December 6, 2019

ವಾಲ್ಮೀಕಿ ಸಮುದಾಯದ ಮೀಸಲಾತಿಗೆ ಹೊಸ ಸಮಿತಿ

ಜಿಗಳಿ ಪ್ರಕಾಶ್

ರಾಜನಹಳ್ಳಿ ಶ್ರೀಗಳ ನೇತೃತ್ವದ ನಿಯೋಗಕ್ಕೆ ಸಿಎಂ ಯಡಿಯೂರಪ್ಪ ಭರವಸೆ

ಬೆಂಗಳೂರು, ಸೆ. 9- ಎಸ್ಟಿ ಜನಾಂಗಕ್ಕೆ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ಹೆಚ್ಚಳ ಸೇರಿದಂತೆ, ವಿವಿಧ ಬೇಡಿಕೆಗಳ ಈಡೇರಿಕೆಗೆ ನಮ್ಮ ಸರ್ಕಾರ ಬದ್ಧವಾಗಿದೆ ಮತ್ತು ನಮ್ಮ ಜವಾಬ್ದಾರಿ ಕೂಡಾ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಭರವಸೆ ನೀಡಿದರು.

ಸೋಮವಾರ ತಮ್ಮ ಗೃಹ ಕಛೇರಿ `ಕೃಷ್ಣಾ’ದಲ್ಲಿ ರಾಜನಹಳ್ಳಿಯ ವಾಲ್ಮೀಕಿ ಗುರುಪೀಠದ ಪೀಠಾಧಿ ಪತಿ ಶ್ರೀ ವಾಲ್ಮೀಕಿ ಪ್ರಸನ್ನಾನಂದ ಸ್ವಾಮೀಜಿ ಅವರ ನೇತೃತ್ವದ ನಿಯೋಗದ ಜೊತೆ ಮೀಸಲಾತಿ ಹೆಚ್ಚಳ ಸೇರಿದಂತೆ, ವಿವಿಧ ಬೇಡಿಕೆಗಳನ್ನು ಈಡೇರಿಸುವ ಸಂಬಂಧ ಸುದೀರ್ಘವಾಗಿ ಚರ್ಚೆ ನಡೆಸಿದ ನಂತರ ಸಿಎಂ ಮಾತನಾಡಿದರು.

ಮೀಸಲಾತಿ ಹೆಚ್ಚಳ, ನಕಲಿ ಜಾತಿ ಪ್ರಮಾಣ ಪತ್ರ ಪಡೆದಿರುವವರ ಹಾಗೂ ನೀಡುವವರ ವಿರುದ್ಧ ಶಿಸ್ತು ಕ್ರಮ, ಎಸ್ಟಿಗೆ ಪ್ರತ್ಯೇಕ ಸಚಿವಾಲಯ, ಯಾವುದಾದರೊಂದು ವಿಶ್ವ ವಿದ್ಯಾಲಯಕ್ಕೆ ವಾಲ್ಮೀಕಿ ಅವರ ಹೆಸರು ನಾಮಕರಣ ಮಾಡಬೇಕೆಂಬ ವಾಲ್ಮೀಕಿ ಸಮಾಜದ ಬೇಡಿಕೆಗಳನ್ನು ಹಂತ ಹಂತವಾಗಿ ಈಡೇರಿಸುತ್ತೇವೆ. ಈ ಬಗ್ಗೆ ಅನುಮಾನ ಬೇಡ ಎಂದು ಯಡಿಯೂರಪ್ಪ ಅವರು ಮಾತುಕೊಟ್ಟರು.

ಎಸ್ಟಿ ಮೀಸಲಾತಿ ಹೆಚ್ಚಳ ಮಾಡುವ ಕುರಿತು ಬರುವ ಸಂಪುಟ ಸಭೆಯಲ್ಲಿ ಚರ್ಚಿಸಿ, ಅಗತ್ಯ ಬಿದ್ದರೆ ಹಿರಿಯ ಅಧಿಕಾರಿ ನೇತೃತ್ವದಲ್ಲಿ ಆಯೋಗ ಅಥವಾ ಸಮಿತಿ ರಚಿಸಿ, ನ್ಯಾಯ ಒದಗಿಸುತ್ತೇವೆ. ಅದಕ್ಕಾಗಿ ಸ್ವಲ್ಪ ಕಾಲಾವಕಾಶ ಕೊಡಿ ಎಂದು ಯಡಿಯೂರಪ್ಪ ಅವರು ಶ್ರೀಗಳನ್ನು ಕೋರಿದರು.

ಆಗ ಶ್ರೀಗಳು ಈ ಹಿಂದೆ ಸಮ್ಮಿಶ್ರ ಸರ್ಕಾರ ನಾವು ಬೆಂಗಳೂರಿನಲ್ಲಿ ಪ್ರತಿಭಟನೆ ಮಾಡಿದಾಗ 3 ತಿಂಗಳು ಕಾಲಾವಕಾಶ ಪಡೆದಿತ್ತು. ಅದರಂತೆ ಅವರು ಸಂಪುಟ ಸಭೆಯಲ್ಲಿ ಚರ್ಚಿಸಿ, ನಿವೃತ್ತ ನ್ಯಾಯಮೂರ್ತಿ ನಾಗಮೋಹನ್ ದಾಸ್ ಅವರ ನೇತೃತ್ವದಲ್ಲಿ  ಏಕಸದಸ್ಯ ಆಯೋಗ ರಚಿಸಿದ್ದರು. ಆದರೆ, ಸರ್ಕಾರ ಬದಲಾದ ಕಾರಣ ಆಯೋಗ ವರದಿ ತಯಾರು ಮಾಡಿದೆಯೋ, ಇಲ್ಲವೋ ಎಂಬ ವಿಷಯವನ್ನು ತಿಳಿದುಕೊಂಡು, ಕೂಡಲೇ ಮುಂದಿನ ಕ್ರಮ ಕೈಗೊಳ್ಳಬೇಕು. ಅಲ್ಲದೇ ಸಚಿವ ಸಂಪುಟದಲ್ಲಿ ಎಸ್ಟಿ ಜನಾಂಗಕ್ಕೆ ಡಿಸಿಎಂ ಹಾಗೂ ಮೂರು ಸಚಿವ  ಸ್ಥಾನ ನೀಡಬೇಕು ಎಂದು ಸಿ.ಎಂ. ಯಡಿಯೂರಪ್ಪ ಅವರನ್ನು ಶ್ರೀಗಳು ಒತ್ತಾಯಿಸಿದರು.

ಇದಕ್ಕೂ ಮುನ್ನ ಮಾತನಾಡಿದ ಉಪ ಮುಖ್ಯಮಂತ್ರಿಗಳೂ ಆದ ಸಮಾಜ ಕಲ್ಯಾಣ ಸಚಿವ ಗೋವಿಂದ ಕಾರಜೋಳ, ಕೇಂದ್ರ ಸರ್ಕಾರ ಎಸ್ಸಿ-ಎಸ್ಟಿಗಳಿಗೆ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ಹೆಚ್ಚಳ ಮಾಡಿದ್ದರಿಂದ ಎಸ್ಸಿ ಜನಾಂಗ ದಲ್ಲಿ 36 ಶಾಸಕರು ಮತ್ತು ಎಸ್ಟಿ ಜನಾಂಗದಲ್ಲಿ 15 ಶಸಕರಾಗುವ ಅವಕಾಶ ಸಿಕ್ಕಿದೆ. ಅದೇ ರೀತಿ ಶಿಕ್ಷಣ ಮತ್ತು ಉದ್ಯೋಗದಲ್ಲೂ ಮೀಸಲಾತಿ ಹೆಚ್ಚಳ ವಾಗಿದೆ. ಅದೇ ಮಾದರಿಯಲ್ಲಿ ರಾಜ್ಯ ಸರ್ಕಾರವೂ ಎಸ್ಟಿ ಜನಾಂಗಕ್ಕೆ ಮೀಸಲಾತಿ ಪ್ರಮಾಣವನ್ನು ಶೇ. 3 ರಿಂದ ಶೇ. 7.5ಕ್ಕೆ ಹೆಚ್ಚಿಸಬೇಕೆಂಬ ಬೇಡಿಕೆ ನ್ಯಾಯ ಸಮ್ಮತವಾಗಿದ್ದು, ಯಡಿಯೂರಪ್ಪ ನೇತೃತ್ವ ನಮ್ಮ ಸರ್ಕಾರ ನಿಮ್ಮ ಬೇಡಿಕೆಗಳನ್ನು ಈಡೇರಿಸಲಿದೆ ಎಂದರು.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಶ್ರೀರಾಮುಲು, ಶಾಸಕರಾದ ರಾಜುಗೌಡ, ಕೆ. ಶಿವನಗೌಡ ನಾಯಕ, ರಾಯಚೂರು ಸಂಸದ  ರಾಜಾ ಅಮರೇಶ ನಾಯಕ ಮಾತನಾಡಿ, ನಮಗೆ ಎಲ್ಲಾ ಬೇಡಿಕೆಗಳಿಗಿಂತ ಮೀಸಲಾತಿ ಹೆಚ್ಚಳ ತಕ್ಷಣ ಆಗಬೇಕು. ಅದಕ್ಕಾಗಿ ನಾವು ಯಾವ ತ್ಯಾಗಕ್ಕೂ ಸಿದ್ಧರಿದ್ದೇವೆ. ನೀವು ಸಿಎಂ. ಆಗಿದ್ದಾಗಲೇ ವಾಲ್ಮೀಕಿ ಜಯಂತಿ ಆಚರಣೆಗೆ ಸರ್ಕಾರದ ಮಾನ್ಯತೆ ನೀಡಿದ್ದೀರಿ. ಅದರಂತೆ ಮೀಸಲಾತಿ ಹೆಚ್ಚಳವನ್ನೂ ಮಾಡಿ. ಸಮಾಜ ನಿಮಗೆ ಋಣಿಯಾಗಿರುತ್ತದೆ ಎಂದು ಮನವಿ ಮಾಡಿದರು.

ಕೆಪಿಎಸ್ಸಿ ಮಾಜಿ ಸದಸ್ಯ ಜಿ.ಟಿ. ಚಂದ್ರಶೇಖರಪ್ಪ, ನಿವೃತ್ತ ಅಧಿಕಾರಿಗಳಾದ ಬಿ. ಶಿವಪ್ಪ, ಮೃತ್ಯುಂಜಯಪ್ಪ, ಕರ್ನಾಟಕ ವಾಲ್ಮೀಕಿ ಮಹಾಸಭಾದ ಅಧ್ಯಕ್ಷ ಸಿರಿಗೆರೆ ತಿಪ್ಪೇಶ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಮೀಸಲಾತಿ ಹೆಚ್ಚಳ ಹಾಗೂ ನಕಲಿ ಜಾತಿ ಪ್ರಮಾಣ ಪತ್ರ ನೀಡುತ್ತಿರುವ ವಿಷಯ ಕುರಿತು ಸಭೆಗೆ ಮನವರಿಕೆ ಮಾಡಿಕೊಟ್ಟರಲ್ಲದೇ, ಕಾನೂನು ಹೋರಾಟ ಮತ್ತು ಕೋರ್ಟಿನ ತೀರ್ಪುಗಳನ್ನು ತಿಳಿಸಿದರು.

ಮೇದಾರ ಗುರುಪೀಠದ ಶ್ರೀ ಇಮ್ಮಡಿ ಕೇತೇಶ್ವರ ಸ್ವಾಮೀಜಿ, ಬಳ್ಳಾರಿ ಸಂಸದ ಅರಸೀಕೆರೆ ದೇವೇಂದ್ರಪ್ಪ, ಶಾಸಕರಾದ ಎಸ್.ವಿ. ರಾಮ ಚಂದ್ರಪ್ಪ, ಎನ್.ವೈ. ಗೋಪಾಲಕೃಷ್ಣ, ಸೋಮ ಲಿಂಗಪ್ಪ, ಅನರ್ಹ ಶಾಸಕ ಪ್ರತಾಪಗೌಡ ಪಾಟೀಲ್, ಹರಿಹರ ಮಾಜಿ ಶಾಸಕ ಬಿ.ಪಿ. ಹರೀಶ್, ಬಸವರಾಜ್ ನಾಯ್ಕ,  ಗುರುಪೀಠದ ಧರ್ಮ ದರ್ಶಿಗಳಾದ ಶ್ರೀಮತಿ ಶಾಂತಲಾ ರಾಜಣ್ಣ, ಡಾ. ಜಿ. ರಂಗಯ್ಯ, ವಿಧಾನ ಪರಿಷತ್ ಮಾಜಿ ಸದಸ್ಯ ರಾದ ಡಿ.ಎಂ. ಸಾಲಿ, ಸಿದ್ಧರಾಜು,  ಮೈಸೂರಿನ ಅಪ್ಪಣ್ಣ, ಹರ್ತಿಕೋಟೆ ವೀರೇಂದ್ರ ಸಿಂಹ, ನರಸಿಂಹಯ್ಯ, ಮುನಿಸ್ವಾಮಿ, ಚಳವಳಿ ರಾಜಣ್ಣ, ಬೆಳ್ಳಿ ಗಂಗಾಧರ್, ಹರಪನಹಳ್ಳಿಯ ಕೆ. ಹುಚ್ಚಂಗೆಪ್ಪ, ಪಿ. ನಾಗರಾಜ್, ದಾವಣಗೆರೆ ತಾಲ್ಲೂಕಿನ ಗುಮ್ಮ ನೂರು ಮಲ್ಲಿಕಾರ್ಜುನ್, ಎನ್.ಎಂ. ಆಂಜನೇಯ ಗುರೂಜಿ, ಅಣಜಿ ಅಂಜಿನಪ್ಪ, ಮಂಗೇನಹಳ್ಳಿ ಲೋಹಿತ್‌ಕುಮಾರ್, ಹರಿಹರ ತಾಲ್ಲೂಕಿನ ಕೆ. ಮಂಜುನಾಥ್, ದಿನೇಶ್ ಬಾಬು, ಕೆ.ಆರ್. ರಂಗಪ್ಪ, ಮೆಣಸಿನಹಾಳ್ ಬಸವರಾಜ್, ಜಿ.ಪಿ. ಹನುಮಗೌಡ, ನಾಗೇನಹಳ್ಳಿ ಬೀರೇಶ್ ಸೇರಿದಂತೆ, ಇನ್ನೂ ಅನೇಕರು ನಿಯೋಗದಲ್ಲಿದ್ದರು.

ತುರ್ತು ಸಭೆ : ಸಿಎಂ ಭೇಟಿ ನಂತರ ಗಾಂಧಿ ಭವನದಲ್ಲಿ ಮೀಸಲಾತಿ ಹೆಚ್ಚಳ ಹೋರಾಟ ಕುರಿತು  ರಾಜ್ಯಮಟ್ಟದ ತುರ್ತು ಸಭೆಯನ್ನು ರಾಜನಹಳ್ಳಿ ಶ್ರೀಗಳ ಸಾನ್ನಿಧ್ಯದಲ್ಲಿ ಶಾಸಕ ರಾಜುಗೌಡ ಅವರ ನೇತೃತ್ವದಲ್ಲಿ ನಡೆಸಿ, ಸಿಎಂ ಭರವಸೆ ಕುರಿತು ಕೆಲವು ದಿನ ಕಾದುನೋಡಿ ಮುಂದಿನ ಹೋರಾಟ ನಡೆಸಲು ತೀರ್ಮಾನಿಸಲಾಯಿತು.

ಮುತ್ತಿಗೆ ಎಚ್ಚರಿಕೆ : ಚಳಿಗಾಲದ ಅಧಿವೇಶನದ ಒಳಗಾಗಿ ಮೀಸಲಾತಿ ಹೆಚ್ಚಳ ಕುರಿತು ಸರ್ಕಾರ ತೀರ್ಮಾನ ಕೈಗೊಳ್ಳದಿದ್ದರೆ, ಬೆಳಗಾವಿಯಲ್ಲಿ ನಡೆಯುವ ಚಳಿಗಾಲದ ಅಧಿವೇಶನಕ್ಕೆ ಮುತ್ತಿಗೆ ಹಾಕುವುದಾಗಿ ಶ್ರೀಗಳು ಇದೇ ಸಂದರ್ಭದಲ್ಲಿ ಎಚ್ಚರಿಕೆ ನೀಡಿದರು.