ನಗರದಲ್ಲಿ ಸಂಭ್ರಮದ ಶ್ರೀರಾಮ ನವಮಿ

ಪಿತೃವಾಕ್ಯ ಪರಿಪಾಲಕ ಹಾಗೂ ಏಕಪತ್ನಿ ವೃತಸ್ಥ ಶ್ರೀರಾಮನ ಜನ್ಮದಿನದ ಶ್ರೀರಾಮನ ನವಮಿ ಹಬ್ಬವನ್ನು ದಾವಣಗೆರೆಯಲ್ಲಿ ಶನಿವಾರ ಭಕ್ತಿ, ಸಂಭ್ರಮದಿಂದ ಆಚರಿಸಲಾಯಿತು.

ನಗರದಲ್ಲಿ ಶ್ರೀರಾಮನ ದೇವಾಲಯಗಳು, ಆಂಜನೇಯನ ದೇವಾಲಯಗಳು, ಶ್ರೀರಾಘವೇಂದ್ರ ಮಠಗಳಲ್ಲಿ ವಿಶೇಷ ಪೂಜೆ ಸಲ್ಲಿಸಿ, ರಾಮನನ್ನು ನೆನೆಯಲಾಯಿತು. ಹಬ್ಬದ ನಿಮಿತ್ತ ಹಲವೆಡೆ ಪಾನಕ, ಮಜ್ಜಿಗೆ ಕೋಸಂಬರಿ ವಿತರಿಸಲಾಯಿತು.

ತ್ರೇತಾಯುಗದಲ್ಲಿ ರಾವಣನ ಸಂಹಾರಕ್ಕಾಗಿ ನಾರಾಯಣನು ಚೈತ್ರ ಶುದ್ಧ ನವಮಿಯಂದು ಅಯೋಧ್ಯೆಯ ದಶರಥ ರಾಜ ಹಾಗೂ ಕೌಸಲ್ಯೆಯ ಹಿರಿಯ ಪುತ್ರನಾಗಿ, ಶ್ರೀರಾಮಚಂದ್ರನಾಗಿ ಜನಿಸಿದ ದಿನವನ್ನೇ ಶ್ರೀರಾಮನವಮಿ ಎಂದು ಆಚರಿಸಲಾಗುತ್ತಿದ್ದು, ಹಬ್ಬವು ತನ್ನದೇ ಆದ ಪಾವಿತ್ರ್ಯತೆ ಉಳಿಸಿಕೊಂಡು ಬಂದಿದೆ. 

ನಗರದ ಪಿ.ಜೆ. ಬಡಾವಣೆ ಶ್ರೀರಾಮ ಮಂದಿರದಲ್ಲಿ ಬೆಳಿಗ್ಗೆ ಶ್ರೀರಾಮನ್ನು ತೊಟ್ಟಿಲಿಗೆ ಹಾಕುವ ಶಾಸ್ತ್ರ ನಡೆಯಿತು. ನಂತರ ವಿಶೇಷ ಪೂಜೆಗಳು ನಡೆದವು. 

ಕನ್ನಿಕಾ ಪರಮೇಶ್ವರಿ ದೇವಸ್ಥಾನ, ಪಬ್ಲಿಕ್ ರಿಲೀಜಿಯಸ್ ಟ್ರಸ್ಟ್‌ ವತಿಯಿಂದ ರಾಮನವಮಿ ಪ್ರಯುಕ್ತ ಸಂಜೆ  ಶ್ರೀ ಕನ್ನಿಕಾ ಪರಮೇಶ್ವರಿ ದೇವಸ್ಥಾನ ದಲ್ಲಿ ವಾಸವಿ ಭಜನಾ ಮಂಡಳಿ ವತಿಯಿಂದ ಭಜನೆ, ಪ್ರಾಕಾರೋತ್ಸವ, ಪ್ರಸಾದ ವಿನಿಯೋಗ ಕಾರ್ಯಕ್ರಮ ನಡೆಯಿತು.

ಶ್ರೀ ರಾಮ ಸೇನೆ ಆಶ್ರಯದಲ್ಲಿ ವೈಷ್ಣವಿ ಚೇತನ ಸ್ಕೂಲ್ ಎದುರುಗಡೆ ಸಾರ್ವಜನಿಕರಿಗೆ ಪಾನಕ ಕೋಸಂಬರಿ ವಿತರಿಸಲಾಯಿತು.