ಭಕ್ತಿಯ ಆಶ್ರಯದಲ್ಲಿ ಪಟ್ಟಭದ್ರರ ವಿರುದ್ಧ ಹೋರಾಡಿದ್ದ ಮರುಳಸಿದ್ಧರು

ಜಗಳೂರು ತಾಲ್ಲೂಕು ಮುಚ್ಚನೂರು ಗ್ರಾಮದಲ್ಲಿ ಶ್ರೀ ಮರುಳಸಿದ್ಧೇಶ್ವರ ದೇವಸ್ಥಾನದ ಕಳಸಾರೋಹಣ ಹಾಗೂ ಮಹಾದ್ವಾರವನ್ನು ಉದ್ಘಾಟಿಸಿದ ತರಳಬಾಳು ಜಗದ್ಗುರುಗಳು

ಮರುಳಸಿದ್ಧರು ಇತಿಹಾಸ ಪುಸ್ತಕದಲ್ಲಿ ದಾಖಲಾಗಿರುವುದಕ್ಕಿಂತ ಹೆಚ್ಚಾಗಿ ಜನ ಸಾಮಾನ್ಯರ ಹೃದಯದಲ್ಲಿ ದಾಖಲಾಗಿರುವುದೇ ಹೆಚ್ಚು. ಜನರ ನಡುವೆ ಬದುಕಿನ ಮಹಾನ್ ತಪಸ್ವಿ ಅವರು ಎಂದು ಶ್ರೀ ತರಳಬಾಳು ಜಗದ್ಗುರು ಡಾ.ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮೀಜಿ ಹೇಳಿದರು.

ಜಗಳೂರು ತಾಲ್ಲೂಕು ಮುಚ್ಚನೂರು ಗ್ರಾಮದಲ್ಲಿ ಶ್ರೀ ಮರುಳಸಿದ್ಧೇಶ್ವರ ದೇವಸ್ಥಾನದ ಕಳಸಾರೋಹಣ ಹಾಗೂ ಮಹಾದ್ವಾರ ಉದ್ಘಾಟಿಸಿ, ನಂತರ ನಡೆದ ವೇದಿಕೆ ಕಾರ್ಯಕ್ರಮದಲ್ಲಿ ಅವರು ಆಶೀರ್ವಚನ ನೀಡಿದರು.

ಮರುಳಸಿದ್ಧರು ಪುಸ್ತಕ ಬರೆದವರಲ್ಲ, ಇತರರಂತೆ ರಾಜಾಶ್ರಯ ಪಡೆದು ಹೋರಾಟ ಮಾಡಲಿಲ್ಲ. ಅವರಿಗೆ ಸಾಮಾನ್ಯ ಜನರ ಭಕ್ತಿಯ ಆಶ್ರಯ ಮಾತ್ರ ಇತ್ತು. ಅದರಿಂದಲೇ ಅವರು ರಾಜರುಗಳ, ಪಟ್ಟಭದ್ರ ಹಿತಾಸಕ್ತಿಗಳ ವಿರುದ್ಧವೇ ಹೋರಾಟ ಮಾಡಿದ್ದರು. ಅಂತಹ ಮಹಾನ್ ವ್ಯಕ್ತಿ ಸ್ಮರಣೆಯ ಈ ಕ್ಷೇತ್ರ ಮತ್ತಷ್ಟು ಅಭಿವೃದ್ದಿಯಾಗಲಿ ಎಂದು ಆಶಿಸಿದರು.

ಮುಚ್ಚನೂರು ಕ್ಷೇತ್ರವೂ  ಒಂದು ರೀತಿಯಲ್ಲಿ ಮರುಳಸಿದ್ಧರ ಇತಿಹಾಸದಲ್ಲಿ  ಮುಚ್ಚಿಕೊಂಡಿರುವ ಗ್ರಾಮವಾಗಿದ್ದಿರಬಹುದು. ಆದರೆ ಇತ್ತೀಚಿನ ಕೆಲವು ವರ್ಷಗಳಿಂದ ಕ್ಷೇತ್ರ ಅಭಿವೃದ್ಧಿ ಕಂಡು ಉತ್ತಮ ಸ್ವರೂಪ ಪಡೆಯುತ್ತಿದೆ. ಇನ್ನಷ್ಟು ಅಭಿವೃದ್ಧಿಯಾಗಲಿ ಎಂದು ಆಶಿಸಿದರು.

ಚುನಾವಣಾ ವೇಳೆಯಾಗಿದ್ದರಿಂದ ಮತದಾನದ ಬಗ್ಗೆ ಭಕ್ತರಿಗೆ ಅರಿವು ನೀಡಿದ ಶ್ರೀಗಳು, ಪರಿಪಕ್ವ ಪ್ರಜಾಪ್ರಭುತ್ವಕ್ಕಾಗಿ ಪ್ರತಿಯೊಬ್ಬರೂ ಕಡ್ಡಾಯವಾಗಿ ಮತದಾನ ಮಾಡಬೇಕು. ಮತದಾನ ಎಲ್ಲರ ಜವಾಬ್ದಾರಿ. ಮತದಾನ ಮಾಡುವುದು ಭಾರತ ಮಾತೆಗೆ ಪೂಜೆ ಮಾಡಿದಂತೆ. ಅದನ್ನು ಪ್ರತಿಯೊಬ್ಬರೂ ಶ್ರದ್ಧೆಯಿಂದ ಮಾಡಬೇಕು ಎಂದು ಹೇಳಿದರು.

ಮತದಾನ ಮಾಡುವ ಕಾಯ್ದೆ ಜಾರಿಯಾಗಬೇಕು. ಈಗಾಗಲೇ ಕೆಲ ದೇಶಗಳಲ್ಲಿರುವಂತೆ ನಮ್ಮ ದೇಶದಲ್ಲಿಯೂ ಮತದಾನ ಮಾಡದೇ ಇದ್ದರೆ ಸರ್ಕಾರಿ ಸವಲತ್ತುಗಳನ್ನು ನೀಡದಂತಹ ಕಾನೂನು ಜಾರಿಯಾಗಬೇಕು ಎಂದು ಪ್ರತಿಪಾದಿಸಿದ ಶ್ರೀಗಳು, ಚುನಾವಣೆಗಳಲ್ಲಿ ಹಳ್ಳಿಗರೇ ಹೆಚ್ಚಾಗಿ ಮತ ಚಲಾಯಿಸುತ್ತಾರೆ. ನಗರಗಳಲ್ಲಿನವಿದ್ಯಾವಂತರೇ ನಿರ್ಲಕ್ಷ್ಯ ವಹಿಸುತ್ತಾರೆ. ಸರದಿ ಸಾಲಿನಲ್ಲಿ ನಿಂತು ಮತ ಚಲಾಯಿಸುವುದು ಅಪಮಾನ ಎಂದು ಅವರು ​ಭಾವಿಸಿದಂತಿದೆ ಎಂದರು.

ನೀತಿ ಸಂಹಿತೆ ಕೇವಲ ಚುನಾವಣಾ ಸಂದರ್ಭದಲ್ಲಷ್ಟೇ ಇದ್ದರೆ ಸಾಲದು, ಅದು ಧರ್ಮ ಸಂಹಿತೆಯೂ, ಬದುಕಿನ ಸಂಹಿತೆಯೂ ಆಗಬೇಕು. ಅದನು ಕಲಿಸುತ್ತಾ, ಧರ್ಮದ ಹಕ್ಕು ಸ್ಥಾಪಿಸಲು ಹೋರಾಟ ನಡೆಸಿದವರು ಶ್ರೀ ಮರುಳಸಿದ್ಧರು ಎಂದು ಹೇಳಿದರು.

ಇತ್ತೀಚೆಗೆ ರಾಜಕಾರಣಿಗಳಲ್ಲಿ ವೈಯಕ್ತಿಕ ನಿಂದನೆಗಳು ಹೆಚ್ಚಾಗುತ್ತಿದೆ ಎಂದು ಬೇಸರ ವ್ಯಕ್ತಪಡಿದ ಶ್ರೀಗಳು,  ಪರಸ್ಪರ ವೈಯಕ್ತಿಕ ನಿಂದನೆಗಳನ್ನು ನಿಲ್ಲಿಸಿ,  ದೇಶದ ಹಿತ ಚಿಂತನೆಗಳ ಬಗ್ಗೆ ಚರ್ಚೆಗಳನ್ನು ನಡೆಸಬೇಕಿದೆ ಎಂದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ `ಜನತಾವಾಣಿ’ ಸಂಪಾದಕ ಎಂ.ಎಸ್. ವಿಕಾಸ್ ಮಾತನಾಡಿ, ಶ್ರೀ ಮರುಳಸಿದ್ಧರ ಪವಾಡ ಕ್ಷೇತ್ರ ಗಳಲ್ಲೂ ಮುಚ್ಚನೂರು ಕ್ಷೇತ್ರವೂ ಒಂದಾಗಿದ್ದು, ದೇವಸ್ಥಾನವನ್ನು ಸುಂದರವಾಗಿ ನಿರ್ಮಿಸಲಾಗಿದೆ ಎಂದು ಹರ್ಷ ವ್ಯಕ್ತಪಡಿಸಿದರು.

ಕೇವಲ ಅಧ್ಯಾತ್ಮಿಕ ವಿಚಾರಗಳಿಗೆ ಅಂಟಿಕೊಂಡಿರುವ ಸ್ವಾಮೀಜಿಗಳೇ ಹೆಚ್ಚಾಗಿ ಕಾಣಸಿಗುತ್ತಾರೆ. ಈ ಸಂದರ್ಭದಲ್ಲಿ ಅವರೆಲ್ಲರಿಗಿಂತ ಭಿನ್ನಾವಾಗಿರುವ ಡಾ.ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮೀಜಿಯವರು ನೀರಿನ ಮಹತ್ವ ಅರಿತು, ಅದರ ಬಗ್ಗೆ ಜನಪ್ರತಿನಿಗಳೂ ಮಾಡದೇ ಇರುವಂತಹ ಕೆಲಸಗಳನ್ನು ಮಾಡಿದ್ದಾರೆ. ಮಾಡುತ್ತಲೂ ಇದ್ದಾರೆ, ಮುಂದೆಯೂ ಇಂತಹ ಜನಪರ ಕೆಲಸಗಳನ್ನು ಮುಂದುವರೆಸಲಿ ಎಂದು ಆಶಿಸಿದರು.

ದಾವಣಗೆರೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ. ಹೆಚ್.ಎಸ್. ಮಂಜುನಾಥ​ ಕುರ್ಕಿ ಮಾತನಾಡುತ್ತಾ, ಮುಚ್ಚನೂರು ಕ್ಷೇತ್ರವು ಜಾತಿ ಧರ್ಮ, ಮತ-ಪಂಥದ ಗಡಿ ದಾಟಿ ಭಾವೈಕ್ಯತಾ ನೆಲೆಯಾಗಬೇಕು ಎಂಬ ಆಶಯ ವ್ಯಕ್ತಪಡಿಸಿದರು.

ಇದೇ ಸಂದರ್ಭದಲ್ಲಿ ಕುರಡಿ ನಿವೃತ್ತ ಇಂಜಿನಿಯರ್ ಯು.ಜಿ. ಶಿವಕುಮಾರ್, ದಾವಣಗೆರೆ ತಾ.ಪಂ. ಮಾಜಿ ಕಾರ್ಯನಿರ್ವಹಕ ಅಧಿಕಾರಿ ಎಲ್.ಎಸ್. ಪ್ರಭುದೇವ್, ಬೇಡರ ಶಿವನಕೆರೆಯ ಬಿ.ಜಿ.  ಬಸವನಗೌಡ ಅವರುಗಳನ್ನು ಸನ್ಮಾನಿಸಲಾಯಿತು.

 22 ಕೆರೆಗಳ ಏತ ನೀರಾವರಿ ಸಮಿತಿ ಅಧ್ಯಕ್ಷ ಡಾ.ಜಿ. ಮಂಜುನಾಥ ಗೌಡ, ಉಪಸ್ಥಿತರಿದ್ದರು.  ನಿವೃತ್ತ ಉಪನ್ಯಾಸಕ ಜಿ.ಎಸ್. ಸುಭಾಶ್ಚಂದ್ರ ಬೋಸ್  ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿಕ್ಷಕ ಜಿ.ಪಿ. ಶಿವಕುಮಾರ್ ಸ್ವಾಗತಿಸಿದರು.  ಬಿಳಿಚೋಡು ಬಸವೇಶ್ವರ ಭಜನಾ ಮಂಡಳಿ ಸದಸ್ಯರು ಪ್ರಾರ್ಥಿಸಿದರು. ಮುಚ್ಚನೂರು ಹಾಗೂ ಸುತ್ತ ಮುತ್ತಲಿನ ಗ್ರಾಮಸ್ಥರು ಉಪಸ್ಥಿತರಿದ್ದರು.