March 31, 2020

ಹಬ್ಬಗಳು ಸಮಾಜದಲ್ಲಿ ಸಂಬಂಧ ಗಟ್ಟಿ ಮಾಡಲಿ

ದಾವಣಗೆರೆ, ಅ. 3 – ಸಂತೋಷದ  ಸಂದರ್ಭ ಗಳಾದ ಹಬ್ಬಗಳು ಸಮಾಜದಲ್ಲಿ ಸಂಬಂಧಗಳನ್ನು ಗಟ್ಟಿಗೊಳಿಸುವಂತಾಗಲಿ ಎಂದು ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ ಆಶಿಸಿದ್ದಾರೆ.

ದಸರಾ ಹಬ್ಬದ ಅಂಗವಾಗಿ ಜಿಲ್ಲಾ ಪೊಲೀಸ್ ಇಲಾಖೆ ವತಿಯಿಂದ ನಗರದ ಬಡಾವಣೆ ಪೊಲೀಸ್ ಠಾಣೆ ಆವರಣದಲ್ಲಿ ಇಂದು ಆಯೋಜಿಸಲಾಗಿದ್ದ ಶಾಂತಿ ಸೌಹಾರ್ದತಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಸಣ್ಣ ಕಾರಣಗಳಿಂ ದಾಗಿ ಸಮಾಜದಲ್ಲಿ ಆಗುವ ಸಂಘರ್ಷಗಳು ಆರ್ಥಿಕತೆ ಹಾಗೂ ಅಭಿವೃದ್ಧಿಗೆ ಧಕ್ಕೆ ತರುತ್ತವೆ. ಆ ರೀತಿ ಆಗದಂತೆ ಅಭಿವೃದ್ಧಿಗೆ ಪೂರಕವಾಗುವ ರೀತಿ ಯಲ್ಲಿ ಸಂಭ್ರಮಾಚರಣೆಗಳು ಇರಬೇಕು ಎಂದರು.

ಹಬ್ಬದ ಸಂದರ್ಭದಲ್ಲಿ ಸಣ್ಣ ಪುಟ್ಟ ಸಮಸ್ಯೆಗಳು ಎದುರಾದರೂ ಸಹ ಅದನ್ನು ಮೀರಿ ರಾಷ್ಟ್ರೀಯತೆಯ ಭಾವನೆಯಿಂದ ಮುನ್ನಡೆಯಬೇಕಿದೆ. ಅಭಿವೃದ್ಧಿ ಹಾಗೂ ಏಳಿಗೆಯ ಉದ್ದೇಶಗಳು ಸದಾ ನಮ್ಮ ತಲೆಯಲ್ಲಿರಬೇಕು ಎಂದು ಹನುಮಂತರಾಯ ಹೇಳಿದರು.

8ರಂದು ದಸರಾ ಶೋಭಾ ಯಾತ್ರೆ : ವಿಶ್ವ ಹಿಂದೂ ಪರಿಷತ್ ಹಾಗೂ ಸಾರ್ವಜನಿಕ ವಿಜಯದಶಮಿ ಮಹೋತ್ಸವ ಸಮಿತಿ ಆಶ್ರಯದಲ್ಲಿ ಇದೇ ದಿನಾಂಕ 8ರ ಮಂಗಳವಾರ ಬೆಳಿಗ್ಗೆ 11.30ಕ್ಕೆ ನಗರದ ಬೇತೂರು ರಸ್ತೆಯಲ್ಲಿರುವ ವೆಂಕಟೇಶ್ವರ ವೃತ್ತದಿಂದ ಶೋಭಾಯಾತ್ರೆ ಆರಂಭವಾಗಲಿದೆ. ಶೋಭಾ ಯಾತ್ರೆಯಲ್ಲಿ ಕೋಡಿಯಾಲ ಹೊಸಪೇಟೆಯ ಪುಣ್ಯಕೋಟಿ ಮಠದ ಶ್ರೀ ಜಗದೀಶ ಸ್ವಾಮೀಜಿ, ಹಿರೇಹಡಗಲಿಯ ಹಾಲಸ್ವಾಮಿ ಮಠದ ಶ್ರೀ ಅಭಿನವ ಹಾಲಶ್ರೀಗಳು, ನಗರದ ಶ್ರೀ ಜಡೆ ಸಿದ್ಧ ಶಿವಯೋಗೀಶ್ವರ ಮಠದ ಶ್ರೀ ಶಿವಾನಂದ ಮಹಾಸ್ವಾಮೀಜಿ ನೇತೃತ್ವ  ವಹಿಸಲಿದ್ದಾರೆ. ಶೋಭಾಯಾತ್ರೆಯು ಎಪಿಎಂಸಿ, ಬಂಬೂ ಬಜಾರ್, ಹಾಸಬಾವಿ ಸರ್ಕಲ್‌ ಮೂಲಕ ಸಾಗಿ ಬರಲಿದೆ. ಸಂಜೆ 4 ಗಂಟೆಗೆ ಹೊಂಡದ ಸರ್ಕಲ್‌ನಲ್ಲಿ ಸಾರ್ವಜನಿಕ ಸಭೆ ನಡೆಯಲಿದೆ. ನಂತರ ಬೀರಲಿಂಗೇಶ್ವರ ಮೈದಾನದಲ್ಲಿ ಅಂಬುಛೇದನ ನೆರವೇರಲಿದೆ.

ಈ ಸಂದರ್ಭಗಳಲ್ಲಿ ಸಲಹೆಗಳನ್ನು ನೀಡಿ ಮಾತನಾಡಿದ ಸಾರ್ವಜನಿಕ ವಿಜಯದಶಮಿ ಮಹೋತ್ಸವ ಸಮಿತಿ ಅಧ್ಯಕ್ಷ ದೇವರಮನಿ ಶಿವಕುಮಾರ್, ಈ ಬಾರಿ ಇದೇ ದಿನಾಂಕ 8ರಂದು ಶೋಭಾ ಯಾತ್ರೆಯ ಜೊತೆಗೆ ಹೊಂಡದ ಸರ್ಕಲ್‌ನಲ್ಲಿ ಸಾರ್ವಜನಿಕ ಸಭೆಯನ್ನು ನಡೆಸಲಾಗುವುದು ಎಂದು ಹೇಳಿದರು.

900 ಸಿಸಿ ಟಿವಿಗಳ ಅಳವಡಿಕೆ : ಸ್ಮಾರ್ಟ್ ಸಿಟಿ ಯೋಜನೆಯಡಿ ನಗರದಲ್ಲಿ ಎರಡು ಹಂತಗಳಲ್ಲಿ 900 ಸಿಸಿಟಿವಿಗಳನ್ನು ಅಳವಡಿಸ ಲಾಗುವುದು. ಮೊದಲ ಹಂತದಲ್ಲಿ 297 ಸಿಸಿಟಿವಿ ಗಳನ್ನು ಅಳವಡಿಸಲಾಗಿದ್ದು, ಅವುಗಳನ್ನು ನಿಯಂತ್ರಣ ಕೇಂದ್ರಗಳಿಗೆ ಅಳವಡಿಸಲಾಗಿದೆ. 2ನೇ ಹಂತದಲ್ಲಿ 600 ಸಿಸಿ ಟಿವಿಗಳನ್ನು ಅಳವಡಿಸಲಾಗುವುದು ಎಂದು ಎಸ್‌ಪಿ ಹನುಮಂತರಾಯ ತಿಳಿಸಿದ್ದಾರೆ.

ಲಾರಿ ಮಾಲೀಕರ ಸಂಘದ ಅಧ್ಯಕ್ಷ ಸೈಫುಲ್ಲಾ, ಹಿಂದೂ ಸಮಾಜದ ಮುಖಂಡ ಕೆ.ಬಿ. ಶಂಕರ ನಾರಾಯಣ, ಜೆಡಿಎಸ್‌ನ ಅಮಾನುಲ್ಲಾ ಖಾನ್‌, ಆವರಗೆರೆ ಉಮೇಶ್, ಬಿಜೆಪಿ ಮುಖಂಡ ವೈ. ಮಲ್ಲೇಶ್ ಮತ್ತಿತರರು ಮಾತನಾಡಿ ಸಲಹೆಗಳನ್ನು ನೀಡಿದರು.

ಡಿಎಲ್‌ ಮೇಳಕ್ಕೆ ಸಿದ್ಧತೆ : ನಗರದಲ್ಲಿ ಡಿ.ಎಲ್. ಮೇಳಗಳನ್ನು ಆಯೋಜಿಸಲು ಸಿದ್ಧತೆ ನಡೆಸಲಾಗುತ್ತಿದ್ದು, 30ಕ್ಕೂ ಹೆಚ್ಚು ಸೇವಾದಾರರಿಗೆ ತರಬೇತಿ ನೀಡಲಾಗಿದೆ. ಈ ಹಿಂದೆ ಪ್ರತಿನಿತ್ಯ 100 ಜನರಿಗೆ ಡಿಎಲ್‌ ನೀಡಲಾಗುತ್ತಿತ್ತು. ಈಗ ಆ ಸಂಖ್ಯೆಯನ್ನು 300ಕ್ಕೆ ಏರಿಸಲಾಗಿದೆ.

ಈ ಸಂದರ್ಭದಲ್ಲಿ ಆರ್‌ಟಿಒ ಎನ್.ಜೆ. ಬಣಕಾರ್, ಡಿಎಸ್‌ಪಿ ಗಂಗಲ್, ಅಬಕಾರಿ ಸಬ್ ಇನ್ಸ್‌ಪೆಕ್ಟರ್ ಶಂಕರಪ್ಪ, ಜಿಲ್ಲಾ ಆರೋಗ್ಯಾಧಿಕಾರಿ ರಾಘವೇಂದ್ರ ಸ್ವಾಮಿ, ಉಪ ವಲಯ ಅರಣ್ಯಾಧಿಕಾರಿ ಚಂದ್ರಶೇಖರ್ ಉಪಸ್ಥಿತರಿದ್ದರು.