June 18, 2019

ಶಿಕ್ಷಣದಲ್ಲಿ ರಂಗಭೂಮಿ ಬಳಕೆ ಅವಶ್ಯ

ಸಾಣೇಹಳ್ಳಿಯ ಪಂಡಿತಾರಾಧ್ಯ ಸ್ವಾಮೀಜಿ

ಸಾಣೇಹಳ್ಳಿ : ಎಲ್ಲಾ ಕ್ಷೇತ್ರಗಳಲ್ಲೂ ರಂಗಭೂಮಿ ಪ್ರಭಾವ ಇದ್ದೇ ಇದೆ. ಅದರಲ್ಲೂ ಶಿಕ್ಷಣ ಕ್ಷೇತ್ರದಲ್ಲಿ ರಂಗಭೂಮಿಯ ಬಳಕೆ ಅತ್ಯಂತ ಅವಶ್ಯವಾದುದು. ಈಗಿರುವ ಔಪಚಾರಿಕ ಶಿಕ್ಷಣಕ್ಕೆ ಬಹಳಷ್ಟು ಇತಿಮಿತಿಗಳಿವೆ. ಅದು ಜ್ಞಾನವನ್ನು ತುರುಕುತ್ತಿದೆಯೇ ಹೊರತು, ಮನಸ್ಸನ್ನು ವಿಕಾಸಗೊಳಿಸುತ್ತಿಲ್ಲ. ಈ ಇತಿಮಿತಿಗಳನ್ನು ಹೋಗಲಾಡಿಸಿ ಮಕ್ಕಳಲ್ಲಿ ನಿಜ ಜ್ಞಾನವನ್ನು ತಿಳಿಸಲು ರಂಗಭೂಮಿ ಅತ್ಯಂತ ಸಮರ್ಥ ಮಾಧ್ಯಮ ಎಂದು ಸಾಣೇಹಳ್ಳಿಯ ಡಾ. ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿದರು. 

ಸಾಣೇಹಳ್ಳಿಯ ಎಸ್.ಎಸ್. ರಂಗಮಂದಿರ ದಲ್ಲಿ ಶಿವಕುಮಾರ ಕಲಾ ಸಂಘ ಹಾಗೂ ಕರ್ನಾಟಕ ನಾಟಕ ಅಕಾಡೆಮಿ ಹಮ್ಮಿಕೊಂಡಿದ್ದ ವಿಶ್ವ ರಂಗಭೂಮಿ ದಿನಾಚರಣೆ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಶ್ರೀಗಳು ಮಾತನಾಡಿದರು. 

ಸರ್ಕಾರಗಳು ಇಂತಹ ಸೂಕ್ಷ್ಮತೆಯನ್ನು ಅರಿಯುವಲ್ಲಿ ವಿಫಲವಾಗಿವೆ. ಸಂಗೀತ, ನೃತ್ಯ, ಸಾಹಿತ್ಯ, ವಿಜ್ಞಾನ ಎಲ್ಲವನ್ನೂ ರಂಗಭೂಮಿ ಒಳಗೊಂಡಿರುವುದರಿಂದ ಮಕ್ಕಳ ಕಲಿಕೆ ಸುಲಲಿತವಾಗಿ ನಿರೀಕ್ಷಿತ ಫಲಿತಾಂಶಗಳನ್ನು ಕಾಣಬಹುದು. ವಿಶೇಷವಾಗಿ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಲ್ಲಿ ರಂಗ ಶಿಕ್ಷಕರ ನೇಮಕದ ವಿಷಯವನ್ನು ಆದ್ಯತೆಯ ವಿಷಯವಾಗಿ ಪರಿಗಣಿಸಿ ಪ್ರತಿ ಶಾಲೆಗೂ ಒಬ್ಬ ರಂಗ ಶಿಕ್ಷಕರನ್ನು ನೇಮಕಾತಿ ಮಾಡಿಕೊಳ್ಳಬೇಕೆಂದು ಒತ್ತಾಯಿಸಿದರು.

ರಂಗಕರ್ಮಿ ಕೆ.ಪಿ.ಎಂ. ಗಣೇಶಯ್ಯ ಮಾತನಾಡಿ, ಕಳೆದ ಮೂರು ದಶಕಗಳಿಂದಲೂ ನನಗೆ ಸಾಣೇಹಳ್ಳಿಯ ಸಂಪರ್ಕವಿದೆ. ಸಾಣೇಹಳ್ಳಿ ನಿರಂತರ ರಂಗಕ್ರಿಯೆಗಳ ತಾಣ. ಪಂಡಿತಾರಾಧ್ಯ ಶ್ರೀಗಳು ಮಾತೃ ಹೃದಯದವರು. ನನಗೆ ಎರಡನೇ ತಾಯಿ ಇದ್ದಂತೆ. ನಿಜ ಅರ್ಥದಲ್ಲಿ
ರಂಗಭೂಮಿಯ ಗುರುಗಳು. ಪೂಜ್ಯರ ಮಾರ್ಗದರ್ಶನದಲ್ಲಿ ರಂಗಭೂಮಿಯ ಕೆಲಸ ಮಾಡಲು ನಾನು ಸದಾ ಉತ್ಸುಕನಾಗಿದ್ದೇನೆ ಎಂದು ಹೇಳಿದರು.

ರಂಗ ಶಿಕ್ಷಕ ವೆಂಕಟೇಶ್ವರ ಅವರು, ಸ್ವರ ಶಿಕ್ಷಣದಲ್ಲಿ ರಂಗಭೂಮಿಯ ಮಹತ್ವ ಕುರಿತು ಮಾತನಾಡಿದರು.

Please follow and like us: