November 21, 2019

ಪ್ರಥಮ ಪೂಜಿತ ಗಣೇಶನ ಆರಾಧನೆಗೆ ಸಜ್ಜು

ಜಿ.ಎಸ್. ವಸಂತ್‌ ಕುಮಾರ್‌

ದಾವಣಗೆರೆ : ಪ್ರಥಮ ಪೂಜಿತ ವಿಘ್ನ ನಿವಾರಕ ಗಣೇಶ ಹಾಗೂ ಗೌರಿ ಹಬ್ಬಕ್ಕೆ ನಗರದ ಜನತೆ ಸಜ್ಜುಗೊಂಡಿದ್ದು, ಹಬ್ಬದ ಮುನ್ನಾ ದಿನವಾದ ಇಂದು ಹಬ್ಬಕ್ಕೆ ಬೇಕಾಗುವ ಪೂಜಾ ಸಾಮಗ್ರಿಗಳು, ಹೂ-ಹಣ್ಣು ಸೇರಿದಂತೆ ಅಗತ್ಯ ವಸ್ತುಗಳ ಖರೀದಿಯಲ್ಲಿ ಜನ ಮಗ್ನರಾಗಿದ್ದುದು ನಗರದ ವಿವಿಧ ಮಾರುಕಟ್ಟೆಗಳಲ್ಲಿ ಕಂಡು ಬಂತು.

ಆದರೆ, ಹಬ್ಬದ ಕಳೆ ಕಟ್ಟಿದ್ದರೂ ಸಹ ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ ಈ ವರ್ಷ ಗೌರಿ-ಗಣೇಶ ಹಬ್ಬದ ಸಂಭ್ರಮದಲ್ಲಿ ಅರ್ಧದಷ್ಟು ಕುಸಿತಗೊಂಡಿದೆ. ಹಬ್ಬದ ಆಚರಣೆಗೆ ಶೇ. 100ರಲ್ಲಿ ಶೇ. 50ರಷ್ಟು ಜನರು ಉತ್ಸುಕತೆ ತೋರಿದರೆ, ಇನ್ನುಳಿದ 50ರಷ್ಟು ಮಂದಿ ಆಚರಣೆಯತ್ತ ಆಸಕ್ತಿ ತೋರುತ್ತಿಲ್ಲ ಎಂಬುದಕ್ಕೆ ನಗರದ ವಿವಿಧ ಮಾರುಕಟ್ಟೆಗಳಲ್ಲಿ ವ್ಯಾಪಾರ-ವಹಿವಾಟು ಕುಸಿತಗೊಂಡಿರುವುದೇ ಸಾಕ್ಷಿಯಾಗಿದೆ. ವ್ಯಾಪಾರಸ್ಥರು ಸಹ ಈ ವರ್ಷದ ವ್ಯಾಪಾರ-ವಹಿವಾಟು ಮತ್ತು ದರ ಕುಸಿತಕ್ಕೆ ಬೇಸರ ವ್ಯಕ್ತಪಡಿಸಿದ್ದಾರೆ.

ನಗರದ ಎಪಿಎಂಸಿ ಮಾರುಕಟ್ಟೆ ಬಳಿಯ ತಾಲ್ಲೂಕು ಕಚೇರಿ ಬಳಿ ಮಾರುಕಟ್ಟೆ ಹಾಗೂ ಹಳೇ ಬಸ್‌ ನಿಲ್ದಾಣದ ಬಳಿಯ ಹೋಲ್‌ಸೇಲ್‌ ವ್ಯಾಪಾರದ ಸ್ಥಳಗಳಲ್ಲಿನ ವ್ಯಾಪಾರ-ವಹಿವಾಟಿಗೆ ಹೋಲಿಕೆ ಮಾಡಿದರೆ ಗಣೇಶ ಹಬ್ಬದ ಹಿನ್ನೆಲೆಯಲ್ಲಿ ನಗರದ ಸರ್ಕಾರಿ ಪ್ರೌಢ ಶಾಲಾ ಆವರಣದಲ್ಲಿ ನಿರ್ಮಾಣದ ಹಂತದಲ್ಲಿರುವ ತಾತ್ಕಾಲಿಕ ಖಾಸಗಿ ಬಸ್ ನಿಲ್ದಾಣದಲ್ಲಿನ ಸಂತೆಯಲ್ಲಿ ಹೂ-ಹಣ್ಣಿನ ದರ ನಿಗದಿತಗಿಂತಲೂ ಕುಸಿತಗೊಂಡಿದೆ. ಆದರೆ, ಇಲ್ಲೆಲ್ಲಾ ವ್ಯಾಪಾರ-ವಹಿವಾಟು ಮಾತ್ರ ಸಾಧಾರಣವಾಗಿದೆ. 

ಹಬ್ಬದ ನಿಮಿತ್ತ ಹೂ-ಹಣ್ಣಿನ ದರ ಏರಿಕೆ ಕಾಣದೇ ಮೊದಲಿನಂತೆ ಸಹಜವಾಗಿದ್ದು,  ಜನರಿಗೆ ಅದರ ಬಿಸಿ ತಟ್ಟಿಲ್ಲ. ವ್ಯಾಪಾರಸ್ಥರು ತಾವು ನಿರೀಕ್ಷಿಸಿದ ಪ್ರಮಾಣದಲ್ಲಿ ವ್ಯಾಪಾರ-ವಹಿವಾಟು ಕಾಣದೇ ಕಂಗಾಲಾಗಿದ್ದು, ಲಾಭವಿರಲಿ ಹಾಕಿದ ಬಂಡವಾಳವಾದರೂ ಸಿಗಲಿ ಎಂಬ ನಿರೀಕ್ಷೆಯಲ್ಲಿದ್ದಾರೆ.

ಹಬ್ಬದ ಸಂಭ್ರಮ-ವ್ಯಾಪಾರ ಕುಸಿತಕ್ಕೆ ವಿಘ್ನ: ದೇಶದಲ್ಲಿ ಕುಸಿದಿರುವ ಆರ್ಥಿಕ ಹಿಂಜರಿಕೆಯು ಈ ಬಾರಿ ವಿಘ್ನ ನಿವಾರಕ ಗಣಪತಿ ಹಬ್ಬದ ಆಚರಣೆಯ ಮೇಲೂ ತನ್ನ ಕರಿ ನೆರಳು ಸೂಸಿದ್ದು, ಕಳೆದ ಗಣೇಶ ಹಬ್ಬಕ್ಕೆ ಹೋಲಿಸಿದರೆ, ಈ ಬಾರಿ ಹಬ್ಬದ ಮಾರುಕಟ್ಟೆಯ ವ್ಯಾಪಾರ ವಹಿವಾಟಿನಲ್ಲಿ ಕುಂಠಿತ ಕಂಡು ಬಂದಿದೆ.

ದೇಶದಲ್ಲಿ ದಿನೇ ದಿನೇ ಆರ್ಥಿಕ ಹಿಂಜರಿತ ಹೆಚ್ಚಾಗುತ್ತಿದ್ದು, ಉದ್ದಿಮೆಗಳು ಸಂಕಷ್ಟಕ್ಕೆ ಸಿಲುಕಿ ಮುಚ್ಚಲ್ಪಡುತ್ತಿರುವ ಕಾರಣ ಹಲವರು ಉದ್ಯೋಗ ಕಳೆದುಕೊಂಡು ದುಡಿಮೆ ಇಲ್ಲದೇ ಮನೆಯಲ್ಲಿ ಕುಳಿತಿದ್ದರೆ, ಇನ್ನೂ ತಿಂಗಳ ಹಿಂದೆ ಸುರಿದ ಮಹಾ ಮಳೆಗೆ ಜಿಲ್ಲೆಯ ಕೆಲವೆಡೆ ಆಸ್ತಿ ಪಾಸ್ತಿ ಕಳೆದುಕೊಂಡು ಬೀದಿಪಾಲಾಗಿದ್ದಾರೆ. ಇವುಗಳಿಂದ ಚೇತರಿಸಿಕೊಳ್ಳಲು ಸಾರ್ವಜನಿಕರು ಪರದಾಡುತ್ತಿರುವ ಸಂದರ್ಭದಲ್ಲಿಯೇ ವಿಘ್ನ ನಿವಾರಕ ಗಣಪತಿ ಹಬ್ಬ ಬಂದಿದೆ. ಆದರೆ, ಜನತೆಯ ಕೈಯಲ್ಲಿ ಹೇಳಿಕೊಳ್ಳುವ ಪ್ರಮಾಣದಲ್ಲಿ ಹಣ ಚಲಾವಣೆ ಆಗದ ಕಾರಣ ಹಬ್ಬ ಆಚರಣೆಗೆ ಅಷ್ಟು ಆಸಕ್ತಿ ತೋರುತ್ತಿಲ್ಲ. ಹೀಗಾಗಿ ಹಬ್ಬದ ಸಂದರ್ಭದಲ್ಲಿ ಜನರಿಂದ ಗಿಜಿಗುಡುತ್ತಿದ್ದ ಹಬ್ಬದ ಸಂತೆಯು ಈ ಬಾರಿ ಸಾಧಾರಣವಾಗಿ ಕಂಡು ಬಂತು.

ಹೈಸ್ಕೂಲ್‌ ಮೈದಾನದ ಸಂತೆ ವ್ಯಾಪಾರಸ್ಥರು ಹೈರಾಣ: ಗಣೇಶ ಹಬ್ಬದ ಹಿನ್ನೆಲೆಯಲ್ಲಿ ನಗರದ ಸರ್ಕಾರಿ ಪ್ರೌಢ ಶಾಲಾ ಆವರಣದಲ್ಲಿ ನಿರ್ಮಾಣದ ಹಂತದಲ್ಲಿರುವ ತಾತ್ಕಾಲಿಕ ಖಾಸಗಿ ಬಸ್ ನಿಲ್ದಾಣದ ಸಂತೆಯಲ್ಲಿ ಬೆಳಿಗ್ಗೆಯಿಂದ ಸಂಜೆಯವರೆಗೂ ವ್ಯಾಪಾರ-ವಹಿವಾಟು ಸಾಧಾರಣವಾಗಿ ನಡೆಯಿತು. 

ಹಬ್ಬ ಇದ್ದರೂ ಫಲ-ಪುಷ್ಪದಲ್ಲಿ ಹೆಚ್ಚಿನ ಬೆಲೆ ಏರಿಕೆ ಆಗಿಲ್ಲ. ಆದರೂ ಗ್ರಾಹಕರು ಬಾಯಿಗೆ ಬಂದ ದರಕ್ಕೆ ಹೂವು, ಹಣ್ಣು ಕೇಳುತ್ತಿದ್ದಾರೆ. ಹೀಗಾಗಿ ನಿಗದಿತ ದರಕ್ಕಿಂತ ಕಡಿಮೆ ದರದಲ್ಲಿ ವ್ಯಾಪಾರ ಮಾಡಲಾಗುತ್ತಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ, ಈ ವರ್ಷ ವ್ಯಾಪಾರದಲ್ಲಿ ಅರ್ಧದಷ್ಟು ಕುಂಠಿತವಾಗಿದೆ. ಜೊತೆಗೆ ಕಡಿಮೆ ದರದಲ್ಲಿ ವ್ಯಾಪಾರ ಮಾಡುತ್ತಿರುವ ಕಾರಣ ಈ ಸಂತೆಯಲ್ಲಿನ ವ್ಯಾಪಾರಸ್ಥರೆಲ್ಲರೂ ನಷ್ಟ ಅನುಭವಿಸುವಂತಾಗಿದೆ. ಒಬ್ಬ ವ್ಯಾಪಾರಸ್ಥ ಸುಮಾರು 10 ಸಾವಿರದಷ್ಟು ನಷ್ಟ ಅನುಭವಿಸಬೇಕಾಗಿದೆ ಎಂದು ಹೂವಿನ ವ್ಯಾಪಾರಿ ಹರಪನಹಳ್ಳಿ ತಾಲ್ಲೂಕಿನ ಪರಶುರಾಮ್ ಸೇರಿದಂತೆ ಇತರೆ ವ್ಯಾಪಾರಸ್ಥರು ನೋವು ವ್ಯಕ್ತಪಡಿಸಿದರು.

ಹಬ್ಬದ ಸಂತೆಗೆ ಬಂದಿರುವ ನಮಗೆಲ್ಲಾ ಹೈಸ್ಕೂಲ್ ಮೈದಾನದಲ್ಲಿ ಉತ್ಪನ್ನ ಮಾರಾಟ ಮಾಡಲು ಅವಕಾಶ ನೀಡಿದ್ದಾರೆ. ಆದರೆ, ರಾಜನಹಳ್ಳಿ ಛತ್ರ, ಹಳೇ ಬಸ್ ನಿಲ್ದಾಣದ ಬಳಿಯ ಹೋಲ್‍ಸೇಲ್ ವ್ಯಾಪಾರಿಗಳಿಂದ ನಮ್ಮಂತಹ ಚಿಲ್ಲರೆ ವ್ಯಾಪಾರಸ್ಥರು, ರೈತರಿಗೆ ಹೊಡೆತ ಬಿದ್ದಿದೆ ಎಂದು ವ್ಯಾಪಾರಸ್ಥರು ಅಳಲು ತೋಡಿಕೊಂಡರು.

ಸೇವಂತಿಗೆ ಹೂವು ಮಾರಿಗೆ 70 ರೂ.ಗೆ ಬದಲು 30 ರೂ.ಗೆ, ಕನಕಾಂಬರ, 50ರ ಬದಲು 30 ರೂ.ಗೆ, ಕಾಕಡ 50 ರೂ. ಬದಲು 20 ರೂ.ಗೆ, ಚಂಡು ಹೂವು 50 ರೂ. ಬದಲು 10 ರೂ., ಬಾಳೆ ಕಂಬ ಜೊತೆಗೆ 20 ರೂ. ಬದಲು 5 ರೂ.ಗೆ  ಬಿಕರಿಯಾಗುತ್ತಿದೆ ಎಂದು ಹೂವಿನ ವ್ಯಾಪಾರಿಗಳು ಅಲವತ್ತುಕೊಂಡರು.

ಸೇಬು ಹಣ್ಣು 80 ರೂ., ಮೋಸಂಬಿ 60 ರೂ.ಗೆ, ಸೀತಾಫಲ 60 ರೂ., ಕಿತ್ತಳೆ 60 ರೂ., ದ್ರಾಕ್ಷಿ 80 ರೂ. ದಾಳಿಂಬೆ 60 ರೂ.ಗೆ ಮಾರಾಟವಾಗುತಿತ್ತು.

ವಿವಿಧ ಮಾರುಕಟ್ಟೆಯಲ್ಲಿ ವಿವಿಧ ದರ: ಇನ್ನು ಹಳೇ ಬಸ್‌ ನಿಲ್ದಾಣದ ಬಳಿಯ ಹೋಲ್‌ ಸೇಲ್‌ ಹೂವಿನ ದರ  (ಒಂದು ಮಾರಿಗೆ) ಹೀಗಿತ್ತು (ವ್ಯಾಪಾರಸ್ಥರ ಮಾಹಿತಿಯಂತೆ): ಸೇವಂತಿಗೆ 50-60ರೂ., ಕಲರ್‌ ಸೇವಂತಿ 70-80 ರೂ. ಕಾಕಡ 40-50 ರೂ., ಕನಕಾಂಬರ 100 ರೂ. ಇದೆ. 

ಹಣ್ಣಿನ ದರ (ಒಂದು ಕೆ.ಜಿ.ಗೆ): ಸೇಬು 120 ನಿಗದಿತ ದರವಾಗಿದ್ದು, 110 ಮತ್ತು 100 ರೂ.ಗೂ ಮಾರಾಟ ಮಾಡಲಾಗುತ್ತಿತ್ತು. ಮೋಸುಂಬೆ 80 ರೂ., ದಾಳಿಂಬೆ 100 ರೂ., ಪ್ಯಾರಲೆ 100 ರೂ., ದ್ರಾಕ್ಷಿ 120 ರೂ., ಸಪೋಟ 80 ರೂ., ಕಿತ್ತಳೆ 80 ರೂ., ಯಾಲಕ್ಕಿ ಬಾಳೆ 60-70 ರೂ., ಪಚ್ಬಾಳೆ 20-25 ರೂ.ಗೆ ಮಾರಾಟದ ದರವಿತ್ತು. ಎಪಿಎಂಸಿ ಬಳಿಯ ಮಾರುಕಟ್ಟೆಯಲ್ಲೂ ಹೆಚ್ಚು ಕಡಿಮೆ ಇದೇ ದರವಿತ್ತು.