December 6, 2019

ಹಂದಿ ಸಾಕಾಣಿಕೆ ಬಿಟ್ಟು ಪರ್ಯಾಯ ಉದ್ಯೋಗಕ್ಕೆ ಮುಂದಾಗಿ

ಹಂದಿ ಸಾಕಾಣಿಕೆದಾರರ ಸಭೆಯಲ್ಲಿ ಪಾಲಿಕೆ ಆಯುಕ್ತ ಮಂಜುನಾಥ ಬಳ್ಳಾರಿ ಸಲಹೆ; ಅಗತ್ಯ ನೆರವು ನೀಡುವ ಭರವಸೆ

ದಾವಣಗೆರೆ : ಹಂದಿ ಸಾಕಾಣಿಕೆ ಉದ್ಯೋಗ ಬಿಟ್ಟು ಪರ್ಯಾಯ ಉದ್ಯೋಗದತ್ತ ಮುಖ ಮಾಡುವಂತೆ ಹಂದಿ ಸಾಕಾಣಿಕೆದಾರರಿಗೆ ಪಾಲಿಕೆ ಆಯುಕ್ತ ಮಂಜುನಾಥ ಬಳ್ಳಾರಿ ಸಲಹೆ ನೀಡಿದ್ದಾರೆ.

ಮಹಾನಗರ ಪಾಲಿಕೆ ಸಭಾಂಗಣದಲ್ಲಿಂದು ಪಾಲಿಕೆ ಅಧಿಕಾರಿಗಳು ಹಾಗೂ ಹಂದಿ ಮಾಲೀಕರ ಸಭೆಯ ಅಧ್ಯಕ್ಷತೆ ವಹಿಸಿದ್ದ ಅವರು, ಹಂದಿ ಮಾಲೀಕರು ಸಾಕಾಣಿಕೆ ಬಿಟ್ಟು ಬೇರೆ ಸ್ವಯಂ ಉದ್ಯೋಗ ಮಾಡುವುದಾದರೆ ಪಾಲಿಕೆ ವತಿಯಿಂದ ಅಗತ್ಯ ನೆರವು ನೀಡುವುದಾಗಿ ಹೇಳಿದರು.

ಬೇರೆ ತಾಲ್ಲೂಕುಗಳಿಗೆ ಹೋಲಿಸಿದರೆ ದಾವಣಗೆರೆ ನಗರದಲ್ಲಿ ಬಿಡಾಡಿ ಹಂದಿಗಳ ಸಂಖ್ಯೆ ಹೆಚ್ಚಾಗಿದೆ. ಹಂದಿಗಳ​ ಸಂಖ್ಯೆಯಲ್ಲಿ ದಾವಣಗೆರೆ ರಾಜ್ಯದಲ್ಲಿಯೇ 2ನೇ ಸ್ಥಾನದಲ್ಲಿದೆ ಎಂದು ತಿಳಿದು ಬಂದಿದೆ. ಆದರೆ ಇದು ನಿಜವೋ ಸುಳ್ಳೋ ಗೊತ್ತಿಲ್ಲ. ಪಾಲಿಕೆಗೆ ಬರುವ ದೂರುಗಳಲ್ಲಿ ಹಂದಿಗಳ ಕುರಿತ ದೂರುಗಳೇ ಹೆಚ್ಚಾಗಿವೆ ಎಂದು ಹೇಳಿದರು.

ಹಂದಿಗಳಿಗೆ ಪುನರ್ವಸತಿ ಕಲ್ಪಿಸಲು ಸರ್ಕಾರಿ ಜಾಗ ನೋಡಲು ಪ್ರಯತ್ನಿಸುತ್ತೇವೆ. ಖಾಸಗಿ ಜಾಗ ಇದ್ದರೆ ಪಾಲಿಕೆ ವತಿಯಿಂದ ಖರೀದಿಸಲು ತಯಾರಿದ್ದೇವೆ. ಆದರೆ ಹಂದಿಗಳ ಸಂಖ್ಯೆ ಕಡಿಮೆ ಇದ್ದಾಗ ಮೂಲ ಸೌಕರ್ಯಗಳನ್ನು ಕಲ್ಪಿಸಲು ಸಾಧ್ಯವಾಗುತ್ತದೆ. ಆದ್ದರಿಂದ ಹಂದಿಗಳ ಸಂಖ್ಯೆ ಕಡಿಮೆ ಮಾಡಲು ಕ್ರಮ ವಹಿಸಿ ಎಂದು ಮಾಲೀಕರಿಗೆ ಸಲಹೆ ನೀಡಿದರು.

ಅಖಿಲ ಕರ್ನಾಟಕ ಕುಳುವ ಮಹಾ ಸಂಘದ ರಾಜ್ಯಾಧ್ಯಕ್ಷ​ ಎಂ. ಆನಂದಪ್ಪ ಮಾತನಾಡುತ್ತಾ, ನಗರದ ಹೊರಭಾಗದ ಅಥವಾ ಮಧ್ಯ ಭಾಗದಲ್ಲಿ ಪುನರ್ವಸತಿ ಹಾಗೂ ಮೂಲ ಸೌಲಭ್ಯಗಳನ್ನು ಕಲ್ಪಿಸಿಕೊಟ್ಟರೆ  ನಮ್ಮ ಸ್ವಂತ ಖರ್ಚಿನಲ್ಲಿ ನಾವೇ ಹಂದಿಗಳನ್ನು ಸ್ಥಳಾಂತರ ಮಾಡುತ್ತೇವೆ. ಹಂದಿ ಸಾಕಾಣಿಕೆ ಬಿಟ್ಟು ತಕ್ಷಣ ಬದಲಾಗಲು ಸಾಧ್ಯವಿಲ್ಲ. ಹಂತ ಹಂತವಾಗಿ ಬದಲಾಗಲು ಪ್ರಯತ್ನಿಸುತ್ತೇವೆ. ಸಮಯಾವಕಾಶ ಕೊಡಿ ಎಂದು ಹೇಳಿದರು.

ಹಂದಿ ಸಾಕಾಣಿಕೆ ನಮ್ಮ ಮೂಲ ವೃತ್ತಿಯಾಗಿದೆ. ಅದನ್ನೇ ನಂಬಿಕೊಂಡು ಬದುಕುತ್ತಿದ್ದೇವೆ. ಹಂದಿ ಸಾಕಾಣಿಕೆ ವೃತ್ತಿ ಬಗ್ಗೆ ಸರ್ಕಾರ ಹಾಗೂ ಅಧಿಕಾರಿಗಳು ಸರಿಯಾದ ಮಾರ್ಗದರ್ಶನ ನೀಡುತ್ತಿಲ್ಲ. ಸ್ಮಾರ್ಟ್ ಸಿಟಿ ನೆಪದಲ್ಲಿ ಹಂದಿ ಹಿಡಿದು ಹೊರ ರಾಜ್ಯಗಳಿಗೆ ಕಳುಹಿಸುತ್ತಿದ್ದಾರೆ. ಇದರಿಂದ ನಮ್ಮ ವೃತ್ತಿಗೆ ತೊಂದರೆಯಾಗುತ್ತಿದೆ ಎಂದು ಆರೋಪಿಸಿದರು.

ಮತ್ತೋರ್ವ ಮಾಲೀಕ ದುರ್ಗಪ್ಪ ಮಾತನಾಡುತ್ತಾ, ನಗರದ ಹೊರ ಭಾಗದಲ್ಲಿ ಹಂದಿ ಸಾಕಲು ಸೂಕ್ತ ಜಾಗ, ಆಹಾರ ಪದಾರ್ಥ​, ನೀರು ಸೇರಿದಂತೆ ಅಗತ್ಯ ಸೌಲಭ್ಯಗಳು  ಸಿಗುವುದಿಲ್ಲವಾದ್ದರಿಂದ ಸದ್ಯ ಇರುವ ಕಡೆಯೇ ಸ್ಥಳಾವಕಾಶ ಮಾಡಿಕೊಡಲು ವಿನಂತಿಸಿದರು.

ಮೊದಲಿಗಿಂತ ಈಗ ನಗರದಲ್ಲಿ ಶೇ.60ರಷ್ಟು ಹಂದಿಗಳ ಸಂಖ್ಯೆ ಕಡಿಮೆಯಾಗಿದೆ. ವಾರಕ್ಕೆ ನಾಲ್ಕರಿಂದ ಐದು ಲೋಡ್ ಹಂದಿಗಳನ್ನು ಬೇರೆಡೆಗೆ ಸಾಗಿಸಲಾಗುತ್ತಿದೆ. ಬೇಕಾದರೆ ಪಾಲಿಕೆ ವತಿಯಿಂದ ಸರ್ವೇ ಮಾಡಿಸಿ ಎಂದು ಹಂದಿ ಮಾಲೀಕರು ಸಮಜಾಯಿಷಿ ನೀಡಿದರು.

ನಿಮ್ಮ ಮಾತುಗಳನ್ನು ಸಾರ್ವಜನಿಕರು ಒಪ್ಪುವುದಿಲ್ಲ. ಹಂದಿಗಳಿಂದಾಗಿ ಯುಜಿಡಿ ಅವ್ಯವಸ್ಥೆ, ಕಸ ವಿಲೇವಾರಿಗೂ ತೊಡಕು ಉಂಟಾಗುತ್ತಿದೆ ಎಂದು ಆಯುಕ್ತ ಮಂಜುನಾಥ ಬಳ್ಳಾರಿ ಹೇಳಿದರು.

ಪಾಲಿಕೆ ಅಧಿಕಾರಿ ಚಂದ್ರಶೇಖರ್ ಸುಂಕದ್ ಮಾತನಾಡುತ್ತಾ, ಹಂದಿಗಳ ಪುನರ್ವಸತಿಗೆ ಆಲೂರ ಹಟ್ಟಿಯಲ್ಲಿ ಸ್ಥಳ ಗುರುತಿಸಿದಾಗ 16 ಕಿ.ಮೀ. ದೂರವಾಗುತ್ತದೆ ಎಂದು ಮಾಲೀಕರು ನಿರಾಕರಿಸಿದಾಗ ಬಾತಿಯಲ್ಲಿ ಸ್ಥಳ ಗುರುತಿಸಿದ್ದೇವೆ. ಆದರೆ ಅಲ್ಲಿನ ಗ್ರಾಮಸ್ಥರು ವಿರೋಧ ಮಾಡಿ ಪ್ರತಿಭಟನೆ ನಡೆಸಿದರು. ನಂತರ ಆನಗೋಡು, ಆವರಗೊಳ್ಳದಲ್ಲೂ ಜಾಗ ಗುರುತಿಸಿದಾಗ ಅಲ್ಲಿನ ಗ್ರಾಮಸ್ಥರೂ ಸಹ ವಿರೋಧ ವ್ಯಕ್ತಪಡಿಸಿದರು ಎಂದು ಹಿಂದಿನ ಘಟನೆಗಳ ಬಗ್ಗೆ ವಿವರಿಸಿದರು.

ಪಾಲಿಕೆ ಆರೋಗ್ಯ ನಿರೀಕ್ಷಕರು, ಹಂದಿ ಮಾಲೀಕರುಗಳಾದ ಆನಂದಪ್ಪ, ದುಗುರುಗಪ್ಪ, ಕೊಟ್ರೇಶ್, ಪಕ್ಕೀರಪ್ಪ, ಪರುಸಪ್ಪ, ಪರಮೇಶ್, ಪ್ರಕಾಶ್, ನಾಗಪ್ಪ ಹಾಗೂ ಇತರರು ಸಭೆಯಲ್ಲಿ ಪಾಲ್ಗೊಂಡಿದ್ದರು

ಹಂದಿ ಮಾಲೀಕರ ಬೇಡಿಕೆಗಳು

ಪಾಲಿಕೆ ಸೇರಿದಂತೆ ತಾಲ್ಲೂಕು ವ್ಯಾಪ್ತಿಯಲ್ಲಿ ಜನವಸತಿ ಪ್ರದೇಶದಲ್ಲಿ ವರಹಾ ಶಾಲೆ ಆರಂಭಿಸಿ, ಮೂಲ ಸೌಕರ್ಯ ಕಲ್ಪಿಸಬೇಕು. ಸೂಕ್ತ ಜಾಗ ಗುರುತಿಸಿ ಸಂಘಕ್ಕೆ ಮಂಜೂರು ಮಾಡಿಕೊಡಬೇಕು.  ಜಾಗದಲ್ಲಿ ವಸತಿ ಹಾಗೂ ಹಂದಿ ಗೂಡುಗಳನ್ನು ಸ್ಥಳೀಯ ಸಂಸ್ಥೆಗಳ ಅನುದಾನದಲ್ಲಿ ನಿರ್ಮಿಸಬೇಕು.

ಜನವಸತಿಗಳಲ್ಲಿ  ಉತ್ಪತ್ತಿಯಾಗುವ ತ್ಯಾಜ್ಯದಲ್ಲಿ ಹಸಿ ಕಸ, ಮುಸುರೆ ಬೇರ್ಪಡಿಸಿ ಸರಬರಾಜು ಮಾಡಬೇಕು. ಹಂದಿ ಸಾಕಾಣಿಕೆದಾರರ ಹಿತ ರಕ್ಷಣೆಗೆ 22.75 ಅನುದಾನದಲ್ಲಿ ನೆರವು ನೀಡಬೇಕು.  ನಗರದಲ್ಲಿ ಹಸಿ ಕಸ ಸಂಗ್ರಹ ಮಾಡುವ ಕೆಲಸವನ್ನು ಸಂಘಕ್ಕೆ ವಹಿಸಿ ಗೌರವ ಧನ ನೀಡಬೇಕು.

ಹಂದಿ ಮಾಂಸ ಮಾರುಕಟ್ಟೆ ನಿರ್ಮಿಸಿಕೊಡುವುದು. ಪೌರ ಕಾರ್ಮಿಕರ ಕೆಲಸಕ್ಕೆ ಹಂದಿ ಸಾಕಾಣಿಕೆದಾರರನ್ನು ಶೇ.40ರಷ್ಟು ಹುದ್ದೆಗೆ ನೇಮಕಾತಿ ಮಾಡಿಕೊಳ್ಳಬೇಕು. ಹಂದಿ ಸಾಕಾಣಿಕೆ ಪ್ರೋತ್ಸಾಹಕ್ಕೆ 20 ಲಕ್ಷ ರೂ. ಆರ್ಥಿಕ ನೆರವು ನೀಡಬೇಕು ಎಂಬಿತ್ಯಾದಿ ಬೇಡಿಕೆಗಳನ್ನು ಹಂದಿ ಸಾಕಾಣಿಕೆದಾರರು ಇಂದಿನ ಸಭೆಯಲ್ಲಿ  ಪಾಲಿಕೆ ಆಯುಕ್ತರ ಮುಂದಿಟ್ಟಿದ್ದಾರೆ.