ರಾಶಿ ಭವಿಷ್ಯ

Home ರಾಶಿ ಭವಿಷ್ಯ

ದಿನಾಂಕ : 18.10.2020 ರಿಂದ 24.10.2020

ಜಯತೀರ್ಥಾಚಾರ್ ವಡೇರ್, ದಾವಣಗೆರೆ. 

ಮೇಷ (ಅಶ್ವಿನಿ, ಭರಣಿ, ಕೃತ್ತಿಕಾ)
(ಚೂ.ಚೇ.ಚೋ.ಲ.ಲಿ.ಉ.ಲೇ.ಲೊ.ಅ.)

ಆಯಾ ಸಮಯಕ್ಕೆ ಯಾವುದು ಸೂಕ್ತವೋ ಅದನ್ನೇ ಮಾಡುವುದರಿಂದ, ಹೆಚ್ಚಿನ ಅನುಕೂಲವಾಗಲಿದೆ. ಹೊಸ ಯೋಜನೆಗಳಲ್ಲಿ ಹೂಡಿಕೆ ಬೇಡವೇ ಬೇಡ, ನಿಮ್ಮ ನೇರ ನಡೆನುಡಿ ಕೆಲವರಿಗೆ ಇರುಸು ಮುರುಸಾಗಬಹುದು. ಹಿರಿಯರು ನಿಮ್ಮ ಶ್ರಮ, ಶ್ರದ್ಧೆಗಳನ್ನು ಪ್ರಶಂಸಿಸುವರು. ಮಾಡಲಿರುವ ಪ್ರಯಾಣ ಸುಖಕರವಾಗಲಿದೆ. ಆರೋಗ್ಯ ಸುಧಾರಣೆ ಕಂಡು ಬರುತ್ತಿದ್ದರೂ ವೈದ್ಯರ ಸಲಹೆ, ಸೂಚನೆಗಳನ್ನು ಮೀರಬೇಡಿ. ಆದಾಯದ ಮೂಲದಲ್ಲಿ ತುಸು ಹೆಚ್ಚಳ, ಆರ್ಥಿಕ ಪರಿಸ್ಥಿತಿ ಹಂತ-ಹಂತವಾಗಿ ಸುಧಾರಿಸಲಿದೆ. ವ್ಯವಹಾರದಲ್ಲಿ ಸ್ಥಿತಪ್ರಜ್ಞನಂತಿರಬೇಡಿ. ವಿದ್ಯಾರ್ಥಿಗಳಿಗೆ ಉತ್ತಮ ದಿನಗಳು. ಭಾನು, ಮಂಗಳ, ಬುಧ, ಶುಭ ದಿನಗಳು.


ವೃಷಭ (ಕೃತ್ತಿಕಾ, 2,3,4, ರೋಹಿಣಿ, ಮೃಗ 1,2)
(ಇ.ಉ.ಎ.ಒ.ವ.ವಿ.ವು.ವೆ.ವೋ)

ಎಷ್ಟೇ ಆತಂಕದ ಪರಿಸ್ಥಿತಿ ಬಂದರೂ ತಾಳ್ಮೆಯಿಂದ ನಿಭಾಯಿಸಿ, ಉತ್ತಮರ ಸಲಹೆಗಳನ್ನು ಪಡೆಯಿರಿ, ಅರ್ಥವಿಲ್ಲದ ಖರ್ಚುಗಳಿಗೊಂದು ಪೂರ್ಣವಿರಾಮವಿಡುವುದು ಉತ್ತಮ. ಬಹಳ ದಿನಗಳ ನಂತರ ಅಪರೂಪದ ಬಂಧುಗಳ ಭೇಟಿಯಾಗಿದೆ. ಲೇವಾದೇವಿ ವ್ಯವಹಾರದಲ್ಲಿ ಹೆಚ್ಚಿನ ಲಾಭ ದೊರೆಯುವುದು. ಬಾಂಧವ್ಯ ವೃದ್ಧಿಗೆ ಸತತ ಪ್ರಯತ್ನಿಸಿ, ಆಸ್ತಿ ಖರೀದಿ ವಿಚಾರ ಸದ್ಯಕ್ಕೆ ಬೇಡ, ದಂಪತಿಗಳು ಭಿನ್ನಾಭಿಪ್ರಾಯ ಮರೆಯುವುದು ಲೇಸು, ಅನಾವಶ್ಯಕ ವಸ್ತುಗಳ ಖರೀದಿ ಬೇಡ. ಆದಾಯದ ಮೂಲದಲ್ಲಿ ಹೆಚ್ಚಳ.
ಸೋಮ, ಗುರು, ಶುಕ್ರವಾರ ಶುಭ ದಿನಗಳು.


ಮಿಥುನ (3,4, ಆರಿದ್ರಾ, ಪುನರ್ವಸು 1,2,3)
(ಕ.ಕಿ.ಕು.ಘ, ಔ, ಚ.ಕೆ.ಕೋ.ಹ.)

ನಿಮಗಿಷ್ಟವಿಲ್ಲದಿದ್ದರೂ ಮತ್ತೊಬ್ಬರ ಬಲವಂತಕ್ಕೆ ಪ್ರಯಾಣ ಮಾಡಬೇಕಾಗಬಹುದು. ಆದರೆ ಅದರ ಪೂರ್ವಸಿದ್ಧತೆ ಚೆನ್ನಾಗಿರಲಿ. ಆತ್ಮೀಯರ ಅನಾರೋಗ್ಯ ನಿಮ್ಮನ್ನು ಕಾಡಲಿದೆ. ಪಾಲುದಾರಿಕೆ ವ್ಯವಹಾರದಲ್ಲಿ ತುಸು ಹಿನ್ನಡೆ,  ಮಡದಿ ಆರೋಗ್ಯದಲ್ಲಿ ಸುಧಾರಣ, ವಿದೇಶದಲ್ಲಿರುವ ಮಗನ ಆಗಮನ, ನಿವೃತ್ತಿಯಂಚಿನಲ್ಲಿರುವವರು, ನಂತರದ ಬದುಕಿನ ಬಗ್ಗೆ ಈಗಲೇ ಒಂದು ನಿರ್ಧಾರ ಕೈಗೊಳ್ಳುವುದು ಲೇಸು. ಸರ್ಕಾರಿ ನೌಕರರು ಮುಂಬಡ್ತಿ ವಿಚಾರದಲ್ಲಿ ಮಂತ್ರಿ ಮಹೋದಯರ ಮರ್ಜಿ ಹಿಡಿಯದೇ ವಿಧಿಯಿಲ್ಲ. ಮಕ್ಕಳ ವಿದ್ಯಾಭ್ಯಾಸ ತೃಪ್ತಿಕರ. ಸೋಮ, ಬುಧ, ಗುರುವಾರ ಶುಭ ದಿನಗಳು.


ಕರ್ಕಾಟಕ (ಪುನ 4, ಪುಷ್ಯ, ಆಶ್ಲೇಷ)
(ಹಿ.ಹು.ಹೆ.ಹೂ.ಡ.ಡಿ.ಡು.ಡೆ.ಡೋ)

ಪರಮಾಪ್ತರ ಸಲಹೆಯಂತೆ ಆಸ್ತಿ ವಿಭಾಗ ಮಾಡಿಕೊಳ್ಳಿ. ಇದರಿಂದ ಗಂಟು, ನಂಟು ಎರಡೂ ಉಳಿಯಲಿದೆ. ಮಕ್ಕಳು ಹಿಡಿದ ಕಾರ್ಯವನ್ನು ಛಲದಿಂದ ಸಾಧಿಸಿ, ನಿಮ್ಮನ್ನು ಸಂತಸಪಡಿಸುವರು. ಆಡುವ ಮಾತಿನಿಂದಾಗುವ ಪರಿಣಾಮದ ಬಗ್ಗೆ ಎಚ್ಚರದಿಂದಿರಿ. ವಿದ್ಯಾರ್ಥಿಗಳು ಹೆಚ್ಚಿನ ಅವಕಾಶ ಪಡೆದುಕೊಳ್ಳುವರು. ಸಾಮಾಜಿಕ ಸೇವೆಗಳಿಂದ ನಿಮಗೆ ಗೌರವಾದರಗಳು ಲಭಿಸಲಿವೆ. ನ್ಯಾಯಾಲಯದ ತಕರಾರುಗಳು ನಿಮ್ಮ ಪರವಾಗಲಿವೆ. ಖರ್ಚು, ವೆಚ್ಚಗಳು ಸಮಾನವಾಗಿರಲಿವೆ. ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಬೇಡ. ಅತಿಯಾದ ತಿರುಗಾಟದಿಂದ ದೇಹಾಲಸ್ಯ. ಸೋಮ, ಮಂಗಳ, ಶುಕ್ರ ಶುಭ ದಿನಗಳು.


ಸಿಂಹ ( ಮಘ, ಪುಬ್ಬ, ಉತ್ತರ 1)
(ಮ.ಮಿ.ಮು.ಮೋ.ವೆ.ಟ.ಟಿ.ಟು.ಟೆ)

ನಿಮ್ಮ ಕಾರ್ಯತಂತ್ರಗಳು, ಎದುರಾಳಿಗಳನ್ನು ತಲ್ಲಣಿಸಲಿದೆ. ಮತ್ತು ಅವರು ಕುತಂತ್ರಗಳನ್ನು ನಿಲ್ಲಿಸುವರು. ಕೌಟುಂಬಿಕ ಕಿರಿ-ಕಿರಿಗಳಿಂದ ಹೊರಬರಲು ಪ್ರಯತ್ನಿಸಿ. ತಾಂತ್ರಿಕ ವಿದ್ಯಾರ್ಥಿಗಳಿಗೆ ಭವಿಷ್ಯದ ಚಿಂತೆ, ಯಂತ್ರೋಪಕರಣ ಬಿಡಿಭಾಗಗಳ ಮಾರಾಟದಿಂದ ಲಾಭ, ಮನೆಯಲ್ಲಿ ಹಿರಿಯರೊಂದಿಗೆ ವಾಗ್ವಾದ ಬೇಡ. ಎಷ್ಟೇ, ಕೆಲಸ ಕಾರ್ಯಗಳ ಒತ್ತಡವಿದ್ದರೂ ಅದರಿಂದ ಹೊರಬರುವ ಸಾಮರ್ಥ್ಯ ನಿಮಗಿದೆ. ಹಣಕಾಸಿನ ವಿಚಾರದಲ್ಲಿ ಎಚ್ಚರಿಕೆ ಇರಲಿ, ಸಾಲಗಳನ್ನು ತೀರಿಸಲು ಉದಾಸೀನ ಬೇಡ. ಬೆನ್ನು ನೋವಿಗೆ ತಜ್ಞ ವೈದ್ಯರ ಸಲಹೆ ಪಡೆಯಿರಿ. ಭಾನು, ಬುಧ, ಗುರು ಶುಭ ದಿನಗಳು.


ಕನ್ಯಾ (ಉತ್ತರಾ 2,3,4, ಹಸ್ತಾ, ಚಿತ್ತಾ 1,2)
(ಟೋ.ಪ.ಪಿ.ಪು.ಷ.ಣ.ಠ.ಪೆ.ಪೋ)

ನಿರುದ್ಯೋಗಿ ಮಗನಿಗೆ ನೌಕರಿ ಸಿಕ್ಕ ಸಂತಸ ಒಂದೆಡೆಯಾದರೆ ಅವನ ಮದುವೆ ಚಿಂತೆ ಮತ್ತೊಂದೆಡೆ, ಖಾಸಗಿ ಕಂಪನಿ ನೌಕರರು ಒತ್ತಡದ ವಾತಾವರಣದಲ್ಲಿ ಕೆಲಸ ಮಾಡಬೇಕಾದೀತು. ಹಿರಿಯೊಂದಿಗೆ ವಾಗ್ವಾದ ಬೇಡ. ವ್ಯವಹಾರದಲ್ಲಿ ಮಿತ್ರರ ನೆರವು ಹೆಚ್ಚಿನ ಲಾಭದಾಯಕ, ಪುಣ್ಯಕ್ಷೇತ್ರಗಳ ಸಂದರ್ಶನದ ಜೊತೆಗೆ ಸಾಧು-ಸಂತರ ಭೇಟಿಯಾಗಲಿದೆ. ಆದಾಯದಲ್ಲಿ ಹೆಚ್ಚಳ, ಸ್ತ್ರೀ ವಿಷಯಕ ಪ್ರಕರಣವೊಂದು ನಿಮ್ಮನ್ನು ಸುತ್ತಿಕೊಳ್ಳಬಹುದು. ವೈದಿಕ ವೃತ್ತಿಯಲ್ಲಿರುವರಿಗೆ ಉತ್ತಮ ದಿನಗಳು. ಗುರುಗಳ ಅನುಗ್ರಹ ಸಂಪಾದಿಸಲು ಪ್ರಯತ್ನಿಸಿ. ಮಂಗಳ, ಬುಧ, ಗುರು ಶುಭ ದಿನಗಳು.


ತುಲಾ (ಚಿತ್ತಾ 3,4, ಸ್ವಾತಿ, ವಿಶಾಖ 1,2,3)
(ರ.ರಿ.ರು.ರೆ.ರೊ.ತ.ತಿ.ತು.ತೆ.)

ಸಂಶೋಧನಾ ರಂಗದಲ್ಲಿರುವ ವಿದ್ಯಾರ್ಥಿಗಳು ಪ್ರಗತಿ ಸಾಧಿಸಲಿದ್ದಾರೆ. ಅವ್ಯಕ್ತ ಗೊಂದಲವೊಂದು, ನಿಮ್ಮ ಮನೋಸ್ಥಿತಿಯನ್ನು ಏರುಪೇರು ಮಾಡಲಿದೆ. ಅದರಿಂದ ಹೊರ ಬರಲು ಯತ್ನಿಸಿ. ವೃತ್ತಿ ಜೀವನದಲ್ಲಿ ಪ್ರಗತಿ ಕಂಡು ಬರಲಿದೆ. ಬ್ಯಾಂಕ್ ನೌಕರರು ಕಾರ್ಯ ಒತ್ತಡದಿಂದಾಗಿ ಸ್ವಯಂ ನಿವೃತ್ತಿಗೆ ಪ್ರಯತ್ನಿಸುವರು. ಅಪರಿಚಿತರೊಂದಿಗೆ ಹಣಕಾಸಿನ ವ್ಯವಹಾರ ಒಳ್ಳೆಯದಲ್ಲ. ಹಿರಿಯರ ನಡಾವಳಿಯಲ್ಲಿ ವ್ಯತ್ಯಾಸ. ಸಾಧ್ಯವಿದ್ದಲ್ಲಿ ಪ್ರಯಾಣ ಬೇಡ ಕಟ್ಟುತ್ತಿರುವ ಮನೆ ಕೆಲಸ ಆರ್ಥಿಕ ಮುಗ್ಗಟ್ಟಿನಿಂದಾಗಿ ಕೆಲ ಕಾಲ ನಿಲ್ಲಬಹುದು. ಮಕ್ಕಳ ವಿದ್ಯಾಭ್ಯಾಸದಲ್ಲಿ ಪ್ರಗತಿ. ಬುಧ, ಶುಕ್ರ, ಶನಿ ಶುಭ ದಿನಗಳು.


ವೃಶ್ಚಿಕ (ವಿಶಾಖ 4, ಅನೂ, ಜೇಷ್ಠ)
(ತೊ.ನ.ನಿ.ನು.ನೆ.ನೋ.ಯ.ಯಿ.ಯು.)

ಅಸಂತುಷ್ಟವಾದ ಮನಸ್ಸಿಗೆ ತುಸು ನೆಮ್ಮದಿ, ಸ್ವಯಂ ಉದ್ಯಮದಲ್ಲಿ ಪ್ರಗತಿ ಕಂಡು, ಹಣಕಾಸಿನ ಹರಿವು ಹೆಚ್ಚಾಗಲಿದೆ. ಮಕ್ಕಳ ಮುಂದಿನ ಭವಿಷ್ಯದ ಬಗ್ಗೆ ಆಲೋಚಿಸಲು ಇದು ಸಕಾಲ. ಅತಿಯಾದ ಬೌದ್ಧಿಕ ಶ್ರಮ ಒಳ್ಳೆಯದಲ್ಲ. ಕೆಲಸದ ಜವಾಬ್ದಾರಿಯನ್ನು ಯಾರಿಗೇ ವಹಿಸಿದ್ದರೂ ನಿಮ್ಮ ಒಂದು ಗಮನ ಅಲ್ಲಿರುವುದು ಉತ್ತಮ. ಆರೋಗ್ಯದಲ್ಲಿ ಸುಧಾರಣೆ, ವೈದ್ಯರ ಸಲಹೆಗಳನ್ನು ಅಲಕ್ಷಿಸಬೇಡಿ. ಬಹು ದಿನಗಳಿಂದ ನಿರೀಕ್ಷಿಸಿದ್ದ ಶುಭ ವಾರ್ತೆಯೊಂದು ಕೇಳಿ ಬರಲಿದೆ. ಬದಲಾವಣೆ ಅನಿವಾರ್ಯವಾಗಿದ್ದು, ಅದಕ್ಕೆ ಹೊಂದಿಕೊಳ್ಳಿ. ಊಟೋ ಪಚಾರದಲ್ಲಿ ಎಚ್ಚರಿಕೆಯಿಂದಿರಿ. ಭಾನು, ಸೋಮ, ಮಂಗಳ ಶುಭ ದಿನಗಳು.


ಧನಸ್ಸು (ಮೂಲ, ಪೂರ್ವಾಷಾಡ, ಉತ್ತರಾಷಾಡ)
(ಯೆ.ಯೋ. ಬ.ಬಿ.ಬು.ಧ.ಫ.ಡ.ಬೆ.)

ಪ್ರತಿಯೊಂದನ್ನೂ ಅನುಮಾನ ದೃಷ್ಟಿಯಿಂದ ನೋಡುವುದನ್ನು ಮೊದಲು ಬಿಡಿ, ನಂಬಿಕೆಯೇ ಜೀವನ ಎಂಬುದು ನೆನಪಿರಲಿ. ಬರಲಿರುವ ಹೇರಳ ಅವಕಾಶವನ್ನು ಉತ್ತಮವಾಗಿ ಬಳಸಿಕೊಳ್ಳಿ, ಭೂಮಿ ಖರೀದಿ ವಿಚಾರದಲ್ಲಿ ಅನುಭವಿಗಳಿಂದ ಸಲಹೆ ಪಡೆಯಿರಿ. ಮಕ್ಕಳು ನಿಮ್ಮ ಉದ್ಯಮದಲ್ಲಿ ತೊಡಗಿಕೊಳ್ಳುವರು. ಬೇಳೆ, ಕಾಳು, ಖಾದ್ಯ ತೈಲಗಳ ವ್ಯಾಪಾರಿಗಳಿಗೆ ಭರ್ಜರಿ ವಹಿವಾಟು, ಅಧಿಕ ಲಾಭ, ಚಿನಿವಾರ ಪೇಟೆ ವ್ಯವಹಾರ ಜೋರಾಗಿದ್ದರೂ ಲಾಭ ಮಾತ್ರ ಅಷ್ಟಕ್ಕಷ್ಟೆ. ಮಂಗಳ, ಬುಧ, ಗುರು ಶುಭ ದಿನಗಳು.


ಮಕರ (ಉತ್ತರಾಷಾಢ 2,3,4, ಶ್ರವಣ, ಧನಿಷ್ಠಾ 1,2)
(ಜೊ.ಜ.ಜಿ.ಜೆ.ಶಿ.ಶು.ಶೇ.ಶೋ.ಗ.ಗಿ)

ನಿರುದ್ಯೋಗಿಗಳಾದ ಪದವೀಧರರು ಸದ್ಯದ ಪರಿಸ್ಥಿತಿಯಲ್ಲಿ ತಾಳ್ಮೆಯಿಂದಿರುವುದು ಉತ್ತಮ. ನಿಮ್ಮ ಸನ್ನಡತೆಯನ್ನು ಕಂಡೇ ಶತ್ರುಗಳು ಶರಣಾಗುವರು. ವ್ಯವಹಾರವನ್ನು ಆರಂಭಿಸಲು ಮಕ್ಕಳು ಬಂಡವಾಳವನ್ನು ಬೇಡುವರು. ಆತ್ಮೀಯರೊಂದಿಗೆ ಸಮಾಲೋಚಿಸಿ, ನಿರ್ಧಾರ ತೆಗೆದುಕೊಳ್ಳಿ. ಕೌಟುಂಬಿಕ ಕಲಹಗಳು ಬಗೆಹರಿದು ಮನೆಯಲ್ಲಿ ನೆಮ್ಮದಿ ಮೂಡಲಿದೆ. ಹಿರಿಯರು ನಿಮಗೆ ನೀಡುವ ನೆರವನ್ನು ನಿಸ್ಸಂಕೋಚವಾಗಿ ತೆಗೆದುಕೊಳ್ಳಿ. ಕೃಷಿ ಉಪಕರಣಗಳು ಹೆಚ್ಚಿನ ಪ್ರಮಾಣದಲ್ಲಿ ಮಾರಾಟವಾಗಲಿವೆ. ರೈತಾಪಿ ಮಿತ್ರರ ಬೆಳೆಗೆ ಉತ್ತಮ ಬೆಲೆ, ಹೈನುಗಾರಿಕೆಯಲ್ಲಿ ಸಾಧಾರಣ, ಸಂತಾನ ಭಾಗ್ಯ. ಭಾನು,ಶುಕ್ರ,ಶನಿವಾರ ಶುಭ ದಿನಗಳು.


 ಕುಂಭ (ಧನಿಷ್ಠಾ, ಶತಭಿಷಾ, ಪೂರ್ವಾಭಾದ್ರ 1,2,3)
(ಗು.ಗೆ.ಗೊ.ಸ.ಸಿ.ಸು.ಸೆ.ಸೋ.ದ)

ಕಾರ್ಮಿಕರಿಗೆ ಅತ್ಯಂತ ಶ್ರಮದಾಯಕ ಕೆಲಸಗಳು ಎದುರಾಗಲಿವೆ. ಆರೋಗ್ಯದ ಮೇಲೆ ಅಡ್ಡ ಪರಿಣಾಮ ಬೀರಬಹುದು. ರಾಜಕಾರಣಿಗಳ ಮರ್ಜಿ ಹಿಡಿಯಲು ಬಲುದೂರ ಪ್ರಯಾಣ ಮಾಡಬೇಕಾದೀತು. ಮಡದಿಯ ಸಂತೈ ಸುವಿಕೆಯಿಂದ ತುಸು ನೆಮ್ಮದಿ ಕಾಣುವಿರಿ. ಹಿಂದೆ ಆರಂಭಿಸಿ ಅರ್ಧದಲ್ಲೇ ನಿಂತ ಕೆಲಸಗಳನ್ನು ಪೂರೈಸುವತ್ತ ಗಮನವಿಡಿ. ಮಹಿಳೆಯರು ಅಮೂಲ್ಯ ವಸ್ತುಗಳನ್ನು ಕಳೆದುಕೊಳ್ಳುವರು. ಚಾಡಿ ಮಾತುಗಳನ್ನು ನಂಬಬೇಡಿ. ಮಗಳ ವಿದ್ಯಾಭ್ಯಾಸದಲ್ಲಿ ಪ್ರಗತಿ, ಲಕ್ಷ್ಮಿ ಸ್ತೋತ್ರಪಠಿಸಿರಿ. ಬುಧ, ಗುರು, ಶನಿವಾರ ಶುಭ ದಿನಗಳು.


ಮೀನ (ಪೂರ್ವಾಭಾದ್ರ 4, ಉತ್ತರಾಭಾದ್ರ, ರೇವತಿ)
(ದಿ.ದು.ಖ.ಝ.ಥ.ದೆ.ದೋ.ಖ.ಚ.ಚಿ.)

ಕುಟುಂಬದ ಪ್ರತಿಯೊಬ್ಬ ಸದಸ್ಯರೂ ನಿಮ್ಮ ಕೆಲಸ ಕಾರ್ಯಗಳನ್ನು ಬೆಂಬ ಲಿಸುವರು. ಸೋದರನು ಪಾಲುದಾರರಿಂದ ಮೋಸ ಹೋಗುವ ಸಂಭವವಿದೆ. ಪ್ರೇಮಿಗಳಲ್ಲಿ ಭಿನ್ನಾಭಿಪ್ರಾಯ, ಸ್ನೇಹ ಮುರಿದು ಬೀಳಬಹುದು. ಮರುಬಳಕೆ ವಾಹನಗಳು ಪದೇ ಪದೇ ರಿಪೇರಿ, ಆದಾಯದ ವಿಷಯದಲ್ಲಿ ಚಿಂತೆ ಬೇಡ, ಹೂವು-ಹಣ್ಣು, ತರಕಾರಿ ವ್ಯಪಾರಿಗಳಿಗೆ ಲಾಭ. ಲೆಕ್ಕಪರಿಶೋಧಕರಿಗೆ ಬೇಡಿಕೆ, ವಾಹನದಲ್ಲಿ ಎಚ್ಚರ. ವಿದ್ಯಾರ್ಥಿಗಳಿಗೆ ಉತ್ತಮ. ಸೋಮ, ಮಂಗಳ, ಗುರು ಶುಭ ದಿನಗಳು.

ವಿಶೇಷ ದಿನಗಳು : ದಿ.21. ಬುಧವಾರ ಸರಸ್ವತಿ ಆಹ್ವಾನ, 22 ಗುರುವಾರ ಸರಸ್ವತಿ ಪೂಜೆ, 24 ಶನಿವಾರ ದುರ್ಗಾಷ್ಟಮಿ, ಉಪರಿ, ಮಹಾನವಮಿ.