September 18, 2019

ವಿನೋಬನಗರ ಗಣಪತಿಯ ಸಂಭ್ರಮದ ವಿಸರ್ಜನೆ

ಕೇಸರಿ ರುಮಾಲು ತೊಟ್ಟು ಚಾಲನೆ ನೀಡಿದ ಮಾಜಿ ಶಾಸಕ ಎಸ್ಸೆಸ್ಸೆಂ, ಸಾಥ್ ನೀಡಿದ ಡಿಸಿ, ಎಸ್ಪಿ

ದಾವಣಗೆರೆ : ಇಲ್ಲಿನ ವಿನೋಬ ನಗರದ 2ನೇ ಮುಖ್ಯರಸ್ತೆಯಲ್ಲಿ ಶ್ರೀ ವೀರ ವರಸಿದ್ಧಿ ವಿನಾಯಕ ಸೇವಾ ಸಮಿತಿಯಿಂದ ಪ್ರತಿಷ್ಠಾಪಿಸಲಾಗಿದ್ದ ಗಣೇಶನ ಮೂರ್ತಿಯ ವಿಸರ್ಜನೆಯು ಸಾವಿರಾರು ಸಂಖ್ಯೆಯ ಜನಸ್ತೋಮದ ಮೆರವಣಿಗೆಯೊಂದಿಗೆ ಸಂಭ್ರಮದಿಂದ ನೆರವೇರಿತು.

ಪ್ರತಿ ವರ್ಷದಂತೆ ಈ​ವರ್ಷವೂ ಸಹ ಮಾಜಿ ಶಾಸಕ ಶಾಮನೂರು ಮಲ್ಲಿಕಾರ್ಜುನ್ ಗಣೇಶನ ಮೂರ್ತಿ ಗೆ ಪೂಜೆ ಸಲ್ಲಿಸಿ, ಸ್ವತಃ ಟ್ರ್ಯಾಕ್ಟರ್ ಚಲಾಯಿಸಿ ಮೆರವಣಿಗೆ ಚಾಲನೆ ನೀಡಿದರು. 

ಶಾಸಕರರೊಂದಿಗೆ ತಲೆಗೆ  ಕೇಸರಿ ರುಮಾಲು ತೊಟ್ಟ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ ಅವರುಗಳು ಮಾಜಿ ಸಚಿವರ ಎಡ ಹಾಗೂ ಬಲ ಕುಳಿತು ಮೆರವಣಿಗೆಯ ಮೆರಗು ಹೆಚ್ಚಿಸಿದರು.

ಗಣೇಶನ ವಿಗ್ರಹವಿದ್ದ ಟ್ರ್ಯಾಕ್ಟರ್ ಮುಂದೆ ಡಿಜೆ ಸದ್ದಿಗೆ ಯುವಕರು ಹುಚ್ಚೆದ್ದು ಕುಣಿದಾಡುತ್ತಿದ್ದರು. ಸೋಮನ ಕುಣಿತ, ನಂದಿ ಧ್ವಜ, ಡೊಳ್ಳು, ಹಲಗೆ, ವೀರಗಾಸೆ, ಸಮಾಳ, ಕೋಲಾಟ ಮತ್ತಿತರೆ ಕಲಾತಂಡಗಳು ಮೆರವಣಿಗೆಗೆ ಮೆರಗು ನೀಡಿದವು. 

ಗಣಪತಿ ಮೆರವಣಿಗೆ ವಿನೋಬನಗರದ ಮುಖ್ಯರಸ್ತೆಯ ಮಾರ್ಗದಲ್ಲಿ ಮಸೀದಿ ಇದ್ದ ಕಾರಣ ಮುಂಜಾಗ್ರತೆ ದೃಷ್ಟಿಯಿಂದ ಪೊಲೀಸರು ವ್ಯಾಪಕ ಭದ್ರತೆ ಏರ್ಪಡಿಸಿದ್ದರು.  ಮಸೀದಿ ಮುಂದೆ ಮೆರವಣಿಗೆ ಸಾಗುವಾಗ ಜಿಲ್ಲಾಧಿಕಾರಿ, ಎಸ್ಪಿ ಹಾಗೂ ತಹಶೀಲ್ದಾರ್ ಮಸೀದಿ ಮುಂದೆಯೇ ನಿಂತಿದ್ದರು. ಮಸೀದಿ ಮುಂದೆ ಹೆಚ್ಚಿನ ಸಿಸಿ ಕ್ಯಾಮೆರಾಗಳನ್ನು ಅಳವಡಿಸುವ ಮೂಲಕ ಅಹಿತಕರ ಘಟನೆ ನಡೆಯ ದಂತೆ ಹದ್ದಿನ ಕಣ್ಣಿಡಲಾಗಿತ್ತು. ಮಸೀದಿ ಬಳಿ ಮುಸ್ಲಿಂ ಸಮಾಜದ ಮುಖಂಡರು ಗಣಪತಿಗೆ ಹೂವಿನ ಹಾರ ಹಾಕಿ ಭಾವೈಕ್ಯತೆ ಮೆರೆದರು. 

ಪೊಲೀಸರು ಹ್ಯಾಂಡಿ ಕ್ಯಾಮ್​ಗಳನ್ನು ಹಿಡಿದು ಕಟ್ಟಡಗಳ ಮೇಲೇರಿ ವೀಡಿಯೋ ಚಿತ್ರೀಕರಣ ಮಾಡುತ್ತಿದ್ದುದು ಕಂಡು ಬಂತು. ಮೆರವಣಿಗೆ ದೃಶ್ಯ ಸೆರೆ ಹಿಡಿಯಲು ಪೊಲೀಸ್ ಇಲಾಖೆಯಿಂದ ಡ್ರೋಣ್ ಬಳಕೆ ಮಾಡಲಾಗಿತ್ತು.

ಮನೆ, ಕಟ್ಟಡ, ಕಾಂಪೌಂಡ್​ಗಳ ಮೇಲೇರಿ ಜನರು ಮೆರವಣಿಗೆಯನ್ನು ಕಣ್ತುಂಬಿಕೊಂಡರು. ಕಳೆದ ವರ್ಷಗಳಿಗೆ ಹೋಲಿಸಿದರೆ ಈ ವರ್ಷ​ಮೆರವಣಿಗೆಯಲ್ಲಿ ಪಾಲ್ಗೊಂಡವರ ಸಂಖ್ಯೆ ಕಡಿಮೆಯಾಗಿದ್ದುದು ಕಂಡು ಬಂತು. 

2ನೇ ಮುಖ್ಯ ರಸ್ತೆಯಿಂದ ಆರಂಭವಾದ ಮೆರವಣಿಗೆಯು ಮಸೀದಿ ಮುಖಾಂತರ ಪಿಬಿ ರಸ್ತೆ, ಅರುಣಾ ವೃತ್ತ, ರಾಮ್ ಅಂಡ್ ಕೋ ವೃತ್ತ, ಎಂ.ಸಿ ಕಾಲೋನಿ ಎ ಬ್ಲಾಕ್ ಮುಖಾಂತರ ಮರಳಿ ವಿನೋಬ ನಗರದ 1ನೇ ಮುಖ್ಯ ರಸ್ತೆಯಲ್ಲಿರುವ ಚೌಡೇಶ್ವರಿ ದೇವಸ್ಥಾನದ ಮುಂದೆ ಸಾಗಿ, ಪಿಬಿ ರಸ್ತೆಗೆ ತಲುಪಿ ಕಾಡಪ್ಪನ ಕಣದಲ್ಲಿರುವ ಬಾವಿಯಲ್ಲಿ ಮೂರ್ತಿಯನ್ನು ವಿಸರ್ಜಿಸಲಾಯಿತು.

ಮಹಾನಗರ ಪಾಲಿಕೆ ಮಾಜಿ ಸದಸ್ಯ ಶಿವನಳ್ಳಿ ರಮೇಶ್, ಜಿಲ್ಲಾ ವೀರಶೈವ ಮಹಾಸಭಾದ ಅಧ್ಯಕ್ಷ ದೇವರಮನೆ ಶಿವಕುಮಾರ್, ಶ್ರೀ ವೀರ ವರಸಿದ್ಧಿ ವಿನಾಯಕ ಸೇವಾ ಸಮಿತಿ ಗೌರವಾಧ್ಯಕ್ಷ ದೇವರಮನೆ ಶಿವರಾಜ್, ಅಧ್ಯಕ್ಷ ಟಿ.ಎಂ. ಗುರುನಾಥ್ ಬಾಬು, ಕಾರ್ಯದರ್ಶಿ, ಡಿ.ಕೆ .ರಮೇಶ್ ಮತ್ತಿತರರು ಮೆರವಣಿಗೆಯಲ್ಲಿ ಭಾಗವಹಿಸಿದ್ದರು.

Please follow and like us: