December 6, 2019

ಸಿರಿಗೆರೆಯ ಹಿರಿಯ ಶ್ರೀಗಳ ಶ್ರದ್ಧಾಂಜಲಿ ಕಾರ್ಯಕ್ರಮಕ್ಕೆ 101 ಕ್ವಿಂಟಾಲ್ ಅಕ್ಕಿ ಸಮರ್ಪಣೆ

ನ್ಯಾಮತಿ ತಾಲ್ಲೂಕು ರಾಮೇಶ್ವರದಲ್ಲಿ ತರಳಬಾಳು ಶ್ರೀಗಳ ಸಾನ್ನಿಧ್ಯದಲ್ಲಿ ಕಾರ್ಯಕ್ರಮ

ಹೊನ್ನಾಳಿ : ಸರ್ಕಾರ ನಡೆಸುವ ಬೆಂಗಳೂರಿನ ವೊದಲ ಅಧಿವೇಶನದಂತೆ ಸಿರಿಗೆರೆಯಲ್ಲಿ ಹಿರಿಯ ಶ್ರೀಗಳ ಶ್ರದ್ದಾಂಜಲಿ ಸಭೆ ನಡೆಯುತ್ತಿದ್ದು, ಹೊನ್ನಾಳಿಯಲ್ಲಿ ಜರುಗುವ ಪ್ರತಿ ವರ್ಷದ ಅಕ್ಕಿ ವಿತರಣಾ ಸಮಾರಂಭವು ಬೆಳಗಾಂ ಅಧಿವೇಶನದಂತೆ ನಡೆದುಕೊಂಡು ಬರುತ್ತಿದೆ ಎಂದು ತರಳಬಾಳು ಬೃಹನ್ಮಠದ ಜಗದ್ಗುರು ಶ್ರೀ 1108 ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ   ವಿಶ್ಲೇಷಿಸಿದರು.

ನ್ಯಾಮತಿ ತಾಲ್ಲೂಕಿನ ರಾಮೇಶ್ವರ ಗ್ರಾಮದಲ್ಲಿ  ಇಂದು ನಡೆದ ತರಳಬಾಳು ಜಗದ್ಗುರು ಲಿಂಗೈಕ್ಯ ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳ 27ನೇ ಶ್ರದ್ಧಾಂಜಲಿ ಸಮಾರಂಭದ ದಾಸೋಹಕ್ಕೆ ಹೊನ್ನಾಳಿ ಮತ್ತು ನ್ಯಾಮತಿ ತಾಲ್ಲೂಕುಗಳ ಶಿಷ್ಯ ಮಂಡಳಿ ವತಿಯಿಂದ 101 ಕ್ವಿಂಟಲ್ ಅಕ್ಕಿ ಸಮರ್ಪಣೆ ಸಮಾರಂಭದ ಧರ್ಮ ಸಭೆಯ ದಿವ್ಯ ಸಾನ್ನಿಧ್ಯ ವಹಿಸಿ ಮಾತನಾಡಿದರು.

ತಾಲ್ಲೂಕಿನ ಅಭಿವೃದ್ದಿ ಹಾಗೂ ಜನತೆಯ ಜೀವನ ಸುಧಾರಣೆ ಕಾರ್ಯ ಗಳಲ್ಲಿ ರಾಜಕೀಯ  ಮಾಡದೆ ಶಾಸಕ ರೇಣುಕಾಚಾರ್ಯ ಹಾಗೂ ಶಾಂತನಗೌಡ್ರು ಕರ್ತವ್ಯದಲ್ಲಿ ಐಕ್ಯತೆ ಹೊಂದಿ ಕಾರ್ಯ ನಿರ್ವಹಿಸುವಂತೆ ಸಲಹೆ ನೀಡಿದರು.

ಭರಮಸಾಗರ ಹಾಗೂ ಜಗಳೂರಿನ ಎರಡು ನೀರಾವರಿ ಯೋಜನೆಗಳಿಗೆ ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದ ಅವಧಿಯಲ್ಲಿ 500 ಕೋಟಿ ರೂ.ಗಳ ಯೋಜನೆ ತಯಾರಿಸಿದ್ದರು. ನಂತರದಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಜಲಮಂಡಳಿ ಮೂಲಕ ಈ ಯೋಜನೆಗೆ 1200 ಕೋಟಿ ರೂ.ಗಳ ಅಂದಾಜು ವೆಚ್ಚದ ಯೋಜನೆಗೊಂಡು,ಇಂದಿನ ಮುಖ್ಯಮಂತ್ರಿ ಬಿ.ಎಸ್,ಯಡಿಯೂರಪ್ಪನವರು ವಾರದ ಹಿಂದಷ್ಟೆ 610 ಕೋಟಿ ವೆಚ್ಚದ ಒಂದು ಕಾಮಗಾರಿ 540 ಕೋಟಿ ವೆಚ್ಚದ ಕಾಮ ಗಾರಿ ಸೇರಿದಂತೆ 1200 ಕೋಟಿ ರೂ.ಗಳ ಕಾಮಗಾರಿಗೆ ಹಣ ಬಿಡುಗಡೆಗೊಳಿಸಿದ್ದು, ಎಲ್ಲಾ ಸರ್ಕಾರಗಳು ಪೀಠಗಳೊಂದಿಗೆ ಅನ್ಯೋ ನ್ಯತೆ ಹೊಂದಿರುವ ಬಗ್ಗೆ ವಿವರಿಸಿದರು.

ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಶಾಸಕ ಎಂ.ಪಿ.ರೇಣುಕಾಚಾರ್ಯ ಮಾತನಾಡಿ, ನೀರಾವರಿ ಯೋಜನೆಗಳ ಬಗ್ಗೆ ಹೆಚ್ಚು ಕಾಳಜಿ ಹೊಂದಿರುವ ತರಳಬಾಳು ಶ್ರೀಗಳ ಮನೋಧರ್ಮದ ಕಾರ್ಯ ಶ್ಲ್ಯಾಘನೀಯವಾಗಿದೆ. ಸಾಸ್ವೆಹಳ್ಳಿ ಏತ ನೀರಾವರಿ ಕಾಮಗಾರಿ ಪೂರ್ವಭಾವಿ ಸಭೆ ಕರೆದಾಗ ಸಭೆಯಲ್ಲಿ ತಾವು ಭಾಗವಹಿಸಿದ್ದು, 70 ಕೆರೆಗಳಲ್ಲಿ ಕೆಲವು ಒತ್ತುವರಿಯಾಗಿದ್ದವು. ಈ ಕಾಮಗಾರಿ ಮುಂದುವರೆಯಲು ಡಿಪಿಆರ್ ಮಾಡಿಸಿದ್ದು, ಸಿರಿಗೆರೆ ಶ್ರೀಗಳ ನೇತೃತ್ವದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಕರೆದು ಶೀಘ್ರವೇ ಕಾಮಗಾರಿಗೆ ಚಾಲನೆ ನೀಡುವ ಪ್ರಯತ್ನ ನಡೆಸುವ ಭರವಸೆ ನೀಡಿ  ಕಾಮಗಾರಿ ಫೈಲನ್ನು ಸಭೆಯಲ್ಲಿ ಬಹಿರಂಗಪಡಿಸುವ ಮೂಲಕ ತಮ್ಮ ಇಚ್ಚಾಶಕ್ತಿ ವ್ಯಕ್ತಪಡಿಸಿದರು.

ಮಾಜಿ ಶಾಸಕ ಡಿ.ಜಿ.ಶಾಂತನಗೌಡ ಮಾತನಾಡಿ,  ಡಾ.ಶಿವಮೂರ್ತಿ ಶಿವಾ ಚಾರ್ಯ ಸ್ವಾಮೀಜಿಗಳ ನ್ಯಾಯಪೀಠದ ತೀರ್ಮಾನಗಳ ಬಗ್ಗೆ ಬೀದರ್ ಜಿಲ್ಲಾ ನ್ಯಾಯಾಧೀಶರು ಪ್ರಶಂಸೆ ವ್ಯಕ್ತಡಿಸಿದ ನಂತರದ ದಿನಗಳಲ್ಲಿ ಮದ್ರಾಸ್ ಹೈಕೋರ್ಟ್‍ ನ್ಯಾಯಾಧೀಶರುಗಳು ಅಲ್ಲಿ ಸಭೆ ಕರೆದು ಶ್ರೀಗಳೊಂದಿಗೆ ಸಂವಾದ ನಡೆ ಸಿರುವುದು ಸ್ವಾಗತಾರ್ಹ ಕಾರ್ಯವಾಗಿದೆ. ಶ್ರೀಗಳ ಸಾಮಾಜಿಕ ಕಾಳಜಿಯ ಪ್ರೌಢಿಮೆ ಎಂತಹದ್ದು  ಎಂದು ಈ ಕಾರ್ಯದಿಂದ ಎದ್ದು ಕಾಣುತ್ತದೆ. ಶ್ರೀಗಳು ಉತ್ತರ ಕರ್ನಾಟಕದ ಬೆಳಗಾಂ ಹಾಗೂ ಗದಗ ಜಿಲ್ಲೆಗಳ ನೆರೆಪೀಡಿತ ಜನತೆಗೆ ನೇರವಾಗಿ ನೆರವು ಮುಟ್ಟಲೆಂದು ಸ್ವಾಮೀಜಿಗಳು ಇತ್ತೀಚಿಗೆ ಹೋಗಿಬಂದದ್ದನ್ನು ಸ್ಮರಿಸಿದರು. 

ಕಲುಬುರ್ಗಿ ದೂರದರ್ಶನ ಕೇಂದ್ರದ ಹಾಸ್ಯ ಭಾಷಣಕಾರರಾದ ಇಂದುಮತಿ ಸಾಲಿಮಠ ಹಾಸ್ಯ ಭಾಷಣ ನೀಡಿದರು. ನಿವೃತ್ತ ಪ್ರಾಚಾರ್ಯ ರಾ.ವೆಂಕಟೇಶ್ ಶೆಟ್ಟಿ ಉಪನ್ಯಾಸ ನೀಡಿದರು.

ಜಿಪಂ ಉಪಾಧ್ಯಕ್ಷ ಸುರೇಂದ್ರನಾಯ್ಕ, ಬೆಳಗುತ್ತಿ ಜಿಪಂ ಸದಸ್ಯ ಎಂ.ಆರ್.ಮಹೇಶ್, ಜಿಪಂ ಮಾಜಿ ಅಧ್ಯಕ್ಷೆ ಶೀಲಾ ಗದ್ದಿಗೇಶ್, ತಾಲ್ಲೂಕು ಸಾಧು ವೀರಶೈವ ಸಮಾಜದ ಅಧ್ಯಕ್ಷ ಕರಿಗೌಡ್ರು,ಸಾಲಬಾಳು ತರಳಬಾಳು ಶಾಲಾ ಸಮಿತಿ ಅಧ್ಯಕ್ಷ ತೀರ್ಥಲಿಂಗಪ್ಪ, ಸಾಧು ವೀರಶೈವ ಸಮಾಜದ ನ್ಯಾಮತಿ ತಾಲ್ಲೂಕು ಅಧ್ಯಕ್ಷ ಶಿವಣ್ಣ, ತಾ.ಪಂ. ಸದಸ್ಯ ಸಿದ್ದಲಿಂಗಪ್ಪ, ಎರಗನಾಳ್ ಗ್ರಾಪಂ ಅಧ್ಯಕ್ಷೆ ವನಜಾಕ್ಷಮ್ಮ,   ಮುಖಂಡರಾದ ದಿಬ್ಬದ ಪರಮೇಶ್ವರಪ್ಪ ಈಶ್ವರಪ್ಪ, ಮಹೇಶ್ವರಪ್ಪ ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.