ಬಿಜೆಪಿಯ ಹಣ ಬಲ – ಕಾಂಗ್ರೆಸ್​ನ ಜನ ಬಲ ಹೋರಾಟ

ದಾವಣಗೆರೆ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಸಿದ್ದೇಶ್ವರ ಹಣ ಬಲ ಹೊಂದಿದ್ದರೆ, ಕಾಂಗ್ರೆಸ್ ಅಭ್ಯರ್ಥಿ ಹೆಚ್.ಬಿ. ಮಂಜಪ್ಪ ಜನಬಲ ಹೊಂದಿದ್ದಾರೆಂದು ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಶಾಮನೂರು ಟಿ. ಬಸವರಾಜ್ ವಿಶ್ಲೇಷಿಸಿದರು.

ಅವರು ಇಂದು ದಾವಣಗೆರೆಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಾ, ಜನಬಲದ ಮುಂದೆ ಹಣಬಲ ನಡೆಯುವುದಿಲ್ಲ. ಕಾಂಗ್ರೆಸ್ ಅಭ್ಯರ್ಥಿ ಮಂಜಪ್ಪನವರು ಗೆಲುವು ಸಾಧಿಸುತ್ತಾರೆ ಎಂದು ಭವಿಷ್ಯ ನುಡಿದರು.

ಮಂಜಪ್ಪನವರಿಗೆ ಕಾಂಗ್ರೆಸ್ ಅಲೆಯಿದೆ. ಅವರು ಸಾಮಾನ್ಯ ರೈತ ಕುಟುಂಬದಲ್ಲಿ ಜನಿಸಿದ್ದು, ಗ್ರಾಮ ಪಂಚಾಯ್ತಿ, ತಾಲ್ಲೂಕು ಪಂಚಾಯ್ತಿ, ಜಿಲ್ಲಾ ಪಂಚಾಯ್ತಿ ಸದಸ್ಯರಾಗಿ ಅಧ್ಯಕ್ಷರಾಗಿ 25 ವರ್ಷಗಳಿಂದ ರಾಜಕೀಯದಲ್ಲಿದ್ದಾರೆ. ಅವರಿಗೆ ಲೋಕಸಭಾ ಕ್ಷೇತ್ರದ ಎಲ್ಲಾ ವರ್ಗದ ಜನರ ಬೆಂಬಲ ಇದೆ ಎಂದು ತಿಳಿಸಿದರು.

ಮಾಜಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ನೇತೃತ್ವದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ 8 ವಿಧಾನಸಭಾ ಕ್ಷೇತ್ರಗಳಲ್ಲಿ ಬಿರುಸಿನ ಪ್ರಚಾರ ನಡೆಯುತ್ತಿದ್ದು, ಎಲ್ಲಾ ಕಡೆ ಜನರು ತಮ್ಮ ಬೆಂಬಲವನ್ನು ವ್ಯಕ್ತಪಡಿಸುತ್ತಿದ್ದಾರೆ. ಕಾಂಗ್ರೆಸ್ ಹಾಗೂ ಜೆಡಿಎಸ್ ಮುಖಂಡರು ಮಂಜಪ್ಪ ಪರ ಪ್ರಚಾರ ಕೈಗೊಂಡಿದ್ದಾರೆಂದು ವಿವರಿಸಿದರು.

ಬಿಜೆಪಿಯವರು ಕಾಂಗ್ರೆಸ್ ವಿರುದ್ಧ ವಿನಾ ಕಾರಣ ಟೀಕೆ ಮಾಡುತ್ತಿದ್ದಾರೆ. ಮಾಜಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್‌ರವರು ನಗರ ಮತ್ತು ಜಿಲ್ಲೆಯ ಅಭಿವೃದ್ಧಿಗಾಗಿ ತಮ್ಮ ಅಧಿಕಾರದ ಅವಧಿಯಲ್ಲಿ ಶ್ರಮಿಸಿದ್ದಾರೆಂದು ಹೇಳಿದರು.

ಬೀರೂರು – ಸಮ್ಮಸಗಿ ರಸ್ತೆ ಅಭಿವೃದ್ಧಿ, ಜನಸಿರಿ ಯೋಜನೆ, ಆಶ್ರಯ ಯೋಜನೆ, ಡಿಡಿಎ ಬಳಿ ಮೇಲು ಸೇತುವೆ, ಭೂಗತ ಕೇಬಲ್ ಅಳವಡಿಕೆ, ಗಾಜಿನ ಮನೆ, 22 ಕೆರೆ ಯೋಜನೆಗಳಿಗೆ ಎಸ್.ಎಸ್.ಮಲ್ಲಿಕಾರ್ಜುನ್‌ರವರು ಸರ್ಕಾರ ದಿಂದ ಸಾವಿರಾರು ಕೋಟಿ ರೂ.ಗಳ ಅನುದಾನವನ್ನು ಮಂಜೂರು ಮಾಡಿಸಿದ್ದಾರೆ ಎಂದರು.

ನಗರಕ್ಕೆ 24 ಗಂಟೆಗಳ ಕಾಲ ಕುಡಿಯುವ ನೀರು ಒದಗಿಸುವುದಕ್ಕಾಗಿ 452 ಕೋಟಿ ರೂ.ಗಳ ಕಾಮಗಾರಿಯನ್ನು ಕೈಗೊಂಡಿದ್ದು ಶೀಘ್ರವೇ ಪೂರ್ಣಗೊಳ್ಳಲಿದೆ ಎಂದು ತಿಳಿಸಿದರು.

ರೇಷ್ಮೆ ಮಂಡಳಿ ಮಾಜಿ ಅಧ್ಯಕ್ಷ ಡಿ. ಬಸವರಾಜ್‌ ಮಾತನಾಡಿ, ಸಂಸದ ಜಿ.ಎಂ. ಸಿದ್ದೇಶ್ವರ್‌ ಶಾಶ್ವತ ಕೆಲಸ ಮಾಡಿಲ್ಲ. ಆದರೆ, ಮಾಜಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್‌ ಅವರು ಕುಂದವಾಡ ಕೆರೆ, 10 ಸಾವಿರ ಆಶ್ರಯ ಮನೆ ನಿರ್ಮಾಣ, ಕಾಂಕ್ರಿಟ್ ರಸ್ತೆಗಳ ಕಾಮಗಾರಿಗಳ ಮೂಲಕ ಶಾಶ್ವತ
ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದಾರೆ ಎಂದು ಹೇಳಿದರು.

ಕಾಂಗ್ರೆಸ್ ಮುಖಂಡ ಆರ್.ಹೆಚ್. ನಾಗಭೂಷಣ್ ಮಾತನಾಡಿ, ಹಿಂದುಳಿದ ವರ್ಗದ ವ್ಯಕ್ತಿಗೆ ಟಿಕೆಟ್ ಕೊಡಿಸುವುದರ ಮೂಲಕ ಹೊಸ ಇತಿಹಾಸ ನಿರ್ಮಿಸಲಾಗಿದೆ. ಎಸ್.ಎಸ್. ಮತ್ತು ಎಸ್.ಎಸ್.ಎಂ.ರವರು ತಮಗೆ ನೀಡಿದ ಟಿಕೆಟ್  ಮಂಜಪ್ಪನವರಿಗೆ ಕೊಡಿಸಿದ್ದಾರೆ ಎಂದರು.

ಕಾಂಗ್ರೆಸ್ ಮುಖಂಡರುಗಳಾದ ಜಗದೀಶ್, ಜಯಪ್ರಕಾಶ್, ಎನ್.ಚಂದ್ರು, ಸಂದೀಪ್, ಡಿ. ಶಿವಕುಮಾರ್, ಫಾರೂಖ್, ಹರೀಶ್ ಮತ್ತಿತರರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.