April 20, 2019

ಬಿಸಿಲಿನ ತಾಪ : ದೇಹಕ್ಕೆ ತಂಪು ನೀಡುವ ಉಚಿತ ಮಜ್ಜಿಗೆ

ಕರುಣಾ ಜೀವ ಕಲ್ಯಾಣ ಟ್ರಸ್ಟ್​ನಿಂದ ಒಂದು ತಿಂಗಳು ಮಜ್ಜಿಗೆ, ನೀರು ವಿತರಣೆಗೆ ಚಾಲನೆ

ದಾವಣಗೆರೆ : ಬಿರು ಬಿಸಿಲು, ಮನೆಯಿಂದ ಹೊರ ಕಾಲಿಡಲೂ ಬೇಸರ. ಆದರೂ ಕೆಲಸ ಕಾರ್ಯಗಳ ನಿಮಿತ್ತ್ಯ ಹೊರಡಲೇ ಬೇಕು.  ಧೂಳು, ಟ್ರಾಫಿಕ್ಕು, ಬಿಸಿಲು ಅಬ್ಬಬ್ಬಾ… ಒಂದಿಷ್ಟು ನೆರಳು, ಜೊತೆಯಲ್ಲಿ  ಜೊತೆಗೆ ತಣ್ಣಗೆ ಏನಾದರೂ ಕುಡಿಯಲು ಸಿಕ್ಕರೇ? ಎಂದು ಮನ ಬಯಸುತ್ತದೆ. 

ಅದರಲ್ಲೂ ದೇಹವನ್ನು ತಂಪು ಮಾಡುವ ಮಜ್ಜಿಗೆ ಸಿಕ್ಕರೆ? ಅದೂ ಉಚಿತವಾಗಿ ! ಒಡಿ ಹೋಗಿ ಲೋಟ ಹಿಡಿದು ಇಲ್ಲೊಂದಿಷ್ಟು ಮಜ್ಜಿಗೆ ಹಾಕಪ್ಪಾ. ಎಂದು ಕೇಳಿ ಗಂಟಲಿಗಿಳಿಸಿದರೆ,  ಮಜ್ಜಿಗೆ ಕೊಟ್ಟ ನಿಮ್ಮ ಹೊಟ್ಟೆ ತಣ್ಣಗಿರಲಿ ಎಂಬ ಮಾತು ತಾನಾಗಿಯೇ ಹೊರ ಹೊಮ್ಮುತ್ತದೆ.

ಹೌದು, ದಾನಿಗಳ ನಗರಿಯಲ್ಲಿ ಏಪ್ರಿಲ್ ತಿಂಗಳು ಪೂರ್ತಿ ಉಚಿತವಾಗಿ ಮಜ್ಜಿಗೆ ವಿತರಣೆ ಮಾಡಲಾಗುತ್ತಿದೆ. ಸೋಮವಾರ ಬೆಳಿಗ್ಗೆ ದಾನಿಗಳ ಸಹಕಾರದಿಂದ ಕರುಣಾ ಜೀವ ಕಲ್ಯಾಣ ಟ್ರಸ್ಟ್ ವತಿಯಿಂದ `ಉಚಿತ ಮಜ್ಜಿಗೆ ಮತ್ತು ನೀರಿನ ವಿತರಣೆ’ ಆರಂಭಿಸಲಾಯಿತು.

ವಿರಕ್ತಮಠದ ಶ್ರೀ ಬಸವಪ್ರಭು ಸ್ವಾಮೀಜಿ ಮಜ್ಜಿಗೆ ವಿತರಣೆಗೆ ಚಾಲನೆ ನೀಡಿ, ಇದೊಂದು ಪುಣ್ಯದ ಕೆಲಸವಾಗಿದ್ದು, ಎಲ್ಲರೂ ಸಹಕಾರ ನೀಡಬೇಕು ಎಂದು ಹೇಳಿದರು.

ಬೇಸಿಗೆ ಬಂತೆಂದರೆ ಜನರು ನೀರು ಅಥವಾ ತಂಪು ಪಾನೀಯಗಳನ್ನು ಕುಡಿಯಲು  ಹಂಬಲಿಸುತ್ತಾರೆ. 

ಬಡವರಿಗೆ ಹಣ ಕೊಟ್ಟು ಪಾನೀಯ ಕುಡಿಯಲು ಕಷ್ಟವಾಗುತ್ತದೆ. ಇಂತಹ ಸಂದರ್ಭದಲ್ಲಿ ಬಡವ-ಬಲ್ಲಿದ ಎನ್ನದೆ, ಜಾತ್ಯತೀತವಾಗಿ ದೇಹದ ಆರೋಗ್ಯಕ್ಕೆ ಉತ್ತಮವಾದ ಮಜ್ಜಿಗೆ ವಿತರಣೆ ಮಾಡುತ್ತಿರುವುದು ಶ್ಲ್ಯಾಘನೀಯವಾದದ್ದು ಎಂದು ಹೇಳಿದರು.

ನಗರದ ರಾಂ ಅಂಡ್ ಕೋ ವೃತ್ತ, ಚಿಗಟೇರಿ ಜಿಲ್ಲಾ ಆಸ್ಪತ್ರೆ ಬಳಿ, ಜಯದೇವ ವೃತ್ತ ಹಾಗೂ ಹಳೇ ಹೆರಿಗೆ ಆಸ್ಪತ್ರೆ ಸೇರಿದಂತೆ ನಾಲ್ಕು ಬಳಿ ಒಂದು ತಿಂಗಳ ಕಾಲ ಬೆಳಿಗ್ಗೆ 10 ರಿಂದ 2 ಗಂಟೆ ವರೆಗೆ ಉಚಿತವಾಗಿ ನೀರು ಹಾಗೂ ಮಜ್ಜಿಗೆ ವಿತರಣೆ ಮಾಡಲಾಗುತ್ತಿದೆ.

ಮಜ್ಜಿಗೆ ವಿತರಣೆಗೆ ದಿನಕ್ಕೆ 5 ಸಾವಿರ ರೂ. ಖರ್ಚಾಗಲಿದೆ. ಶುದ್ಧವಾದ ನಂದಿನಿ ಮೊಸರು ಹಾಗೂ ಫಿಲ್ಟರ್ ನೀರನ್ನು ಬೆರೆಸಿ ಮಜ್ಜಿಗೆ ಮಾಡಲಾಗುತ್ತಿದೆ ಎಂದು ಕರುಣಾ ಜೀವ ಕಲ್ಯಾಣ ಟ್ರಸ್ಟ್​ನ ಸಿಬ್ಬಂದಿಗಳು ಪತ್ರಿಕೆಗೆ ವಿವರಿಸಿದರು.  ಸಂದೀಪ್ ನರ್ಸಿಂಗ್ ಹೋಂ ನ ಡಾ. ಹೆಚ್.ಎನ್. ಮಲ್ಲಿಕಾರ್ಜುನ್ ಆರಂಭದ ದಿನದ ದಾನಿಗಳಾಗಿದ್ದಾರೆ. ಮಜ್ಜಿಗೆ ವಿತರಣೆ ಜೊತೆಗೆ ನುಗ್ಗೆ ಗಿಡ ಹಾಗೂ ಪುಸ್ತಕಗಳ​ ಮಾರಾಟವೂ ಇದೆ. ಕರುಣಾ ದಿಂದ ಇದು ಮೂರನೇ ವರ್ಷದ ಕಾರ್ಯಕ್ರಮವಾಗಿದೆ. 

ಮಜ್ಜಿಗೆ ವಿತರಣೆಗೆ ಚಾಲನಾ ಕಾರ್ಯಕ್ರಮದಲ್ಲಿ ಡಾ.ಬಿ.ಎಂ. ವಿಶ್ವನಾಥ್, ಶಿವನಕೆರೆ ಬಸವಲಿಂಗಪ್ಪ, ಚಂಪಲಾಲ್, ಪ್ರೀತಿ ರವಿಕುಮಾರ್, ಮಂಜುಳಾ ಬಸವಲಿಂಗಪ್ಪ, ಸವಿತಾ ಪ್ರಕಾಶ್ ಹಾಗೂ ದಾನಿಗಳಾದ ಡಾ.ಮಲ್ಲಿಕಾರ್ಜುನ್ ಇತರರು ಉಪಸ್ಥಿತರಿದ್ದರು.