ವಿಜಯದಶಮಿ : ಬೃಹತ್ ಶೋಭಾಯಾತ್ರೆ

ದಾವಣಗೆರೆ, ಅ.8- ವಿಜಯದಶಮಿ ಅಂಗವಾಗಿ ವಿಶ್ವ ಹಿಂದೂ ಪರಿಷತ್, ಸಾರ್ವಜನಿಕ ವಿಜಯ ದಶಮಿ ಮಹೋತ್ಸವ ಸಮಿತಿ ಹಾಗೂ ಹಿಂದೂ ಪರ ಸಂಘಟನೆಗಳ ನೇತೃತ್ವದಲ್ಲಿ ನಗರದಲ್ಲಿ ಇಂದು ಬೃಹತ್ ಶೋಭಾಯಾತ್ರೆ ಅದ್ದೂರಿಯಿಂದ ಯಶಸ್ವಿಯಾಗಿ ನಡೆಯಿತು.

ಬೇತೂರು ರಸ್ತೆಯ ಶ್ರೀ ವೆಂಕಟೇಶ್ವರ ವೃತ್ತದಲ್ಲಿ ಜಡೇ ಸಿದ್ದೇಶ್ವರ ಮಠದ ಶ್ರೀ ಶಿವಾನಂದ ಸ್ವಾಮೀಜಿ ಶೋಭಾಯಾತ್ರೆಗೆ ಚಾಲನೆ ನೀಡಿದರು. 

ಯಾತ್ರೆಯು ಬಂಬೂ ಬಜಾರ್ ರಸ್ತೆ, ಶಾಂತಿ ಚಿತ್ರಮಂದಿರ ರಸ್ತೆ, ಎಕ್ಸ್ ಮುನ್ಸಿಪಲ್ ಕಾಲೇಜು, ಕೆ.ಆರ್.ಮಾರುಕಟ್ಟೆ, ಬೆಳ್ಳೂಡಿಗಲ್ಲಿ ಮೂಲಕ ಕಾಳಿಕಾ ದೇವಿ ರಸ್ತೆಯಲ್ಲಿ ಹಾದು ಹೊಂಡದ ವೃತ್ತ, ಬಾರ್‍ಲೈನ್ ರಸ್ತೆ, ಮೂಲಕ ಸಾಗಿ ಸಂಜೆ ವೇಳೆಗೆ ಅಂತಿಮವಾಗಿ ಪಿಬಿ ರಸ್ತೆಯ ಶ್ರೀ ಬೀರಲಿಂಗೇಶ್ವರ ದೇವಸ್ಥಾನಕ್ಕೆ ತಲುಪಿತು.

ಮೆರವಣಿಗೆಯಲ್ಲಿ ವೀರ ಸಾವರ್ಕರ್, ಕೆಂಪೇಗೌಡ, ರಾಮಮಂದಿರ, ಅಮರ್ ಜವಾನ್, ಭಾರತಾಂಬೆ, ಗೋರಕ್ಷಣೆ, ಶತ್ರುರಾಷ್ಟ್ರದ ಸೈನಿಕರೊಂದಿಗೆ ಭಾರತೀಯ ಸೈನಿಕರ ಸೆಣಸಾಟ, ಬುದ್ಧ, ಬಸವ, ಅಂಬೇಡ್ಕರ್, ವಾಲ್ಮೀಕಿ, ಕನಕದಾಸ, ಭಗತ್ ಸಿಂಗ್, ಸುಭಾಷ್ ಚಂದ್ರಬೋಸ್, ಕಿತ್ತೂರು ರಾಣಿ ಚನ್ನಮ್ಮ, ನಗರದೇವತೆ ದುರ್ಗಾಂಬಿಕ ದೇವಿ ಸೇರಿದಂತೆ ವಿಶಿಷ್ಟ ಭಾವಚಿತ್ರಗಳು ಆಕರ್ಷಿಸಿದವು.

ಶೋಭಾಯಾತ್ರೆ ಸಾಗುವ ದಾರಿ ಸೇರಿದಂತೆ, ವಿವಿಧ ಸೂಕ್ಷ್ಮ ಹಾಗೂ ಅತೀಸೂಕ್ಷ್ಮ ಪ್ರದೇಶಗಳಲ್ಲಿ ಸಿಸಿ ಕ್ಯಾಮೆರಾ ಕಣ್ಗಾವಲು ಇತ್ತು. 

ಅಲ್ಲದೇ ಮೆರ ವಣಿಗೆಯ ದೃಶ್ಯವನ್ನು ಸಂಪೂರ್ಣವಾಗಿ ಚಿತ್ರೀಕರಿಸಲು ಒಂದು ಡ್ರೋನ್ ಕ್ಯಾಮೆರಾ ಹಾಗೂ ಹ್ಯಾಂಡಿ ಕ್ಯಾಮರಾಗಳು ಹದ್ದಿನ ಕಣ್ಣಿಟ್ಟಿದ್ದವು.

ಶೋಭಾಯಾತ್ರೆಯಲ್ಲಿ ಲೋಕಸಭಾ ಸದಸ್ಯ ಜಿ.ಎಂ. ಸಿದ್ದೇಶ್ವರ, ವಿಶ್ವ ಹಿಂದೂ ಪರಿಷತ್‍ ಜಿಲ್ಲಾಧ್ಯಕ್ಷ ದೇವರಮನೆ ಶಿವಕುಮಾರ್, ಬಿಜೆಪಿ ಜಿಲ್ಲಾಧ್ಯಕ್ಷ ಯಶವಂತರಾವ್ ಜಾಧವ್, ಹಿಂದೂ ಪರ ಸಂಘಟನೆಯ ಮುಖಂಡ ಕೆ.ಬಿ. ಶಂಕರ ನಾರಾಯಣ, ಬಿಜೆಪಿ ಮುಖಂಡ ವೈ. ಮಲ್ಲೇಶ್, ಸಂಕೋಳ್ ಚಂದ್ರಶೇಖರ್, ಎಸ್‌.ಟಿ. ವೀರೇಶ್, ಕುಸುಮ ಶೆಟ್ರು, ರಾಜನಹಳ್ಳಿ ಶಿವಕುಮಾರ್, ಬಿ.ಜೆ. ಅಜಯ್‌ ಕುಮಾರ್‌, ಎನ್‌. ರಾಜಶೇಖರ್ ಸೇರಿದಂತೆ ಇತರರು ಭಾಗವಹಿಸಿದ್ದರು.