August 17, 2019

ಮತ್ತೆ ಗರಿಗೆದರಿದ ಪ್ರತ್ಯೇಕ ಧರ್ಮದ ಕಿಚ್ಚು

ಜಾಗತಿಕ ಲಿಂಗಾಯತ ಮಹಾಸಭಾ ಜಿಲ್ಲಾ ಘಟಕ ಉದ್ಘಾಟನೆ

ದಾವಣಗೆರೆ, ಜೂ. 13- ನಗರದಲ್ಲಿಂದು ಜಾಗತಿಕ ಲಿಂಗಾಯತ ಮಹಾಸಭಾದ ಜಿಲ್ಲಾ ಘಟಕದ ಉದ್ಘಾಟನೆಯೊಂದಿಗೆ ಪ್ರತ್ಯೇಕ ಲಿಂಗಾಯತ ಸ್ವತಂತ್ರ ಧರ್ಮದ ಹೋರಾಟದ ಕಿಚ್ಚು ಮತ್ತಷ್ಟು ಗರಿಗೆದರಿದಂತಾಗಿದೆ.

ಇಲ್ಲಿನ ಕುವೆಂಪು ಕನ್ನಡ ಭವನದಲ್ಲಿ ಗುರುವಾರ ಸಂಜೆ ಬಸವ ಜಯಂತಿ ಹಾಗೂ ಜಾಗತಿಕ ಲಿಂಗಾಯತ ಮಹಾಸಭಾದ ಜಿಲ್ಲಾ ಘಟಕ ಉದ್ಘಾಟಿಸಲಾಯಿತು. 

ಕಾರ್ಯಕ್ರಮದ ದಿವ್ಯ ಸಾನ್ನಿಧ್ಯ ವಹಿಸಿದ್ದ ಸಾಣೇಹಳ್ಳಿಯ ಶ್ರೀ ಡಾ.ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮೀಜಿ ಅವರು, ಕೇವಲ ಸಭೆ, ಘೋಷಣೆಗಳಿಂದ ಲಿಂಗಾಯತರಾಗಲು ಸಾಧ್ಯವಿಲ್ಲ. ಪ್ರೀತಿಯ ಮೂಲಕ ಮಾತ್ರ ದ್ವೇಷ ಗೆಲ್ಲಲು ಸಾಧ್ಯ. ನಮ್ಮನ್ನು ದ್ವೇಷಿಸುವ ಜನರನ್ನೂ ಪ್ರೀತಿಸೋಣ. ಪ್ರೀತಿಯನ್ನು ಬದುಕಿನ ಬಂಡವಾಳ ಮಾಡಿಕೊಳ್ಳೋಣ. ಎಲ್ಲಾ ಜನಾಂಗದ ಜೊತೆ ವಿಶ್ವಾಸ ಉಳಿಸಿಕೊಂಡು ಹೋಗೋಣ ಎಂದು ಸೂಚ್ಯವಾಗಿ ನುಡಿದರು.

ಲಿಂಗಾಯತ ಧರ್ಮವೆಂದರೆ ಕಾಯಕ ಜೀವಿಗಳ​ ಧರ್ಮ, ಸಮಾನತೆ ಎತ್ತಿ ಹಿಡಿಯುವ ಧರ್ಮ, ಇವ ನಮ್ಮವ ಎಂದೇಳಿ ಎಲ್ಲರನ್ನೂ ಅಪ್ಪಿಕೊಳ್ಳುವಂತಹ ಧರ್ಮ.  ಈ​ ನೆಲೆಯಲ್ಲಿ ನಮ್ಮೆಲ್ಲರ ಹೊಣೆಗಾರಿಕೆ ಹೆಚ್ಚಾಗುತ್ತಿದೆ.
– ಡಾ. ಪಂಡಿತಾರಾಧ್ಯ ಸ್ವಾಮೀಜಿ
ನಾವು ಲಿಂಗಾಯತರು ಎಂದು ಹೇಳಿಕೊಳ್ಳದಿದ್ದರೆ, ಲಿಂಗಾಯತ ಚಳವಳಿಯ ಹೋರಾಟ ಮುಂದುವರೆಸದಿದ್ದರೆ ಮುಂದೊಂದು ದಿನ ಲಿಂಗಾಯತ ಎಂಬ ಪದವೇ ನಶಿಸಿ ಹೋಗುವ ಸಾಧ್ಯತೆ ಇದೆ. 
– ಶ್ರೀ ಬಸವ ಜಯ ಮೃತ್ಯುಂಜಯ ಸ್ವಾಮೀಜಿ
ಧಾರ್ಮಿಕ ಮುಖಂಡರು ರಾಜಕೀಯ ವಕ್ತಾರರಂತೆ ಮಾತನಾಡುವುದು ಬಿಡಬೇಕು. ಆಚಾರ, ವಿಚಾರ ಕಲಿಸಿ ಜನರನ್ನು ಜಾಗೃತರನ್ನಾಗಿ ಮಾಡಿದರೆ ಅದಕ್ಕಿಂತ ದೊಡ್ಡ ಪರಿವರ್ತನೆ ಬೇರಿಲ್ಲ.
– ಶ್ರೀ ಗುರುಬಸವ ಮಹಾಸ್ವಾಮೀಜಿ
ಬಸವತತ್ವಗಳನ್ನು ಕೇವಲ  ಓದುವುದಕ್ಕೆ ಮೀಸಲಾಗಿವೆ. ಅನುಷ್ಠಾನಗೊಳ್ಳುತ್ತಿಲ್ಲ. ಬಸವ ತತ್ವವನ್ನು ವಿಶ್ವಾದ್ಯಂತ ಪ್ರಸಾರ ಮಾಡುವ ಅಗತ್ಯವಿದೆ.
– ಶ್ರೀ ಬಸವಪ್ರಭು ಸ್ವಾಮೀಜಿ 

ಪ್ರಸ್ತುತ ದಿನಮಾನಗಳಲ್ಲಿ ಅರಿವಿದ್ದರೆ ಆಚಾರ ವಿಲ್ಲ, ಆಚಾರವಿದ್ದರೆ ಅರಿವಿಲ್ಲ ಎಂಬಂತಾಗಿದೆ. ಹುಂಬರ ಹಾಗೆ ಹೋದರೆ ನಮ್ಮ ಧರ್ಮದ ತತ್ವಗ ಳನ್ನು ಅರಿತಿಲ್ಲ ಎಂದೇ ಅರ್ಥ ಎಂದು ಹೇಳಿದರು.

ಕೇವಲ ಸಭೆ-ಸಮಾರಂಭ ಮಾಡಿ ಎದ್ದು ಹೋದರೆ ಸಾಲದು. ಮಹಾಸಭಾಗೆ ಸದಸ್ಯರ ಸಂಖ್ಯೆ ಕಡಿಮೆ ಇದೆ. ಜಿಲ್ಲಾ ಘಟಕಕ್ಕೆ ಆಯ್ಕೆಯಾಗಿರುವ ಎಲ್ಲಾ  ಪದಾಧಿಕಾರಿಗಳು ಸಾಕಷ್ಟು ಆರ್ಥಿಕವಾಗಿ ಸ್ಥಿತಿ ವಂತರಿದ್ದು,  ತಿಂಗಳೊಳಗಾಗಿ ಕನಿಷ್ಟ ಒಬ್ಬರಂತೆ 250 ಜನರನ್ನು ಸದಸ್ಯರನ್ನಾಗಿ ಮಾಡಿಸಿ ಎಂದು ಸೂಚಿಸಿದರು.

ಕೂಡಲ ಸಂಗಮ ಲಿಂಗಾಯತ ಪಂಚಮಸಾಲಿ ಪೀಠದ ಜಗದ್ಗುರು ಶ್ರೀ ಬಸವಜಯ ಮೃತ್ಯುಂಜಯ ಸ್ವಾಮೀಜಿ ಮಾತನಾಡುತ್ತಾ,  ಭಾರತ ದೇಶದಲ್ಲಿ ದೇಶಭಕ್ತಿ, ರಾಷ್ಟ್ರಪ್ರೇಮದ ಹೆಸರಿನಲ್ಲಿ ಮೂಲ ಅಸ್ಮಿತೆಯನ್ನು ನಾಶ ಮಾಡುವ ತಂತ್ರವು ವ್ಯವಸ್ಥಿತ ವಾಗಿ ನಡೆಯುತ್ತಿದೆ ಎಂದು ಆರೋಪಿಸಿದರು.

ಲಿಂಗಾಯತ ಯುವಕರು ಇಂದು ಶ್ರೀರಾಮ ಜಯಂತಿ ಆಚರಿಸುತ್ತಿದ್ದಾರೆ  ಅಭಿಮಾನದಿಂದ ರಾಮನ ಅನುಯಾಯಿಗಳಾಗುತ್ತಿದ್ದಾರೆ.  ಸಮಾಜ ಕಲಬೆರಿಕೆಯಾಗುತ್ತಿದೆ. ಲಿಂಗಾಯತರು ಮತ್ತಾವುದೋ ಧರ್ಮದ ಗುಲಾಮರಾಗುವ ಅಗತ್ಯವಿಲ್ಲ. ಲಿಂಗಾಯತ ಎನ್ನುವ ಸ್ವಂತಿಕೆ ಬೇಕಿದೆ ಎಂದು ಪ್ರತಿಪಾದಿಸಿದರು.

ಲಿಂಗಾಯತ ಧರ್ಮದ ಬಗ್ಗೆ ಅಪಪ್ರಚಾರ ಮಾಡಿ, ಲಿಂಗಾಯತ ಧರ್ಮವನ್ನು ಹತ್ತಿಕ್ಕುವ ಪ್ರಯತ್ನ ನಡೆಯುತ್ತಿದೆ. ಈ  ಬಗ್ಗೆ ತಲೆಕೆಡಿಸಿಕೊಳ್ಳಬಾರದು. ಸೂರ್ಯ-ಚಂದ್ರ ಇರುವಷ್ಟೇ ಸತ್ಯವಾಗಿ ಧರ್ಮದ ಹೋರಾಟ ನಿರಂತರವಾಗಿರುತ್ತದೆ ಎಂದರು.

ಪಾಂಡೋಮಟ್ಟಿ ವಿರಕ್ತಮಠದ ಶ್ರೀ ಗುರುಬಸವ ಮಹಾಸ್ವಾಮೀಜಿ ಮಾತನಾಡುತ್ತಾ, ಧರ್ಮದ ಬಗ್ಗೆ ಎಲ್ಲರಲ್ಲೂ ಜಾಗೃತಿ, ಸ್ವಾಭಿಮಾನ ಇರಬೇಕು. ಈಗಾಗಲೇ ನಾವು ಲಿಂಗಾಯತ ಸ್ವತಂತ್ರ ಧರ್ಮ ಎಂದುಕೊಂಡಿದ್ದೇವೆ. ಅದಕ್ಕೆ ಅಧಿಕೃತವಾಗಿ ಸೀಲು ಹಾಗೂ ಸಹಿ ಬೇಕಿದೆಯಷ್ಟೇ. ಅದಾದ ನಂತರ ಯಾವುದೇ ಪ್ರತಿಭಟನೆಯೂ ಬೇಕಿಲ್ಲ ಎಂದರು.

ವಿರಕ್ತಮಠದ ಶ್ರೀ ಬಸವಪ್ರಭು ಸ್ವಾಮೀಜಿ ಮಾತನಾಡುತ್ತಾ, ಎಲ್ಲಾ ಶೋಷಿತ ಸಮುದಾಯದ ಒಕ್ಕೂಟವೇ ಲಿಂಗಾಯತ ಧರ್ಮ. ಎಲ್ಲರೂ ಸಮಾನರು ಎಂದವರು ಬಸವಣ್ಣ. ಅವರು ನಮ್ಮೆಲ್ಲರಿಗೂ ಅಪ್ಪ ಎಂದರು. 

ಜಾಗತಿಕ ಲಿಂಗಾಯತ ಮಹಾಸಭಾದ ಅಧ್ಯಕ್ಷ ಎಂ.ಶಿವಕುಮಾರ್ ಅಧ್ಯಕ್ಷತೆ ವಹಿಸಿದ್ದರು.  ಬಸವಬಳಗದ ವಿ. ಸಿದ್ಧರಾಮಣ್ಣ ಶರಣರು, ಮಹಾಂತೇಶ್ ಅಗಡಿ, ಎಂ.ನಾಗಬಸಪ್ಪ, ಕೆ.ಎಸ್. ಗೋವಿಂದರಾಜ್, ಬಾಡದ ಆನಂದರಾಜ್, ಚಿಕ್ಕೋಳ್ ಈಶ್ವರಪ್ಪ, ಸುಜಾತ ರವೀಂದ್ರ, ದೇವಿಗೆರೆ ವೀರಭದ್ರಪ್ಪ, ಅಜ್ಜಂಪುರ ಶೆಟ್ರು ಶಂಭುಲಿಂಗಪ್ಪ, ಲೋಕಿಕೆರೆ ಕೆಂಚಪ್ಪ, ಹೆಚ್.ಎಂ. ಸ್ವಾಮಿ, ಉಮೇಶ್ ಆವರಗೆರೆ, ಶ್ರೀಧರ್ ಪಾಟೀಲ್, ಶಾಂತವೀರ ದಮ್ಮಾರ್, ಕೆಂಚವೀರಪ್ಪ ಮತ್ತಿತರರು ವೇದಿಕೆ ಮೇಲೆ ಉಪಸ್ಥಿತರಿದ್ದರು. ಮಹಾಂತೇಶ್ ಅಂಗಡಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸುಮತಿ ಜಯಪ್ಪ ನಿರೂಪಿಸಿದರು. ಮರುಳಸಿದ್ದಪ್ಪ ಸ್ವಾಗತಿಸಿದರು.  

Please follow and like us: