August 17, 2019

ಮೊಘಲರು ಬರೆದುಕೊಂಡಿದ್ದೇ ಇತಿಹಾಸವಲ್ಲ

ದಾವಣಗೆರೆ ವಿವಿಯಲ್ಲಿನ ವಿಚಾರ ಸಂಕಿರಣದಲ್ಲಿ ನಿವೃತ್ತ ಐ.ಜಿ.ಪಿ. ಶಂಕರ್ ಬಿದರಿ

ದಾವಣಗೆರೆ : ಭಾರತದ ಮಧ್ಯಕಾಲೀನ ಇತಿಹಾಸವನ್ನು ಮೊಘಲ ರನ್ನೇ ಕೇಂದ್ರೀಕೃತವಾಗಿಟ್ಟುಕೊಂಡು ರಚಿಸಲಾಗಿದೆ. ಆದರೆ, ಇದೇ ಅವಧಿಯಲ್ಲಿ ಆಡಳಿತ ನಡೆಸಿದ್ದ ಅಸ್ಸಾಂನ ಅಹೋಮ್, ಬಹಮನಿ, ವಿಜಯನಗರಗಂತಹ ಬೃಹತ್ ಸಾಮ್ರಾಜ್ಯನಗಳನ್ನು ಕಡೆಗಣಿಸಲಾಗಿದೆ ಎಂದು ನಿವೃತ್ತ ಐ.ಜಿ.ಪಿ. ಶಂಕರ್ ಬಿದರಿ ವಿಷಾದಿಸಿದ್ದಾರೆ.

ದಾವಣಗೆರೆ ವಿಶ್ವವಿದ್ಯಾನಿಲಯದಲ್ಲಿ ಆಯೋಜಿಸಲಾಗಿದ್ದ ಎರಡು ದಿನಗಳ `ಭಾರತೀಯ ಇತಿಹಾಸ ಹಾಗೂ ಇತಿಹಾಸ ರಚನಾ ಶಾಸ್ತ್ರ : ಇತಿಹಾಸ ಪುನರ್‌ರಚನೆಯಲ್ಲಿರುವ ಸವಾಲುಗಳು’ ಎಂಬ ವಿಷಯ ಕುರಿತ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.

ಅಕ್ಬರ್ ನಾಮಾ, ಜಹಾಂಗೀರ್ ನಾಮಾ,  ಬಾಬರ್‌ನಾಮಾಗಳಂತಹ ಕೃತಿ ಗಳಲ್ಲಿ ಬರೆದಿರುವುದು, ಪರ್ಷಿಯನ್ ಬರಹಗಾರರನ್ನೇ ಆಧಾರವಾಗಿಟ್ಟುಕೊಂಡು ಮಧ್ಯಕಾಲೀನ ಇತಿಹಾಸವನ್ನು ಬರೆಯ ಲಾಗಿದೆ. ಮುಘಲರು ಹಾಗೂ ಗುಲಾಮಿ ಸಂತತಿ ದೆಹಲಿಯಲ್ಲಿ ನಡೆಸಿದ ಆಡಳಿತ ವನ್ನೇ ಪ್ರಮುಖವಾಗಿ ಬಿಂಬಿಸಿ ದಕ್ಷಿಣ ಹಾಗೂ ಪೂರ್ವದ ಸಾಮ್ರಾಜ್ಯಗಳು ಮಾಡಿದ ಸಾಧನೆಯನ್ನು ಮರೆಮಾಚ ಲಾಗಿದೆ ಎಂದವರು ಹೇಳಿದ್ದಾರೆ.

ಮೊದಲ ಸ್ವಾತಂತ್ರ್ಯ ಹೋರಾಟ ಕೇವಲ ರಾಜರ ಸಂಘರ್ಷ

1857ರ ಸಿಪಾಯಿ ದಂಗೆಯನ್ನು ಮೊದಲ ಸ್ವಾತಂತ್ರ್ಯ ಹೋರಾಟ ಎಂದೂ ಬಣ್ಣಿಸಲಾಗುತ್ತದೆ. ಆದರೆ, ಆಗ ರಾಷ್ಟ್ರೀಯತೆಯ ಕಲ್ಪನೆಯೇ ಇರಲಿಲ್ಲ. ರಾಜರು ತಮ್ಮ ಹಿತಗಳಿಗೆ ಧಕ್ಕೆಯಾದಾಗ ಸಂಘರ್ಷ ನಡೆಸಿದ್ದರು ಎಂದು ಮಾಜಿ ಐ.ಜಿ.ಪಿ. ಶಂಕರ್ ಬಿದರಿ ಹೇಳಿದ್ದಾರೆ.

ದತ್ತು ಮಕ್ಕಳಿಗೆ ಹಕ್ಕಿಲ್ಲ ಎಂಬ ನಿಯಮವನ್ನು ಬ್ರಿಟಿಷರು ಹೇರದೇ ಹೋಗಿದ್ದರೆ ರಾಣಿ ಲಕ್ಷ್ಮಿಬಾಯಿ ಬಂಡಾಯ ಏಳುತ್ತಿರಲಿಲ್ಲ. ಅವಧ್ ರಾಜಕುಮಾರನ ಜೊತೆ ಬ್ರಿಟಿಷರು ಉದಾರವಾಗಿ ನಡೆದುಕೊಂಡಿದ್ದರೆ ಅವರು ತಿರುಗಿ ಬೀಳುತ್ತಿರಲಿಲ್ಲ. ಕಿತ್ತೂರ ಚೆನ್ನಮ್ಮ ಅವರು ಶಿವಲಿಂಗಪ್ಪನನ್ನು ದತ್ತು ತೆಗೆದುಕೊಂಡಿದ್ದಕ್ಕೆ ಥ್ಯಾಕರೆ ಮಾನ್ಯತೆ ನೀಡಿದ್ದರೆ ಹೋರಾಟ ನಡೆಯುತ್ತಿರಲಿಲ್ಲ. ಇವರೆಲ್ಲರ ಹೋರಾಟಗಳು ರಾಷ್ಟ್ರೀಯತೆಯ ಸ್ವರೂಪ ಹೊಂದಿಲ್ಲ ಎಂದು ಬಿದರಿ ತಿಳಿಸಿದರು.

ಈ ಬಗ್ಗೆ ಪ್ರಾಮಾಣಿಕವಾಗಿ ಯೋಚಿಸಬೇಕಿದೆ ಮತ್ತು ಸತ್ಯವನ್ನು ಒಪ್ಪಿಕೊಳ್ಳಬೇಕಿದೆ. ರಾಷ್ಟ್ರೀಯತೆ ಇತ್ತೀಚಿನ 170 ವರ್ಷಗಳ ಬೆಳವಣಿಗೆ. ಕಳೆದ 80 ವರ್ಷಗಳಲ್ಲಿ ಭಾರತ ರೂಪುಗೊಂಡು ಮತ್ತಷ್ಟು ರಾಷ್ಟ್ರೀಯತೆ ಬಲವಾಗಿದೆ ಎಂದವರು ಹೇಳಿದರು.

ಮುಘಲರ ಆಡಳಿತ ಇದ್ದ ಕಾಲದಲ್ಲೇ ಅಸ್ಸಾಂನಲ್ಲಿ ಅಹೋಮ್ ರಾಜಮನೆತನ ಸುದೀರ್ಘ ಆಡಳಿತ ನಡೆಸಿತ್ತು. ಬಹಮನಿ ಸಾಮ್ರಾಟರು 330 ವರ್ಷಗಳ ಕಾಲ ಪೂರ್ವದಿಂದ ಹಿಡಿದು ಪಶ್ಚಿಮ ಕರಾವಳಿಯವರೆಗೆ ಆಡಳಿತ ಹೊಂದಿದ್ದರು. ಚೋಳ ವಂಶಜರು ವಿಶ್ವದ ಹಲವಾರು ದೇಶಗಳ ಜೊತೆ ವ್ಯಾಪಾರಿ ಸಂಪರ್ಕ ಹೊಂದಿದ್ದರು. ವಿಜಯನಗರ ಸಾಮ್ರಾಟರು 229 ವರ್ಷಗಳ ಕಾಲ ಸಂಪೂರ್ಣ ದಕ್ಷಿಣ ಭಾರತದಲ್ಲಿ ಆಡಳಿತ ನಡೆಸಿದ್ದರು. ಶತಮಾನಗಟ್ಟಲೆ ಚೇರರ ಆಡಳಿತ ಅಬಾಧಿತವಾಗಿತ್ತು ಎಂದವರು ಹೇಳಿದರು.

ಆದರೆ, ಮೊಘಲರ ಆಡಳಿತದ ಬಗ್ಗೆ ಸುದೀರ್ಘವಾಗಿ ಬರೆದಿರುವ ಇತಿಹಾಸಕಾ ರರು, ಉಳಿದ ಸಾಮ್ರಾಜ್ಯಗಳ ಬಗ್ಗೆ ಒಂದೆ ರಡು ಪುಟಗಳಲ್ಲೇ ಮಾತುಗಳನ್ನು ಮುಗಿಸಿ ಬಿಡುತ್ತಾರೆ ಎಂದು ವಿಷಾದಿಸಿದರು.

ಭಾರತದ ಮಧ್ಯಕಾಲೀನ ಇತಿಹಾಸ ಎಂದರೆ ಕೇವಲ ಮುಘಲರು ಇಲ್ಲವೇ ಗುಲಾಮಿ ಸಂತತಿಯವರಿಗೆ ಸೀಮಿತವಲ್ಲ. ಉಳಿದ ಎಲ್ಲ ಸಾಮ್ರಾಜ್ಯಗಳಿಗೂ ಸೂಕ್ತ ರೀತಿಯ ಪ್ರಾಮುಖ್ಯತೆ ನೀಡಬೇಕಿದೆ. ಇದಕ್ಕಾಗಿ ಇತಿಹಾಸವನ್ನು ಪುನರ್‌ರಚಿಸಬೇಕಿದೆ ಎಂದು ಬಿದರಿ ಹೇಳಿದರು.

ದೆಹಲಿ ಕೇಂದ್ರೀಕೃತ ಇತಿಹಾಸವನ್ನು ರಚಿಸುವಾಗ ಆಗುವ ಲೋಪಕ್ಕೆ ಉದಾಹರಣೆ ನೀಡಿದ ಅವರು, ಶಾಹುಜಿ ಮಹಾರಾಜ್ ತಮ್ಮ ಕಾಲದಲ್ಲಿ ವಿಶ್ವದ ಶೇ.22ರಷ್ಟು ಒಟ್ಟು ಉತ್ಪನ್ನವನ್ನು ತಮ್ಮ ಹಿಡಿತದಲ್ಲಿಟ್ಟುಕೊಂಡಿದ್ದರು. ಆದರೂ, ಅವರನ್ನು ಮುಘಲರ ಅಧೀನರು ಎಂಬಂತೆ ಬಿಂಬಿಸಲಾಗುತ್ತಿದೆ ಎಂದು ಹೇಳಿದರು.

ಕಿತ್ತೂರು ರಾಣಿ ಚೆನ್ನಮ್ಮ, ಮೈಸೂರು ಮಹಾರಾಜರು ಮುಂತಾದವರನ್ನು ನಾವು ಹೆಮ್ಮೆಯಿಂದ ಕಾಣುತ್ತೇವೆ. ಆದರೆ, ಮುಘಲರು ಇವರನ್ನು `ಜಮೀನುದಾರರು’ ಎಂದಷ್ಟೇ ಗುರುತಿಸಿ ಕಡೆಗಣಿಸಿದ್ದಾರೆ. ಇಂತಹ ವ್ಯತ್ಯಾಸಗಳನ್ನು ಇತಿಹಾಸದಲ್ಲಿ ಸರಿಪಡಿಸಬೇಕಿದೆ ಎಂದು ಬಿದರಿ ತಿಳಿಸಿದರು.

Please follow and like us: