ಮಕರ ಸಂಕ್ರಾಂತಿಯಂದು ಪೀಠದಲ್ಲಿ `ಹರ ಜಾತ್ರೆ’

ಹರಿಹರ ಲಿಂಗಾಯಿತ ಪಂಚಮಸಾಲಿ ಪೀಠಾಧಿಪತಿ ಜಗದ್ಗುರು ಶ್ರೀ ವಚನಾನಂದ ಸ್ವಾಮೀಜಿ

ದಾವಣಗೆರೆ : ಮುಂದಿನ ಮಕರ ಸಂಕ್ರಾಂತಿಯಿಂದ ಹರಿಹರದ ವೀರಶೈವ ಲಿಂಗಾಯತ ಪಂಚಮಸಾಲಿ ಪೀಠದಲ್ಲಿ `ಹರ ಜಾತ್ರೆ’ ಆಯೋಜಿಸುವುದಾಗಿ ಪೀಠದ ಜಗದ್ಗುರು ಶ್ರೀ ವಚನಾನಂದ ಸ್ವಾಮೀಜಿ ತಿಳಿಸಿದ್ದಾರೆ.

ನಗರದ ರೇಣುಕ ಮಂದಿರದಲ್ಲಿ ಹರ ಸೇವಾ ಸಂಸ್ಥೆ, ವೀರಶೈವ ಲಿಂಗಾಯತ ಪಂಚಮಸಾಲಿ ಸಮಾಜದ ದಾವಣಗೆರೆ
ಜಿಲ್ಲಾ ಘಟಕಗಳ ಸಹಯೋಗದಲ್ಲಿ ಆಯೋಜಿಸಲಾಗಿದ್ದ ಪಂಚಮಸಾಲಿ ಸಂಘದ 25ನೇ ವರ್ಷದ `ಬೆಳ್ಳಿ ಬೆಡಗು’ ಸಮಾರಂಭ ಹಾಗೂ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ವಿದ್ಯಾರ್ಥಿಗಳಿಗಾಗಿ ಆಯೋಜಿಸಲಾಗಿದ್ದ ಪ್ರತಿಭಾ ಪುರಸ್ಕಾರ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಮಾತನಾಡುತ್ತಿದ್ದರು.

ಪಂಚಮಸಾಲಿ ಪೀಠದಲ್ಲಿ ಈಗ ಅನ್ನ, ಅಕ್ಷರ, ಆರೋಗ್ಯ, ಆಶ್ರಯ ಹಾಗೂ ಅಧ್ಯಾತ್ಮಗಳೆಂಬ ಪಂಚ ದಾಸೋಹಗಳು ನಡೆಯುತ್ತಿವೆ. ಇದರ ಜೊತೆಗೆ ಮುಂದಿನ ವರ್ಷದಿಂದ ಹರ ಜಾತ್ರೆಯನ್ನು ಆಯೋಜಿಸುವುದಾಗಿ ತಿಳಿಸಿದರು.

ಜನವರಿ 14ರಂದು ಬರುವ ಮಕರ ಸಂಕ್ರಾಂತಿಯಂದು ಪೀಠದಲ್ಲಿ ಹರಜಾತ್ರೆ ಆಯೋಜಿಸಲಾಗುವುದು. ಅಲ್ಲಿ ಸಮಾಜದ ಎಲ್ಲರೂ ಸೇರಿ ಎಳ್ಳು ಬೆಲ್ಲವನ್ನು ಬೀರಿ ಸದಾಶಯ ಹಂಚಿಕೊಳ್ಳೋಣ. ಹಳೆ ಮತ ಕೊಚ್ಚಿ ಹೋಗಿ, ಹೊಸ ಮತಿ ಬರಲಿ, ವಿಜ್ಞಾನದ ಸುಗ್ಗಿ ಇರಲಿ ಎಂಬ ಆಶಯದಂತೆ ಹರ ಜಾತ್ರೆ ಆಯೋಜಿಸಲಾಗುವುದು ಎಂದು ಶ್ರೀಗಳು ಹೇಳಿದರು.

ದಾವಣಗೆರೆಯಲ್ಲಿ ಸಾಕಷ್ಟು ಅಂತರದ ನಂತರ ಲಿಂಗಾಯತರ ಹವಾ ಇದೆ ಎಂದು ಮಾರ್ಮಿಕವಾಗಿ ನುಡಿದ ಅವರು, 99 ವರ್ಷಗಳ ನಂತರ ನೌಕರರ ಸಂಘಕ್ಕೆ ಲಿಂಗಾಯತರೊಬ್ಬರು ಅಧ್ಯಕ್ಷರಾಗಿದ್ದಾರೆ ಎಂದು ತಿಳಿಸಿದರು.

ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ, ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸಿ ಅವಕಾಶಗಳ ದಾರಿ ತೋರಿಸುವುದು ಸಮಾಜದ ಹಾಗೂ ಮುಖಂಡರ ಜವಾಬ್ದಾರಿ ಎಂದು ಹೇಳಿದರು.

ಸಮಾಜದ ಕೈ ಹೆಗಲ ಮೇಲಿದ್ದರೆ ಆತ್ಮವಿಶ್ವಾಸ
ಮಗನ ಹೆಗಲ ಮೇಲೆ ತಂದೆಯ ಕೈ ಇದ್ದರೆ ಅಪ್ಪನಿಗಿಂತ ಮಗನಿಗೆ ಆತ್ಮವಿಶ್ವಾಸ ಹೆಚ್ಚಾಗುತ್ತದೆ. ಅದೇ ರೀತಿ ಸಮಾಜದ ಬೆಂಬಲ ಇರುವ ವ್ಯಕ್ತಿ ಹೆಚ್ಚಿನ ಆತ್ಮವಿಶ್ವಾಸ ಹೊಂದಿರುತ್ತಾನೆ ಎಂದು ಪಂಚಮಸಾಲಿ ಜಗದ್ಗುರು ಶ್ರೀ ವಚನಾನಂದ ಸ್ವಾಮೀಜಿ ತಿಳಿಸಿದ್ದಾರೆ. ವ್ಯಕ್ತಿಗಳ ಜೊತೆ ಸಮಾಜ ಇದ್ದಾಗ ವ್ಯಕ್ತಿ ಬಲಿಷ್ಠವಾಗುತ್ತಾನೆ. ಏಕಾಂಗಿಯಾದರೆ ಅಶಕ್ತನಾಗುತ್ತಾನೆ. ಸಮಾಜದ ಶಕ್ತಿ ಪಡೆದು ದೊಡ್ಡವರಾದ ಮೇಲೆ ಸಮಾಜವನ್ನು ಮರೆಯಬಾರದು. ದೊಡ್ಡವನಾದ ಮೇಲೂ ಸಹ ನಾನು ಸಣ್ಣವನು ಎಂಬ ಭಾವ ಬಂದರೆ ಅವರು ನಿಜವಾಗಿಯೂ ದೊಡ್ಡವರಾಗುತ್ತಾರೆ ಎಂದು ಹೇಳಿದರು.

ಐಎಎಸ್ ಪರೀಕ್ಷೆಯಲ್ಲಿ ಉತ್ತರ ಪ್ರದೇಶ ಹಾಗೂ ಬಿಹಾರದವರೇ ಹೆಚ್ಚಾಗಿದ್ದ ಕಾಲ ಹೋಗಿ ಈಗ ಕರ್ನಾಟಕದವರಿಗೂ ಅವಕಾಶಗಳು ದೊರೆಯುತ್ತಿವೆ. ಇದಕ್ಕೆ ಪರೀಕ್ಷೆಯ ಕುರಿತು ಅರಿವು ಹೆಚ್ಚಾಗಿರುವುದೇ ಕಾರಣ. ಇದೇ ರೀತಿ ಅವಕಾಶಗಳ ಕುರಿತು ಅರಿವು ಹೆಚ್ಚಿಸಿಕೊಳ್ಳಬೇಕೆಂದು ಅವರು ತಿಳಿಸಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ವೀರಶೈವ ಲಿಂಗಾಯತ ಪಂಚಮಸಾಲಿ ಸಮಾಜದ ಅಧ್ಯಕ್ಷ ಬಿ.ಸಿ. ಉಮಾಪತಿ, ಕಳೆದ 16 ವರ್ಷಗಳಿಂದ 4,050 ವಿದ್ಯಾರ್ಥಿಗಳನ್ನು ಸನ್ಮಾನಿಸಲಾಗಿದೆ. ಈ ವರ್ಷ 139 ಎಸ್‌ಎಸ್‌ಎಲ್‌ಸಿ ಹಾಗೂ 67 ಪಿಯುಸಿ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಗುತ್ತಿದೆ ಎಂದು ಹೇಳಿದರು.

ಹಗರಿಬೊಮ್ಮನಹಳ್ಳಿಯ ವೀರಶೈವ ಲಿಂಗಾಯತ ಪಂಚಮಸಾಲಿ ಶಾಖಾ ಮಠದ ಪೀಠಾಧ್ಯಕ್ಷ ಶ್ರೀ ಮಹಾಂತ ಶಿವಾಚಾರ್ಯ ಸ್ವಾಮೀಜಿ ಸಮಾರಂಭದ ಸಾನ್ನಿಧ್ಯ ವಹಿಸಿದ್ದರು.

ವೇದಿಕೆಯ ಮೇಲೆ ಕುವೆಂಪು ವಿವಿ ಉಪ ಕುಲಪತಿ ಡಾ. ಬಿ.ಪಿ. ವೀರಭದ್ರಪ್ಪ, ನಿಕಟಪೂರ್ವ ಅಧ್ಯಕ್ಷ ಬಸವರಾಜ ದಿಂಡೂರು, ದಾವಣಗೆರೆ ವಿ.ವಿ. ಆಡಳಿತ ಕುಲಸಚಿವ ಬಸವರಾಜ ಬಣಕಾರ್, ನಗರ ಘಟಕದ ಅಧ್ಯಕ್ಷ ಎಂ. ದೊಡ್ಡಪ್ಪ, ಜಿಲ್ಲಾ ಕಾರ್ಯದರ್ಶಿ ಎಸ್.ಸಿ. ಕಾಶೀನಾಥ್‌, ನೌಕರರ ಘಟಕದ ಅದ್ಯಕ್ಷ ಮಂಜುನಾಥ್, ಸಮಾಜದ ಮುಖಂಡರಾದ ನೀಲಗುಂದ ಜಯಮ್ಮ, ಮಹಿಳಾ ಘಟಕದ ಅಧ್ಯಕ್ಷೆ ರಶ್ಮಿ ನಾಗರಾಜ್ ಮತ್ತಿತರರು ಉಪಸ್ಥಿತರಿದ್ದರು.

ಕರ್ನಾಟಕ ಕುಸ್ತಿ ಹಬ್ಬದ ಚಿನ್ನದ ಪದಕ ವಿಜೇತೆ ಹೆಚ್.ಎಸ್. ಗೌರಿ, ಬಿಎಸ್‌ಸಿ (ತೋಟಗಾರಿಕೆ)ಯಲ್ಲಿ ಚಿನ್ನದ ಪದಕ ಪಡೆದ ಎಸ್. ವಿದ್ಯಾಶ್ರಿ ಹಾಗೂ ಗಣ್ಯರಾದ ಬಾದಾಮಿ ರುದ್ರೇಶ್, ಹುಲಿಕಟ್ಟೆ ಹಾಲೇಶಪ್ಪ, ಅಮರೇಶ್ವರಪ್ಪ ಬಸಪ್ಪ, ಬಿ. ರಮೇಶ್, ವೀರಣ್ಣ ರಕ್ಕಸಗಿ ಅವರನ್ನು ಸನ್ಮಾನಿಸಲಾಯಿತು.