಈ ಬಗ್ಗೆ ನಾಳೆ ಬೆಂಗಳೂರಿನಲ್ಲಿ ಸಭೆ ನಡೆಯಲಿದೆ. ನನಗೂ ಕರೆದಿದ್ದು, ನಾನೂ ಪಾಲ್ಗೊಳ್ಳುತ್ತೇನೆ. ಸಭೆಯಲ್ಲಿ ಚರ್ಚಿಸಲಾಗುವುದು. ಅಲ್ಲಿ ಏನಾಗುತ್ತದೋ ನೋಡೋಣ. ನನಗೆ ಹೇಳಿದರೆ ನಾನು ಸ್ಪರ್ಧಿಸುತ್ತೇನೆ, ಇಲ್ಲ ಬೇರೆಯವರಿಗೆ ನೀಡಿದರೂ ಪಕ್ಷದ ಗೆಲುವಿಗೆ ಶ್ರಮಿಸುತ್ತೇನೆಂದರು.

ಹೈಕಮಾಂಡ್‌ ಮತ್ತು ರಾಜ್ಯ ನಾಯಕರೊಂದಿಗೆ ಮೊದಲ ಹಂತದ ಸಭೆಯಾಗಿದೆ. ರಾಹುಲ್‌ ಗಾಂಧಿ ಬಂದು ಹೋದ ಮೇಲೆ 2ನೇ ಹಂತದ ಸಭೆ ನಡೆಸಲಾಗುವುದು. ಈ ಚುನಾವಣೆಯಲ್ಲಿ ತಾವು ಹಿಂದೆ ಸರಿದಿರುವುದಾಗಿ ಮಾತು ಕೇಳಿ ಬರುತ್ತಿವೆ ಎಂಬ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಎಸ್ಸೆಸ್ಸೆಂ, ಯಾರೂ ಸಹ ಹಿಂದೆ ಸರಿದಿಲ್ಲ. ಹೈಕಮಾಂಡ್‌ ಸೂಚಿಸಿದರೆ ನಾನೇ ಸ್ಪರ್ಧಿಸುತ್ತೇನೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

ಎಸ್ಸೆಸ್‌ ಅಸಮಾಧಾನ

ಹಿರಿಯ ಶಾಸಕ ಡಾ. ಶಾಮನೂರು ಶಿವಶಂಕರಪ್ಪ ಮಾತನಾಡಿ, ನನಗೆ ಬಿ ಫಾರಂ ಬೇಡ ಅಂತಾ ಹೈಕಮಾಂಡ್‌ಗೆ ಹೇಳಿ ಬಂದಿದ್ದೇನೆ. ಮಂತ್ರಿಗಿರಿ ಕೊಡುವಾಗ ವಯಸ್ಸಾಯ್ತು ಅಂದವ್ರು ಈಗ ಏಕೆ ಬಿ ಫಾರಂ ನೀಡಿದರು. ಈಗ ನನಗೆ ವಯಸ್ಸಾಗಿಲ್ಲವೇ. ನನ್ನನ್ನು ಕೇಳದೆಯೇ ಟಿಕೆಟ್ ನೀಡಿದ್ದರು. ಅದಕ್ಕೆ ಟಿಕೆಟ್ ಹಿಂದಿರುಗಿಸಿದ್ದೇನೆ ಎಂದು ತಮ್ಮ ಅಸಮಾಧಾನ ಹೊರಹಾಕಿದರು. ಅಲ್ಲದೇ ಸಚಿವ ಸ್ಥಾನ ನೀಡದಿರುವುದಕ್ಕೆ ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ನಿರಾಕರಿಸಲು ಕಾರಣವನ್ನು ಬಿಚ್ಚಿಟ್ಟರು.

ದಾವಣಗೆರೆ ಕ್ಷೇತ್ರದ ಟಿಕೆಟ್‍ ಅನ್ನು ಯಾರಿಗೇ ನೀಡಿದರೂ ನಾವು ಕೆಲಸ ಮಾಡುತ್ತೇವೆ ಎಂಬುದಾಗಿ ಸ್ಪಷ್ಟವಾಗಿ ಹೇಳಿದ್ದೇನೆ. ಯಾರಿಗೆ ಟಿಕೆಟ್ ನೀಡಬೇಕೆಂದು ನಾನು ಹೇಳಿಲ್ಲ. ಯಾರ ಹೆಸರನ್ನೂ ಹೈಕಮಾಂಡ್‍ಗೂ ಸೂಚಿಸಿಲ್ಲ. ತೇಜಸ್ವಿ ಪಟೇಲ್ ಬಗ್ಗೆಯೂ ಗೊತ್ತಿಲ್ಲ. ಕೊನೆಗೆ ಅವರು ಯಾರಿಗೆ ಕೊಡುತ್ತಾರೋ ಅವರ ಪರ ಕೆಲಸ ಮಾಡುತ್ತೇನೆ ಎಂದು ಸ್ಪಷ್ಟಪಡಿಸಿದರು.

ಜಿಲ್ಲಾ ಪಂಚಾಯತ್‌ ಸದಸ್ಯ ತೇಜಸ್ವಿ ಪಟೇಲ್ ಬೆಂಗಳೂರಿಗೆ ಹೋಗಿ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಭೇಟಿ ಮಾಡಿರುವುದು ನನಗೆ ಗೊತ್ತಿಲ್ಲ. ಅವರು ಈ ಹಿಂದೆ ನನ್ನ ಬಳಿಯೂ ಬಂದಿದ್ದರು ಎಂದಷ್ಟೇ ಹೇಳಿದರು.

ನಾಳೆ ಕಾಂಗ್ರೆಸ್ ಹಿರಿಯ ನಾಯಕರ ಸಭೆಯ ಹಿನ್ನೆಲೆಯಲ್ಲಿ ಮಲ್ಲಿಕಾರ್ಜುನ್ ಅವರು ಇಂದು ಮಧ್ಯಾಹ್ನ ಬೆಂಗಳೂರಿಗೆ ತೆರಳಿದರು. 

ಎಸ್ಸೆಸ್-ಎಸ್ಸೆಸ್ಸೆಂ ಮಾತಿಗೆ ಬದ್ಧ – ಮಂಜಪ್ಪ : ಕಾಂಗ್ರೆಸ್ ಪಕ್ಷದ ಜಿಲ್ಲಾಧ್ಯಕ್ಷ ಹೆಚ್.ಬಿ. ಮಂಜಪ್ಪ ಮಾತನಾಡಿ, ನಮ್ಮ ಜಿಲ್ಲೆಯ ಅಭ್ಯರ್ಥಿಯಾಗಿ ಶಾಮನೂರು ಶಿವಶಂಕರಪ್ಪ ಇಲ್ಲವೇ ಎಸ್.ಎಸ್.ಮಲ್ಲಿಕಾರ್ಜುನ್ ಆಗಬೇಕೆಂಬುದು ಪ್ರತಿಯೊಬ್ಬ ಕಾರ್ಯಕರ್ತರ ಒತ್ತಾಯವಾಗಿದೆ. ಆದರೆ, ಅವರು ಕಾರಣಾಂತರದಿಂದ ಬೇಡ ಎಂದು ನನ್ನ ಹೆಸರನ್ನು ಸೂಚಿಸಿದ್ದಾರೆ ಎಂದು ಹೇಳಿದರು.

ಜಿಲ್ಲೆಯಲ್ಲಿ ಹಲವಾರು ಹಿರಿಯ-ಕಿರಿಯ ಕಾರ್ಯಕರ್ತರೂ ಇದ್ದಾರೆ. ಅವರಲ್ಲಿ ಯಾರಿಗೆ ಬೇಕಾದರೂ ಗುರುತಿಸಿ ಟಿಕೆಟ್ ನೀಡಿದರೆ ನಮ್ಮ ಅಭ್ಯಂತರವಿಲ್ಲ. ಆದರೆ ಹೊರಗಿನಿಂದ ಬಂದವರಿಗೆ ಟಿಕೆಟ್ ನೀಡಿದರೆ ಜಿಲ್ಲಾ ಸಮಿತಿಯವರು ಕುಳಿತು ಈ ಬಗ್ಗೆ ಚರ್ಚಿಸಿ ತೀರ್ಮಾನ ಕೈಗೊಳ್ಳುತ್ತೇವೆಂದು ಸ್ಪಷ್ಟಪಡಿಸಿದರು.

ಹಿರಿಯ ನಾಯಕ ಶಾಮನೂರು ಶಿವಶಂಕರಪ್ಪ, ಎಸ್.ಎಸ್.ಮಲ್ಲಿಕಾರ್ಜುನ್ ಅವರ ನಾಯಕತ್ವದಲ್ಲಿ ಕಾಂಗ್ರೆಸ್ ಪಕ್ಷದ ಸಂಘಟನೆ ಮಾಡಲಾಗಿದೆ. ಅವರೇ ಪಕ್ಷದ ಆಧಾರ ಸ್ತಂಭ. ಇವರ
ನಿರ್ಣಯವೇ ಅಂತಿಮವಾಗಿದೆ. ಅವರ ಮಾತನ್ನು ನಾವು ಕಡೆಗಣಿಸುವುದಿಲ್ಲವೆಂದರು.

Please follow and like us: