ಲಾಸ್ಟ್ ಬೆಂಚ್ ಅನ್ನೋ ತಲೆನೋವು

– ಕೆ.ಎನ್. ಮಲ್ಲಿಕಾರ್ಜುನ

……ಯುವ ಉಪನ್ಯಾಸಕಿಯರಿಗೆ ಕಾಲೇಜುಗಳಲ್ಲಿ ತರಲೇ ಹುಡುಗರೇ ಸವಾಲು
ಘಟನೆ 1

ಕಾಲೇಜು ಹೊರ ಭಾಗದಲ್ಲಿ ನಿಲ್ಲಿಸಿದ್ದ ಉಪನ್ಯಾಸಕಿಯ ಸ್ಕೂಟಿಯ ಬ್ರೇಕನ್ನು ಕೆಲ ಪಡ್ಡೆ ಹುಡುಗರು ಲಾಕ್ ಮಾಡಿದ್ದರು. ಇದರ ಪರಿವೇ ಇಲ್ಲದ ಉಪನ್ಯಾಸಕಿ ಗಾಡಿ ಸ್ಟಾರ್ಟ್ ಮಾಡಿ ಎಕ್ಸಲೇಟರ್ ಕೊಡುತ್ತಲೇ ನಿಯಂತ್ರಣಕ್ಕೆ ಸಿಗದೇ ಗಾಡಿ ಸಹಿತ  ಉಪನ್ಯಾಸಕಿ ಬೀಳಬೇಕಾಯಿತು. ಅಲ್ಲಿದ್ದ ಹುಡುಗರೆಲ್ಲಾ ನಕ್ಕಾಗ ಆಕೆಗೆ ಆದ ಮುಜುಗರದಿಂದ ಸ್ಕೂಟಿಯನ್ನು ಅಲ್ಲಿಯೇ ಬಿಟ್ಟು ವೇಗದ ಹೆಜ್ಜೆಗಳೊಂದಿಗೆ ಮನೆಯತ್ತ ತೆರಳಿದಳು.

ಘಟನೆ 2

ಕಾಲೇಜಿನ ತರಗತಿಯೊಂದರಲ್ಲಿ ಉಪನ್ಯಾಸಕಿ ಪಾಠ ಮಾಡುತ್ತಿದ್ದಳು. ಮೂರನೇ ಬೆಂಚಿನಲ್ಲಿ ಕೂತಿದ್ದ ವಿದ್ಯಾರ್ಥಿಯೊಬ್ಬ ತಲೆ ತಗ್ಗಿಸಿಕೊಂಡು ಮೊಬೈಲ್​ನಲ್ಲಿ ಯಾರೊಂದಿಗೋ ಚಾಟ್ ಮಾಡುತ್ತಿದ್ದ. ಮೊಬೈಲ್ ನಿಷೇಧವಿದ್ದರೂ ಮೊಬೈಲ್ ತಂದು ಚಾಟ್ ಮಾಡುತ್ತಿದ್ದ ಹುಡುಗನನ್ನು ನೋಡುತ್ತಲೇ ಉಪನ್ಯಾಸಕಿಗೆ ಕೋಪ ನೆತ್ತಿಗೇರಿತ್ತು.

ಆಕೆ, ಮೊಬೈಲ್ ಕೇಳಿದಳು. ಅವನು ಕೊಡಲಿಲ್ಲ. ಉಪನ್ಯಾಸಕಿಯ ಕೋಪದ ಮಾತುಗಳಿಗೆ ಹುಡುಗನಿಂದ ಅಹಂಕಾರದ ಉತ್ತರಗಳು ಬರುತ್ತಿದ್ದವು. ಇದು ತರಗತಿಯಲ್ಲಿದ್ದವರಿಗೆ ತಮಾಷೆಯಾಗಿ ಕಂಡಿತು. ಆಕೆ ಪ್ರಾಂಶುಪಾಲರ ಬಳಿ ಕರೆದೊಯ್ದಳು. ಹುಡುಗನಿಗೆ ಹೀಗೆಲ್ಲಾ ಮುಂದೆ ಮಾಡಬೇಡ ಎಂದಷ್ಟೇ ಹೇಳಿದ ಪ್ರಾಂಶುಪಾಲರು, ಇಬ್ಬರನ್ನೂ ತರಗತಿಗೆ ತೆರಳಿ ಎಂದು ಸೂಚಿಸಿದರು. 

ಘಟನೆ 3

ಪಿಯುಸಿ ವಿದ್ಯಾರ್ಥಿಗಳಿಗೆ ಪಾಠ ಮಾಡುತ್ತಿದ್ದ ಉಪನ್ಯಾಸಕಿಗೆ ವಿದ್ಯಾರ್ಥಿಗಳಿಂದ ತನ್ನ ತರಗತಿ ಬಗ್ಗೆ `ಫೀಡ್ ಬ್ಯಾಕ್’ ಪಡೆಯಬೇಕೆನಿಸಿತು. ಕಾಗದದಲ್ಲಿ ನಿಮ್ಮ ಹೆಸರು  ಬರೆದು ನನ್ನ ಪಾಠ ಅರ್ಥವಾಗುತ್ತದೋ ಇಲ್ಲವೋ? ಅಥವಾ ಏನಾದರೂ ಬದಲಾವಣೆ ಮಾಡಬೇಕೇ? ಎಂಬಿತ್ಯಾದಿ ಫೀಡ್ ಬ್ಯಾಕ್ ಬರೆಯಲು ಹೇಳಿದಳು. 

ಬಂದ ಪತ್ರಗಳನ್ನು ನೋಡಿದ ಉಪನ್ಯಾಸಕಿ ದಂಗಾಗಿದ್ದಳು. ಕೆಲ ಪ್ರಾಮಾಣಿಕ ವಿದ್ಯಾರ್ಥಿಗಳ ಅನಿಸಿಕೆಗಳ ಜೊತೆಗೆ ಪಡ್ಡೆ ಹುಡುಗರ ಅನಿಸಿಕೆಗಳನ್ನು ನೋಡಿ ಮತ್ತೆಂದೂ ಫೀಡ್ ಬ್ಯಾಕ್ ಪಡೆಯುವ ಗೋಜಿಗೆ ಹೋಗಲೇ ಇಲ್ಲ.

ಅದೊಂದು ಖಾಸಗಿ ಪದವಿ ಕಾಲೇಜು. ಅಲ್ಲಿನ ವಿದ್ಯಾರ್ಥಿಗಳಿಗೆ ಮೊಬೈಲ್ ಬಳಕೆ ನಿಷೇಧಿಸಲಾಗಿತ್ತು. ಆದರೂ ಹುಡುಗನೊಬ್ಬ ತನ್ನ ಮೊಬೈಲ್ ಗಾತ್ರದಷ್ಟು ಪುಸ್ತಕದ ಒಳ ಹಾಳೆಗಳನ್ನು ಕತ್ತರಿಸಿ, ಗೊತ್ತಾಗದಂತೆ ಮೊಬೈಲ್ ಇಟ್ಟುಕೊಂಡು ಸ್ನೇಹಿತರಿಗೆ ಚಾಟ್ ಮಾಡುತ್ತಿದ್ದ. ಅದು ಉಪನ್ಯಾಸಕಿಗೆ ತಿಳಿದು ಆಕೆ ಹುಡುಗನಿಗೆ ಬೆದರಿಸಿದಾಗ, ಹೊರಗೆ ಬಾ ನೋಡಿಕೊಳ್ತೇನೆ ಎಂದಿದ್ದ. 
ಹುಡುಗನ ಮಾತಿಗೆ ತುಸು ಬೆದರಿದ ಆಕೆ ಪ್ರಾಂಶುಪಾಲರಿಗೆ ಹೇಳಿದಾಗ, ಹೋಗ್ಲಿ ಸುಮ್ಮನಿದ್ದು ಬಿಡಮ್ಮಾ ಎಂಬ ಪ್ರಾಂಶುಪಾಲರ ತಾತ್ಸಾರದ ಉತ್ತರದಿಂದ  ಆಕೆ ಕೆಲಸವನ್ನೇ ಬಿಟ್ಟು ಬಿಡಬೇಕು ಎಂದುಕೊಂಡಳು. ಆದರೆ, ಆಕೆಯ ತುತ್ತಿನ ಚೀಲ ತುಂಬಬೇಕಲ್ಲ?

ಈ ಮೂರು ಘಟನೆಗಳು ಕಾಲೇಜುಗಳಲ್ಲಿ ಉಪನ್ಯಾಸಕಿಯರು ಎದುರಿಸುವ ಸಂಕಷ್ಟಗಳನ್ನು ಅನಾವರಣಗೊಳಿಸುತ್ತವೆ. ಇಂತಹ ಅನೇಕ ಘಟನೆಗಳು ನಿತ್ಯ ನಡೆಯುತ್ತಲೇ ಇರುತ್ತವೆ. ಇತ್ತೀಚಿನ ದಿನಗಳಲ್ಲಿ ಸ್ನಾತಕೋತ್ತರ ಪದವಿ ಮುಗಿಯುತ್ತಿದ್ದಂತೆ ಬದುಕಿನ ಬಂಡಿ ಸಾಗಿಸಲು ಉಪನ್ಯಾಸಕರ ಹುದ್ದೆ ಆಯ್ದುಕೊಳ್ಳುವ ಯುವತಿಯರಿಗೆ ಕಾಲೇಜುಗಳ ಪಡ್ಡೆ ಹುಡುಗರೇ ಸಮಸ್ಯೆಗಳಾಗಿ ಕಾಡುತ್ತಿದ್ದಾರೆ.

ಪ್ರಾಥಮಿಕ ಹಾಗೂ ಪ್ರೌಢ ಶಾಲಾ ವಿದ್ಯಾರ್ಥಿಗಳಿಗೆ ಪಾಠ ಮಾಡಬಹುದು. ಆದರೆ  ಕಾಲೇಜಿನಲ್ಲಿ ಪಾಠ​ ಮಾಡುವುದು ತುಸು ಕಷ್ಟವಾಗುತ್ತಿದೆ. ಇತ್ತೀಚಿನ ಸಿನಿಮಾಗಳನ್ನು ನೋಡುವ ಹುಡುಗರು ಅಲ್ಲಿಯಂತೆಯೇ ಉಪನ್ಯಾಸಕರನ್ನು ಛೇಡಿಸಲಾರಂಭಿಸುತ್ತಾರೆ. ಅದರಲ್ಲೂ ಚಿಕ್ಕ ವಯಸ್ಸಿನ ಉಪನ್ಯಾಸಕಿಯರ ಗೋಳಂತೂ ಹೇಳತೀರದು.

ಆಕೆ ಇತ್ತೀಚಿಗಷ್ಟೇ ಎಂಕಾಂ ಮುಗಿಸಿಕೊಂಡ ಯುವತಿ. ಓದಿದ ಕಾಲೇಜಿನಲ್ಲಿಯೇ ಪಿಯುಸಿ ಹಾಗೂ ಡಿಗ್ರಿ ವಿದ್ಯಾರ್ಥಿಗಳಿಗೆ ಪಾಠ ಮಾಡುವ ಕೆಲಸ ಸಿಕ್ಕಿತ್ತು. ಜೀವನಕ್ಕೆ ಒಂದು ದಾರಿ ಸಿಕ್ಕಿತಲ್ಲ ಎಂದು ನಿಟ್ಟುಸಿರು ಬಿಟ್ಟ ಆಕೆಗೆ, ನಂತರ ಎದುರಾಗಿದ್ದು ಪಡ್ಡೆ ವಿದ್ಯಾರ್ಥಿಗಳ ಸವಾಲುಗಳು. ಗುರುವೇನ್ನಮಃ ಎನ್ನುವ ಅಂದಿನ ಕಾಲದಲ್ಲಿ ಪಾಠ ಮಾಡುವುದು ಸುಲಭವಾಗಿತ್ತು. ಆದರೆ  ಗುರುವೇನು ಮಹಾ? ಎನ್ನುವ ಇಂದಿನ ಕಾಲದಲ್ಲಿ ಹದಿ ಹರೆಯದ ಯುವಕರಿಗೆ ಯುವತಿಯೊಬ್ಬಳು ಪಾಠ ಮಾಡುವುದು ಅಷ್ಟು ಸುಲಭವಾಗಿರಲಿಲ್ಲ.

ಕಾಲೇಜು ವಿದ್ಯಾರ್ಥಿಗಳ ಮೊಬೈಲ್ ಬಳಕೆ ಉಪನ್ಯಾಸಕರಿಗೂ, ಪ್ರಾಂಶುಪಾಲರು ಹಾಗೂ ಕಾಲೇಜು ಆಡಳಿತ ಮಂಡಳಿಗೂ ತೀವ್ರ ತಲೆನೋವಾಗಿ ಪರಿಣಿಸಿದೆ. ಕೆಲವು ಕಾಲೇಜುಗಳಲ್ಲಿ ಮೊಬೈಲ್ ನಿಷೇಧಿಸಲಾಗಿದ್ದರೂ ಪುಸ್ತಕದಲ್ಲಿಟ್ಟುಕೊಂಡು ಬಳಸುವ ವಿದ್ಯಾರ್ಥಿಗಳ ಸಂಖ್ಯೆಗೇನೂ ಕಡಿಮೆ ಇಲ್ಲ.

ಇದನ್ನು ಕಂಡು ಪ್ರಶ್ನಿಸಿದರೂ, ನಮ್ಮ ಮೊಬೈಲ್ ನಿಮಗೇನು ಕಷ್ಟ? ಎಂಬ ಮರು ಪ್ರಶ್ನೆಗಳ ಬಾಣವನ್ನು ತಡೆಯಲೂ ಆಗುತ್ತಿಲ್ಲ. ಪ್ರಾಂಶುಪಾಲರಿಗೆ ದೂರಿತ್ತರೆ ಅವರು ನಿಸ್ಸಹಾಯಕರು. ಏಕೆಂದರೆ ಖಾಸಗಿ ಕಾಲೇಜುಗಳಿಗೆ ಸೇರುವ ಬಹುತೇಕ ಮಕ್ಕಳು ಹಣವಂತರ ಹಾಗೂ ವಿವಿಧ ಉನ್ನತ ಉದ್ಯೋಗದಲ್ಲಿರುವವವರ ಮಕ್ಕಳೇ.

ಕೇಳಿದಷ್ಟು ಡೊನೇಷನ್ ಕಟ್ಟಿಯೇ ಕಾಲೇಜಿಗೆ ಬಂದಿರುತ್ತಾರೆ. ಅವರನ್ನು ಎದುರು ಹಾಕಿಕೊಳ್ಳುವುದು ಆಡಳಿತ ಮಂಡಳಿಗೂ ಕಷ್ಟ.  ಪ್ರಾಂಶುಪಾಲರು ಹಾಗೂ ಆಡಳಿತ ಮಂಡಳಿಯೇ ತಲೆ ಕೆಡಿಸಿಕೊಳ್ಳದೇ ಇದ್ದಾಗ ಈ ಬಡಪಾಯಿ ಉಪನ್ಯಾಸಕರಾದರೂ ಏನು ಮಾಡಿಯಾರು?