ನಗರದಲ್ಲಿ ಅನುಭವ ಮಂಟಪ ನಿರ್ಮಾಣಕ್ಕೆ ಸರ್ಕಾರದಿಂದ 2 ಕೋಟಿ ರೂ.

ಶ್ರೀ ರಂಭಾಪುರಿ ಜಗದ್ಗುರುಗಳ ದಸರಾ ದರ್ಬಾರ್‌ನಲ್ಲಿ ಯಡಿಯೂರಪ್ಪ

ದಾವಣಗೆರೆ, ಸೆ.29- ನಗರದ ಅಭಿನವ ರೇಣುಕ ಮಂದಿರದಲ್ಲಿ ಅನುಭವ ಮಂಟಪ ನಿರ್ಮಾಣಕ್ಕೆ 2 ಕೋಟಿ ರೂ.ಗಳನ್ನು ಸರ್ಕಾರದಿಂದ ನೀಡುವುದಾಗಿ ರಾಜ್ಯದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಘೋಷಿಸಿದರು. 

ಮುಖ್ಯಮಂತ್ರಿಗಳು ಇಂದು ನಗರದ ಸರ್ಕಾರಿ ಪ್ರೌಢಶಾಲಾ ಮೈದಾನದಲ್ಲಿ ಶ್ರೀ ರಂಭಾಪುರಿ ಜಗದ್ಗುರುಗಳ 28ನೇ ದಸರಾ ದರ್ಬಾರ್‌ ಮಹೋತ್ಸವ ಉದ್ಘಾಟಿಸಿ ಮಾತನಾಡುತ್ತಿದ್ದರು. 

ಅನುಭವ ಮಂಟಪ ನಿರ್ಮಾಣಕ್ಕೆ ದಾನಿ ಗಳಿಂದಲೂ 1 ಕೋಟಿ ರೂ ಹಣವನ್ನು ಸಂಗ್ರಹಿಸಿ ಭವ್ಯವಾದ ಸಮುದಾಯ ಭವನವನ್ನು ನಿರ್ಮಾಣ ಮಾಡಬೇಕೆಂದು ಅವರು ಕರೆ ನೀಡಿದರು. 

ವೀರಶೈವ-ಲಿಂಗಾಯತ ಅಭಿವೃದ್ಧಿ ನಿಗಮ ಸ್ಥಾಪಿಸಿ, ಅನುದಾನವನ್ನು ನೀಡುವ ಬಗ್ಗೆ ಚಿಂತನೆ ನಡೆಸುತ್ತೇನೆ. ಎಲ್ಲಾ ಸಮುದಾಯಗಳ ಅಭಿವೃದ್ಧಿಯನ್ನೂ ಕೈಗೊಳ್ಳುವ ಬಗ್ಗೆ ವಿಶಾಲ ಭಾವನೆಯನ್ನು ಹೊಂದಿದ್ದೇನೆ. ಮುಂದಿನ ಆಯ-ವ್ಯಯದಲ್ಲಿ ಈ ಉದ್ದೇಶಕ್ಕಾಗಿ 250 ಕೋಟಿ ರೂ.ಗಳನ್ನು ತೆಗೆದಿರಿಸಲಾಗುವುದೆಂದು ಹೇಳಿದರು. 

ರಾಜ್ಯದಲ್ಲಿ ಈ ಬಾರಿ ಅತಿವೃಷ್ಟಿ – ಅನಾವೃಷ್ಟಿಯಿಂದ ಜನರು ಕಂಗಾಲಾಗಿದ್ದಾರೆ. ಆದುದರಿಂದ ನೊಂದವರಿಗೆ ಪರಿಹಾರ ಕಲ್ಪಿಸುವ ಬಗ್ಗೆ ಸರ್ಕಾರ ಹೆಚ್ಚಿನ ಗಮನ ನೀಡುತ್ತಿದೆ, ಆದ್ದರಿಂದ ಖರ್ಚು ಕಡಿಮೆ ಮಾಡಲಾಗುತ್ತಿದೆ ಎಂದರು.

ರಾಜ್ಯದಲ್ಲಿ ಯುವಕರು ತಂಬಾಕು ಸೇವನೆಯಿಂದ ಹಾಳಾಗುತ್ತಿದ್ದಾರೆ. ಆದ್ದರಿಂದ ತಂಬಾಕು ನಿಷೇಧ ಮಾಡುವಂತೆ ಕೆಲವರು ಹೇಳುತ್ತಿದ್ದು, ಅಡಿಕೆ ಬೆಳೆಗಾರರ ಸಮಸ್ಯೆಯೂ ಇದ್ದು, ಈ ವಿಷಯದಲ್ಲಿ ಪರಿಶೀಲನೆ ನಡೆಸಿ ನಿರ್ಧಾರ ಕೈಗೊಳ್ಳಲಾಗುವುದು ಎಂದು ಹೇಳಿದರು. 

ತಂತಿಯ ಮೇಲೆ ನಡೆಯುತ್ತಿದ್ದೇನೆ : ಬಿಎಸ್‌ವೈ
ನಾನು ಮುಖ್ಯಮಂತ್ರಿಯಾಗಿದ್ದು ತಂತಿಯ ಮೇಲೆ ನಡೆಯುತ್ತಿದ್ದೇನೆ ಎಂದು ರಾಜ್ಯದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನೋವಿನಿಂದ ತಿಳಿಸಿದರು. ಮುಖ್ಯಮಂತ್ರಿಗಳು ಇಂದು ನಗರದ ಸರ್ಕಾರಿ ಪ್ರೌಢಶಾಲಾ ಮೈದಾನದಲ್ಲಿ ಶ್ರೀ ರಂಭಾಪುರಿ ಜಗದ್ಗುರುಗಳ ದಸರಾ ದರ್ಬಾರ್‌ ಮಹೋತ್ಸವ ಉದ್ಘಾಟಿಸಿ ಮಾತನಾಡುತ್ತಿದ್ದರು. ರಾಜ್ಯದಲ್ಲಿ ನಡೆಯುತ್ತಿರುವ ರಾಜಕೀಯ ವಿದ್ಯಮಾನದಿಂದ ವಿಚಲಿತರಾದಂತೆ ಕಂಡುಬಂದ ಯಡಿಯೂರಪ್ಪನವರು ತಮ್ಮ ಅಂತರಾಳದ ಮಾತುಗಳನ್ನು ಧಾರ್ಮಿಕ ಸಮಾರಂಭದಲ್ಲಿ ಶ್ರೀ ರಂಭಾಪುರಿ ಜಗದ್ಗುರುಗಳ ಸಾನ್ನಿಧ್ಯದಲ್ಲಿ ಹೇಳಿಕೊಂಡರು. 

ನಾನು ಇಂದು ಬೆಳಿಗ್ಗೆ ಮೈಸೂರು ದಸರಾ ಕಾರ್ಯಕ್ರಮ ಉದ್ಘಾಟಿಸಿದ್ದೇನೆ. ಹೀಗಾಗಿ ಅರಮನೆ ಹಾಗೂ ಗುರು ಮನೆಯ ದಸರಾ ಉದ್ಘಾಟಿಸಿರುವುದು ನನ್ನ ಸೌಭಾಗ್ಯ ಎಂದು ಕೃತಜ್ಞತೆ ಅರ್ಪಿಸಿದರು. 

ಕೇಂದ್ರ ರೈಲ್ವೆ ರಾಜ್ಯ ಸಚಿವ ಸುರೇಶ್ ಅಂಗಡಿ ಅವರು, ದಾವಣಗೆರೆ ರೈಲ್ವೆ ನಿಲ್ದಾಣದ ಆಧುನೀಕರಣ ಕಾರ್ಯವನ್ನು ತ್ವರಿತಗತಿಯಲ್ಲಿ ಕೈಗೊಳ್ಳಲಾಗುತ್ತಿದ್ದು, ನಗರದ ಮತ್ತಿತರೆ ಸಮಸ್ಯೆಗಳಿಗೂ ಪರಿಹಾರ ನೀಡುತ್ತೇನೆ ಎಂದು ಭರವಸೆ ನೀಡಿದರು. 

ಅಖಿಲ ಭಾರತ ವೀರಶೈವ ಮಹಾಸಭಾ ರಾಷ್ಟ್ರೀಯ ಅಧ್ಯಕ್ಷ ಡಾ. ಶಾಮನೂರು ಶಿವಶಂಕರಪ್ಪ ಅವರು, ಪ್ರತಿ ವರ್ಷ ನಡೆಯುವ ಶ್ರೀ ರಂಭಾಪುರಿ ಜಗದ್ಗುರುಗಳ ದಸರಾ ಮಹೋತ್ಸವಕ್ಕೆ ರಾಜ್ಯ ಸರ್ಕಾರದಿಂದ ಅನುದಾನ ನೀಡಬೇಕು ಎಂದು ಮುಖ್ಯಮಂತ್ರಿ ಯಡಿಯೂರಪ್ಪನವರನ್ನು ಕೋರಿದರು.

ಸಾನ್ನಿಧ್ಯ ವಹಿಸಿದ್ದ ಶ್ರೀ ರಂಭಾಪುರಿ ಜಗದ್ಗುರು ವೀರಸೋಮೇಶ್ವರ ಶಿವಾಚಾರ್ಯ ಮಹಾ ಸ್ವಾಮಿಗಳು, ಕೇಂದ್ರ ಸರ್ಕಾರದಿಂದ ಅತಿವೃಷ್ಟಿ ಪೀಡಿತ ಜನರಿಗೆ ಇನ್ನೂ ಪರಿಹಾರವನ್ನೇ ಘೋಷಿಸಿಲ್ಲ. ಇದರಿಂದ ರಾಜ್ಯದ ಜನರಿಗೆ ನೋವು  ಉಂಟಾಗಿದೆ. ಈ ಬಗ್ಗೆ ಕೇಂದ್ರ ಸರ್ಕಾರ ಶೀಘ್ರ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು. 

ಮುಖ್ಯ ಅತಿಥಿಗಳಾಗಿ ವಿಆರ್‌ಎಲ್‌ ಚೇರ್ಮನ್ ಡಾ. ವಿಜಯ ಸಂಕೇಶ್ವರ, ಸಂಸದ ಜಿ.ಎಂ. ಸಿದ್ದೇಶ್ವರ, ಕೈಗಾರಿಕೋದ್ಯಮಿ ಅಥಣಿ ವೀರಣ್ಣ, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಂ.ಪಿ. ರೇಣುಕಾಚಾರ್ಯ, ಶಾಸಕ ಎಸ್.ವಿ. ರಾಮಚಂದ್ರ, ಮಾಡಾಳ್‌ ವಿರೂಪಾಕ್ಷಪ್ಪ, ಲಿಂಗಣ್ಣ, ಮಾಜಿ ಶಾಸಕ ಬಿ.ಪಿ. ಹರೀಶ್‌ ಮತ್ತಿತರರು ಆಗಮಿಸಿದ್ದರು. 

ವೀರೇಶ್‌ ಕಿತ್ತೂರು ಅವರಿಂದ ಪ್ರಾರ್ಥನೆಯಾಯಿತು. ಜಿಲ್ಲಾ ವೀರಶೈವ ಸದ್ಭೋದನಾ ಸಂಸ್ಥೆ ಅಧ್ಯಕ್ಷ ದೇವರಮನೆ ಶಿವಕುಮಾರ್‌ ಸ್ವಾಗತಿಸಿದರು. ಕಾರ್ಯಕ್ರಮವನ್ನು ಶಾಂತಾ ಆನಂದ್‌ ನಿರೂಪಿಸಿದರು. 

ವೇದಿಕೆಯ ಮೇಲೆ ಲಕ್ಷ್ಮೇಶ್ವರದ ಉಪನ್ಯಾಸಕರಾದ ಡಾ. ಜಯಶ್ರೀ ಹೊಸಮನಿ, ಯಡಿಯೂರು ಶ್ರೀಗಳು, ಹರಪನಹಳ್ಳಿ ಶ್ರೀಗಳು ಬಿಳಕಿ ಶ್ರೀಗಳು ಸೇರಿದಂತೆ ಅನೇಕ ಸ್ವಾಮಿಗಳು, ಗಣ್ಯರು ಉಪಸ್ಥಿತರಿದ್ದರು.