ಧುಮ್ಮಿಕ್ಕುವ ನೀರು ಅಲರ್ಜಿಗೆ ತವರು ?

ಕೆ.ಎನ್. ಮಲ್ಲಿಕಾರ್ಜುನ

ಕಾರಿಗನೂರು ಫಾಲ್ಸ್​​ನಲ್ಲಿ ಸ್ನಾನ ಮಾಡಿ ಬಂದ ಕೆಲವರಿಗೆ ಅಲರ್ಜಿ ಅನುಭವ

ಹಳ್ಳ-ಕೊಳ್ಳ, ನದಿ, ತೊರೆಗಳಲ್ಲಿಯೇ ಮಿಂದೆದ್ದು ನೀರಿನ ಹಿತ ಅನುಭವದಲ್ಲಿ ತೃಪ್ತಿ ಪಡುತ್ತಿದ್ದ ದಾವಣಗೆರೆ ಜಿಲ್ಲೆ ಜನತೆಗೆ ‘ಕಾರಿಗನೂರು  ಫಾಲ್ಸ್’ ಎಂಬುದು ‘ಒನ್ ಡೇ ಪಿಕ್ನಿಕ್ ಸ್ಪಾಟ್’ ಆಗಿ ಅತಿ ಶೀಘ್ರವಾಗಿ ಫೇಮಸ್ ಆಗಿದ್ದು ಈಗಾಗಲೇ ಹಳೆಯ ಮಾತು.

ಸಾಮಾಜಿಕ ಜಾಲ ತಾಣಗಳ ಮೂಲಕ ಬಹುಬೇಗ ಜನಪ್ರಿಯತೆ ಗಳಿಸಿದ್ದ ಈ ತಾಣಕ್ಕೆ, ಯುವಕ-ಯುವತಿಯರು, ಮಹಿಳೆಯರು, ಮಕ್ಕಳು, ಕುಟುಂಬ ಸಮೇತರಾಗಿ ತೆರಳಿ ಝುಳು-ಝುಳು ಹರಿಯುವ ತಂಪು ನೀರಿಗೆ ಮೈ ಒಡ್ಡಿ, ಸಂತಸದಿಂದ ಕೂಗಾಡಿ, ಸೆಲ್ಫಿ ಕ್ಲಿಕ್ಕಿಸಿಕೊಂಡು ಸಂಭ್ರಮಿಸಿ ಮರಳುತ್ತಿದ್ದರು. ಹಳೆಯ ಚೆಕ್ ಡ್ಯಾಂ ಒಂದು ಫಾಲ್ಸ್ ಹೆಸರಿನಲ್ಲಿ ಫೇಮಸ್ ಆಗುತ್ತಿರುವುದು ಕಾರಿಗನೂರು ಸುತ್ತ ಮುತ್ತಲಿನ ಗ್ರಾಮಸ್ಥರಿಗಷ್ಟೇ ಅಲ್ಲ, ಜಿಲ್ಲೆಗೂ ಒಂದು ಹೆಮ್ಮೆಯ ವಿಷಯವೇ.

ಆದರೆ ಈ ಸ್ಥಳವನ್ನು ಪ್ರವಾಸಿ ತಾಣವನ್ನಾಗಿ ಮಾಡಬೇಕೆಂಬ ಒತ್ತಾಯ ಹೆಚ್ಚಾಗುತ್ತಿರುವ ಬೆನ್ನಲ್ಲಿಯೇ ಈ ಸ್ಥಳದಲ್ಲಿ ಸ್ನಾನ ಮಾಡಿದ ಕೆಲವರಿಗೆ ತುರಿಕೆ ಕಂಡು ಬರುತ್ತಿರುವ ವಿಷಯವೂ ಆತಂಕ ತಂದಿದೆ.

ಹೌದು, ಪಿಕ್ ನಿಕ್‌ಗೆ ಎಂದು ಬಂದು ನೀರಿನಲ್ಲಿ ಮಿಂದು ಮನೆಗೆ ತೆರಳಿದ ಅನೇಕರಿಗೆ ತುರಿಕೆಯ ಅನುಭವವಾಗಿದೆ. ಇದಕ್ಕೆ ಕಾರಣವೂ ಇದೆ.

ಫಾಲ್ಸ್ ಆಗಿ ಬದಲಾದ ಮಿನಿ ಚೆಕ್​ ಡ್ಯಾಂ
ಸುಮಾರು ವರ್ಷಗಳಿಂದ ಕೃಷಿಗೆ ಸೀಮಿತ ವಾಗಿದ್ದ ಈ ಮಿನಿ ಚೆ‌ಕ್‌ ಡ್ಯಾಮ್‌ ಇದೀಗ ಕಾರಿಗನೂರು ಫಾಲ್ಸ್ ಆಗಿ ಬದಲಾಗಿತ್ತು.  ಕೃಷಿ ಚಟುವಟಿಕೆಗಾಗಿ ಎಂಟರಿಂದ ಹತ್ತು ಅಡಿ ಎತ್ತರ, ಮೂರೂವರೆ ಅಡಿ ಅಗಲದ ತಡೆ ಗೋಡೆ ನಿರ್ಮಿಸಲಾಗಿತ್ತು. ತಡೆಗೋಡೆಯಿಂದ ನೀರು ಕೆಳಗೆ ಬೀಳುವ ಜಾಗದಲ್ಲಿ ಸುಮಾರು 20 ಅಡಿ ಅಗಲ, 200 ಅಡಿಗಿಂತಲೂ ಹೆಚ್ಚು ಉದ್ದದ ಸಿಮೆಂಟ್ ನೆಲಹಾಸು ಮಾಡಲಾಗಿದೆ. ಅಲ್ಲಿಂದ ನೀರು ರಭಸವಾಗಿ ಹರಿಯುತ್ತಿ ರುವುದರಿಂದ ಫಾಲ್ಸ್ ರೀತಿ ಕಾಣುತ್ತಿದೆ.
ಫಾಲ್ಸ್​ ಅಭಿವೃದ್ಧಿ ಪಡಿಸಿ ಜೆ.ಎಚ್. ಪಟೇಲ್ ಅವರ ಹೆಸರನ್ನು ಇಡಬೇಕೆಂಬುದೂ ಸಹ ಕಾರಿಗನೂರು ಗ್ರಾಮಸ್ಥರ ಒತ್ತಾಯವಾ ಗಿತ್ತು. ಫಾಲ್ಸ್ ಜನಪ್ರಿಯತೆ ಗಳಿಸಿದಂತೆ ಖುಷಿಯಾಗಿರುವ ಗ್ರಾಮಸ್ಥರಿಗೆ ಗುಂಡು-ತುಂಡಿನೊಂದಿಗೆ ಫಾಲ್ಸ್ ನತ್ತ ಬರುವ ಯುವಕರ ಗುಂಪುಗಳೂ ಹೆಚ್ಚಾಗಿ ಪರಿಸರ ಹಾಳು ಮಾಡುತ್ತಿರುವುದು ಸ್ಥಳೀಯರ ಆತಂಕಕ್ಕೆ ಕಾರಣವಾಗಿದೆ.
ಜಿಲ್ಲಾ ಪಂಚಾಯ್ತಿ ಸದಸ್ಯ ತೇಜಸ್ವಿ ಪಟೇಲ್ ಸೇರಿದಂತೆ ಸುತ್ತಲಿನ ಗ್ರಾಮಸ್ಥರು ಫಾಲ್ಸ್ ಅಭಿವೃದ್ಧಿಗೆ ಪಣ ತೊಟ್ಟಿದ್ದಾರೆ.  ಆದರೆ ಅಲ್ಲಿನ ನೀರು ಯೋಗ್ಯವೇ ಎನ್ನುವ ಪ್ರಶ್ನೆ ಇದೀಗ ಆತಂಕ ಸೃಷ್ಟಿಸಿದೆ.

ಇದೀಗ ಆಕರ್ಷಣೀಯ ಸ್ಥಳವಾಗಿರುವ ಕಾರಿಗ ನೂರು ಫಾಲ್ಸ್  ಬಳಿ ನೂರಾರು ಎಕರೆ ಪ್ರದೇಶದಲ್ಲಿ ಭತ್ತ ಬೆಳೆಯಲಾಗುತ್ತಿದೆ.  ಭತ್ತದ ಗದ್ದೆಯ ಬಸಿ ನೀರು ಚೆಕ್ ಡ್ಯಾಂ ಗೆ ಬಂದು ಬೀಳುತ್ತದೆ. ಇತ್ತೀಚಿನ ದಿನಗಳಲ್ಲಿ ಬತ್ತದ ಗದ್ದೆಗೆ ರಾಸಾಯನಿಕ ಗೊಬ್ಬರ ಹಾಗೂ ಔಷಧಿಯನ್ನು ಹೇರಳವಾಗಿಯೇ ಸಿಂಪಡಿ ಸಲಾಗುತ್ತಿದೆ. ಈ ಔಷಧಿ ಅಂಶ ನೀರಿನಲ್ಲಿ ಬೆರೆತು ಕೆಲ ಸೂಕ್ಷ್ಮ ವ್ಯಕ್ತಿಗಳಿಗೆ ಅಲರ್ಜಿಯಾಗಿ ತುರಿಕೆ ಬರಿಸಿದೆ.

ಸ್ನಾನ ಮಾಡುವಾಗ ನೀರು ಕಣ್ಣು, ಬಾಯಿ, ಮೂಗಿನಲ್ಲೂ ಹೋಗುವ ಸಾಧ್ಯತೆ ಇರು ವುದರಿಂದ ಕೇವಲ ತುರಿಕೆಯಷ್ಟೇ ಅಲ್ಲದೇ, ಬೇರೆ ಬೇರೆ ಅಪಾಯಗಳನ್ನು ಎದುರಿಸಬೇಕಾದ ಸಂದರ್ಭ ಬಂದರು ಬರಬಹುದು ಎನ್ನುವುದು ಅಲರ್ಜಿಗೆ ತುತ್ತಾದವರ ಮಾತು.

ಸದ್ಯ ಭತ್ತ ಕಟಾವಿಗೆ ಬಂದಿರುವುದರಿಂದ ಗೊಬ್ಬರ, ನೀರಿನಲ್ಲಿ ಬೆರೆಯುವ ಔಷಧೀಯ ಅಂಶ ಕಡಿಮೆ ಇರಬಹುದು. ಆದರೆ ಮುಂದೆ ನಾಟಿ ಮಾಡುವ ಸಂದರ್ಭದಲ್ಲಿ ಗದ್ದೆಗಳಿಗೆ ಸಿಂಪಡಿಸುವ ಗೊಬ್ಬರ, ಔಷಧಿ ಹೆಚ್ಚಾದಾಗ ಅಪಾಯವೂ ಹೆಚ್ಚಾಗಬಹುದೆಂಬ ಆತಂಕವೂ ಇದೆ. ಈ ಬಗ್ಗೆ ಆತಂಕ ವ್ಯಕ್ತಪಡಿಸಿರುವ ಜಿಲ್ಲಾ ಪಂಚಾಯ್ತಿ ಸದಸ್ಯ ತೇಜಸ್ವಿ ಪಟೇಲ್ ಅವರು ನೀರು ಆರೋಗ್ಯಕರವಾಗಿದೆಯೋ ಇಲ್ಲವೋ ಎಂಬುದನ್ನು ಖಾತ್ರಿ ಪಡಿಸುವಂತೆ ಸಹ  ಜಂಟಿ ಕೃಷಿ ನಿರ್ದೇಶಕರು, ಕೃಷಿ ವಿಜ್ಞಾನಿಗಳ ಮೊರೆ ಹೋಗಿದ್ದಾರೆ. ಇವರ ಮನವಿ ಆಲಿಸಿರುವ ಅಧಿಕಾರಿಗಳ ತಂಡ ಈಗಾಗಲೇ ಇಲ್ಲಿನ ನೀರಿನ ಸ್ಯಾಂಪಲ್ ಪಡೆದು ತೆರಳಿದೆ. ಇನ್ನೇನು ವರದಿ ಬರಬೇಕಿದೆಯಷ್ಟೇ ಎಂದಿದ್ದಾರೆ.

ಪರಿಹಾರವೇನು? ನಿನ್ನೆಯಷ್ಟೇ ಅಧಿಕಾರಿಗಳು, ವಿಜ್ಞಾನಿಗಳೊಂದಿಗೆ ಚೆಕ್ ಡ್ಯಾಂ ಸುತ್ತಮುತ್ತ ಪರಿಶೀಲನೆಗೆ ತೆರಳಿದ್ದ ತೇಜಸ್ವಿ ಪಟೇಲ್ ಅವರು ಪತ್ರಿಕೆಯೊಂದಿಗೆ ಮಾತನಾಡುತ್ತಾ, ಇಲ್ಲಿ ಬಂದು ಹೋದ ಜನರಿಗೆ ತುರಿಕೆ ಬಂದ ಬಗ್ಗೆ ಯಾವ ದೂರುಗಳೂ ಬಂದಿಲ್ಲ. ಆದರೆ ನೀರಿನಲ್ಲಿ ಔಷಧೀಯ ಅಂಶ ಬೆರೆಯುವ ಬಗ್ಗೆ ನನಗೂ ತಿಳಿದಿದೆ.  ಆದ್ದರಿಂದಲೇ ಪರೀಕ್ಷಿಸಲು ಮನವಿ ಮಾಡಿದ್ದೆ ಎಂದರು.

ಅಧಿಕಾರಿಗಳು ಇಲ್ಲಿನ ನೀರಿನ ಸ್ಯಾಂಪಲ್ ಕೊಂಡೊಯ್ದಿದ್ದಾರೆ.  ನೀರು ಗದ್ದೆಗಳಿಂದ ಬಹು ದೂರ ಸಾಗಿ ಬರುವುದರಿಂದ ಹಾಗೂ ಚೆಕ್ ಡ್ಯಾಂ ಬಳಿ 8 ರಿಂದ 10 ಅಡಿ ಮೇಲಿಂದ ಧುಮ್ಮಿಕ್ಕಿ ಬೀಳುವುದರಿಂದ ಔಷಧೀಯ ಅಂಶ ನೆಲದಲ್ಲಿಯೇ ಉಳಿಯುತ್ತದೆ. ಇದರಿಂದ ನೀರಿನಲ್ಲಿ ಈಜಾಡಿದರೆ, ಸ್ನಾನ ಮಾಡಿದರೆ ಯಾವುದೇ ತೊಂದರೆಯಾಗದು ಎಂದು ಅಧಿಕಾರಿಗಳು ಅಭಿಪ್ರಾಯಿಸಿದ್ದಾರೆ.  ಅಲ್ಲದೇ ಔಷಧೀಯ ಅಂಶವನ್ನು ಮತ್ತಷ್ಟು ಕಡಿಮೆ ಮಾಡಲು ಚೆಕ್ ಡ್ಯಾಂ ಬಳಿ ಮತ್ತೊಂದು ತಡೆಗೋಡೆ ನಿರ್ಮಿಸಿ ನೀರು ಶೇಖರಿಸಿ ಬಿಡುವ ಪರಿಹಾರವನ್ನೂ ಸೂಚಿಸಿದ್ದಾರೆ ಎಂದು ತೇಜಸ್ವಿ ಪಟೇಲ್ ವಿವರಿಸಿದರು.

ಒಟ್ಟಿನಲ್ಲಿ ಈ ಪ್ರದೇಶವನ್ನು ಅಭಿವೃದ್ಧಿ ಪಡಿಸುವ ಉದ್ದೇಶವಿದೆ. ಚೆಕ್​ಡ್ಯಾಂ ಸುತ್ತ ಖಾಸಗಿ ಜಮೀನುಗಳೇ ಇವೆ. ಅಲ್ಲಿನ ಕೃಷಿ ಚಟುವಟಿಕೆಗೆ ಯಾವುದೇ ಧಕ್ಕೆ ಬಾರದಂತೆ ಕ್ರಮ ತೆಗೆದುಕೊಳ್ಳಬೇಕಿದೆ. 

ಸದ್ಯದ ವರದಿ ಹೇಗೆ ಬರುತ್ತದೋ ತಿಳಿಯದು. ನೀರಿನಿಂದ ಯಾವುದೇ ಅಪಾಯವಿಲ್ಲ ಎಂದು ಹೇಳಿದರೂ, ಮುಂದೆ ಭತ್ತದ ನಾಟಿ ಮಾಡಿದಾಗ ಮತ್ತೆ  ಪರೀಕ್ಷಿಸಬೇಕಿದೆ. ಆಗಲೂ ಅಪಾಯವಿಲ್ಲದಿದ್ದರೆ. ಅಭಿವೃದ್ಧಿ ಪಡಿಸಿ ಪ್ರೇಕ್ಷಣೀಯ ಸ್ಥಳ ಮಾಡಬಹುದು. ಒಂದು ವೇಳೆ ನೀರು ಆರೋಗ್ಯಕರವಲ್ಲ ಎಂದು ತಿಳಿದರೆ, ಜನರು ಇಲ್ಲಿಗೆ ಬಾರದಂತೆ ಮನವರಿಕೆ ಮಾಡಿ ನಿರ್ಬಂಧಿಸುವುದು ಅನಿವಾರ್ಯವಾಗಲಿದೆ ಎಂದು ತೇಜಸ್ವಿ ಪಟೇಲ್ ಅಭಿಪ್ರಾಯ ಪಟ್ಟಿದ್ದಾರೆ.