ರಸ್ತೆ ಸುರಕ್ಷತೆಗೆ ‘ನುಗ್ಗಿದ’ ಹಂದಿ, ನಾಯಿ, ದನ!

ದಾವಣಗೆರೆ, ಅ. 3- ಜಿಲ್ಲಾಧಿ ಕಾರಿಗಳ ಕಚೇರಿಯಲ್ಲಿ ನಡೆದ ಜಿಲ್ಲಾ ಸುರಕ್ಷತಾ ಸಮಿತಿ ಸಭೆಯಲ್ಲಿ ಹಂದಿ, ನಾಯಿ ಹಾಗೂ ದನಗಳ ಕುರಿತ ವಿಷಯಗಳೂ ಪ್ರಸ್ತಾಪವಾಗಿವೆ.

ರಸ್ತೆ ಸುರಕ್ಷತೆ ಕುರಿತು ಚರ್ಚಿಸು ವಾಗ ಜಿಲ್ಲಾ ಲಾರಿ ಮಾಲೀಕರ ಸಂಘದ ಅಧ್ಯಕ್ಷ ಸೈಯದ್ ಸೈಫುಲ್ಲಾ ಅವರು ನಗರದಲ್ಲಿ ನಾಯಿಗಳ ಸಮಸ್ಯೆ ಹೆಚ್ಚಾಗಿದೆ ಎಂದು ಪ್ರಸ್ತಾಪಿಸಿದರು.

ಆಗ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಅವರು, ರಸ್ತೆ ಸುರಕ್ಷತಾ ಸಭೆ ಯಲ್ಲಿ ನಾಯಿಗಳನ್ನು ಏಕೆ ತರುತ್ತಿದ್ದೀರಿ? ಎಂದು ಆಕ್ಷೇಪಿಸಿದರು.

ಇದಕ್ಕ ಉತ್ತರಿಸಿದ ಸೈಫುಲ್ಲಾ, ನಗರದಲ್ಲಿ ನಾಯಿ ಹಾಗೂ ಹಂದಿ ಗಳಿಂದ ದಿನಕ್ಕೆ ಒಂದೆರಡಾದರೂ ಅಪ ಘಾತಗಳು ಸಂಭವಿಸುತ್ತಿವೆ. ರಸ್ತೆ ಸುರ ಕ್ಷಿತವಾಗಿರಬೇಕಾದರೆ ಇವುಗಳ ಹಾವಳಿ ಮೇಲೆ ಕಡಿವಾಣ ಹಾಕಲೇ ಬೇಕಿದೆ ಎಂದು ಹೇಳಿದರು.

ಸಭೆಯಲ್ಲಿ ಉಪಸ್ಥಿತರಿದ್ದ ಪಾಲಿಕೆ ಆಯುಕ್ತ ಮಂಜುನಾಥ ಬಳ್ಳಾರಿ ಅವರು ಹಂದಿ ಹಾಗೂ ನಾಯಿಗಳ ಸಮಸ್ಯೆಗಳಿಗೆ ಎದುರಾಗುತ್ತಿರುವ ತೊಡಕುಗಳನ್ನು ವಿವರಿಸಿದರು.

ಹಂದಿಗಳನ್ನು ಸಾಗಿಸಲು ಈ ಹಿಂದೆ ಪ್ರಯತ್ನ ನಡೆಸಿದಾಗ ಪ್ರಕರಣ ಗಳನ್ನು ದಾಖಲಿಸಲಾಗಿತ್ತು. ಹಂದಿ ಮಾಲೀಕರು ಆಕ್ಷೇಪಿಸಿದಾಗ ಪ್ರಕರಣ ಸುಪ್ರೀಂ ಕೋರ್ಟ್‌ವರೆಗೆ ತಲುಪಿದೆ. ಈಗ ಹಂದಿಗಳ ಬಗ್ಗೆ ತೆಗೆದುಕೊಳ್ಳ ಲಾಗುತ್ತಿರುವ ಕ್ರಮಗಳ ಬಗ್ಗೆ ಸುಪ್ರೀಂ ಕೋರ್ಟ್‌ಗೆ ಪ್ರಮಾಣ ಪತ್ರ ಸಲ್ಲಿಸಿದ್ದೇವೆ. ಹೈಕೋರ್ಟ್‌ ಆದೇಶಕ್ಕೆ ಸುಪ್ರೀಂ ಕೋರ್ಟ್‌ ತಡೆಯಾಜ್ಞೆ ನೀಡಿದೆ ಎಂದರು.

ನಾಯಿಗಳ ಜನನ ನಿಯಂತ್ರಣಕ್ಕೆ ಕ್ರಮ ತೆಗೆದುಕೊಳ್ಳಬೇಕಿದೆ. ಆದರೆ, ಇದಕ್ಕೆ ಪ್ರಾಣಿ ಪ್ರಿಯರ ಆಕ್ಷೇಪಗಳಿವೆ. ನಾಯಿಗಳನ್ನು ಜನನ ನಿಯಂತ್ರಣಕ್ಕೆ ಒಳಪಡಿಸಲು ಹಿಡಿದಾಗ ಅವುಗಳನ್ನು ಮತ್ತೆ ಹಿಂದಿನ ಪ್ರದೇಶದಲ್ಲೇ ಬಿಡ ಬೇಕು ಎಂಬ ನಿರ್ಬಂಧವಿದೆ ಎಂದು ಹೇಳಿದರು.

ಇದೆಲ್ಲದರ ನಡುವೆ ಬೆಳಗಾವಿಯ ಸಂಸ್ಥೆಯೊಂದು ನ್ಯಾಯಾಲಯದ ಪ್ರಕ ರಣವನ್ನು ನಿರ್ವಹಿಸಿ ನಾಯಿಗಳ ಸಮಸ್ಯೆಯನ್ನು ಬಗೆಹರಿ ಸಲು ಮುಂದೆ ಬಂದಿದೆ. ಈ ಬಗ್ಗೆ ಪರಿಶೀಲಿ ಸಲಾಗುತ್ತಿದೆ ಎಂದು ಬಳ್ಳಾರಿ ಹೇಳಿದರು.

ಹೆದ್ದಾರಿಯಲ್ಲಿ ಮೇವು : ರಾಷ್ಟ್ರೀಯ ಹೆದ್ದಾರಿಯ ಮಧ್ಯ ಭಾಗದಲ್ಲಿ ದನಗಳನ್ನು ಮೇಯಲು ಬಿಡುತ್ತಿರುವ ವಿಷಯವೂ ಪ್ರಸ್ತಾಪವಾಯಿತು. ದನಗಳು ಹಠಾತ್ತನೆ ಎದುರಾಗುವುದರಿಂದ ವಾಹನ ಚಾಲಕರಿಗೆ ಪ್ರಾಣಾಪಾಯ ಎದುರಾಗುತ್ತಿದೆ ಎಂದು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಹೇಳಿದರು.

ಈ ಬಗ್ಗೆ ಹೆದ್ದಾರಿ ಪ್ರಾಧಿಕಾರದವರು ಕ್ರಮ ತೆಗೆದುಕೊಳ್ಳಬೇಕು. ದನಗಳು ಬರದ ಹಾಗೆ ಬೇಲಿ ಹಾಕುವಂತಹ ಕ್ರಮ ತೆಗೆದುಕೊಳ್ಳಬೇಕು ಎಂದು ಸೈಫುಲ್ಲಾ ಅಭಿಪ್ರಾಯ ಪಟ್ಟರು.

ಟರ್ಮಿನಲ್‌ಗೆ ಪರಿಶೀಲನೆ : ಯುಬಿಡಿಟಿ  ಕಾಲೇಜು ಮುಂಭಾಗದ ಟ್ಯಾಕ್ಸಿ ಸ್ಟಾಂಡ್‌ ಸ್ಥಳಾಂತರ, ಸರಕು ಸಾಗಣೆ ವಾಹನಗಳ ನಿಲುಗಡೆಗೆ  ಹಾಗೂ ಟ್ರಕ್ ಟರ್ಮಿನಲ್‌ ನಿರ್ಮಾಣಕ್ಕೆ ಜಾಗ ಗುರುತಿಸಲು ತಿಂಗಳಲ್ಲೇ ಸೂಕ್ತ ಸ್ಥಳಗಳಿಗೆ ಭೇಟಿ ನೀಡಿ, ನಿರ್ಧಾರ ತೆಗೆದುಕೊಳ್ಳುವುದಾಗಿ ಜಿಲ್ಲಾಧಿಕಾರಿ ಮಹಂತೇಶ್ ಬೀಳಗಿ ತಿಳಿಸಿದರು.

ಕಾಮಗಾರಿಗಳಿಂದ ಮಣ್ಣು : ನಗರವನ್ನು ದೂಳು ಮುಕ್ತಗೊಳಿಸುವ ಯೋಜನೆ ಇದೆ. ಆದರೆ, ಸ್ಮಾರ್ಟ್ ಸಿಟಿ, ಕೆ – ಶಿಪ್, ಲೋಕೋ ಪಯೋಗಿ, ಯುಜಿ ಕೇಬಲ್, ಜಲಸಿರಿ ಹೀಗೆ ನಿರಂತರವಾಗಿ ಕಾಮಗಾರಿಗಳು ನಡೆಯುತ್ತಿವೆ. 

ಈ ಕಾಮಗಾರಿಗಳ ಮಣ್ಣು ರಸ್ತೆಗಳ ಮೇಲೆ ಬೀಳುತ್ತಲೇ ಇದೆ. ಕಾಮಗಾರಿ ಮಾಡುವವರೇ ಮಣ್ಣು ತೆಗೆಯಬೇಕು ಎಂದು ಪಾಲಿಕೆ ಆಯುಕ್ತ ಮಂಜುನಾಥ ಬಳ್ಳಾರಿ ಸಭೆಯಲ್ಲಿ ಹೇಳಿದರು.

ಸಭೆಯಲ್ಲಿ ಆರ್‌ಟಿಒ ಎನ್.ಜೆ. ಬಣಕಾರ್, ದೂಡ ಅಧ್ಯಕ್ಷ ಆದಪ್ಪ ಮತ್ತಿತರರು ಉಪಸ್ಥಿತರಿದ್ದರು.

ಕೆಎಸ್‌ಆರ್‌ಟಿಸಿ ಅಸ್ಪೃಶ್ಯವೇ? ಸ್ಮಾರ್ಟ್ ಸಿಟಿ ಯೋಜನೆಯಡಿ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣವನ್ನು ಹೊಸದಾಗಿ ನಿರ್ಮಿಸಲಾಗುತ್ತಿದೆ. ತಾತ್ಕಾಲಿಕವಾಗಿ ನಿಲ್ದಾಣವನ್ನು ಹೈಸ್ಕೂಲ್ ಮೈದಾನಕ್ಕೆ ವರ್ಗಾಯಿಸುವುದು. ಅಲ್ಲೇ ತಾತ್ಕಾಲಿಕ ಬಸ್ ನಿಲ್ದಾಣ ಇದ್ದು, ಅದರಷ್ಟೇ ಜಾಗ ಬಳಸಿಕೊಳ್ಳುವುದಾಗಿ ಕೆಎಸ್‌ಆರ್‌ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ಸಿದ್ದೇಶ್ವರ ತಿಳಿಸಿದರು.

ಇದಕ್ಕೆ ಸಭೆಯಲ್ಲಿ ಆಕ್ಷೇಪ ವ್ಯಕ್ತಪಡಿಸಿದ ಸಾಮಾಜಿಕ ಕಾರ್ಯಕರ್ತ ಎಂ.ಜಿ. ಶ್ರೀಕಾಂತ್, ಮೈದಾನ ಹಾಳು ಮಾಡುವುದು ಬೇಡ.  ಹಾಗೆ ಮಾಡಿದರೆ ಕೋರ್ಟಿಗೆ ಹೋಗುವುದಾಗಿ ಹೇಳಿದರು.

ಕೆಎಸ್‌ಆರ್‌ಟಿಸಿ ಅಸ್ಪೃಶ್ಯವೇ? ಎಂದು ಪ್ರಶ್ನಿಸಿದ ಸಿದ್ದೇಶ್ವರ, ಜನರಿಗೆ ಅನುಕೂಲವಾಗುವ ಸ್ಥಳ ಇದಾಗಿದೆ. ತಾತ್ಕಾಲಿಕವಾಗಿ ಒಂದೆರಡು ವರ್ಷಗಳವರೆಗೆ ಮಾತ್ರ ಇರಲಿದೆ ಎಂದರು. ಇದಕ್ಕೆ ದನಿಗೂಡಿಸಿದ ಜಿಲ್ಲಾಧಿಕಾರಿ ಮಹಂತೇಶ್ ಬೀಳಗಿ, ಹೈಸ್ಕೂಲ್ ಮೈದಾನ ತನ್ನ ಮೂಲ ಸ್ವರೂಪ ಬದಲಿಸಿಕೊಂಡಿದೆ. ಅದರ ಉದ್ದೇಶವೂ ಈಗ ಬದಲಾಗಿದೆ ಎಂದು ಹೇಳಿದರು.