ಹೆಗಲಿಗೆ ಪುಸ್ತಕದ ಬ್ಯಾಗು, ಕೈಯಲ್ಲಿ ಊಟದ ಬ್ಯಾಗು

ಕೆ.ಎನ್. ಮಲ್ಲಿಕಾರ್ಜುನ

ಇಂದಿನಿಂದ ಶಾಲೆಗಳು ಆರಂಭ, ಮಕ್ಕಳ ಸ್ವಾಗತಕ್ಕೆ ಸಜ್ಜಾದ ಶಿಕ್ಷಣ ಇಲಾಖೆ

ದಾವಣಗೆರೆ: ‘ಈ ಸ್ಕೂಲ್ ಯಾಕಾದ್ರೂ ರಜೆ ಕೊಡುತ್ತೋ…’ ‘ಸ್ಕೂಲ್ ಯಾವಾಗಾದ್ರೂ ಸ್ಟಾರ್ಟ್ ಆಗುತ್ತೋ…’  ಕಳೆದ ಎರಡು ತಿಂಗಳಲ್ಲಿ ಮನೆಯಲ್ಲೋ ಅಥವಾ ವಾಸಿಸುವ ಓಣಿಯಲ್ಲೋ ಇಂತಹ ಮಾತುಗಳು ಕಿವಿಗೆ ಬಿದ್ದಿರಲೇಬೇಕು..

ಮಕ್ಕಳ ತುಂಟಾಟಕ್ಕೆ, ಗಲಾಟೆಗೆ ಒಮ್ಮೊಮ್ಮೆ ಪೋಷಕರು ಅಥವಾ ಹಿರಿಯರು ಬೇಸರದಿಂದ ಉದ್ಘರಿಸುವ ಮಾತುಗಳಿವು. ಇದೀಗ ತಮ್ಮ ತುಂಟಾಟಗಳಿಗೆ ಬ್ರೇಕ್ ಹಾಕಿ, ಹೆಗಲಿಗೊಂದು ಚೀಲ ಏರಿಸಿ, ಕೈಯಲ್ಲೊಂದು ಊಟದ ಡಬ್ಬಿ ಇರುವ ಬ್ಯಾಗ್ ಹಿಡಿದು ಭವಿಷ್ಯ ​ಭದ್ರ ಮಾಡಿಕೊಳ್ಳುವ ‘ಸಾಲಿ ಗುಡಿ’ಯತ್ತ ಮಕ್ಕಳು ಹೆಜ್ಜೆ ಹಾಕುವ ದಿನ ಇಂದು ಬಂದೇ ಬಿಟ್ಟಿದೆ.

ಮಕ್ಕಳ ದಿನಚರಿ ಅಷ್ಟೇ ಅಲ್ಲ, ಹೆತ್ತವರೂ ಸಹ ತಮ್ಮ ನಿತ್ಯದ ಕೆಲಸಗಳೊಟ್ಟಿಗೆ ‘ಬಿಡುವಿಲ್ಲದ ವೇಳಾಪಟ್ಟಿ’ ಯನ್ನು ರೂಪಿಸಿಕೊಳ್ಳುವ ದಿನಗಳಿವು.

ಬೆಳಿಗ್ಗೆ ಬೇಗ ಎದ್ದು ಮನೆಯವರಿಗೆಲ್ಲಾ ತಿಂಡಿ ಮಾಡಿ, ಮಕ್ಕಳನ್ನು ಶಾಲೆಗೆ ರೆಡಿ ಮಾಡಿ, ಅವರಿಗೊಂದಿಷ್ಟು ಡಬ್ಬಿ ಕಟ್ಟಿ, ಶಾಲೆಗೆ ಬಿಟ್ಟು ಅಥವಾ ಶಾಲಾ ಬಸ್ಸಿಗೆ ಹತ್ತಿಸಿದಾಗಲೇ ತಾಯಂದಿರಿಗೆ ಒಂದಿಷ್ಟು ನಿರಾಳ. ಇಂತಹ ಕಾಲಚಕ್ರಕ್ಕೆ ಪೋಷಕರೂ ಸಿದ್ಧರಾಗಿದ್ದಾರೆ.

ಜಿಲ್ಲೆಯಲ್ಲಿ 11 ಪಬ್ಲಿಕ್ ಸ್ಕೂಲ್, 21 ಇಂಗ್ಲಿಷ್ ಮೀಡಿಯಂ ಸ್ಕೂಲ್

ಜಿಲ್ಲೆಯಲ್ಲಿ ಒಟ್ಟಾರೆ 11 ಕರ್ನಾಟಕ ಪಬ್ಲಿಕ್ ಶಾಲೆ ಸೇರಿದಂತೆ 21 ಆಂಗ್ಲ ಮಾಧ್ಯಮ ಶಾಲೆಗಳು ಇಂದಿನಿಂದ ಆರಂಭವಾಗಿವೆ.

ತ್ಯಾವಣಿಗೆ, ಹೊಸ ಕುಂದುವಾಡ, ದೊಡ್ಡಬಾತಿ, ಬನ್ನಿಕೋಡು ಸಾಸ್ವಿಹಳ್ಳಿ ಸೇರಿ ಈ ವರ್ಷ​ಒಟ್ಟು 5 ಕಡೆ ಕರ್ನಾಟಕ  ಪಬ್ಲಿಕ್ ಶಾಲೆಗಳನ್ನು ಆರಂಭಿಸಲಾಗಿದೆ. ಕಳೆದ ವರ್ಷ​ 6 ಶಾಲೆಗಳನ್ನು ಆರಂಭಿಸಲಾಗಿತ್ತು.  ಈ ಶಾಲೆಗಳಲ್ಲಿ ಎಲ್​ಕೆಜಿ ಯಿಂದಲೂ ಶಿಕ್ಷಣ ನೀಡಲಾಗುತ್ತಿದೆ. ಈ  ಶಾಲೆಗಳಿಗೆ ಬೇಡಿಕೆ  ಹೆಚ್ಚಾಗಿದ್ದು, 80 ರಿಂದ 90ರವರೆಗೆ ಅರ್ಜಿಗಳು ಬಂದಿವೆ. ಆದರೆ 30 ಸೀಟುಗಳಿಗೆ ಮಾತ್ರ ಪ್ರವೇಶ ಪಡೆದುಕೊಳ್ಳಲಾಗುತ್ತದೆ  ಎಂದು ಡಿಡಿಪಿಐ ಸಿ.ಆರ್. ಪರಮೇಶ್ವರಪ್ಪ  ಹೇಳಿದ್ದಾರೆ.

ಕಲಿಕಾ ಸಾಮಗ್ರಿ ಖರೀದಿ: ಮಂಡಿಪೇಟೆ ಸೇರಿದಂತೆ ಪುಸ್ತಕದ ಅಂಗಡಿಗಳಲ್ಲಿ ಕಳೆದ ಭಾನುವಾರದಿಂದಲೂ ಬ್ಯಾಗು, ಪುಸ್ತಕ, ಪೆನ್ನು ಸೇರಿದಂತೆ ಕಲಿಕಾ ಸಾಮಗ್ರಿಗಳ ಖರೀದಿ ಏರು ಗತಿಯಲ್ಲಿತ್ತು.  ಕೆಲ ಖಾಸಗಿ ಶಾಲೆಗಳು ವರ್ಷಕ್ಕಾಗುವಷ್ಟು ಅಗತ್ಯವಿರುವ ಸಾಮಗ್ರಿಗಳ ಪಟ್ಟಿಯನ್ನು ಹಿಡಿದು ತಂದಿದ್ದ ಪೋಷಕರು ಮಕ್ಕಳೊಂದಿಗೆ ಖರೀದಿಸುತ್ತಿದ್ದುದು ಕಂಡು ಬಂತು.

ಸದ್ದು ಮಾಡುತ್ತೆ ಸಾಲಿ ಗುಡಿ

ಹಳ್ಳಿಗಳಲ್ಲಿ ರಜಾ ದಿನಗಳಲ್ಲಿ ಶಾಲೆಗಳು ಚಾವಂಗ, ಇಸ್ಪೀಟ್ ಆಟಗಳ ಕೇಂದ್ರವಾಗಿ ಮಾರ್ಪಟ್ಟಿರುತ್ತವೆ. ದನ ಕಾಯುವವರು, ಬಿಸಿಲಿನ ತಾಪಕ್ಕೆ ದಣಿವಾರಿಸಿಕೊಳ್ಳುವವರಿಗೆ ಮೌನವಾಗಿದ್ದ  ಶಾಲೆಯ ಮುಂಭಾಗದ ನೆರಳೇ ಆಸರೆ.  

ಇದೀಗ ಅದೆಲ್ಲಾ ಬದಲಾಗಿ ಶಾಲೆಗಳು ಸ್ವಚ್ಛವಾಗಿವೆ. ಸಾಲಿಗುಡಿಯಲ್ಲಿ ಮತ್ತೆ ಢಣ ಢಣ ಗಂಟೆ ಸದ್ದು ಕೇಳಲಾರಂಭಿಸುತ್ತದೆ. ಒಣಗಿದ್ದ ಗಿಡ-ಮರಗಳಿಗೆ ಮತ್ತೆ ಚಿಗುರುವ ತವಕ.

ಸ್ವಾಗತಕ್ಕೆ ಶಿಕ್ಷಣ ಇಲಾಖೆ ಸಜ್ಜು: ಜಿಲ್ಲೆಯಲ್ಲಿ ಒಟ್ಟು 790 ಪೂರ್ವ ಪ್ರಾಥಮಿಕ ಶಾಲೆಗಳು, 1241 ಹಿರಿಯ ಪ್ರಾಥಮಿಕ ಶಾಲೆಗಳು, 526 ಪ್ರೌಢಶಾಲೆಗಳಿವೆ. ಅತ್ತ ಮಕ್ಕಳು ಶಾಲೆಗೆ ಬರಲು ತಯಾರಿ ನಡೆಸುತ್ತಿದ್ದರೆ, ಇತ್ತ ಮಕ್ಕಳನ್ನು ಸ್ವಾಗತಿಸಲು ಶಿಕ್ಷಣ ಇಲಾಖೆಯೂ ಸನ್ನದ್ಧವಾಗಿದೆ. ಈಗಾಗಲೇ ಎಲ್ಲಾ ಶಾಲೆಗಳಲ್ಲಿ ಸ್ವಚ್ಛತಾ ಕಾರ್ಯಗಳು ನಡೆದಿದ್ದು, ಶಾಲೆಗಳನ್ನು ತಳಿರು-ತೋರಣಗಳಿಂದ ಸಿಂಗರಿಸಲಾಗಿದೆ.

ಮೊದಲ ದಿನ ಸಿಹಿ: ಶಿಕ್ಷಣ ಇಲಾಖೆ ಸೂಚನೆ ಮೇರೆಗೆ ಶಾಲೆ ಆರಂಭದ  ದಿನ ಮಕ್ಕಳಿಗಾಗಿ ಸಿಹಿ ಅಡುಗೆ ಮಾಡಿ ಬಡಿಸಲಾಗುತ್ತಿದ್ದು, ಸಿಹಿ ಸ್ವಾಗತ ಸಿಗಲಿದೆ. ಹೊಸ ಶಾಲೆಗಳ ಶೈಕ್ಷಣಿಕ ಚಟುವಟಿಕೆಗಳನ್ನು ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕರು ದಿಢೀರ್ ಭೇಟಿ ನೀಡಿ ಪರಿಶೀಲಿಸಲಿದ್ದಾರೆ.

ಶೇ.80ರಷ್ಟು ಪುಸ್ತಕ:  ಶೇ.80ರಷ್ಟು ಪಠ್ಯ-ಪುಸ್ತಕಗಳು ಈಗಾಗಲೇ ಬಂದಿವೆ. ಸಂಬಂಧಿಸಿದ ಬಿಇಒಗಳಿಗೆ ಕಳುಹಿಸಿಕೊಡಲಾಗಿದೆ. 8, 9, ಹಾಗೂ 10ನೇ ತರಗತಿ ಮಕ್ಕಳಿಗೆ ಸಮವಸ್ತ್ರ ಹೊರತುಪಡಿಸಿದರೆ ಉಳಿದೆಲ್ಲಾ ಮಕ್ಕಳ ಸಮವಸ್ತ್ರ ಬಂದಿವೆ. ಹೈಸ್ಕೂಲ್ ಮಕ್ಕಳಿಗೆ ಸಮವಸ್ತ್ರ ಸರಬರಾಜಿಗೆ ಟೆಂಡರ್ ಕರೆಯಲಾಗಿದ್ದು, ಇನ್ನು 15 ದಿನಗಳಲ್ಲಿ ಅವರಿಗೂ ಸಮವಸ್ತ್ರ ಬರಲಿದೆ ಎಂದು ಡಿಡಿಪಿಐ ಪರಮೇಶ್ವರಪ್ಪ ತಿಳಿಸಿದ್ದಾರೆ.

ಸರ್ಕಾರಿ ಆದೇಶದಂತೆ ಶಾಲೆಗಳು ಅಧಿಕೃತವಾಗಿ ಇಂದು ಆರಂಭವಾಗುತ್ತಿವೆ ಯಾದರೂ, ನಗರದಲ್ಲಿ ಅನೇಕ ಖಾಸಗಿ ಶಾಲೆಗಳು ಹಲವು ದಿನಗಳ ಹಿಂದೆಯೇ ಆರಂಭವಾಗಿವೆ.