May 21, 2019

ಲೋಕ ಸಮರಕ್ಕೆ ಮಲ್ಲಿಕಾರ್ಜುನ್‌ ಅಭ್ಯರ್ಥಿ: ಶಾಸಕ ಎಸ್ಸೆಸ್‌

ಲೋಕಸಭಾ ಚುನಾವಣೆಯಲ್ಲಿ ಮಾಜಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಅವರು ಸ್ಪರ್ಧಿಸಲಿದ್ದಾರೆ ಎಂದು  ಶಾಸಕ ಡಾ. ಶಾಮನೂರು ಶಿವಶಂಕರಪ್ಪ ಖಚಿತಪಡಿಸಿದ್ದಾರೆ. 

ತಮ್ಮ ನಿವಾಸದಲ್ಲಿ ಇಂದು ತಮ್ಮನ್ನು ಭೇಟಿಯಾದ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿಕೂಟದ ಅಭ್ಯರ್ಥಿಯಾಗಿ ಮಲ್ಲಿಕಾರ್ಜುನ್‌ ಸ್ಪರ್ಧಿಸಲು ಆಸಕ್ತಿ ತೋರಿದ್ದು, ಇದನ್ನು ಸ್ವತಃ ಅವರೇ ನನ್ನ ಬಳಿ ಹೇಳಿಕೊಂಡಿದ್ದಾರೆ. ಈಗ ಪಕ್ಷದಿಂದ ಅಧಿಕೃತವಾಗಿ ಘೋಷಣೆ ಯಾಗುವುದೊಂದೇ ಬಾಕಿ ಉಳಿದಿದೆ ಎನ್ನುವ ಮೂಲಕ ಕಾಂಗ್ರೆಸ್‍ನ ಅಭ್ಯರ್ಥಿಯಾಗಿ ಕಣಕ್ಕಿಳಿಯುವುದೇ ಎಸ್ಸೆಸ್ಸೆಂ ಎಂಬ ಸೂಚನೆ ನೀಡಿ ಗೊಂದಲ, ಕುತೂಹಲಕ್ಕೆ ನಾಂದಿ ಹಾಡಿದ್ದಾರೆ.

ಬೇರೆ ಯಾರೋ ಅಭ್ಯರ್ಥಿಗಳು ಇಲ್ಲಿ ಸ್ಪರ್ಧಿಸುವುದಿಲ್ಲ. ಪಕ್ಷದ ಹೈಕಮಾಂಡ್ ಟಿಕೆಟ್‌ ಅನ್ನು ಮಲ್ಲಿಕಾರ್ಜುನ್ ಅವರಿಗೆ ಕೊಡುವುದು ಎಂದು ಪಕ್ಷದ ಪ್ರತಿಯೊಬ್ಬ ಕಾರ್ಯಕರ್ತರಿಗೆ ತಿಳಿದಿರುವ ವಿಷಯ. ಮಲ್ಲಿಕಾರ್ಜುನ ಅವರೇ ಅಭ್ಯರ್ಥಿಯೆಂದು ಅಧಿಕೃತವಾಗಿ ಘೋಷಣೆಯಾದ ತಕ್ಷಣ ಕಾಂಗ್ರೆಸ್ ಪಕ್ಷದಿಂದ ಪ್ರಚಾರವನ್ನೂ ಆರಂಭಿಸಲಿದ್ದೇವೆ ಎಂದು ಸ್ಪಷ್ಟಪಡಿಸಿದರು. 

ಕ್ಷೇತ್ರದಲ್ಲಿ ಚುನಾವಣಾ ಆಕಾಂಕ್ಷಿಗಳಾಗಿದ್ದವರ ಬೆಂಬಲವೂ  ಮಲ್ಲಿಕಾರ್ಜುನ್ ಅವರ ಮೇಲೆಯೇ ಇದೆ ಎಂದ ಎಸ್ಸೆಸ್‌, ನಮ್ಮ ಪ್ರತಿ ಸ್ಪರ್ಧಿ ಪಕ್ಷದ ಅಭ್ಯರ್ಥಿ ಮೂರು ಸಲ ಗೆದ್ದಿದ್ದರು. ನಮ್ಮ ಶಕ್ತಿಯ ಬಗ್ಗೆಯೂ ನಮಗೆ ಗೊತ್ತಿದೆ ಎಂದು ಹೆಸರು ಹೇಳದೇ ಪರೋಕ್ಷವಾಗಿ ಸಂಸದ ಜಿ.ಎಂ. ಸಿದ್ದೇಶ್ವರ ಅವರಿಗೆ ಟಾಂಗ್‌ ಕೊಟ್ಟರು.

ನರೇಂದ್ರ ಮೋದಿ ಸುಳ್ಳು ಹೇಳುವ ಪ್ರಧಾನಿಯೆಂಬುದು ಎಲ್ಲರಿಗೂ ಗೊತ್ತು. ಏರ್ ಸ್ಟ್ರೈಕ್ ನಂತರ ಬಿಜೆಪಿಗೆ ಶೇ.10ರಷ್ಟು ಬೆಂಬಲ ಹೆಚ್ಚಾಗಿದೆ. ಆದರೂ ನಮ್ಮ ಪಕ್ಷವೇ ಈ ಕ್ಷೇತ್ರದಲ್ಲಿ ಗೆಲುವು ಸಾಧಿಸಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

Please follow and like us: