ಮತ ನಿಮ್ದು, ಸರ್ಕಾರ ನಮ್ದು

– ಎಸ್.ಎ. ಶ್ರೀನಿವಾಸ್‌

ಕರ್‌’ನಾಟಕ’ದಲ್ಲಿ ಮತದಾರನಿಗಿಲ್ಲ ಪಾತ್ರ

ಕಳೆದ ಒಂದು ವಾರದಿಂದ ನಡೆದ ರಾಜಕೀಯದ ಕರ್`ನಾಟಕ’ ರಾಜಕೀಯದಲ್ಲಿ ಹೊಸ ಪರಿಭಾಷೆಯನ್ನು ಬರೆದಿದೆ. ರೆಸಾರ್ಟ್, ಆಪರೇಷನ್, ರಾಜೀನಾಮೆ ಇತ್ಯಾದಿಗಳಿಗೆ ರಾಜ್ಯ ಮತ್ತೆ ರಾಷ್ಟ್ರದಲ್ಲಿ ಮೇಲ್ಪಂಕ್ತಿ’ ಹಾಕಿಕೊಟ್ಟಿದೆ. ಕರ್ನಾಟಕದ ಮಾದರಿಯನ್ನೇ ಹಿಡಿದು ಬಿಜೆಪಿ ರಾಷ್ಟ್ರ ಮಟ್ಟದಲ್ಲಿ ಆಪರೇಷನ್‌ನಲ್ಲಿ ತೊಡಗಿರುವುದರಿಂದ, ಮುಂದಿನ ದಿನಗಳಲ್ಲಿ ವಿಶ್ವಾಸಮತದ ಮಹಾಪುರಾಣವು ಇನ್ನೊಂದು ಮಾದರಿಯಾಗುವುದರಲ್ಲಿ ಸಂಶಯವೇ ಇಲ್ಲ.

`ಸಂಶಯಾತ್ಮ ವಿನಶ್ಯತಿ’ ಎಂದು ಭಗವದ್‌ಗೀತೆಯಲ್ಲಿ ಹೇಳಿರುವುದರಿಂದ, ಕರ್ನಾಟಕದ ರಾಜಕೀಯ ರಾಷ್ಟ್ರ ರಾಜಕಾರಣದಲ್ಲಿ ಹೊಸ ಹೊಸ ಡಾವು ಪೇಚುಗಳಿಗೆ ದಾರಿ ಮಾಡಿಕೊಡಲಿದೆ ಎಂಬ ಬಗ್ಗೆ ನಾನಂತೂ ಯಾವುದೇ ಅನುಮಾನ ಇಟ್ಟುಕೊಳ್ಳಲು ಬಯಸುವುದಿಲ್ಲ.

ಅರ್ಧ ಡಜನ್ ಬಾರಿ ಸರ್ಕಾರ ಅಲುಗಾಡಿ ಸಲು ಬಿಜೆಪಿ ಪ್ರಯತ್ನ ಪಟ್ಟಿತ್ತು. ಮರಳಿ ಮರಳಿ ಯತ್ನ ಮಾಡು ಎಂಬ ನೀತಿಯನ್ನು ಯಥಾವತ್ತಾಗಿ ಅಳವಡಿಸಿಕೊಂಡ ಬಿಜೆಪಿ, ಇನ್ನೊಮ್ಮೆ ಪ್ರಯತ್ನಪಟ್ಟು ಯಶಸ್ವಿಯಾಗಿದೆ. ಇಂತಹ ಮಹಾನ್ ಸಾಧನೆಯ ಪಾಠವನ್ನು ಮುಂದಿನ ದಿನಗಳಲ್ಲಿ ಪಠ್ಯಗಳಲ್ಲೂ ಅಳವಡಿಸಿದರೆ, ಮುಂದಿನ ಪೀಳಿಗೆಗೆ ಮಹಾನ್ ಸ್ಫೂರ್ತಿಯಾಗುವುದರಲ್ಲಿ ಅನುಮಾನವಿಲ್ಲ.

ಮತ ನಿಮ್ದು, ಸರ್ಕಾರ ನಮ್ದು ಎಂಬ ಅಧಿಕಾರ ವಿಭಜನೆಯನ್ನು ಆಡಳಿತಾರೂಢರು ಮಾಡಿಕೊಂಡಂತಿದೆ. ಹೀಗಾಗಿ ಮಾನ್ಯ ಪ್ರಜೆ ಗಳು ಮತ ಹಾಕಿದ ನಂತರ `ನಮ್ ಸರ್ಕಾರ ಯಾವ್ದು’ ಎಂದು ಆಗಾಗ ಟಿವಿ ನೋಡಿ ಖಚಿತ ಪಡಿಸಿಕೊಳ್ಳಬೇಕಾದ ಸೌಭಾಗ್ಯ ಪ್ರಾಪ್ತವಾಗಿದೆ. `ಒಂದು ಮತ ಒಂದು ಸರ್ಕಾರ’ ಎಂಬ ಚೌಕಾಸಿ ಬುದ್ಧಿ ನಮ್ಮ ರಾಜಕಾರಣಿಗಳದಲ್ಲ ಬಿಡಿ. ಒಂದು ವೋಟಿಗೆ ಹಲವು ಸರ್ಕಾರ ಇಲ್ಲವೇ ಹಲವು ಮುಖ್ಯಮಂತ್ರಿಗಳನ್ನು ನೀಡುವ ಧಾರಾಳ ಗುಣ ಆಗಾಗ ಕಂಡು ಬರುತ್ತದೆ. ಇಂತಹ ಧಾರಾಳತನ ಕರ್‌ನಾಟಕದಲ್ಲಿ ಇನ್ನೂ ನಾಲ್ಕು ವರ್ಷ ಮುಂದುವರೆಯುವ ಸಾಧ್ಯತೆಗಳೂ ಇವೆ.

ಹೀಗೆಯೇ 2018ರಲ್ಲಿ ನಡೆಸಲಾದ ಚುನಾವಣೆಯಲ್ಲಿ ಒಂದಕ್ಕೊಂದು ಫ್ರೀ ಎಂಬಂತೆ, ಕಾಂಗ್ರೆಸ್ – ಜೆಡಿಎಸ್‌ಗಳು ಎರಡು ಪಕ್ಷಗಳು ಮೈತ್ರಿ ಸರ್ಕಾರ ಒದಗಿಸಿದವು. ಸರ್ಕಾರ ಟೇಕಾಫ್ ಆಗುವ ಮುಂಚೆಯೇ ಹೈಜಾಕ್ ಮಾಡುವ ಬಿಜೆಪಿ ಯತ್ನವನ್ನು ಮೈತ್ರಿ ಗಳು ವಿಫಲಗೊಳಿಸಿ ಅಧಿಕಾರದ ಗದ್ದುಗೆ ಹಿಡಿದವು. ಖಾತೆಗಳು, ನಿಗಮ – ಮಂಡಳಿ ಗಳು, ಅಧಿಕಾರಗಳು, ಆಯಕಟ್ಟಿನ ಜಾಗಗಳು ಹುಡುಕಿಕೊಳ್ಳುವ ಭರದಲ್ಲಿ `ಸಾಮಾನ್ಯ ಕನಿಷ್ಠ ಕಾರ್ಯಕ್ರಮ’, ಸರ್ಕಾರದ ಐದು ವರ್ಷಗಳ ದಿಕ್ಕು ದೆಸೆಯಂತಹ ಸಣ್ಣ ಪುಟ್ಟ ವಿಷಯಗಳನ್ನು ಮರೆತಿದ್ದನ್ನು ಸಾಮಾನ್ಯ ಪ್ರಜೆಗಳು ಹೊಟ್ಟೆಗೆ ಹಾಕಿಕೊಳ್ಳಬೇಕಾಯಿತು.

ಇನ್ನು ಬಿಜೆಪಿಯವರಿಗೆ ರಾಜಕೀಯದ ಕೆಸರು ಕಂಡ ಕಡೆಯಲ್ಲೆಲ್ಲಾ ಕಮಲವನ್ನು ಅರಳಿಸುವ ಹವ್ಯಾಸ. ಇದೇ ಕಾರಣಕ್ಕಾಗಿ ಒಂದೋ ರಾಜಕೀಯದ ಕೆಸರು ಹುಡುಕುವ, ಇಲ್ಲವೇ ಕೆಸರು ಸೃಷ್ಟಿಯುವ ಸದಭಿರುಚಿಯನ್ನು ರೂಢಿಸಿಕೊಂಡಿದ್ದಾರೆ. ಅದಕ್ಕೆ ನಮ್ಮ ಕರ್ನಾಟಕ ಅತ್ಯುತ್ತಮ ಭೂಮಿಕೆಯಾದಂತಿದೆ. ಗುಜರಾತ್‌ ಮಾದರಿ ಸವಕಲಾದ ನಂತರ ಕರ್ನಾಟಕದ ಮಾದರಿಯನ್ನು ಬಿಜೆಪಿಯವರು ಕಣ್ಣಿಗೆ ಒತ್ತಿಕೊಂಡು ಪರಿಪಾಲಿಸುವಲ್ಲಿ ತೊಡಗಿರುವಂತಿದೆ. 

ಕರ್ನಾಟಕದ ಬೆನ್ನಲ್ಲೇ ಮಧ್ಯಪ್ರದೇಶ, ರಾಜಸ್ಥಾನ, ಪಶ್ಚಿಮ ಬಂಗಾಳ ಇತ್ಯಾದಿ ರಾಜ್ಯಗಳ ಮೇಲೆ ಆಪರೇಷನ್ ಮಾಡಲು ಕತ್ತರಿ – ಚಾಕು ಇತ್ಯಾದಿಗಳನ್ನು ಹಿಡಿದಿದ್ದಾರೆ. ಗೋವಾದಲ್ಲಂತೂ ಆಪರೇಷನ್ ಈಗಾಗಲೇ ಯಶಸ್ವಿಯಾಗಿದೆ. ರೋಗಿಯ ಗತಿ ಏನಾಯಿತೆಂಬ ವರದಿ ಇನ್ನೂ ಬಂದಿಲ್ಲ. ರಾಜ್ಯಸಭೆಯಲ್ಲೂ ಆಪರೇಷನ್‌ ಚೋರಾಗಿ ನಡೆಯುವ ಸೂಚನೆಗಳು ದೊರೆತಿವೆ.

`ಜಿಸ್ಕಿ ಲಾಠಿ ಉಸ್ಕಿ ಭೈಂಸ್’ (ಯಾರ ಬಳಿ ಕೋಲಿರುತ್ತದೋ ಕೋಣವೂ ಅವನದೇ) ಎಂಬ ಮಾತಿದೆ. ಒಂದು ಕೋಲಿಗೆ ಒಂದೆಮ್ಮೆ ಯಾದರೆ, ಬಿಜೆಪಿ ಬಳಿ ಕೇಂದ್ರ ಸರ್ಕಾರ, ರಾಜ್ಯಪಾಲ, ಜಾರಿ ನಿರ್ದೇಶನಾಲಯ, ಆದಾಯ ತೆರಿಗೆ ಹೀಗೆ ಹಲವಾರು ಬಡಿಗೆಗಳಿವೆ. ಹೀಗಾಗಿ ಸಹಜವಾಗಿಯೇ ಸಾಕಷ್ಟು ಎಮ್ಮೆಗಳು ಕ್ಷಮಿಸಿ, ಎಂಎಲ್ಎಗಳು ದೊರೆತಿರುವುದರಲ್ಲಿ ಆಶ್ಚರ್ಯವೇನೂ ಇಲ್ಲ.

ಇನ್ನು ಮುಂದಿನ ದಿನಗಳಲ್ಲಿ ಇಂತಹ ಕರ್‌ನಾಟಕಗಳನ್ನು ನೋಡಬಾರದು ಎಂಬ ಸದಾಶಯ ಮಹಾಜನತೆಗೆ ಇದ್ದರೆ, ತಕ್ಷಣವೇ ಕಾರ್ಯಪ್ರವೃತ್ತರಾಗಬೇಕಿದೆ. `ವೋಟು ಒಂದು, ನಾಟಕ ಹತ್ತಾರು’ ಎಂಬ ಪ್ರವೃತ್ತಿಗೆ ತೆರೆ ಬೇಳಬೇಕಾದರೆ, ಮತದಾನದ ಪದ್ಧತಿಯಲ್ಲಿ ಬದಲಾವಣೆ ತರಬೇಕಿದೆ. 

ಡಜನ್ ಶಾಸಕರು ಪಕ್ಷಾಂತರ ಮಾಡಿದರೆ ಅದು ತಪ್ಪು, ಅನರ್ಹಗೊಳಿಸಿ ಎಂದು ಒತ್ತಾಯಿಸಲಾಗುತ್ತಿದೆ. ಹಾಗಾದರೆ ರಿಸಲ್ಟ್ ಸಂಪೂರ್ಣವಾಗಿ ಬರುವ ಮೊದಲೇ ಕಾಂಗ್ರೆಸ್ – ಜೆಡಿಎಸ್‌ ಪಕ್ಷಗಳು ಮೈತ್ರಿ ಮಾಡಿಕೊಂಡಿದ್ದು `ಮತಾಂತರ’ ಅಲ್ಲವೇ? ಇದಕ್ಕೆ ಯಾವುದೇ ಶಿಕ್ಷೆ ಇಲ್ಲವೇ? ಅಸಲಿಗೆ ಜನ ವೋಟು ಹಾಕುವಾಗ ಅಭ್ಯರ್ಥಿಗೇ? ಪಕ್ಷಕ್ಕೆ? ಅಥವಾ ಮೈತ್ರಿಗೇ? ಈ ಬಗ್ಗೆ ಸ್ಪಷ್ಟ ಉತ್ತರ ಬೇಕಿದೆ. ಇದಕ್ಕಾಗಿ ಕೇವಲ ಒಂದು ಗುಂಡಿ ಒತ್ತಿ ಜನರ ಅಭಿಪ್ರಾಯ ಕೇಳಿದರೆ ಸಾಲದು.  ಮೇಲ್ಮನೆ ಚುನಾವಣೆಗೆ ಇರುವ ಹಾಗೆ ಆದ್ಯತೆಯ ಮತದಾನ ವ್ಯವಸ್ಥೆ ಜಾರಿಗೆ ತರುವ ಬಗ್ಗೆ ಯೋಚಿಸಬೇಕು. 

1947ರಲ್ಲಿ ರೂಪಿಸಲಾದ ಚುನಾವಣಾ ವ್ಯವಸ್ಥೆ ಈಗ ಸೂಕ್ತವೆನಿಸುತ್ತಿಲ್ಲ. ಒಂದು ಪಕ್ಷ ಇಲ್ಲವೇ ಮೈತ್ರಿ ಪಕ್ಷಗಳಿಗೆ ಸ್ಪಷ್ಟ ಜನಾದೇಶ ದೊರೆಯುವಂತೆ ನೋಡಿಕೊಳ್ಳಬೇಕು. 

ಚುನಾವಣೆಯ ನಂತರ ಯಾವ ಪಕ್ಷದ ಜೊತೆ ಮೈತ್ರಿ ಮಾಡಿಕೊಳ್ಳುತ್ತೇವೆ ಎಂಬುದನ್ನು ತಿಳಿಸುವುದನ್ನು ಕಡ್ಡಾಯಗೊಳಿಸಬೇಕು. ಹಾಗಾದಲ್ಲಿ ಚುನಾವಣೋತ್ತರ ಜನಾದೇಶವನ್ನು ತಮಗೆ ತಿಳಿದ ರೀತಿಯಲ್ಲಿ ತಿರುಚುವುದು ತಪ್ಪುತ್ತದೆ, ಸ್ಥಿರ ಸರ್ಕಾರಗಳೂ ದೊರೆಯುತ್ತವೆ. ಇಲ್ಲವಾದರೆ ಕರ್‌ನಾಟಕದ ಚಾಳಿ ದೇಶಕ್ಕೆಲ್ಲಾ ಹರಡಿದರೆ ನ್ಯಾಯಾಲಯದ ಎದುರು ಬಾಕಿ ಇರುವ ಕೋಟಿಗಟ್ಟಲೆ ಕೇಸುಗಳ ಜೊತೆಗೆ ಸರ್ಕಾರಗ ಳನ್ನು ನಿರ್ಧರಿಸುವ ಕೇಸುಗಳೂ ಸೇರಿಕೊಂಡು ಪ್ರಜಾಪ್ರಭುತ್ವ ಹಳ್ಳ ಹಿಡಿಯುವುದು ಗ್ಯಾರಂಟಿ.