June 18, 2019

ನಂದಿಗುಡಿ ಬೃಹನ್ಮಠದಲ್ಲಿ ಬಸಯ್ಯ ಎಂಬ ವಿದ್ಯಾರ್ಥಿಗೆ ಮರಿ ದೀಕ್ಷೆ : ಉತ್ತರಾಧಿಕಾರಿ ಎಂಬ ಗಾಳಿ ಸುದ್ದಿ

ಕೆಲವರಿಂದ ವಿರೋಧ : ಉತ್ತರಾಧಿಕಾರಿ ನೇಮಕ ಮಾಡಿಲ್ಲ ಸ್ವಾಮೀಜಿ ಸ್ಪಷ್ಟನೆ

ಮಲೇಬೆನ್ನೂರು : ನಂದಿಗುಡಿ ಬೃಹನ್ಮಠದಲ್ಲಿ ಗುರುವಾರ ಬಸವರಾಜಯ್ಯ  (ಬಸಯ್ಯ) ಎಂಬ ಬಾಲಕನಿಗೆ ಶ್ರೀ ಸಿದ್ದರಾಮೇಶ್ವರ ಶಿವಾಚಾರ್ಯ ಸ್ವಾಮೀಜಿ ಮರಿದೀಕ್ಷೆ ನೀಡುವುದು ಚರ್ಚೆಗೆ ಗ್ರಾಸವಾಗಿದೆ.

ಶ್ರೀಗಳವರು ಬಸವರಾಜಯ್ಯನವರಿಗೆ ನೀಡಿರುವುದು ಮರಿ ದೀಕ್ಷೆಯೇ ಅಥವಾ ಸ್ವಾಮಿತ್ವದ ದೀಕ್ಷೆಯೇ ಎಂಬುದು ಗೊಂದಲವಾಗಿದೆ. ಆದರೆ, ಮಠದ ಮೂಲಗಳ ಪ್ರಕಾರ ಬಸವರಾಜಯ್ಯನವರಿಗೆ ನೀಡಿರುವುದು ಮರಿದೀಕ್ಷೆ. ಇದಕ್ಕೆ ಮಠದ ಭಕ್ತರ ಸಮ್ಮತಿ ಇದೆ ಎಂದು ಹೇಳಲಾಗುತ್ತಿದ್ದರೂ ಕೆಲವರು ಸಾಮಾಜಿಕ ಜಾಲತಾಣದಲ್ಲಿ ಮರಿದೀಕ್ಷೆ ಮಾಡಿರುವುದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ.

ವಿವರ : ನಂದಿಗುಡಿ ಗ್ರಾಮದ ದಿ|| ಕಣದಮನಿ ಬಸಯ್ಯನವರ ಮೊಮ್ಮಗ (ಗಜೇಂದ್ರಯ್ಯ ನವರ ಮಗ) ಬಸವರಾಜಯ್ಯ ಎಂಬ 16 ವರ್ಷದ ಬಾಲಕನಿಗೆ ಶ್ರೀ  ಸಿದ್ದರಾಮೇಶ್ವರ ಶಿವಾಚಾರ್ಯ ಸ್ವಾಮೀಜಿ ಗುರುವಾರ ಬೆಳಿಗ್ಗೆ ವೀರಶೈವ – ಲಿಂಗಾಯತ ಪದ್ದತಿಯಂತೆ ಮರಿ ದೀಕ್ಷೆ ನೀಡುವ ಕಾರ್ಯಕ್ರಮ ನಡೆಸಿದ್ದಾರೆ.

ಬೆಳಗಿನ ಜಾವ 5 ಗಂಟೆಯಿಂದ ಬೃಹನ್ಮಠದ ಆವರಣದಲ್ಲಿರುವ ಕರ್ತೃ ಗದ್ದುಗೆಗಳಿಗೆ ವಿಶೇಷ ಪೂಜೆ, ಅಭಿಷೇಕ, ಮತ್ರ ಪಠಣಗಳು ನೆರವೇರಿಸಿದ ನಂತರ ಬಸವರಾಜಯ್ಯಗೆ ಶ್ರೀಗಳು ಸನ್ಯಾಸದ ಮರಿದೀಕ್ಷೆ ನೀಡಿದರು ಎಂದು ಹೇಳಲಾಗುತ್ತಿದೆ.

ನಂತರ ಬಸವೇಶ್ವರ ದೇವಸ್ಥಾನದಲ್ಲಿ ದೀಕ್ಷೆ ಪಡೆದ ಬಸವರಾಜಯ್ಯನವರ ಸಮ್ಮುಖದಲ್ಲಿ ಶ್ರೀಗಳು ದೇವರಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಈ ಸಂದರ್ಭದಲ್ಲಿ ಬಸವರಾಜಯ್ಯನವರ ತಂದೆ-ತಾಯಿ, ಸಂಬಂಧಿಕರು ಇದ್ದರು ಎನ್ನಲಾಗಿದೆ.

ಬಸವರಾಜಯ್ಯ ಅವರು ನಂದಿಗುಡಿ ಗ್ರಾಮದ ಸಮೀಪ ಇರುವ ಮುರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ 10ನೇ ತರಗತಿ ವ್ಯಾಸಂಗ ಮುಗಿಸಿದ್ದಾರೆ. 10ನೇ ತರಗತಿ ಪರೀಕ್ಷೆಯ ಫಲಿತಾಂಶ ಬಂದ ನಂತರ ಪಿಯುಸಿ ಪ್ರವೇಶ ಪಡೆಯಲಿದ್ದಾರೆ ಎಂದು ಹೇಳಲಾಗುತ್ತಿದೆ.

ಒಂದು ಮೂಲದ ಪ್ರಕಾರ ಸನ್ಯಾಸ ದೀಕ್ಷೆ ಪಡೆದಿರುವ ಬಸವರಾಜಯ್ಯನವರೆ ಶ್ರೀಗಳ ಉತ್ತರಾಧಿಕಾರಿ ಎಂಬ ಗಾಳಿ ಸುದ್ದಿಯೂ ಹರಿದಾಡುತ್ತಿದೆ.

ಬಸವರಾಜಯ್ಯನವರಿಗೆ ಮರಿ ದೀಕ್ಷೆ ನೀಡಿರುವ ಬಗ್ಗೆ ಸಂಪೂರ್ಣ ಮಾಹಿತಿ ನೀಡಲು ನಿರಾಕರಿಸಿದ ಶ್ರೀ ಸಿದ್ದರಾಮೇಶ್ವರ ಶ್ರೀಗಳವರು ನಾವು ಯಾವುದೇ ಉತ್ತರಾಧಿಕಾರಿಯನ್ನು ನೇಮಕ ಮಾಡಿಲ್ಲ, ಮರಿ ದೀಕ್ಷೆ ಮಾತ್ರ ನೀಡಿದ್ದೇವೆ. ಉತ್ತರಾಧಿಕಾರಿ ನೇಮಕವನ್ನು ಮಠದ ಭಕ್ತರ ಸಮ್ಮುಖದಲ್ಲಿ ನಿರ್ಧರಿಸುತ್ತೇವೆ ಎಂದು ಸ್ಪಷ್ಟನೆ ನೀಡಿದರು.

ವಿರೋಧ: ಶ್ರೀಗಳು ಗುರುವಾರ ನಮಗೆ ಯಾವುದೇ ಮಾಹಿತಿ ನೀಡದೆ ಮತ್ತು ಸಮಾಜದ ಸಭೆ ಕರೆದು ಚರ್ಚಿಸದೆ ಮರಿ ದೀಕ್ಷೆ ನೀಡಿದ್ದಾರೆ. ಇವರಿಗೆ ಈ ಅಧಿಕಾರ ಕೊಟ್ಟವರು ಯಾರು ಎಂದು ಜಿಗಳಿ ಇಂದೂಧರ್‌ ಅವರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.

ಇನ್ನೊಂದು ಮೂಲದ ಪ್ರಕಾರ ರಾಣೇಬೆನ್ನೂರು ತಾಲ್ಲೂಕಿನ ಸಣ್ಣ ಸಂಗಾಪುರ ಗ್ರಾಮದ ರುದ್ರಯ್ಯ ಎಂಬುವವರಿಗೆ ಈ ಹಿಂದೆ ಇದ್ದ ಶ್ರೀ ನಂದೀಶ್ವರ ಶಿವಾಚಾರ್ಯ ಸ್ವಾಮೀಜಿ ಅವರು ಮರಿದೀಕ್ಷೆ ನೀಡಿದ್ದರು. ಎಂಫಿಲ್‌ ಶಿಕ್ಷಣ ಪಡೆದಿರುವ ಮತ್ತು ಆಧ್ಯಾತ್ಮದ ಬಗ್ಗೆ ತಿಳಿದು ಕೊಂಡಿರುವ ರುದ್ರಯ್ಯ ಸ್ವಾಮೀಜಿ ಅವರನ್ನೇ ನಂದಿಗುಡಿ ಬೃಹನ್ಮಠದ ಉತ್ತರಾಧಿಕಾರಿಯನ್ನಾಗಿ ಮಾಡಬೇಕೆಂಬುದು ಜಿಗಳಿ ಇಂದೂಧರ್‌ ಮತ್ತಿತರರು ಬಹಳ ದಿನಗಳಿಂದ ಒತ್ತಾಯ ಮಾಡುತ್ತಲೇ ಬಂದಿದ್ದಾರೆ.ಆದರೆ ಇದಕ್ಕೆ ಸಮಾಜದ ಅನೇಕರು ವಿರೋಧ ವ್ಯಕ್ತಪಡಿಸಿದ್ದಾರೆಂದು ಹೇಳಲಾಗುತ್ತಿದೆ.

ರುದ್ರಯ್ಯ ಸ್ವಾಮೀಜಿ ಅವರು ನಂದಿಗುಡಿ ಬೃಹನ್ಮಠದಲ್ಲಿ ಸೇವೆ ಸಲ್ಲಿಸಲು ಒಲವು ಹೊಂದಿದ್ದಾರೆ ಎನ್ನಲಾಗಿದ್ದು, ದುಬೈ, ಯುರೋಪ್‌, ಮತ್ತಿತರ ದೇಶಗಳಲ್ಲಿ ಆಧ್ಯಾತ್ಮದ ಬಗ್ಗೆ ಉಪನ್ಯಾಸ ನೀಡಿರುವ ಅವರು ರಾಮಕೃಷ್ಣ ಆಶ್ರಮದಲ್ಲಿ ಅಧ್ಯಾತ್ಮ  ಶಿಕ್ಷಣದ ತರಬೇತಿಯನ್ನು ಪಡೆದಿದ್ದಾರೆಂದು ತಿಳಿದು ಬಂದಿದೆ.

ಗುರುವಾರ ಬಸವರಾಜಯ್ಯನವರಿಗೆ ನೀಡಿರುವುದು ಸ್ವಾಮಿತ್ವದ ದೀಕ್ಷೆಯೇ ಅಥವಾ ಸನ್ಯಾಸದ ಮರಿ ದೀಕ್ಷೆಯೋ ಎಂಬುದನ್ನು ಶ್ರೀಗಳವರೇ ಅಧಿಕೃತವಾಗಿ ಖಚಿತಪಡಿಸಿದರೆ ಈ ಎಲ್ಲಾ ಚರ್ಚೆಗಳಿಗೆ ತೆರೆ ಬೀಳಲಿದೆ.

Please follow and like us: