ಸದ್ದಿಲ್ಲದೆ ಸ್ವಚ್ಛವಾಗುತ್ತಿದೆ ವಾರ್ಡ್ ನಂ.38

ಕ್ಲೀನ್ ಅಂಡ್ ಗ್ರೀನ್ ದಾವಣಗೆರೆ ಹೆಸರಿನಲ್ಲಿ ಮಾದರಿ ವಾರ್ಡ್ ಮಾಡಿದ ನಾಗರಿಕರು

ದಾವಣಗೆರೆ, ಸೆ. 29- ಎಲ್ಲೆಂದರಲ್ಲಿ ಬಿಸಾಡಲ್ಪಡು ತ್ತಿರುವ ತ್ಯಾಜ್ಯ. ಕಸ ಸಂಗ್ರಹಣೆ ಕೇಂದ್ರವಾಗುತ್ತಿರುವ ಖಾಲಿ ಸೈಟುಗಳು, ಹಂದಿಗಳ ಹಾವಳಿ. ಕುಂಟುತ್ತಾ ಸಾಗುತ್ತಿರುವ ಸ್ಮಾರ್ಟ್ ಸಿಟಿ ಕಾಮಗಾರಿಗಳು.  ಹೀಗೆ ದಿನೇ ದಿನೇ ಕಲುಷಿತಗೊಳ್ಳುತ್ತಿರುವ ದಾವಣಗೆರೆಯಲ್ಲಿ ಪಾಲಿಕೆ ವ್ಯಾಪ್ತಿಯ ಒಂದು ವಾರ್ಡ್ ಮಾತ್ರ ಸದ್ದಿಲ್ಲದೆ ಸುದ್ದಿ ಮಾಡುತ್ತಿದೆ.

ಹೌದು, ವಿದ್ಯಾನಗರ ಹಾಗೂ ತರಳಬಾಳು ಬಡಾವಣೆಯನ್ನು ತನ್ನ ತೆಕ್ಕೆಯಲ್ಲಿಟ್ಟುಕೊಂಡಿರುವ ವಾರ್ಡ್ ನಂ. 38 `ಕ್ಲೀನ್ ಅಂಡ್ ಗ್ರೀನ್ ದಾವಣಗೆರೆ’ ಎಂಬ ಹೆಸರಿನಡಿಯಲ್ಲಿ 200ಕ್ಕೂ ಹೆಚ್ಚು ನಾಗರಿಕರ ಶ್ರಮದಾನದಿಂದಾಗಿ ಪಾಲಿಕೆ ವ್ಯಾಪ್ತಿಯ ಉಳಿದ ವಾರ್ಡುಗಳಿಗಿಂತ ಮಾದರಿ ವಾರ್ಡ್​ ಆಗಿ ರೂಪುಗೊಳ್ಳುತ್ತಿದೆ. 

ಕಳೆದ ಮೂರು ವರ್ಷಗಳಿಂದ ಈ ವಾರ್ಡ್​ನಲ್ಲಿರುವ ಹಿರಿಯ ನಾಗರಿಕರು, ಉದ್ಯಮಿಗಳು, ಅಧಿಕಾರಿಗಳು, ವ್ಯಾಪಾರಸ್ಥರು, ಶಿಕ್ಷಕರು, ನಿವೃತ್ತರು ಸೇರಿಕೊಂಡು ಈಗಾಗಲೇ ದಾವಣಗೆರೆ ಜನತೆ ಹುಬ್ಬೇರಿಸುವಂತಹ ಕೆಲಸವನ್ನು ಯಾವುದೇ ಪ್ರಚಾರಕ್ಕೆ ಎಡೆ ಮಾಡಿಕೊಡದಂತೆ ಮಾಡುತ್ತಿದ್ದಾರೆ. ಆದ್ದರಿಂದಲೇ ಇಂದು ತರಳಬಾಳು ಬಡಾವಣೆ ಹಾಗೂ ವಿದ್ಯಾನಗರದ ಪ್ರದೇಶಗಳು ಸ್ವಚ್ಛ ಹಾಗೂ ಸುಂದರವಾಗಿ ಕಾಣಸಿಗುತ್ತವೆ.

ಮಾಡಿದ್ದಿಷ್ಟೇ: ವಾರ್ಡ್‌ನ ನಾಗರಿಕರೆಲ್ಲರೂ ಒಟ್ಟಿಗೆ ಸೇರಿ ತಮ್ಮ ವಾರ್ಡನ್ನು ಸ್ವಚ್ಛ, ಹಸಿರು ಹಾಗೂ ಸುಂದರ ವಾರ್ಡನ್ನಾಗಿ ಮಾಡುವ ಸಂಕಲ್ಪ ಮಾಡಿಕೊಂಡಿದ್ದಾರೆ. 

ಪ್ರತಿ ಭಾನುವಾರ ಬೆಳಿಗ್ಗೆ 7.30 ರಿಂದ 9 ಗಂಟೆ ವರೆಗೆ ಶ್ರಮದಾನ ಮಾಡುವ ಮೂಲಕ ರಸ್ತೆಗಳನ್ನು ಸ್ವಚ್ಛಗೊಳಿಸಲಾಗುತ್ತಿದೆ. ಖಾಲಿ ಸೈಟುಗಳನ್ನು ಜೆಸಿಬಿ ಯಂತ್ರದಿಂದ ಸ್ವಚ್ಛಗೊಳಿಸಿ, ಆಟದ ಮೈದಾನ ಅಥವಾ ವಾಹನ ನಿಲ್ದಾಣಗಳನ್ನಾಗಿ ಮಾಡಲಾಗುತ್ತಿದೆ. ಇದರಿಂದಾಗಿ ತ್ಯಾಜ್ಯ ಸಂಗ್ರಹಣಾ ಸ್ಥಳವಾಗಿದ್ದ ಅನೇಕ ಸೈಟುಗಳು ಸ್ವಚ್ಛ ಹಾಗೂ ಸುಂದರಗೊಂಡಿವೆ.

ಇಲ್ಲಿ ರಸ್ತೆಗಳು ಸ್ವಚ್ಛವಾಗಿವೆ. ಕಸ ಸಂಗ್ರಹಣಾ ಕೇಂದ್ರಗಳಂತಾಗಿದ್ದ ಖಾಲಿ ಸೈಟುಗಳು ಆಟದ ಮೈದಾನವಾಗಿವೆ. 
ಕಸ  ಸಂಗ್ರಹಿಸಿ, ವಿಂಗಡಿಸಿ, ವಿಲೇವಾರಿ ಮಾಡಲಾಗುತ್ತಿದೆ. ಪಾರ್ಕುಗಳು ಹಸಿರಿನಿಂದ ಕಂಗೊಳಿಸುತ್ತಿವೆ. ಮಳೆ ನೀರು ಕೊಯ್ಲು ವ್ಯವಸ್ಥೆಗೆ ಒತ್ತು ನೀಡಲಾಗುತ್ತಿದೆ.

ಪ್ರತಿ ಮನೆಯಲ್ಲಿಯೂ ಮಳೆ ನೀರು ಕೊಯ್ಲು ವ್ಯವಸ್ಥೆ ಮಾಡಿಕೊಳ್ಳಬೇಕೆಂದು ಪಣ ತೊಟ್ಟಿರುವುದು ಇಲ್ಲಿನ ನಾಗರಿಕರ ಮತ್ತೊಂದು ಉತ್ತಮ ತೀರ್ಮಾನ. ಈಗಾಗಲೇ 60ಕ್ಕೂ ಹೆಚ್ಚು ಮನೆಗಳಲ್ಲಿ ಮಳೆ ನೀರು ಕೊಯ್ಲು ವ್ಯವಸ್ಥೆ ಅಳವಡಿಸಿಕೊಳ್ಳಲಾಗಿದೆ. ಬೇರೆಯವರು ಇಷ್ಟಪಟ್ಟರೆ, ಅದಕ್ಕೆ ಅಗತ್ಯವಾದ ಸಾಮಗ್ರಿಗಳ ದರ ಕೊಟ್ಟರೂ ಸರಿಯೇ, ಮಳೆ ನೀರು ಕೊಯ್ಲು ವ್ಯವಸ್ಥೆ ಕಲ್ಪಿಸಿ ಕೊಡುವ ಉದ್ದೇಶ ಹೊಂದಲಾಗಿದೆ.

ಅ.2 ರಂದು ಬೃಹತ್ ಶ್ರಮದಾನ
ಕಳೆದ ಮೂರು ವರ್ಷಗಳಿಂದ 38ನೇ ವಾರ್ಡ್​ನ 200ಕ್ಕೂ ಹೆಚ್ಚು ನಾಗರಿಕರು ಕ್ಲೀನ್ ಅಂಡ್ ಗ್ರೀನ್ ದಾವಣಗೆರೆ ಹೆಸರಿನಡಿ ಪ್ರತಿ ಭಾನುವಾರ 1 ತಾಸು ಶ್ರಮದಾನ ಮಾಡುವ ಮೂಲಕ ಸ್ವಚ್ಛತಾ ಕಾರ್ಯ ಕೈಗೊಳ್ಳುತ್ತಿದ್ದಾರೆ. ಈ ಕೆಲಸದಲ್ಲಿ ವಾರ್ಡ್​ನ ಎಲ್ಲಾ ನಾಗರಿಕರು ​ಭಾಗಿಯಾಗಲೆಂಬ ಆಶಯದಿಂದ ಇದೇ ಅಕ್ಟೋಬರ್ 2 ರಂದು ಗಾಂಧೀಜಿ ಹಾಗೂ ಶಾಸ್ತ್ರೀಜಿ ಜಯಂತಿಯಂದು `ಬೃಹತ್ ಶ್ರಮದಾನ’ ಹಮ್ಮಿಕೊಳ್ಳಲಾಗಿದೆ. ಅಂದು ಬೆಳಿಗ್ಗೆ 7.30 ರಿಂದ 8.30ರವರೆಗೆ ವಾರ್ಡ್​ನ ಎಲ್ಲಾ ನಾಗರಿಕರು ತಮ್ಮ ತಮ್ಮ ರಸ್ತೆಗಳನ್ನು ಸ್ವಚ್ಛ ಮಾಡುವುದು. ನಂತರ ಎಲ್ಲರೂ ವಿದ್ಯಾನಗರ ಮುಖ್ಯರಸ್ತೆಗೆ ಬಂದು ಶೇಖರಿಸಿದ ಕಸವನ್ನು ಮುಖ್ಯರಸ್ತೆಯಲ್ಲಿರುವ ಕಸದ ಟ್ರ್ಯಾಕ್ಟರ್​ಗೆ ಹಾಕುವುದು. ನಂತರ ಮುಖ್ಯರಸ್ತೆಯಲ್ಲಿ ಸಾಗುತ್ತಿರುವ ಮೆರವಣಿಗೆಯಲ್ಲಿ ಸೇರಿಕೊಂಡು ವಿದ್ಯಾನಗರ ಮೊದಲ ಬಸ್ ನಿಲ್ದಾಣದ ಕಡೆ ಸಾಗುವುದು.ಮೊದಲ ಬಸ್ ನಿಲ್ದಾಣದಲ್ಲಿರುವ ಗಾಂಧೀಜಿ ಪ್ರತಿಮೆಗೆ ನಮನ ಸಲ್ಲಿಸುವ ಮೂಲಕ ಶ್ರಮದಾನ ಕೊನೆಗೊಳ್ಳಲಿದೆ ಎಂದು ಕ್ಲೀನ್ ಅಂಡ್ ಗ್ರೀನ್ ದಾವಣಗೆರೆ ಸಮಿತಿ ಸಿ.ಜಿ. ದಿನೇಶ್ ಮಾಹಿತಿ ನೀಡಿದ್ದಾರೆ.

ಈ ಭಾಗದಲ್ಲಿನ ಎಲ್ಲಾ ಪಾರ್ಕುಗಳನ್ನು ಅಭಿವೃದ್ಧಿ ಪಡಿಸಿ, ಅಲ್ಲಿ ಮಕ್ಕಳ​ ಆಟಿಕೆ ಅಳವಡಿಸುವುದು, ಹಿರಿಯರು ಕುಳಿತುಕೊಳ್ಳಲು ಬೆಂಚು ಹಾಕಿಸುವುದು. ವಾಯು ವಿಹಾರಕ್ಕಾಗಿ ರಸ್ತೆ ನಿರ್ಮಿಸುವುದು. ದೊಡ್ಡವರಿಗೆ ಹೊರಾಂಗಣ ವ್ಯಾಯಾಮ ಸಾಮಗ್ರಿ ಗಳನ್ನು ಅಳವಡಿಸುವ ಕಾರ್ಯ ಬಹುತೇಕ ನಡೆದಿದೆ.

ಪಾರ್ಕುಗಳ​ ನಿರ್ವಹಣೆ ಕೇವಲ ಒಬ್ಬರು ಅಥವಾ ಇಬ್ಬರು ಮಾಡಲು ಸಾಧ್ಯವಿಲ್ಲ ಎಂಬುದನ್ನು ಅರಿತ ಇಲ್ಲಿನ ನಾಗರಿಕರು, ನಿರ್ವಹಣೆಯನ್ನು ಬಡಾವಣೆಯಲ್ಲಿನ ಶಾಲೆಗಳು ಹಾಗೂ ಸಂಘ-ಸಂಸ್ಥೆಗಳಿಗೆ ವಹಿಸಿಕೊಟ್ಟಿದ್ದಾರೆ. ಇದರಿಂದಾಗಿ ಅನೇಕ ಪಾರ್ಕುಗಳು ಹಸಿರು ಹಾಗೂ ಸ್ವಚ್ಛತೆಯಿಂದ ನಳನಳಿಸುವಂತಾಗಿದೆ.

ಇನ್ನು ಬೀದಿ ದೀಪಗಳಿಗೆ ಎಲ್​ಇಡಿ ಬಲ್ಪ್ ಅಳವಡಿಸುವುದು. ರಸ್ತೆಗಳಿಗೆ ನಾಮಫಲಕ ಹಾಕಿಸುವುದು, ರಸ್ತೆ ಗುಂಡಿ ಮುಚ್ಚಿಸುವುದು, ಉಚಿತ ವೈದ್ಯಕೀಯ ತಪಾಸಣಾ​ ಶಿಬಿರ ಆಯೋಜಿಸುವುದು. ನಾಗರಿಕರು ಹಾಗೂ ಪಾಲಿಕೆ ಅಧಿಕಾರಿಗಳು, ಕೆಲಸಗಾರರ ಮಧ್ಯೆ ಉತ್ತಮ ಬಾಂಧವ್ಯ ಮೂಡಿಸಿ ಉತ್ತಮ ಕೆಲಸ ಮಾಡಿಸಿಕೊಳ್ಳುವುದು ಇಲ್ಲಿನ ನಾಗರಿಕರ ಆಶಯ.

ಕ್ಲೀನ್ ಅಂಡ್ ಗ್ರೀನ್ ದಾವಣಗೆರೆ ಹೆಸರಿನಲ್ಲಿ 38ನೇ ವಾರ್ಡ್ ನಲ್ಲಿ 7 ಉಪ ಸಮಿತಿಗಳನ್ನು ರಚಿಸಲಾಗಿದೆ. ಪ್ರತಿ ಸಮಿತಿಯಲ್ಲೂ 40 ರಿಂದ 50 ಜನರು ಶ್ರಮದಾನದ ಮುಂಚೂಣಿಯಲ್ಲಿದ್ದಾರೆ. 

ಪ್ರತಿ ಶನಿವಾರ ಸಭೆ ನಡೆಸಿ, ಮುಂದಿನ ವಾರದಲ್ಲಿ ಮಾಡಬೇಕಾದ ಕೆಲಸಗಳ ಪಟ್ಟಿ ತಯಾರಿಸಿಕೊಂಡು ಕೆಲಸ ಮಾಡಿ ಮುಗಿಸುವುದು. ಮೂರು ತಿಂಗಳಿಗೊಮ್ಮೆ ವಾರ್ಡ್ ಸಭೆ ನಡೆಸಿ, ನಾಗರಿಕರು, ಪಾಲಿಕೆ ಅಧಿಕಾರಿಗಳು ಸೇರಿ ಸಮಸ್ಯೆಗಳ​ು, ಸಲಹೆಗಳ ಬಗ್ಗೆ ಚರ್ಚಿಸಲಾಗುತ್ತಿದೆ.

ಸರ್ವ ಕಾರ್ಯಕ್ಕೂ ಸರ್ಕಾರವೇ ಬೇಕು ಎನ್ನುವ ಇಂದಿನ ಮನಸ್ಥಿತಿ ಬದಲಾಯಿಸಿ, ಮೊದಲು ತಾನು ಬದಲಾದರೆ ಮಾತ್ರ ಸುತ್ತಮುತ್ತಲಿನ ವಾತಾವರಣ, ಸಮಾಜ ಬದಲಾಗುತ್ತದೆ ಎಂಬ ಸತ್ಯವನ್ನು ತಿಳಿಸಲು ಹೊರಟ `ಕ್ಲೀನ್ ಅಂಡ್ ಗ್ರೀನ್ ದಾವಣಗೆರೆ’ ಟೀಂ ಕಾರ್ಯ ಇತರರಿಗೂ ಅನುಕರಣೀಯ. ಪ್ರಾಯಶಃ ಉಳಿದ ವಾರ್ಡುಗಳಲ್ಲೂ ಇಂತಹ ಒಂದಿಷ್ಟು ಚಟುವಟಿಕೆಗಳು ನಡೆದರೆ, ದಾವಣಗೆರೆ ತಾನಾಗಿಯೇ ಸ್ಮಾರ್ಟ್ ಆಗುವುದರಲ್ಲಿ ಸಂಶಯವಿಲ್ಲ.