December 6, 2019

ಮಘ ಮಳೆಗೆ ನಡುಗಿದ ದಾವಣಗೆರೆ ಜಿಲ್ಲೆ

ದಾವಣಗೆರೆ : ಮೂರು ತಾಸಿನ ಬಿರುಸು ಮಳೆ, ಮನೆಗೆ ನುಗ್ಗಿದ ನೀರು, ಬಿದ್ದ ಗೋಡೆ, ತೊಯ್ದ ಸಾಮಾನುಗಳು, ನೀರಿನಲ್ಲಿ ತೇಲಿದ ಮಕ್ಕಳ ಪುಸ್ತಕ, ದಾಖಲಾತಿಗಳು, ತೇವಗೊಂಡ ಗೋಡೆ ನೋಡುತ್ತಲೇ ಆತಂಕದಿಂದ ಕಾಲ ಕಳೆಯುವ ಜನತೆ. ರೈಲ್ವೇ ಅಂಡರ್ ಬ್ರಿಡ್ಜ್​ಗಳು ಜಲಾವೃತಗೊಂಡು ಹಳೆಯ ಹಾಗೂ ಹೊಸ ನಗರದ ಸಂಪರ್ಕದಲ್ಲಿ ವ್ಯತ್ಯಯ, ಕೆರೆಯಾಗುವ ಎಸ್ಸಾರ್ಟಿಸಿ ಬಸ್ ನಿಲ್ದಾಣ. ಹೂಳು ತುಂಬಿದ ಚರಂಡಿಗಳಿಂದಾಗಿ ಮನೆಗಳ ಹೊಸಿಲು ದಾಟುವ ನೀರು.

ಇದು ರಾತ್ರಿಯ ಬದುಕಾದರೆ, ಬೆಳಗಾದರೆ ಮನೆಗೆ ನುಗ್ಗಿದ ನೀರು ಬಿಟ್ಟು ಹೋದ ಕೆಸರು ಮಣ್ಣನ್ನು ಹೊರ ಹಾಕುತ್ತಾ, ತೇವಗೊಂಡ ಬಟ್ಟೆ, ಪುಸ್ತಕ, ದಾಖಲಾತಿಗಳನ್ನು ಒಣಗಿಸುತ್ತಾ, ಕಷ್ಟ ಕೇಳಲು ಯಾರಾದರೂ ಬರುವರಾ? ಎಂದು ಕಾಯುತ್ತಾ ಕುಳಿತುಕೊಳ್ಳುವ ದೃಶ್ಯ. ಚರಂಡಿ ಹೂಳು ತೆಗೆಯುವ ಸಿಬ್ಬಂದಿಗಳು, ನಷ್ಟ ಲೆಕ್ಕ ಹಾಕುವ ಅಧಿಕಾರಿಗಳ​ ತಂಡ. ಬಂದು ಹೋಗುವ ಜನಪ್ರತಿನಿಧಿಗಳು.

ದಾವಣಗೆರೆ ನಗರದ ಕೆಲ ಬಡಾವಣೆಗಳಲ್ಲಿ ಒಂದು ಅಥವಾ ಎರಡು ತಾಸು ಬಿರು ಮಳೆ ಸುರಿದಾಗ ಕಂಡು ಬರುವ ಸಾಮಾನ್ಯ ದೃಶ್ಯಗಳಿವು. ಕಳೆದ ಭಾನುವಾರ ಸಂಜೆ ಮಳೆ ಸುರಿದಾಗಲೂ ಸಹ ಇದೇ ವಾತಾವರಣ ನಿರ್ಮಾಣವಾಗಿತ್ತು.

ಅದೇ ರಾಗ ಅದೇ ಹಾಡು ಎಂಬಂತಾಯಿತು. ಸ್ಮಾರ್ಟ್ ಸಿಟಿ ಯೋಜನೆಯಡಿ ಏನೇ ಕಾಲುವೆ ಕಾಮಗಾರಿಗಳನ್ನು ನಡೆಸಿದ್ದರೂ ಸಹ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣ ಕೆರೆಯಾಗುವುದು ತಪ್ಪಲಿಲ್ಲ. ಇನ್ನು ತಾಸಿನ ಮಳೆಗೆ ಹಳೆಯ ಹಾಗೂ ಹೊಸ ನಗರಗಳ ಸಂಪರ್ಕವೇ ಕಡಿತಗೊಂಡು ಅನುಭವಿಸುವ ಸಂಕಷ್ಟಕ್ಕೆ ಕೊನೆ ಎಂದು? ಎಂಬುದು ಜನತೆಯ ಪ್ರಶ್ನೆಯಾಗಿದೆ. ಕೆಎಸ್ಸಾರ್ಟಿಸಿ ಬಸ್ ನಿಲ್ದಾಣದ ಹಿಂಭಾಗದಲ್ಲಿನ ದೊಡ್ಡ ಚರಂಡಿ ಹೂಳು ತುಂಬಿದ ಪರಿಣಾಮ ಭಗತ್ ಸಿಂಗ್ ನಗರದ 1 ಹಾಗೂ 2ನೇ ಕ್ರಾಸ್​​ನಲ್ಲಿ ಮನೆಗಳಿಗೆ ನೀರು ನುಗ್ಗಿತು. ಇನ್ನು ಗಣೇಶ್ ಲೇ ಔಟ್ ಜಲಾವೃತಗೊಂಡಿತ್ತು. ಪಿಸಾಳೆ ಕಾಂಪೌಂಡ್​ನಲ್ಲಿದ್ದ ಕೆಲವು ಮನೆಗಳಿಗೆ ನೀರು ನುಗ್ಗಿತ್ತು. ಕಾಳಿಕಾದೇವಿ ರಸ್ತೆ ಕೆರೆಯಾಗಿ ಮಾರ್ಪಟ್ಟಿತ್ತು.

ದೊಡ್ಡ ಬೂದಿಹಾಳ್​ನಲ್ಲಿ ನೀರು ನುಗ್ಗಿದ ಪರಿಣಾಮ ಹಲವು ಮನೆಗಳಿಗೆ ಹಾನಿಯಾಗಿದ್ದು, ಮನೆಯಲ್ಲಿದ್ದ ಅಡುಗೆ ವಸ್ತುಗಳು, ಪುಸ್ತಕಗಳು ತೊಯ್ದು ಹೋಗಿದ್ದವು. ಇನ್ನೂ ಕರೂರು ಅಂಗನವಾಡಿ ಶಾಲೆಯಲ್ಲಿ 3 ಅಡಿ ನೀರು ನಿಂತಿತ್ತು. ಅಲ್ಲಿದ್ದ ಅಡುಗೆ ಮನೆಯಲ್ಲೂ ನೀರು ನುಗ್ಗಿ ಸಮಸ್ಯೆಯಾಗಿತ್ತು.

18.6 ಮೀ.ಮೀ. ಮಳೆ: ಭಾನುವಾರ ಸಂಜೆ ಜಿಲ್ಲೆಯಾದ್ಯಂತ 18.6 ಮಿ.ಮೀ. ಮಳೆಯಾಗಿದೆ. ಈ ಮಳೆಯಿಂದಾಗಿ ಸುಮಾರು 16,56,000 ರೂ. ನಷ್ಟು ನಷ್ಟ ಸಂಭವಿಸಿದೆ.

 ನಗರದ ಕೆಲವು ವಾರ್ಡುಗಳಲ್ಲಿ ರಸ್ತೆಗಳಲ್ಲಿ ಗುಂಡಿ ಬಿದ್ದು, ಚರಂಡಿ ಹೂಳು ತುಂಬಿದ್ದು, ಅಂದಾಜು 70 ಲಕ್ಷ ರೂ. ನಷ್ಟ ಸಂಭವಿಸಿದೆ. 

ದಾವಣಗೆರೆ ತಾಲ್ಲೂಕಿನಲ್ಲಿ 2.9 ಮಿ.ಮೀ ವಾಡಿಕೆ ಮಳೆಗೆ 35.8 ಮಿ.ಮೀ ವಾಸ್ತವ ಮಳೆಯಾಗಿದೆ. ಹರಿಹರ ತಾಲ್ಲೂಕಿನಲ್ಲಿ 2.5 ಮಿ.ಮೀ ವಾಡಿಕೆಗೆ 12.5 ಮಿ.ಮೀ ವಾಸ್ತವ, ಹೊನ್ನಾಳಿ ತಾಲ್ಲೂಕಿನಲ್ಲಿ 3.0 ಮಿ.ಮೀ ವಾಡಿಕೆಗೆ 21.2 ಮಿ.ಮೀ ವಾಸ್ತವ, ಚನ್ನಗಿರಿ ತಾಲ್ಲೂಕಿನಲ್ಲಿ 2.9 ಮಿ.ಮೀ ವಾಡಿಕೆಗೆ 16.2 ಮಿ.ಮೀ ವಾಸ್ತವ, ಜಗಳೂರು ತಾಲ್ಲೂಕಿನಲ್ಲಿ 2.3 ಮಿ.ಮೀ ವಾಡಿಕೆಗೆ 5.5 ಮಿ.ಮೀ. ವಾಸ್ತವ ಮಳೆಯಾಗಿದ್ದು, ಜಿಲ್ಲೆಯಲ್ಲಿ ಸರಾಸರಿ ವಾಡಿಕೆ 3.0 ಮಿ.ಮೀ ಗೆ ವಾಸ್ತವ 18.6 ಮಿ.ಮೀ ನಷ್ಟು ಮಳೆಯಾಗಿದೆ. 

ದಾವಣಗೆರೆ ತಾಲ್ಲೂಕು ವ್ಯಾಪ್ತಿಯಲ್ಲಿ 3 ಕಚ್ಚಾ ಮನೆಗಳು ತೀವ್ರ ಹಾನಿಯಾಗಿದೆ. ಮತ್ತು 42 ಕಚ್ಚಾ ಮನೆಗಳಿಗೆ ಭಾಗಶಃ ಹಾನಿಯಾಗಿದ್ದು ಅಂದಾಜು 7 ಲಕ್ಷ ರೂ. ನಷ್ಟ ಸಂಭವಿಸಿರುತ್ತದೆ. 

ಹರಿಹರ ತಾಲ್ಲೂಕಿನಲ್ಲಿ 3 ಕಚ್ಚಾ ಮನೆಗಳು ಭಾಗಶಃ ಹಾನಿಯಾಗಿದ್ದು, ಅಂದಾಜು 75 ಸಾವಿರ ರೂ. ನಷ್ಟ ಸಂಭವಿಸಿದೆ. ಹೊನ್ನಾಳಿ ತಾಲ್ಲೂಕಿನಲ್ಲಿ 10 ಕಚ್ಚಾ ಮನೆಗಳು  ಭಾಗಶಃ ಹಾನಿಯಾಗಿದ್ದು, ಅಂದಾಜು 52 ಸಾವಿರ ರೂ. ನಷ್ಟ, ಚನ್ನಗಿರಿ ತಾಲ್ಲೂಕು ವ್ಯಾಪ್ತಿಯಲ್ಲಿ 15 ಪಕ್ಕಾ ಮನೆಗಳು ಮತ್ತು 4 ಕಚ್ಚಾ ಮನೆಗಳು ಭಾಗಶಃ ಹಾನಿಯಾಗಿದ್ದು, ಅಂದಾಜು 3,25,800 ರೂ. ನಷ್ಟ  ಹಾಗೂ ಜಗಳೂರು ತಾಲ್ಲೂಕು ವ್ಯಾಪ್ತಿಯಲ್ಲಿ 1 ಕಚ್ಚಾ ಮನೆ ಭಾಗಶಃ ಹಾನಿಯಾಗಿದ್ದು, 32 ಸಾವಿರ ರೂ. ನಷ್ಟ ಸಂಭವಿಸಿದೆ.

ರಸ್ತೆ ಚರಂಡಿ ಹಾನಿ: ನಗರದ ರಸ್ತೆಗಳಲ್ಲಿ ಗುಂಡಿ ಬಿದ್ದಿದ್ದು, ಚರಂಡಿಯಲ್ಲಿ ಹೂಳು ತುಂಬಿದ್ದು, ಅಂದಾಜು 70 ಲಕ್ಷ ರೂ. ನಷ್ಟ ಸಂಭವಿಸಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.