August 17, 2019

ಬ್ಯಾರೇಜ್‌ ಮತ್ತು ಕೆರೆ ನಿರ್ಮಾಣದಿಂದ 22 ಕೆರೆಗಳಿಗೆ ಸಮೃದ್ಧವಾಗಿ ನೀರು

ದಾವಣಗೆರೆ : ರಾಜನಹಳ್ಳಿ ಜಾಕ್‌ವೆಲ್ 1ರ ಬಳಿ ತುಂಗಭದ್ರಾ ನದಿಗೆ ಅಡ್ಡವಾಗಿ ಬ್ಯಾರೇಜ್ ಹಾಗೂ ಮಲ್ಲಶೆಟ್ಟಿಹಳ್ಳಿ ಜಾಕ್‌ವೆಲ್‌ 2ರಲ್ಲಿ ಕೆರೆ ನಿರ್ಮಾಣ ಕಾರ್ಯ ಆರಂಭಗೊಂಡಿದ್ದು, ಶೀಘ್ರದಲ್ಲಿಯೇ 22 ಕೆರೆಗಳಿಗೆ ಸಮೃದ್ಧವಾಗಿ ನೀರು ಹರಿದುಬರಲಿದೆ ಎಂದು ಸಿರಿಗೆರೆ ಬೃಹನ್ಮಠದ ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮೀಜಿ ಆಶಾಭಾವನೆಯನ್ನು ವ್ಯಕ್ತಪಡಿಸಿದರು. 

ಶ್ರೀಗಳು ಇಂದು ನಗರಕ್ಕೆ ಸಮೀಪದ ಆನಗೋಡು ಕ್ಷೇತ್ರದಲ್ಲಿ ವಿಶ್ವಬಂಧು ಶ್ರೀ  ಮರುಳಸಿದ್ದೇಶ್ವರ ರಥೋತ್ಸವ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡುತ್ತಿದ್ದರು. 

22 ಕೆರೆಗಳ ಏತ ನೀರಾವರಿ ಯೋಜನೆ ಪೂರ್ಣಗೊಂಡರೂ ಸಮಮರ್ಪಕವಾಗಿ ಕೆರೆಗಳಿಗೆ ನೀರು ಹರಿದುಬರುತ್ತಿರಲಿಲ್ಲ. ಇದರಿಂದ ಈ ಯೋಜನೆ ವಿಫಲವಾಗಿದೆ ಎನ್ನುವ ಸ್ಥಿತಿಗೆ ಬಂದಿತ್ತು. ಆಗ ತಾವು ನೀರಾವರಿ ನಿಗಮದ ಉನ್ನತ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿ, ಬ್ಯಾರೇಜ್ ಮತ್ತು ಹೊಸ ಕೆರೆ ನಿರ್ಮಾಣಕ್ಕೆ ಸರ್ಕಾರದಿಂದ ಹಣವನ್ನು ಮಂಜೂರು ಮಾಡಿಸಿದ್ದಾಗಿ ತಿಳಿಸಿದರು. 

ರಾಜನಹಳ್ಳಿ ಜಾಕ್‌ವೆಲ್ 1ಕ್ಕೆ ತುಂಗಭದ್ರಾ ನದಿಯಿಂದ ನೀರು ಕೆಳಗಿನಿಂದ ಮೇಲೆ ಹರಿಯಲು ಸಾಧ್ಯವಾಗುವಂತೆ 15 ಕೋಟಿ ರೂ.ಗಳ ವೆಚ್ಚದಲ್ಲಿ ಬ್ಯಾರೇಜ್ ನಿರ್ಮಾಣ ಮಾಡಲು ಚುನಾವಣಾ ನೀತಿ ಸಂಹಿತೆಯ ಎರಡು ದಿನಗಳ ವೊದಲು ಕಾಮಗಾರಿ ಆರಂಭವಾಗಿದೆ ಎಂದು ಹೇಳಿದರು. 

ಜಾಕ್‌ವೆಲ್ 1 ನದಿಪಾತ್ರದಿಂದ ಎತ್ತರದಲ್ಲಿರುವುದರಿಂದ ಜಾಕ್‌ವೆಲ್‌ಗೆ ನೀರು ಹರಿದು ಹೋಗಲು ಸಾಧ್ಯವಾಗುತ್ತಿರಲಿಲ್ಲ. ಬ್ಯಾರೇಜ್ ನಿರ್ಮಾಣ ಕಾರ್ಯ ಭರದಿಂದ ಸಾಗಿದ್ದು, ಶೀಘ್ರದಲ್ಲೇ ನದಿಯ ನೀರು ಸರಾಗವಾಗಿ ಜಾಕ್‌ವೆಲ್‌ಗೆ ಹರಿದುಬರಲಿದೆ ಎಂದು ಹೇಳಿದರು. 

ಮಲ್ಲಶೆಟ್ಟಿಹಳ್ಳಿ ಬಳಿ ಹೊಸಕೆರೆ ನಿರ್ಮಾಣ ಕಾರ್ಯ 16 ಎಕರೆ ಪ್ರದೇಶದಲ್ಲಿ ಆರಂಭಗೊಂಡಿದ್ದು, ಮಳೆಗಾಲದೊಳಗೆ ನಿರ್ಮಾಣ ಮುಗಿಯಲಿದ್ದು, ಮಳೆಗಾಲದಲ್ಲಿ ಕೆರೆಗೆ ನೀರು ಹೆಚ್ಚು ಸಂಗ್ರಹವಾದರೆ 22 ಕೆರೆಗಳಿಗೆ ನೀರು ಸಮರ್ಪಕವಾಗಿ ಹರಿದುಬರಲಿದೆ ಎಂದು ವಿವರಿಸಿದರು. 

ಕಳೆದ ಬಾರಿ ಜಗಳೂರಿನಲ್ಲಿ ನಡೆದ ತರಳಬಾಳು ಹುಣ್ಣಿಮೆ ಮಹೋತ್ಸವದಲ್ಲಿ ಜನಪ್ರತಿನಿಧಿಗಳು ನೀಡಿದ ಭರವಸೆಯಂತೆ ಈಗ ಜಗಳೂರು ಏತನೀರಾವರಿ ಯೋಜನೆ ಮತ್ತು ಭರಮಸಾಗರ ಏತನೀರಾವರಿ ಯೋಜನೆಗೆ ಮಂಜೂರಾತಿ ದೊರೆತಿದ್ದು, 1200 ಕೋಟಿ ರೂ. ಬಿಡುಗಡೆಯಾಗಿದ್ದು ಈ ಯೋಜನಗಳು ಶೀಘ್ರವೇ ಪೂರ್ಣಗೊಳ್ಳಲಿವೆ ಎಂದು ತಿಳಿಸಿದರು. 

ಆನಗೋಡು ಮರುಳಸಿದ್ದರ ಕ್ಷೇತ್ರದಲ್ಲಿ ಶುದ್ದ ಕುಡಿಯುವ ನೀರಿಗಾಗಿ ಓವರ್‌ಹೆಡ್‌ ಟ್ಯಾಂಕ್‌ ನಿರ್ಮಾಣ ಕಾರ್ಯಕ್ಕೆ ಜನಪ್ರತಿನಿಧಿಗಳು ಮುಂದಾಗಿರುವುದಕ್ಕೆ ಹರ್ಷ ವ್ಯಕ್ತಪಡಿಸಿದರು. 

ಆನಗೋಡಿನಲ್ಲಿ ನೂತನ ಮರುಳಸಿದ್ದರ ದೇವಸ್ಥಾನ ನಿರ್ಮಾಣವಾಗುತ್ತಿದ್ದು ಸಿರಿಗೆರೆ ಮಠದಿಂದ ಎರಡೂವರೆ ಕೋಟಿ ರೂ. ನೀಡಿದ್ದು ಇನ್ನೂ 5 ಕೋಟಿ ರೂಗಳ ಅಗತ್ಯವಿದ್ದು ಭಕ್ತರು ಉದಾರವಾಗಿ ಧನಸಹಾಯ ಮಾಡಬೇಕೆಂದು ಆಶಿಸಿದರು. 

ಸಮಾರಂಭದ ಅಧ್ಯಕ್ಷತೆಯನ್ನು ರಾಜ್ಯಸಭಾ ಮಾಜಿ ಸದಸ್ಯ ಕೆ.ಆರ್. ಜಯದೇವಪ್ಪ ಅವರು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷರಾದ ಶ್ರೀಮತಿ ಶೈಲಜಾ ಬಸವರಾಜ್, ಸದಸ್ಯ ಕೆ.ಎಸ್. ಬಸವಂತಪ್ಪ, ಮುಖಂಡರಾದ ಹೆಚ್.ಡಿ. ಮಹೇಶ್ವರಪ್ಪ, ಸಿರಿಗೆರೆ ಮಠದ ಆಡಳಿತಾಧಿಕಾರಿ ಎಸ್.ಬಿ. ರಂಗನಾಥ್ ಮತ್ತಿತರರು ಆಗಮಿಸಿದ್ದರು.

Please follow and like us: