ಸರ್ವಕಾಲಕ್ಕೂ ನೀತಿ ಸಂಹಿತೆ ಜಾರಿಯಲ್ಲಿರಲಿ : ತರಳಬಾಳು ಶ್ರೀ

ಹರಪನಹಳ್ಳಿ : ಚುನಾವಣೆಗೆ ಮಾತ್ರ ನೀತಿ ಸಂಹಿತೆ ಸೀಮಿತವಾಗದೇ, ಸರ್ವ ದಿನಗಳಲ್ಲಿ ನೀತಿ ಸಂಹಿತೆ ಜಾರಿಯಲ್ಲಿದ್ದರೆ ಜನರು ಸ್ವಲ್ಪ ಹತೋಟಿಯಲ್ಲಿರುತ್ತಾರೆ. ಸ್ವಲ್ಪ ಮಟ್ಟಿ ಗಾದರೂ ಮದ್ಯಪಾನದಂತಹ ದುಶ್ಚಟಗಳಿಂದಲೂ ಜನರು ದೂರ ಉಳಿಯಬಹುದಾಗಿದೆ. ಈ ನಿಟ್ಟಿನಲ್ಲಿ ಸರ್ಕಾರ ನಿರ್ಧಾರಗೊಳ್ಳಬೇಕಿದೆ. ಡಾ. ಶ್ರೀ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ತಾಲ್ಲೂಕಿನ ಕ್ಯಾರಕಟ್ಟೆ ಗ್ರಾಮದಲ್ಲಿ ಶ್ರೀ ಬಸವೇಶ್ವರ ದೇವರ ನೂತನ ರಥದ ಕಳಸಾರೋಹಣ ಹಾಗೂ ಸರ್ವ ಶರಣ ಸಮ್ಮೇಳನದ ದಿವ್ಯ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ಧರ್ಮ ಧರ್ಮಗಳ ಮಧ್ಯೆ ಅಂತರ ಹೆಚ್ಚಾಗಿ ಸಾಮರಸ್ಯ ಕೊರತೆ ಕಾಣುತ್ತಿದ್ದು, ಮನಶಾಂತಿ ನೀಡಬೇಕಿದ್ದ ಮಂದಿರ-ಮಸೀದಿ-ಚರ್ಚ್ ಗಳು ಸಂಘರ್ಷಗಳ ತಾಣಗಳಾಗಿವೆ. ಇಂತಹ ಧಾರ್ಮಿಕ ಕಾರ್ಯಕ್ರಮಗಳಿಂದ ಸರ್ವ ಧರ್ಮೀಯರು ಒಗ್ಗೂಡಲು ಉತ್ತಮ ವೇದಿಕೆಯಾಗಿದೆ ಎಂದರು.

ಸತತ ಬರಗಾಲದಿಂದ ಅಂತರ್ಜಲ ಕಡಿಮೆಯಾಗಿ ಕುಡಿವ ನೀರಿನ ಸಮಸ್ಯೆ ಉಲ್ಬಣವಾಗಿದೆ. ಆದರೆ ಕೆಲ ಗ್ರಾಮಗಳಲ್ಲಿ ನೀರನ್ನು ದುರ್ಬಳಕೆ ಮಾಡುತ್ತಿರುವುದು ದುರಂತವೇ ಸರಿ. ಇನ್ನಾದರೂ ವ್ಯರ್ಥವಾಗಿ ಹರಿದು ಹೋಗುವ ನೀರನ್ನು ತಡೆಯುವಂತಹ ಮಾನವೀಯ ಗುಣಗಳನ್ನು ಬೆಳೆಸಿಕೊಳ್ಳಿ.

ಧರ್ಮಕ್ಕನುಸಾರವಾಗಿ ಚರ್ಚ್, ದೇವಸ್ಥಾನ, ಮಸೀದಿಗೆ ತೆರಳಲು ಜನರು, ಧರ್ಮ ಮತ್ತು ಜಾತಿಯ ಹಂಗಿಲ್ಲದ ಶೌಚಾಲಯಕ್ಕೆ ತೆರಳಿದಂತೆ ಸರ್ವ ಧರ್ಮೀಯರೆಲ್ಲರೂ ಸಹ ಮತದಿಂದ ಎಲ್ಲಾ ಕಾರ್ಯಕ್ರಮಗಳಿಗೆ ಭಾಗಿಯಾದರೆ ಸಂಘರ್ಷವೇ ಇಲ್ಲದ ದೇಶ ನಿರ್ಮಾಣವಾಗುವುದರಲ್ಲಿ ಸಂಶಯವೇ ಇಲ್ಲ ಎಂದರು.

ಸಂಸದ ಜಿ.ಎಂ. ಸಿದ್ದೇಶ್ವರ್ ಮಾತನಾಡಿ, ದೇವಸ್ಥಾನಗಳು ಭಕ್ತಿಯ ಪರಾಕಾಷ್ಟೆ ಮೆರೆಯಬೇಕೇ ವಿನಃ ಜೂಜಾಟದ ತಾಣವಾಗಬಾರದು.  ದೇವಸ್ಥಾನಗಳನ್ನು ನಿರ್ಮಿಸುವುದು ಭಕ್ತರಿಗೆ ಕಷ್ಟವೇನಲ್ಲ. ಆದರೆ ಶುಚಿ ಹಾಗೂ ನಿತ್ಯ ಪೂಜೆಗಳನ್ನು ನಡೆಸಬೇಕು. ಇಲ್ಲವಾದರೆ ಜೂಜಾಟದ ಕೇಂದ್ರವಾಗುವುದರಲ್ಲಿ ಸಂಶಯವಿಲ್ಲ. ಹಿರಿಯರು ಹೇಳಿದಂತೆ ಹತ್ತು ದೇವಸ್ಥಾನಗಳನ್ನು ಕಟ್ಟುವುದಕ್ಕಿಂತ ಒಂದು ಶಾಲೆಯನ್ನು ಕಟ್ಟಬೇಕು. ಮಕ್ಕಳು ವಿದ್ಯಾವಂತರಾಗಿ ದೇಶದ ಉತ್ತಮ ಪ್ರಜೆಗಳಾಗುತ್ತಾರೆ ಎಂದರು.  

ಜಗಳೂರು ಶಾಸಕ ಎಸ್.ವಿ. ರಾಮಚಂದ್ರಪ್ಪ ಮಾತನಾಡಿ, ಕ್ಷೇತ್ರದ 7 ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಎಲ್ಲಾ ಗ್ರಾಮಗಳಿಗೆ ಮೂಲಭೂತ ಸೌಕರ್ಯಗಳಿಗೆ ಆದ್ಯತೆ ನೀಡಲಾಗಿದೆ. ಕ್ಯಾರಕಟ್ಟಿ,
ಅರಸಾಪುರ ಹಾಗೂ ಬಾಲೇನಹಳ್ಳಿವರೆಗೂ ಉತ್ತಮ ರಸ್ತೆ ನಿರ್ಮಿಸಲಾಗಿದೆ. ಗ್ರಾಮಗಳಲ್ಲಿ ಚರಂಡಿ, ಸಿಸಿ ರಸ್ತೆ, ಶಾಲೆ, ಶೌಚಾಲಯಗಳಿಗೆ ಆದ್ಯತೆ ನೀಡಿದೆ. ತರಳಬಾಳು ಶ್ರೀಗಳ ಆಶಯದಂತೆ ಎಲ್ಲಾ ಕೆರೆಗಳಿಗೂ ನೀರು ತುಂಬಿಸುವ ಯೋಜನೆಗಳಿಗೆ ಶ್ರೀಗಳೇ ಸಾಕಾರಗೊಳಿಸಲಿದ್ದಾರೆ ಎಂದರು.

ಕಾರ್ಯಕ್ರಮದಲ್ಲಿ ಹರಿಹರದ ವೀರಶೈವ ಲಿಂಗಾಯತ ಪಂಚಮಸಾಲಿ ಜಗದ್ಗುರು ಪೀಠದ ಹಗರಿಬೊಮ್ಮನಹಳ್ಳಿ ಶಾಖಾಮಠದ ಪೀಠಾಧ್ಯಕ್ಷ ರಾದ ಶ್ರೀ ಮಹಾಂತ ಸ್ವಾಮೀಜಿ, ನರಸೀಪುರ ನಿಜ ಶರಣ ಅಂಬಿಗ ಚೌಡಯ್ಯನವರ ಪೀಠದ ಶ್ರೀ ಶಾಂತಭೀಷ್ಮ ಸ್ವಾಮೀಜಿ, ಅರಸೀಕೆರೆ ಕೋಲಶಾಂತೇ ಶ್ವರ ಮಠದ ಶ್ರೀ ಶಾಂತಲಿಂಗದೇಶೀಕೇಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಮಾತನಾಡಿದರು.

ದಾವಣಗೆರೆಯ ಎಸ್.ಟಿ. ಶಾಂತಗಂಗಾಧರ್ ದೇಗುಲಗಳ ಅಂತರಂಗಗಳ ಬಗ್ಗೆ ವಿಶೇಷ ಉಪನ್ಯಾಸ ನೀಡಿದರು.

ಕಾರ್ಯಕ್ರಮದಲ್ಲಿ ಸಾಧು ವೀರಶೈವ ಸಮಾಜದ ತಾಲ್ಲೂಕು ಅಧ್ಯಕ್ಷ ಬಂದೋಳ್ ಮಂಜುನಾಥ್, ಮುಖಂಡರಾದ ಪಿ. ಮಹಾಬಲೇಶ್ವರಗೌಡ, ಜಿ. ನಂಜನಗೌಡ, ಬಾ. ರೇವಣ್ಣ, ಹುಣಸಿಹಳ್ಳಿ ಪ್ರಕಾಶ್, ಜೆ. ಓಂಕಾರಗೌಡ, ಶಿವಯೋಗಿ, ಕೆ.ಜಿ. ಶರಣಪ್ಪ, ಜಿ.ಕೆ. ಮಂಜುನಾಥ್, ಕೊಟ್ರಗೌಡ, ಬಸಣ್ಣ, ಬಾನಳ್ಳಿ ಕೆಂಚನಗೌಡ, ಜಿ.ಕೆ. ಕಿರಣ್ ಕುಮಾರ್, ವೀರಣ್ಣ, ಕೆ.ಆರ್. ಶಿವರಾಜ್, ಸಣ್ಣಶೇಖರಪ್ಪ, ಹಾಲೇಶ್ ಸೇರಿದಂತೆ ಇತರರು ಉಪಸ್ಥಿತರಿದ್ದರು.