ಭರತನ ನಾಡಿನಲ್ಲಿ ಕುಟುಂಬಾಡಳಿತ

ಎಸ್.ಎ. ಶ್ರೀನಿವಾಸ್‌

ಭರತ ಚಕ್ರವರ್ತಿಗೆ ಒಂಭತ್ತು ಮಕ್ಕಳಿದ್ದರು. ಆದರೆ, ಅವರೆಲ್ಲ ತನ್ನ ಸಿಂಹಾಸನಕ್ಕೆ ಅರ್ಹರಲ್ಲ ಎಂದು ಭರತ ಭಾವಿಸಿದ. ಅವರೆಲ್ಲರಿಗೂ ಸಿಂಹಾಸನ ನಿರಾಕರಿಸಿ, ಅರ್ಹನಾದ ಭೂಮನ್ಯುವಿಗೆ ಅಧಿಕಾರ ನೀಡಿದ ಎಂದು ಪುರಾಣಗಳು ಹೇಳುತ್ತವೆ. ಅಂತಹ ಭರತ ಚಕ್ರವರ್ತಿಯ ಕಾರಣದಿಂದಾಗಿ ನಮ್ಮ ದೇಶವನ್ನು ಭರತ ಭೂಮಿ ಎಂದು ಕರೆಯುತ್ತಾರೆ.

ಆದರೆ, ಸದ್ಯದ ರಾಜಕಾರಣದಲ್ಲಿ ಭರತ ಚಕ್ರವರ್ತಿಯವಂಥವರನ್ನು ಹುಡುಕಲು ಹೋಗಬೇಡಿ. ಗೂಗಲ್‌ನಲ್ಲಿ 100 ಜಿಬಿ ಡಾಟಾ ಹಾಕಿಕೊಂಡು ಹುಡುಕಿದರೂ ಅಂಥವರು ಸಿಗುವುದು ಕಷ್ಟವಿದೆ. ‘ಎಲ್ಲಿದ್ದೀಯಪ್ಪಾ ಮಗನೇ’ ಎಂದು ಕರೆದು ಸೀಟು ಕೊಡುವ ರಾಜಕಾರಣಿಗಳು ಮಾತ್ರ ಬೇಡವೆಂದರೂ ಬರುವ ವೈರಸ್‌ಗಳಂತೆ ಬೇಡವೆಂದರೂ ಸಿಗುತ್ತಾರೆ.

ಸ್ವಾತಂತ್ರ್ಯ ದೊರೆತಾದ ನಂತರ ಹೊಸದೊಂದು ಯುಗ ಆರಂಭವಾದೀತು ಎಂಬ ನಿರೀಕ್ಷೆ ಇತ್ತು. ಆದರೆ, ಆಗ ಆಡಳಿತದ ಚುಕ್ಕಾಣಿ ಹಿಡಿದ ಕಾಂಗ್ರೆಸ್‌ನಲ್ಲಿ ವಂಶಾಡಳಿತ ಬೇರೂರಲು ಆರಂಭಿಸಿತು. ತುರ್ತು ಪರಿಸ್ಥಿತಿ ಹೇರಿಕೆ ನಂತರ ನಡೆದ ಚುನಾವಣೆಯಲ್ಲಿ ನಾವು ವಂಶಾಡಳಿತ ವಿರೋಧಿಗಳು ಎಂದು ಜನತಾಪಕ್ಷದ ಮುಖಂಡರು ದೊಡ್ಡ ದನಿಯಲ್ಲಿ ಹೇಳುತ್ತಿದ್ದರು.

ನಂತರ ಜನತಾ ಪಕ್ಷ ಎಷ್ಟು ಹೋಳಾಯಿತೋ, ಅದರ ವಂಶಾಡಳಿತ ವಿರೋಧದ ಮೌಲ್ಯ ಸಹ ಅಷ್ಟೇ ನುಚ್ಚು ನೂರಾಯಿತು. ಕಾಂಗ್ರೆಸ್‌ನವರೇ ಆಗಲಿ, ‘ವಿಭಿನ್ನ ಪಕ್ಷ’ ಎಂದು ಹೇಳುತ್ತಿದ್ದ ಬಿಜೆಪಿಯೇ ಆಗಲಿ, ಜನತಾ ಪಕ್ಷದ ನಾನಾ ದಳಗಳೇ ಆಗಲಿ ಈಗ ವಂಶಾಡಳಿತ ವಿರೋಧದ ಬಗ್ಗೆ ಮಾತನಾಡುವ ಅತ್ಯುತ್ಸಾಹ ತೋರುವ ಹಾಗಿಲ್ಲ.

ಅಪ್ಪನ ಜಾಗಕ್ಕೆ ಮಗ ಬರುವ ವಂಶಾಡಳಿತದ ಪರಿಭಾಷೆ ಒಂದೆಡೆ ಇತ್ತು. ದಿನಗಳೆದಂತೆ ವಂಶಾಡಳಿತದ ಹಂತ ಮೀರಿ ‘ಕುಟುಂಬಾಡಳಿತ’ ಬರಲು ಆರಂಭಿಸಿದೆ. ನಾನು ಮತ್ತು ನನ್ನ ಮನೆ ಮಂದಿಯೆಲ್ಲಾ ರಾಜಕೀಯದ ಅಧಿಕಾರ ಅನುಭವಿಸಬೇಕು ಎಂಬುದೇ ಕುಟುಂಬಾಡಳಿತದ ಪರಿಭಾಷೆ.

ಕರ್ನಾಟಕದಲ್ಲಿ ಜೆಡಿಎಸ್, ಮಹಾರಾಷ್ಟ್ರದಲ್ಲಿ ಎನ್‌ಸಿಪಿ, ಉತ್ತರ ಪ್ರದೇಶದಲ್ಲಿ ಎಸ್‌ಪಿ ಪಕ್ಷಗಳು ಇಂತಹ ಕುಟುಂಬಾಡಳಿತಕ್ಕೆ ಉತ್ತಮ ಉದಾಹರಣೆಗಳು. ಈ ಪಕ್ಷಗಳ ಎಲ್ಲ ಪ್ರಮುಖ ಹುದ್ದೆಗಳು ಕುಟುಂಬದ ಸುತ್ತಲೇ ಗಿರಕಿ ಹೊಡೆಯುತ್ತವೆ.

ವೈದ್ಯರ ಮಗ ವೈದ್ಯನಾಗುವ, ಮೇಷ್ಟ್ರು ಮಗ ಮೇಷ್ಟ್ರಾಗುವ ರೀತಿ, ಉದ್ಯಮಿಯ ಮಗ ಉದ್ಯಮಿಯಾಗುವ ರೀತಿಯಲ್ಲಿ ರಾಜಕಾರಣಿಗಳ ಮಕ್ಕಳು ರಾಜಕಾರಣಿಗಳಾಗುವುದರಲ್ಲಿ ತಪ್ಪೇನಿದೆ? ಇಷ್ಟಕ್ಕೂ ಜನ ಒಪ್ಪಿದರೆ ಮಾತ್ರ ರಾಜಕಾರಣದಲ್ಲಿ ಗೆಲ್ಲಲು ಸಾಧ್ಯ ಎಂದು ಕುಟುಂಬಾಡಳಿತದವರು ಸಮರ್ಥಿಸಿಕೊಳ್ಳಬಹುದು.

ಆದರೆ, ರಾಜಕಾರಣ ಎಂಬುದು ಸ್ಪಷ್ಟ ಅರ್ಹತೆ ಇಲ್ಲದ ಹುದ್ದೆ. ಆರ್‌ಜೆಡಿ ಅಧ್ಯಕ್ಷ ಲಾಲು ಪ್ರಸಾದ್ ಭ್ರಷ್ಟಾಚಾರದಲ್ಲಿ ಶಿಕ್ಷೆಗೆ ಗುರಿಯಾಗಿ ಜೈಲಿಗೆ ಹೋದಾಗ, ಪತ್ನಿ ರಾಬ್ಡಿದೇವಿಯನ್ನು ಮುಖ್ಯಮಂತ್ರಿ ಮಾಡಿದರು. ಇದು ಲಾಲುಗೆ ಇದ್ದ ‘ವಿವೇಚನಾ’ ಅಧಿಕಾರ. ವಿವೇಚನೆ ಅತಿಯಾದಾಗ ಅರ್ಹತೆಗಳು ಮೂರಾಬಟ್ಟೆಯಾಗುತ್ತವೆ. ಕುಟುಂಬಾಡಳಿತದಲ್ಲಿ ಅರ್ಹತೆ ಕಡಿಮೆ, ವಿವೇಚನೆಯೇ ಹೆಚ್ಚು.

ರಾಜಕಾರಣದಲ್ಲಿ ಉನ್ನತ ಹಂತದಲ್ಲಿರುವವರು ನಿಷ್ಠೆಯನ್ನು ಬಯಸುತ್ತಾರೆ. ಕುಟುಂಬದವರಿಗಿಂತ ಹೊರಗಿನವರು ನಿಷ್ಠೆಯಿಂದ ಇರಲು ಸಾಧ್ಯವೇ? ಕುಟುಂಬ ವಾದ ಇದೇ ರೀತಿ ಮುಂದುವರೆದರೆ, ಕಾರ್ಯಕರ್ತ ಎಂಬ ಹುದ್ದೆಯ ಹೆಸರನ್ನು ‘ಸೇವಕ’ ಎಂದು ಬದಲಿಸಬೇಕಾಗುತ್ತದೆ ಅಷ್ಟೇ. ಏಕೆಂದರೆ ಕಾರ್ಯಕರ್ತ ಅಧಿಕಾರಕ್ಕೆ ಬರಬಹುದು, ಸೇವಕ ಎಂದೂ ಅಧಿಕಾರಕ್ಕೆ ಬರಲಾರ. ಮಾಲೀಕನ ಸೇವೆಯೊಂದೇ ಆತನ ಮೊದಲ ಹಾಗೂ ಅಂತಿಮ ಗುರಿ.

ರಾಜಕಾರಣಿಗೆ ಮೊದಲ ಅಗತ್ಯ ಹೆಸರು ಮಾಡುವುದು. ಜನರ ಬಾಯಲ್ಲಿ ಹೆಸರಿದ್ದರೆ ಅರ್ಧ ಕೆಲಸ ಮುಗಿದಂತೆ. ಸಾಮಾನ್ಯ ಕಾರ್ಯಕರ್ತನೋರ್ವ ಜನರ ಬಾಯಲ್ಲಿ ತನ್ನ ಹೆಸರು ನಲಿದಾಡುವಂತೆ ಮಾಡಬೇಕೆಂದರೆ ನೂರೆಂಟು ಕಷ್ಟಪಡಬೇಕು. ಹೋರಾಟಗಳಿಂದ ಹಿಡಿದು ಸಾಮೂಹಿಕ ಮದುವೆಗಳವರೆಗೆ ನೂರೆಂಟು ರೀತಿಯ ಕಾರ್ಯಕ್ರಮ ಹಮ್ಮಿಕೊಳ್ಳಬೇಕು. ಆದರೆ, ಕುಟುಂಬ ಹಿನ್ನೆಲೆಯವರಿಗೆ ಇದೇನೂ ಬೇಡ. ಇಂತಹವರ ಪತ್ನಿ, ಮಗ, ಮಗಳು ಎಂಬ ‘ಸೀಲ್’ ಬಿದ್ದರೆ ಕ್ಷಣ ಮಾತ್ರದಲ್ಲಿ ಅವರ ಹೆಸರು ಎಲ್ಲರ ಬಾಯಲ್ಲಿ ನಲಿದಾಡುತ್ತದೆ.

ಇದರ ಜೊತೆಗೆ ಒಂದು ರಾಜಕಾರಣ ಕುಟುಂಬವನ್ನು ಅವಲಂಬಿಸಿದ ದೊಡ್ಡ ಹಿಂಡೇ ಇರುತ್ತದೆ. ಅವರಿಂದ ಚುನಾವಣೆಗೆ ಅಗತ್ಯವಾದ ಸಕಲ ‘ಸರಕು – ಸೌಲಭ್ಯ’ಗಳು ‘ನಾಮ್‌ಧಾರಿ’ಗಳಿಗೆ ಸುಲಭವಾಗಿ ಲಭ್ಯವಾಗುತ್ತವೆ. ಹೀಗಾಗಿ ಅವರಿಗೆ ಚುನಾವಣಾ ನಿರ್ವಹಣೆ ಉಳಿದವರಿಗೆ ಹೋಲಿಸಿದರೆ ಬಲು ಸುಲಭ.

ರಾಜಕೀಯ ಪಕ್ಷಗಳು ಟಿಕೆಟ್ ವಿತರಿಸುವಾಗ ಗೆಲ್ಲುವ ಕುದುರೆಗಳನ್ನೇ ಬಯಸುತ್ತವೆ. ಕೊನೆಗೆ ವಂಶಾಡಳಿತ – ಕುಟುಂಬಾಡಳಿತದ ಮಂದಿಯೇ ಚುನಾವಣಾ ರೇಸ್‌ನಲ್ಲಿ ಮುಂಚೂಣಿಗೆ ಬರುತ್ತಾರೆ. ಉಳಿದವರು ಗೆಲ್ಲುವ ಕುದುರೆಗಳಾಗುವುದಿರಲಿ, ಸ್ಪರ್ಧೆಯ ಕುದುರೆಗಳಾಗುವುದೂ ಕಷ್ಟವಾಗಿ ಬಿಡುತ್ತದೆ.

ತುರ್ತು ಪರಿಸ್ಥಿತಿಯ ಸಮಯದಲ್ಲಿ ಜನತಾ ಪಕ್ಷದಲ್ಲಿದ್ದ ನಾಯಕರು ವಂಶಾಡಳಿತವನ್ನು ಬೊಬ್ಬೆ ಹಾಕಿ ವಿರೋಧಿಸುತ್ತಿದ್ದರು. ನಂತರ ಅವರೇ ತಮ್ಮ ಮಕ್ಕಳು – ಮೊಮ್ಮಕ್ಕಳನ್ನು ಅತ್ಯುತ್ಸಾಹದಿಂದ ಬೆಳೆಸುತ್ತಿದ್ದಾರೆ. ಹಾಗಾದರೆ ಅವರು ವಂಶಾಡಳಿತ ವಿರೋಧಿಸಿದ್ದು ಸುಳ್ಳೇ?

ಹಾಗೇನೂ ಇಲ್ಲ. ಆಗಿನ ಅವರ ಪರಿಸ್ಥಿತಿ ಅಂತಿತ್ತು. ಕಾಂಗ್ರೆಸ್‌ನಲ್ಲಿನ ವಂಶಾಡಳಿತದಿಂದಾಗಿ ಅವರ ರಾಜಕೀಯ ಅಧಿಕಾರಕ್ಕೆ ತೊಂದರೆಯಾಗಿತ್ತು. ಹೀಗಾಗಿ ಅವರು ವಂಶಾಡಳಿತ ವಿರೋಧಿಸಿದ್ದರು. ಒಮ್ಮೆ ಅಧಿಕಾರ ದೊರೆತ ನಂತರ, ಅದನ್ನು ಉಳಿಸಿಕೊಳ್ಳುವ ಚಿಂತೆ ಆರಂಭವಾಯಿತು. ಆಗ ಕುಟುಂಬಾಡಳಿತವೇ ಶ್ರೇಷ್ಠ ಎನಿಸಿತು.

ರಾಜಕೀಯದಲ್ಲಿ ದೊಡ್ಡ ಅಲೆಯೊಂದು ಎದ್ದಾಗ ಪರಿವರ್ತನೆಗೆ ಅವಕಾಶವಾಗುತ್ತದೆ. ಜನತಾಪಕ್ಷ ಹುಟ್ಟಿಕೊಂಡು ಹೊಸಬರಿಗೆ ಅವಕಾಶ ನೀಡಿತು. ನಂತರ ಬಿ.ಜೆ.ಪಿ. ಕಾರ್ಯಕರ್ತರ ಪಕ್ಷ ಎನಿಸಿಕೊಂಡು ಅವಕಾಶ ನೀಡಿತು.

ಆಮ್ ಆದ್ಮಿ ಪಾರ್ಟಿ ಸಹ ಅಂತಹದೇ ಅಲೆ ಎಬ್ಬಿಸಿ ಹೊಸಬರಿಗೆ ಅವಕಾಶ ನೀಡಲಿದೆ ಎಂಬ ನಿರೀಕ್ಷೆ ಇತ್ತಾದರೂ ಅದು ಹುಸಿಯಾಗಿದೆ. ಈಗ ಮುಂದೆ ಮತ್ತೊಂದು ಅಂತಹದೇ ಅಲೆ ಏಳುವುದನ್ನು ನವ ಆಕಾಂಕ್ಷಿಗಳು ಕಾಯುವುದು ಅನಿವಾರ್ಯ ಎನಿಸುತ್ತಿದೆ.

  • Source: ಅಪ್ಪನ ಜಾಗಕ್ಕೆ ಮಗ ಬರುವ ವಂಶಾಡಳಿತದ ಪರಿಭಾಷೆ ಒಂದೆಡೆ ಇತ್ತು. ದಿನಗಳೆದಂತೆ ವಂಶಾಡಳಿತದ ಹಂತ ಮೀರಿ ‘ಕುಟುಂಬಾಡಳಿತ’ ಬರಲು ಆರಂಭಿಸಿದೆ. ನಾನು ಮತ್ತು ನನ್ನ ಮನೆ ಮಂದಿಯೆಲ್ಲಾ ರಾಜಕೀಯದ ಅಧಿಕಾರ ಅನುಭವಿಸಬೇಕು ಎಂಬುದೇ ಕುಟುಂಬಾಡಳಿತದ ಪರಿಭಾಷೆ.