December 6, 2019

ಸಂಭ್ರಮದಿ ನಡೆಯಿತು ಆನೆಕೊಂಡದ ಕಾರಣಿಕ

ರಾಮ ರಾಮ ಎಂದು ನುಡಿದೀತಲೇ
ಸಮುದ್ರದ ಒಳಕೆ ಆನೆ ಕಾಲಿಟ್ಟೀತಲೇ
ನರಲೋಕದ ಜನಕೆ ಚಿನ್ನದ ಕಿರೀಟ ಸಿಕ್ಕೀತಲೇ
ದೊಡ್ಡವರ ಮನೆ ಮೇಲೆ ಕರಿ ಹರಿಬಿ ಹಾಸೀತಲೇ ಎಚ್ಚರ !

ಇದು ಐತಿಹಾಸಿಕ ಕ್ಷೇತ್ರ ಆನೆಕೊಂಡದ ಶ್ರೀ ಬಸವೇಶ್ವರ ಸ್ವಾಮಿ ಜಾತ್ರಾ ಮಹೋತ್ಸವದ ಕಾರಣಿಕದ ನುಡಿ. ಕಡೇ ಶ್ರಾವಣ ಸೋಮವಾರವಾದ ಇಂದು ಸಂಜೆ ಕಾರಣಿಕ ಮಹೋತ್ಸವವು ಅಪಾರ ಭಕ್ತರ ಸಮ್ಮುಖದಲ್ಲಿ ವೈಭವದಿಂದ ಜರುಗಿತು.

ಕಾರಣಿಕ ಮಹೋತ್ಸವದ ಪ್ರಮುಖ ದೇವರುಗಳಾದ ನೀಲಾನಹಳ್ಳಿಯ ಶ್ರೀ ಆಂಜನೇಯ ಸ್ವಾಮಿ, ಆನೆಕೊಂಡದ ಶ್ರೀ ಬಸವೇಶ್ವರ ಸ್ವಾಮಿ, ನಿಟುವಳ್ಳಿಯ ದುರ್ಗಾಂಬಿಕಾ ದೇವಿ ಸೇರಿದಂತೆ ಶ್ರೀ ಕನಕದುರ್ಗದೇವಿ, ವೆಂಕಟೇಶ್ವರ ದೇವರು, ಬಸವಾಪಟ್ಟಣ ದುರುಗಮ್ಮ, ಗಾಳಿ ದುರ್ಗಮ್ಮ, ಅರಿಕೇರಮ್ಮ ದೇವಿ, ಮಲ್ಲಾಡಿ ಚೌಡೇಶ್ವರಿದೇವರು, ಕುಕ್ಕುವಾಡೇಶ್ವರಿ ದೇವಿ, ಹುಲಿಗೆಮ್ಮದೇವಿ, ಭೂತಪ್ಪ ದೇವರು, ದೇವಿ ಉಗ್ರಮ್ಮ, ವೆಂಕಟೇಶ್ವರ ದೇವರು, ಗೌರಚಂದ್ರ ಮಾರೆಮ್ಮ ಹಾಗೂ ಮ್ಯಾಸಬೇಡರಕೆರೆ ದುರ್ಗಮ್ಮ ದೇವರುಗಳ ಮೂರ್ತಿಗಳ ಉಪಸ್ಥಿತಿ ಕಾರಣಿಕಕ್ಕೆ ಸಾಕ್ಷಿಯಾಗಿತ್ತು.

ಎಲ್ಲಾ ದೇವರುಗಳು ಉತ್ಸವ ಮೂರ್ತಿಗಳು ಕಾರಣಿಕ ಕಂಬಕ್ಕೆ ಪ್ರದಕ್ಷಿಣೆ ಹಾಕಿ ಸಮೀಪದಲ್ಲಿಯೇ ಇದ್ದ ಕಟ್ಟೆಯ ಮೇಲೆ ಆಸೀನವಾಗುತ್ತಿದ್ದವು. ಸಂಜೆ 7.10 ಗಂಟೆಗೆ ಸಹಸ್ರಾರು ಸಂಖ್ಯೆಯ ಭಕ್ತರ  ಸಮ್ಮುಖದಲ್ಲಿ ಕಾರಣಿಕ ನುಡಿಯಲಾಯಿತು. ಜನತೆ ಮೊಬೈಲ್​ಗಳ ಮೂಲಕ ಕಾರ್ಣೀಕದ ಚಿತ್ರಣ ಸೆರೆ ಹಿಡಿಯುತ್ತಿದ್ದರು.

ಇತ್ತ ಬಂಬೂಬಜಾರ್ ರಸ್ತೆಯಲ್ಲಿ ಜಾತ್ರಾ ಸಡಗರ ಕಳೆಕಟ್ಟಿತ್ತು. ಬಣ್ಣ ಬಣ್ಣದ ಬಲೂನುಗಳು, ಮಕ್ಕಳ ಆಟಿಕೆಗಳು, ಸರ-ಬಳೆಯ ಅಂಗಡಿಗಳು ಮಹಿಳೆಯರನ್ನು ಆಕರ್ಷಿಸುತ್ತಿದ್ದವು. ಬಿಸಿ ಬಿಸಿ ಮಿರ್ಚಿ, ಮಂಡಕ್ಕಿ-ಕಾರ, ಬೆಂಡು ಬತ್ತಾಸ್​ಗಳನ್ನು ಜನತೆ ಕೊಂಡೊಯ್ಯುತ್ತಿದ್ದರೆ,  ಪಾನಿ ಪೂರಿ, ಗೋಬಿ ಮಂಚೂರಿ ಅಂಗಡಿಗಳೂ ಸಹ ಗ್ರಾಹಕರಿಂದ ತುಂಬಿದ್ದವು. 

ಅಹಿತರ ಘಟನೆಗಳು ನಡೆಯದಂತೆ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು. ಆದರೆ ಮಂಗಳ ಮುಖಿಯರ ಕಾಟ ಜಾತ್ರೆಗೆ ಬಂದಿದ್ದ ಜನತೆಗೆ ಕಿರಿ ಕಿರಿ ಉಂಟು ಮಾಡಿತ್ತು.