June 18, 2019

ನೀತಿ ಸಂಹಿತೆಯೇ ಧರ್ಮ

ತರಳಬಾಳು ಜಗದ್ಗುರುಗಳ ವ್ಯಾಖ್ಯಾನ

ನೀತಿ ಸಂಹಿತೆಯು ಒಂದು ಧರ್ಮ ಮತ್ತು ಕರ್ತವ್ಯ ಎಲ್ಲರೂ ಅದನ್ನು ಪಾಲಿಸಬೇಕು. ನೀತಿ ಸಂಹಿತೆ ಧರ್ಮದ ಒಂದು ಅಂಶವಾಗಿದ್ದು ಸಾರ್ವಕಾಲಿಕವಾಗಿ ಆಚರಣೆಗೆ ಯೋಗ್ಯವಾದುದು ಎಂದು ತರಳಬಾಳು ಜಗದ್ಗುರು ಡಾ.ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮೀಜಿ ತಿಳಿಸಿದರು.

ಅವರು ಸಿರಿಗೆರೆಯ ತರಳಬಾಳು ಜಗದ್ಗುರು ಬೃಹನ್ಮಠದ ಐಕ್ಯಮಂಟಪದಲ್ಲಿ ಅಣ್ಣನ ಬಳಗದವರು ಏರ್ಪಡಿಸಿದ್ದ ಕಾಶಿಮಹಾಲಿಂಗ ಸ್ವಾಮಿಗಳವರ 48ನೆಯ ಶ್ರದ್ಧಾಂಜಲಿಯ ದಿವ್ಯ ನೇತೃತ್ವ ವಹಿಸಿ ಆಶೀರ್ವಚನ ನೀಡುತ್ತಿದ್ದರು.

ನೀತಿ ಸಂಹಿತೆ ಕೇವಲ ಚುನಾವಣಾ ಅವಧಿಗೆ ಸೀಮಿತವಾಗಬಾರದು. ಹಾಗೇನಾದರೂ ಚುನಾವಣಾ ಅವಧಿಯಲ್ಲಿ ಮಾತ್ರ ಚುನಾವಣಾ ನೀತಿ ಸಂಹಿತೆ ಪಾಲಿಸಿ ಉಳಿದ ಅವಧಿಯಲ್ಲಿ ನೀತಿ ಸಂಹಿತೆ ಪಾಲಿಸುವಂತಿಲ್ಲ ಎಂಬರ್ಥ ಬರುತ್ತದೆ. ನೀತಿ ಸಂಹಿತೆ ಕೇವಲ ರಾಜಕಾರಣಿಗಳಿಗೆ ಮಾತ್ರ ಸೀಮಿತವಲ್ಲ. ಅದು ಎಲ್ಲರಿಗೂ ಅನ್ವಯಿಸುವ ಧರ್ಮ, ಕರ್ತವ್ಯ, ಸದಾ ಅನುಸರಿಸಬೇಕಾದುದು. ವ್ಯಕ್ತಿ ಮತ್ತು ಸಾಮಾಜಿಕ ಜೀವನಕ್ಕೆ ಅಗತ್ಯವಾದ ಜೀವನ ಮೌಲ್ಯವಾಗಿದೆ.

ಚುನಾವಣೆಯಲ್ಲಿ ಯಾರಿಗೆ ಮತ ಚಲಾಯಿಸಬೇಕು ಎಂಬ ಪ್ರಶ್ನೆ ಸಂಕೀರ್ಣವಾದುದು. ಯಾರು ಒಳ್ಳೆಯವರು, ಕೆಟ್ಟವರು ಎಂದು ನಿರ್ಧರಿಸುವುದು ಕಷ್ಟ. ವ್ಯಕ್ತಿಯನ್ನು ನೋಡಿ ಮತ ಹಾಕಬೇಕೆ? ಪಕ್ಷವನ್ನು ನೋಡಿ ಮತಹಾಕಬೇಕೆ? ಎಂಬ ಸಂದಿಗ್ದತೆ ಮತದಾರರನ್ನು ಕಾಡುತ್ತಿದೆ. ಮುಂಬರುವ ದಿನಗಳಲ್ಲಿ ಭ್ರಷ್ಟಾಚಾರ ರಹಿತ ಚುನಾವಣೆ ಶುದ್ಧ ರಾಜಕಾರಣ ಬರಬಹುದೆಂಬ ಆಶಾಭಾವನೆ ಹೊಂದೋಣ ಎಂದರು.

ದಿವ್ಯ ಸಾನ್ನಿಧ್ಯ ವಹಿಸಿದ್ದ ಡಾ.ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ತರಬೇತುದಾರನಿದ್ದಂತೆ ಕುದುರೆ ಇರುತ್ತದೆ. ತರಬೇತುದಾರ ಕುಂಟುತ್ತಾ ನಡೆಯುತ್ತಿದ್ದರೆ ಸರಿಯಾಗಿ ನಡೆಯುತ್ತಿರುವ ಕುದುರೆಯೂ ಕುಂಟುತ್ತಾ ನಡೆಯುತ್ತದೆ. ಆದ್ದರಿಂದ ಧಾರ್ಮಿಕ ಕ್ಷೇತ್ರದಲ್ಲಿ ಧರ್ಮಾಧಿಕಾರಿಗಳು ರಾಜಕೀಯ ನೇತಾರರು, ವಾಣಿಜ್ಯ ಕ್ಷೇತ್ರದಲ್ಲಿನ ಶಿಕ್ಷಕರು ಹಾಗೂ ಇತರರಿಗೆ ಮಾರ್ಗದರ್ಶನ ಮಾಡುವ ನಾಯಕರು ಸರಿಯಾಗಿ ನಡೆದರೆ ಜನ ಸಾಮಾನ್ಯರೂ ಸರಿಯಾಗಿ ನಡೆಯುತ್ತಾರೆ. ನಾಯಕರು ಮತ್ತು ಮಾರ್ಗದರ್ಶಕ ನಡೆ-ನುಡಿಗಳು ತಪ್ಪಾಗಿದ್ದರೆ ಜನರ ತಪ್ಪನ್ನು ತಿದ್ದಲು ಸಾಧ್ಯವಾಗುವುದಿಲ್ಲ. ಕಾಶಿಮಹಾಲಿಂಗಸ್ವಾಮಿಗಳವರು ವಿರಕ್ತ ಗುರುಗಳಾಗಿ ಆಚಾರ-ವಿಚಾರ ಪರಿಶುದ್ಧರಾಗಿ ತಮ್ಮ ಶಿಷ್ಯರ ಓರೆ-ಕೋರೆಗಳನ್ನು ತಿದ್ದಿ ವ್ಯಕ್ತಿ ಮತ್ತು ಸಮಾಜವನ್ನು ತಿದ್ದಿದ ಮಹಾಗುರುಗಳಾಗಿದ್ದರು ಎಂದರು.

ಅಣ್ಣನ ಬಳಗದ ಅಧ್ಯಕ್ಷ ಐ.ಜಿ.ಚಂದ್ರಶೇಖರಯ್ಯ ಸ್ವಾಗತಿಸಿದರು.

ಬೆಳಿಗ್ಗೆ ಕರ್ತೃ ಗದ್ದುಗೆಯಲ್ಲಿ ಕಾಶಿಮಹಾಲಿಂಗ ಸ್ವಾಮಿಗಳವರ ಪ್ರತಿಮೆಗೆ ಪಂಚಾಭಿಷೇಕ, ಷೋಡಶೋಪಚಾರ ಪೂಜೆ ಶತಾಷ್ಟೋತ್ತರ ಪೂಜೆ ಮತ್ತು ಮಹಾ ಮಂಗಳಾರತಿ ಜರುಗಿತು.

ಕಾಶಿಮಹಾಲಿಂಗ ಸ್ವಾಮಿಗಳವರ ಭಾವಚಿತ್ರ ಮೆರವಣಿಗೆಯು ಬೃಹನ್ಮಠದ ಬಿರುದಾವಳಿಗಳೊಂದಿಗೆ, ವೀರಗಾಸೆ ನೃತ್ಯ ಹಾಗೂ ವಾದ್ಯಗೋಷ್ಠಿಯೊಂದಿಗೆ ಸಹಸ್ರಾರು ಜನರೊಂದಿಗೆ ವಿಜೃಂಭಣೆಯಿಂದ ಜರುಗಿತು.

Please follow and like us: