September 18, 2019

ಯೋಗ ಇಂದಿನ ಅಗತ್ಯ ಹಾಗೂ ಮುಂದಿನ ಅನಿವಾರ್ಯ

– ಕೆ.ಎನ್. ಮಲ್ಲಿಕಾರ್ಜುನ

‘ಯೋಗ’ ಕುರಿತು ಪಂಚಮಸಾಲಿ ಜಗದ್ಗುರು ಶ್ರೀ ವಚನಾನಂದ ಸ್ವಾಮೀಜಿ ಅವರ ಮತ್ತಷ್ಟು ಮಾತುಗಳು ..

ಶ್ವಾಸಗುರು ಎಂದೇ ಖ್ಯಾತರಾಗಿರುವ ಹರಿಹರ ಪಂಚಮಸಾಲಿ ಪೀಠದ ಜಗದ್ಗುರು ಶ್ರೀ ವಚನಾನಂದ ಸ್ವಾಮೀಜಿ ಅವರು ಈ ಬಾರಿಯ ವಿಶ್ವ ಯೋಗ ದಿನಾಚರಣೆಯನ್ನು ವಿಶೇಷವಾಗಿ ಆಚರಿಸಲು ಸಿದ್ಧತೆ ನಡೆಸಿದ್ದಾರೆ. ಶ್ರೀಮಠದಲ್ಲಿ ಯೋಗ ದಿನಾಚರಣೆ ಕಾರ್ಯಕ್ರಮಗಳ ಬಗ್ಗೆ ಹಾಗೂ ಯೋಗ ಬೆಳೆದು ಬಂದ ಹಾದಿ, ಯೋಗದ ಮಹತ್ವ, ವಿದೇಶದಲ್ಲಿ ಯೋಗಕ್ಕಿರುವ ಬೆಲೆ, ಸೇರಿದಂತೆ ಅನೇಕ ವಿಚಾರಗಳನ್ನು  ಶ್ರೀಗಳು `ಜನತಾವಾಣಿ’ ಯೊಂದಿಗೆ  ಹಂಚಿಕೊಂಡರು. ನಮ್ಮ ಹಲವಾರು ಪ್ರಶ್ನೆಗಳಿಗೂ ಸಮಚಿತ್ತದಿಂದಲೇ ಉತ್ತರಿಸಿದರು.

ಯೋಗ ಬ್ರಾಂಡ್ ಆಗಿದೆ. ಇಲ್ಲಿವರೆಗೆ ಜಿಮ್, ಕ್ಲಬ್, ಫಿಟ್​ನೆಸ್ ಸೆಂಟರ್​ಗಳಿದ್ದವು. ಈಗ ಇವುಗಳಲ್ಲಿ `ಯೋಗ’ ಕಡ್ಡಾಯವಾಗಿ ಸೇರಿಸಿಕೊಳ್ಳುತ್ತಿದ್ದರೆ.  ಅದು ಇಂದಿನ ಅಗತ್ಯ ಹಾಗೂ ನಾಳಿನ ಅನಿವಾರ್ಯವೂ ಹೌದು ಎಂದು ಶ್ರೀ ವಚನಾನಂದ ಸ್ವಾಮೀಜಿ ಹೇಳಿದ್ದಾರೆ.

ಒಂದು ಕಾಲದಲ್ಲಿ ಯೋಗ ಕೆಲವೇ ಸಂತರಿಗೆ ಮಾತ್ರ ಎಂಬಂತಿತ್ತು. ಯೋಗದ ಲಾಭಕ್ಕಿಂತಲೂ ಅದರ ಭಯ ಹೆಚ್ಚಾಗಿತ್ತು. ತಪ್ಪು ಮಾಡಿದರೆ ತೊಂದರೆಯಾಗುತ್ತದೆ ಎಂಬ ಭಯವೂ ಇತ್ತು. ಆದರೆ ಕಳೆದ 25 ವರ್ಷದಲ್ಲಿ ಜಾಗತಿಕವಾಗಿ ಯೋಗ ಬಹಳಷ್ಟು ಬೆಳೆದಿದೆ. 172 ರಾಷ್ಟ್ರಗಳು ಅಂತರಾಷ್ಟ್ರೀಯ ಯೋಗ ದಿನಾಚರಣೆ ಆಚರಿಸಲು ಸಾಧ್ಯವಾಗಿದೆ. ವಿಶ್ವ ಸಂಸ್ಥೆ ಯೋಗ ದಿನಾಚರಣೆಯ ನಿರ್ಣಯ ಮಾಡುವುದು ಅಷ್ಟು ಸುಲಭವಲ್ಲ ಎಂದರು.

ಯೋಗವಿದ್ದರೆ ಒತ್ತಡ ಇನ್ನೆಲ್ಲಿ? : ನಿತ್ಯದ ಜೀವನದಲ್ಲಿ ನೋವು, ದುಃಖ, ದುಮ್ಮಾನಗಳಿಗೆ ಜನತೆ ಬೇಸತ್ತಿದೆ. ಒತ್ತಡ ನಿವಾರಣೆಗೆ ಮದ್ಯಪಾನ, ಧೂಮಪಾನದ ಮೊರೆ ಹೋಗುತ್ತಿದ್ದಾರೆ.  ಆದರೆ ಅದು ತಾತ್ಕಾಲಿಕ. ಯೋಗವನ್ನು ಕಲಿಯಲು ಆರಂಭಿಸಿದವರಿಗೆ ಒತ್ತಡ ದೇಹ ಪ್ರವೇಶಿಸುವುದೇ ಇಲ್ಲ. ಅದಕ್ಕೆ ಉತ್ತಮ ಉದಾಹರಣೆ ನರೇಂದ್ರ ಮೋದಿಯವರು.  ಅವರು ದೇಶವನ್ನು ಮುನ್ನಡೆಸಿದ ರೀತಿ. ವಿಶ್ವವೇ ಅವರತ್ತ ಗಮನ ಕೊಡುತ್ತಿರುವುದಕ್ಕೆ ಯೋಗವೇ ಕಾರಣ ಎನ್ನಬಹುದು ಎನ್ನುತ್ತಾರೆ ವಚನಾನಂದ ಶ್ರೀಗಳು.

ಇಂದಿಗೂ ಯಾವುದೇ ಪ್ರಾಣಿ ಬಿಪಿ, ಶುಗರ್, ಕ್ಯಾನ್ಸರ್, ಒತ್ತಡ ಹೀಗೆ ಬೇರೆ ಕಾರಣಗಳಿಂದಾಗಿ ಸಾವನ್ನಪ್ಪಿದ್ದು ನಾವು ನೋಡಿಲ್ಲ. ಅವು ನೈಸರ್ಗಿಕವಾಗಿಯೇ ಸಾವನ್ನಪ್ಪುತ್ತವೆ. ಕಾರಣ ಅವು ಸಮತೋಲಿತ ಆಹಾರ-ವಿಹಾರ, ಜೀವನ ಶೈಲಿ ಮೂಲಕ ಆರೋಗ್ಯವನ್ನು ಉತ್ತಮವಾಗಿಟ್ಟುಕೊಳ್ಳುತ್ತವೆ. ಇದೇ ವಿಷಯ ಯೋಗಿಗಳಿಗೆ ಸಂಶೋಧನಾ ವಸ್ತುವಾಯಿತು.

ನಿಸರ್ಗದ ನಡುವೆ ಇದ್ದ ಯೋಗಿಗಳು, ಋಷಿ ಮುನಿಗಳು ಪ್ರಾಣಿ, ಪಕ್ಷಿಗಳನ್ನು ಗಮನಿಸುತ್ತಿದ್ದರು. ಉದಾಹರಣೆಗೆ ನಾಯಿ ಅಥವಾ ಬೆಕ್ಕು ನಿದ್ರೆಯಿಂದ ಎದ್ದೇಳುವಾಗ ದೇಹವನ್ನು ಸ್ಟ್ರೆಚ್ ಮಾಡಿ ಏಳುತ್ತವೆ. ಅದನ್ನೇ ನಾವು ಅಧೋಮುಖ ಶ್ವಾನಾಸನ, ಅಥವಾ ಊರ್ಧ್ವ ಮುಖ ಶ್ವಾನಾಸನ. ಹೀಗೆ ಹಾವು, ಮೊಲ ಸೇರಿದಂತೆ ಪ್ರತಿ ಪ್ರಾಣಿಯನ್ನು ಗಮನಿಸುತ್ತಾ ಬಂದರು. ಆ ಪ್ರಾಣಿಗಳ ಆಸನಗಳನ್ನೇ ಅವರೂ ಅಳವಡಿಸಿಕೊಳ್ಳಲು ಆರಂಭಿಸಿದರು.

ರೋಗ ಬಂದರೆ ಮನುಷ್ಯ ಔಷಧ ತೆಗೆದುಕೊಳ್ಳುತ್ತಾನೆ. ಆದರೆ ಔಷದ ರೋಗವನ್ನು ಹತ್ತಿಕ್ಕುತ್ತದೆಯಷ್ಟೇ. ಆದರೆ ಪ್ರಾಣಿಗಳು ಜ್ವರ ಬಂದರೆ ವಾಂತಿ ಮೂಲಕ ವಿಷವನ್ನು  ಹೊರ ಹಾಕುತ್ತದೆ. ಹಾಗಾಗಿ ಅವುಗಳು ಆರೋಗ್ಯವಾಗಿರುತ್ತವೆ.  ಈ ರೀತಿ ದೇಹದಲ್ಲಿ ವಿಷವನ್ನು ಹೊರ ಹಾಕುವುದನ್ನು. ಕುಂಜಲ ಕ್ರಿಯೆ, ಭಾಗಿ ಕ್ರಿಯೆ ಎಂದು ಕರೆಯಲಾಯಿತು.

ಯೋಗ ಕಲಿಸಲು ಗಂಟೆಗೆ 6 ಸಾವಿರ ರೂ.:  ಹೌದು, ಅಮೇರಿಕಾದಲ್ಲಿ ಕನಿಷ್ಟ 5 ಕೋಟಿ ಜನ ಯೋಗ ಕಲಿಯುತ್ತಿದ್ದಾರೆ. ಸುಮಾರು 25 ಲಕ್ಷ ಜನರು ಯೋಗವನ್ನು ತಮ್ಮ ಉದ್ಯೋಗವನ್ನಾಗಿ ಮಾಡಿಕೊಂಡಿದ್ದಾರೆ. ಚೀನಾ ದೇಶದಲ್ಲಿ 14 ಸಾವಿರ ಜನ ಭಾರತೀಯ ಯೋಗ ಶಿಕ್ಷಕರಿದ್ದಾರೆ. ಇವರೆಲ್ಲಾ ಯೋಗ ಹೇಳಿಕೊಡಲು ಒಬ್ಬರಿಗೆ ಪ್ರತಿ ತಿಂಗಳು 1.5 ಲಕ್ಷ ಶುಲ್ಕ ಪಡೆಯುತ್ತಿದ್ದಾರೆ ಎಂಬ ವಿಷಯವನ್ನು ವಚನಾನಂದ ಶ್ರೀಗಳು ಹೇಳಿದರು.

ಅಮೇರಿಕಾ ಹಾಗೂ ಆಸ್ಟ್ರೇಲಿಯಾದಲ್ಲಿ 1 ತಾಸಿನ ಯೋಗ ತರಗತಿಗೆ ಒಬ್ಬ ವ್ಯಕ್ತಿಗೆ 6 ಸಾವಿರ ರೂ. ಶುಲ್ಕವಿದೆ. ಅದರಲ್ಲೂ ಅತ್ಯುತ್ತಮವಾಗಿ ಯೋಗ ಹೇಳಿಕೊಡುವುರಿಗೆ ಇನ್ನೂ ಹೆಚ್ಚಿನ ದರ ವಿದೆ.

ವಿದೇಶದಲ್ಲಿ ಆಸ್ಪತ್ರೆಗೆ ಹಣ ಖರ್ಚು ಮಾಡುವ ಬದಲು ಯೋಗ ಕಲಿಯಲು ಖರ್ಚು ಮಾಡಿದರೆ, ಯಾವುದೇ ರೋಗ ಬರುವುದಿಲ್ಲ ಎಂಬುದನ್ನು ಅರಿತಿದ್ದಾರೆ. ಆದ್ದಲಿಂದಲೇ ಅವರು ಯೋಗಕ್ಕೆ ಹೆಚ್ಚಿನ ಹಣ ವ್ಯಯ ಮಾಡಲು ಯೋಚಿಸುವುದೇ ಇಲ್ಲ.

ಆದ್ದರಿಂದಲೇ ಪ್ರತಿ ಐಟಿ ಕಂಪನಿಯಲ್ಲೂ ಯೋಗ ಹಾಲ್​ಗಳಿವೆ. ಇಲ್ಲಿವರೆಗೆ ವಿಮಾನ ನಿಲ್ದಾಣಗಳಲ್ಲಿ ಕೇವಲ ಪ್ರಾರ್ಥನಾ ಮಂದಿರಗಳಿದ್ದವು. ಮೊದಲ ಬಾರಿಗೆ ಸ್ಯಾನ್​ಫ್ರಾನ್ಸಿಸ್ಕೋದಲ್ಲಿ ಯೋಗ ಧ್ಯಾನ ಮಂದಿರ ನಿರ್ಮಿಸಲಾಗಿದೆ.

ಸರ್ಕಾರವೇ ಯೋಗ ಸರ್ಟಿಫಿಕೇಟ್ ನೀಡಬೇಕು: ಒಬ್ಬ ಉತ್ತಮ ಯೋಗ ಶಿಕ್ಷಕನಾಗಬೇಕಾದರೆ ಕನಿಷ್ಟ 1 ವರ್ಷ ಕಲಿಯಬೇಕು. ಇತ್ತೀಚೆಗೆ ನಕಲಿ ಯೋಗ ಶಿಕ್ಷಕರ ಸಂಖ್ಯೆ ಹೆಚ್ಚುತ್ತಿದೆ. ಈದಕ್ಕೆ ಕಡಿವಾಣ ಹಾಕುವ ಅಗತ್ಯವಿದೆ.  ಟಿವಿ ನೋಡಿ, ಪುಸ್ತಕ ಓದಿ ಕೇವಲ ಒಂದು ತಿಂಗಳಲ್ಲಿಯೇ ಶಿಕ್ಷಕ ಎಂದು ಸ್ವಯಂ ಘೋಷಿಸಿಕೊಳ್ಳುವವರು ಹೆಚ್ಚಾಗಿದ್ದಾರೆ. ಇವರಿಗೆ  ಪತಂಜಲಿ ಬಗ್ಗೆ, ಯೋಗ ಸೂತ್ರದ ಬಗ್ಗೆ ಅರಿವೇ ಇರುವುದಿಲ್ಲ. 

ಅಮೇರಿಕಾದಲ್ಲಿ ಯೋಗ ಅಲಯನ್ಸ್ ಎಂಬ ಸಂಸ್ಥೆ ಇದೆ. ಯೋಗ ಶಿಕ್ಷಕನಾಗಬೇಕಾದರೆ ಅಲ್ಲಿ ನಿರ್ದಿಷ್ಟ ತರಬೇತಿ ಪಡೆದು ಉತ್ತೀರ್ಣರಾಗಬೇಕು. 200 ತಾಸು ಯೋಗ ಕಲಿತು 300 ಗಂಟೆ ತರಬೇತಿ ನೀಡಬೇಕು. ಇದನ್ನು ಮಾಡಲು 1 ವರ್ಷವಾದರೂ ಬೇಕು. ಆದಾದ ಮೇಲೆ ಅವರಿಗೆ ಪ್ರಮಾಣ ಪತ್ರ ನೀಡಲಾಗುತ್ತದೆ. ನಕಲಿ ಯೋಗ ಶಿಕ್ಷಕರಾದರೆ ಜೈಲಿಗೆ ಕಳುಹಿಸಲಾಗುತ್ತದೆ.

ಇಂತಹ ಕೆಲಸ ನಮ್ಮ ದೇಶದಲ್ಲೂ ಆಗಬೇಕು. ದೆಹಲಿಯಲಲ್ಲಿ ಭಾರತ ಸರ್ಕಾರವು ಆಯುಷ್ ಇಲಾಖೆಯ ಕ್ವಾಲಿಟಿ ಕೌನ್ಸಿಲ್ ಆಫ್ ಇಂಡಿಯಾ ಸಂಸ್ಥೆಯಡಿ ಯೋಗ ಎಂದರೆ ಹೀಗೆಯೇ ಇರಬೇಕು ಎಂಬ ನಿಯಮ ರೂಪಿಸಿದೆ. ಇದು ದೇಶದೆಲ್ಲೆಡೆ ವ್ಯಾಪಿಸಬೇಕು. ಯೋಗ ಶಿಕ್ಷಕರಿಗೆ, ಯೋಗ ತರಬೇತಿ ಶಾಲೆಗೆ ಸರ್ಕಾರವೇ ಪ್ರಮಾಣ ಪತ್ರ ನೀಡುವಂತಾಗಬೇಕು. ಆಗ ಗುಣಮಟ್ಟದ ಯೋಗ ಕಲಿಸಲು ಸಾಧ್ಯವಾಗುತ್ತದೆ. ಇಲ್ಲದಿದ್ದರೆ ಯೋಗಕ್ಕೆ ಬೆಲೆ ಇರುವುದಿಲ್ಲ ಎನ್ನುತ್ತಾರೆ ಪಂಚಮಸಾಲಿ ಶ್ರೀಗಳು.

ಯೋಗವೇ ಬಂಡವಾಳವಾದರೆ ತಪ್ಪೇನು? :  ಯೋಗ ಉಚಿತವಾಗಿ ಸಿಕ್ಕರೆ ಅದಕ್ಕೆ ಬೆಲೆ ಇರುವುದಿಲ್ಲ.  ಬಂಡವಾಳ ಮಾಡಿಕೊಂಡು ಹಣ ಮಾಡಿ ಕೊಂಡರೇ ತಪ್ಪೇನಿಲ್ಲ.  ನಾವೂ ಸಹ ಮೊದಲು ಉಚಿತ ಯೋಗ ಕ್ಯಾಂಪ್ ಮಾಡಿದ್ದೆವು. ಈಗಲೂ ಪ್ರಾಯೋಜಕರಿದ್ದರೆ ಸಾರ್ವಜನಿಕವಾಗಿ ಉಚಿತವಾಗಿ ಯೋಗ ತರಗತಿ ನಡೆಸುತ್ತೇವೆ. ಆದರೆ ಮಠದಲ್ಲಿ  ತರಗತಿ ನಡೆಸಿದಾಗ ವಸತಿ, ಊಟ ತರಬೇತಿಗೆ ಶುಲ್ಕ ವಿಧಿಸುತ್ತೇವೆ. ಸಧ್ಯ ಮಠದಲ್ಲಿ ವಿದೇಶಿಯರೂ ಹಾಗೂ ಭಾರತೀಯರು ಸೇರಿ ಒಟ್ಟು 5 ಬ್ಯಾಚುಗಳಲ್ಲಿ ತರಗತಿ ನಡೆಸಲಾಗುತ್ತಿದೆ ಎಂದು ಸ್ವಾಮೀಜಿ ಹೇಳಿದರು.

`ಹಠ ಯೋಗ’ ಎಂದರೇನು ಗೊತ್ತೇ? 

ಸೂರ್ಯ ನಾಡಿ ಹಾಗೂ ಚಂದ್ರನಾಡಿ ಗಳನ್ನು ಸಮಾನಗೊಳಿಸುವುದೇ ಹಠ ಯೋಗ. ಇವೆರಡೂ ಸಮತೋಲನ ವಾದರೆ `ಸುಷುಮ್ನ ನಾಡಿ’ ಕ್ರೀಯಾಶೀಲವಾಗುತ್ತದೆ. ಹಠಯೋಗ, ರಾಜಯೋಗ, ಭಕ್ತಿ ಯೋಗ, ನಾದ  ಯೋಗ ಹೀಗೆ ಎಲ್ಲಾ ಯೋಗಗಳ ಮೂಲ ಉದ್ದೇಶ  ಸುಷುಮ್ನನಾಡಿಯನ್ನು ಜಾಗೃತಗೊಳಿಸುವುದೇ ಆಗಿದೆ. ಇದನ್ನು ಕುಂಡಲಿ ಯೋಗ ಎಂದೂ ಕರೆಯಲಾಗುತ್ತದೆ. ಆದರೆ ಅನೇಕರು ಹಠ ಎಂದರೆ ಒತ್ತಾಯ ಮಾಡುವುದು ಎಂದು ಭಾವಿಸಿದ್ದಾರೆ. ಇದು ತಪ್ಪು.

ನಮ್ಮ ಎರಡೂ ನಾಸಿಕಗಳು ಯಾವುತ್ತೂ ಸಮಾನವಾಗಿರುವುದಿಲ್ಲ. ಇದರಿಂದಲೇ ಮನುಷ್ಯನಿಗೆ ರೋಗಗಳು ಬರುತ್ತವೆ. `ಹ; ಅಂದ್ರೆ ಸೂರ್ಯ ನಾಡಿ , `ಠ’ ಎಂದರೆ ಚಂದ್ರ ನಾಡಿ.  ಇವೆರಡನ್ನೂ ಸಮಾ ನಗೊಳಿಸಿದ್ದೇ ಆದರೆ ರೋಗ ಗಳಿಂದ ಮುಕ್ತಿ ಪಡೆಯಲು ಸಾಧ್ಯ. ಯೋಗಿಗಳು ಶ್ವಾಸದ ಮೂಲಕವೇ ಆರೋಗ್ಯ ಪರೀಕ್ಷಿಸುತ್ತಾರೆ. ಅಲ್ಲದೇ ಮನುಷ್ಯನ ಆಯುಷ್ಯವೂ ತಿಳಿದುಕೊಳ್ಳುತ್ತಾರೆ.

ಯೋಗ  ಸಿಕ್ಸ್ ಪ್ಯಾಕ್ :  ಯೋಗದಲ್ಲಿ 84 ಲಕ್ಷ​ ಆಸನಗಳು ಯೋಗದಲ್ಲಿವೆ. ಯುವಕರು ಅಪೇಕ್ಷಿಸುವ ಸಿಕ್ಸ್  ಪ್ಯಾಕ್ ಯೋಗದಿಂದಲೂ ಸಾಧ್ಯವಿದೆ ಎಂದು ಶ್ರೀಗಳು ನುಡಿದರು.

ಜೂ. 21 ವಿಶ್ವ ಯೋಗ ದಿನ ಅಂದು ಸಂಜೆ ಹರಿಹರ ಪಂಚಮಸಾಲಿ ಪೀಠದಲ್ಲಿ ವಿಶೇಷ ಕಾರ್ಯಕ್ರಮಗಳು:  ಬೆಂಗಳೂರಿನ ಶ್ವಾಸ ಯೋಗ ಸಂಸ್ಥೆ ಹಾಗೂ ಹರಿಹರದ ಪಂಚಮಸಾಲಿ ಜಗದ್ಗುರು ಪೀಠದ ವತಿಯಿಂದ ಐದನೇ ಅಂತರಾಷ್ಟ್ರೀಯರ ಯೋಗ ದಿನಾಚರಣೆ ಹಾಗೂ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ  ಹರಿಹರ ಪಂಚಮಸಾಲಿ ಜಗದ್ಗುರು ಪೀಠದಲ್ಲಿ `ಮಹಾ ಯೋಗಿಗಳ ಮಹಾ  ಸಂಗಮ’ ಮತ್ತು `ಯೋಗ ದೀಪ ಯಜ್ಞ’ ಎಂಬ ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ಕಾರ್ಯಕ್ರಮದ ವಿಶೇಷತೆಯಾಗಿ ಪಶ್ಚಿಮ ಬಂಗಾಳದ 123 ವಯಸ್ಸಿನ ಜಗತ್ತಿನ ಹಿರಿಯ ಮಹಾಯೋಗಿ ಸ್ವಾಮಿ ಶಿವಾನಂದಜೀ ಆಗಮಿಸಲಿದ್ದಾರೆ. ಅತಿ ಹಿರಿಯರೂ, ಉತ್ತಮ ಆರೋಗ್ಯ ಹೊಂದಿದ ಇವರು, ಇದೇ ಪ್ರಥಮ ಬಾರಿಗೆ ಕರ್ನಾಟಕಕ್ಕೆ ಆಗಮಿಸಲಿದ್ದಾರೆ.

ಲಕ್ಷಾಂತರ ಯೋಗ ಗುರುಗಳನ್ನು ತಯಾರಿಸಿರುವ ಇವರು, ಅವರ ಆಹಾರದ ಗುಟ್ಟು, ಆರೋಗ್ಯ ಹಾಗೂ ಯೋಗದ ಬಗ್ಗೆ  ಮಾತನಾಡಲಿದ್ದಾರೆ.

ಇವರಲ್ಲದೇ, ಸೌದಿ ಅರೇಬಿಯಾದ ಪದ್ಮಶ್ರೀ ಪುರಸ್ಕೃತ ಯೋಗಿನಿ ನೋಪ್ ಮಾರವಾಯಿ,   ಉಡುಪಿಯ ಪೇಜಾವರಮಠದ ಶ್ರೀ ವಿಶ್ವೇಶ್ವರತೀರ್ಥ ಸ್ವಾಮೀಜಿ, ಸ್ಪೇನ್ ದೇಶದ ಖ್ಯಾತ ನಟಿ ಹಾಗೂ ಯೋಗಿನಿ ಪಾವೊಲಾ ಅಲೆಜಾಂದ್ರ ರಿಯೋಸ್, ಅರ್ಜೇಂಟಿನಾದ ಮಹಾಯೋಗಿ ಜಾರ್ಜ್ ಬಿದಾಂದೋ, ಮಹಾರಾಷ್ಟ್ರರ ಕುಷ್ಠರೋಗಿಗಳ ಸೇವೆ ಸಲ್ಲಿಸುತ್ತಿರುವ ಬಾಬಾ ಆಮ್ಟೆಯವರ ಮಗನಾದ ಡಾ.ವಿಕಾಸ ಆಮ್ಟೆ, ಪದ್ಮಶ್ರೀ ಪುರಸ್ಕೃತ,ಕನ್ನಡದ ಕಬೀರ-ಇಬ್ರಾಹಿಂ ಸುತಾರ್, ಇಳಕಲ್ ವಿಜಯಮಹಾಂತೇಶ್ವರಮಠದ ಶ್ರೀ ಗುರುಮಹಾಂತ ಮಹಾಸ್ವಾಮಿಗಳು, ಆದಿಚುಂಚನಗಿರಿಮಠದ ಆಡಳಿತಾಧಿಕಾರಿ ಶ್ರೀರಾಮಕೃಷ್ಣೇ ಗೌಡರು, ಮಂಗಳೂರಿನ ಶ್ರೀರಾಮಕೃಷ್ಣ ಆಶ್ರಮದ ಸ್ವಾಮಿ ಏಕಗಮ್ಮಾನಂದಜೀ, ಶಿರೂರಿನ ಯೋಗ ಮತ್ತು ನಿಸರ್ಗ ಚಿಕಿತ್ಸಾ ಕೇಂದ್ರದ  ಡಾ.ಶ್ರೀ ಬಸವಲಿಂಗ ಮಹಾಸ್ವಾಮಿಗಳು ಆಗಮಿಸಲಿದ್ದಾರೆ.

Please follow and like us: