ದ್ವೇಷ ಅಳಿಸಿ ಪ್ರೀತಿ ಬೆಳೆಸುವುದೇ ವಿಜಯದಶಮಿ

ಶರನ್ನವರಾತ್ರಿ ಕೊನೆಯ ದಿನ ರಂಭಾಪುರಿ ಜಗದ್ಗುರುಗಳ ವಿಜಯದಶಮಿ ಶಾಂತಿ ಸಂದೇಶ

ದಾವಣಗೆರೆ, ಅ.8- ಬೇಕು-ಬೇಡಗಳ ದ್ವಂದ್ವಗಳನ್ನು ಮೀರಿ ಮುಕ್ತ ನೆಲೆಯಲ್ಲಿ ಯುಕ್ತ ಜೀವನ ವಿಧಾನವನ್ನು ರೂಢಿಸಿಕೊಂಡು ದ್ವೇಷ ಅಳಿಸಿ ಪ್ರೀತಿ ಬೆಳೆಸುವುದೇ ವಿಜಯದಶಮಿ ಪರ್ವಕಾಲದ ವಿಶೇಷತೆ ಎಂದು  ರಂಭಾಪುರಿ ಪೀಠದ ಜಗದ್ಗುರು ಶ್ರೀ ಡಾ|| ಪ್ರಸನ್ನ ರೇಣುಕ ವೀರ ಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯ ಭಗತ್ಪಾದರು ಅಭಿಪ್ರಾಯಪಟ್ಟರು. 

ನಗರದ ಬಾಲಕರ ಸರ್ಕಾರಿ ಪ್ರೌಢ ಶಾಲಾ ಮೈದಾನದಲ್ಲಿ 10 ದಿನಗಳಿಂದ ನಡೆಯುತ್ತಿರುವ ರಂಭಾಪುರಿ ಜಗದ್ಗುರುಗಳ ಶರನ್ನವರಾತ್ರಿ ದಸರಾ ಧರ್ಮ ಸಮ್ಮೇಳನದ ಸಮಾರೋಪ ಸಮಾರಂಭದ ದಿವ್ಯ ಸಾನ್ನಿಧ್ಯ ವಹಿಸಿ ಜಗದ್ಗುರುಗಳು ವಿಜಯ ದಶಮಿಯ ಶಾಂತಿ ಸಂದೇಶದ ಆಶೀರ್ವಚನ ನೀಡಿದರು. 

ಇಂದು ಎಲ್ಲೆಡೆ ವ್ಯಷ್ಟಿಯೇ ವಿಜೃಂಭಿಸುತ್ತಿದೆ. ವ್ಯಷ್ಟಿಯ ತೀಕ್ಷಣವಾದ ವಿದ್ಯಮಾನಗಳು ಮನುಕುಲದ ಬದುಕಿನ ಪ್ರೀತಿಯನ್ನೇ ಹೊಸಕಿ ಹಾಕಿವೆ. ಪ್ರೀತಿಯನ್ನು ಕಳೆದುಕೊಂಡ ಬದುಕು ಯಾರಿಗೂ ಅರ್ಥವಾಗುವುದಿಲ್ಲ. ವಿಜಯದಶಮಿಯ ಪರ್ವಕಾಲದ ಕ್ಷಣಗಳು ವ್ಯಷ್ಟಿಯನ್ನು ಹೊರನೂಕಿ ಎಲ್ಲೆಡೆ ಸಮಷ್ಟಿಯೇ ಪಲ್ಲವಿಸಿ, ಹೆಮ್ಮರವಾಗಿ ಬೆಳೆಯಲು ಮಾರ್ಗದರ್ಶನ ಮಾಡುತ್ತವೆ. ಸಮಷ್ಟಿಯ ಸಂಕಲ್ಪದೊಂದಿಗೆ ಭಾವೈಕ್ಯದ ಬದುಕನ್ನು ಹೊಂದಿದಾಗ ಎಲ್ಲೆಡೆ ಭಯಮುಕ್ತ ಜೀವನ ಪಥ ಎಲ್ಲರದಾಗುತ್ತದೆ. ಬದುಕು ಎಲ್ಲಿಯೂ ಮುಗ್ಗರಿಸದಂತೆ ಮುನ್ನಡೆಯಲು ನಮ್ಮ ನೆಲದ ಧರ್ಮ, ಸಂಸ್ಕೃತಿ, ಸಂಸ್ಕಾರ, ನೀತಿ-ಸಂಹಿತೆಯ ತತ್ವ-ಸಿದ್ಧಾಂತಗಳು ದಾರಿ ತೋರಿಸಿವೆ. ಈ ಸೈದ್ಧಾಂತಿಕ ತತ್ವ-ಸಂದೇಶಗಳನ್ನು ಅರ್ಥೈಸಿಕೊಂಡು ಆಚರಣೆಯಲ್ಲಿ ತರುವಾಗಲೂ ಸಹ ಕುಬ್ಜತೆ ಇಣುಕಿ ಹಾಕದಂತೆ ನಿರಂತರ ಮುನ್ನೆಚ್ಚರಿಕೆ ಹೊಂದಬೇಕಾಗುತ್ತದೆ. ಬದುಕಿನ ಭಾವನಾತ್ಮಕ ಒಳ ಅಂತಸ್ತು ಜನಸ್ನೇಹಿಯಾಗಿ ತಿಳಿಗೊಳದ ನೀರಿನಂತೆ ಸದಾ ಶುಭ್ರತೆಯನ್ನು ಹೊಂದುವಲ್ಲಿ ವಿಜಯದಶಮಿಯ ಹತ್ತು ದಿನಗಳ ಚಿಂತನೆ ಬೆಳಕು ತುಂಬಿದೆ ಎಂದು ಅಭಿಪ್ರಾಯಪಟ್ಟರು. 

ದಸರಾ ಸಮ್ಮೇಳನ ಯಶಸ್ವಿ : ದೇವರಮನೆ ಸಂತಸ
ಕಾರ್ಯಕ್ರಮದಲ್ಲಿ ಸ್ವಾಗತ ಕೋರಿ ಪ್ರಾಸ್ತಾವಿಕ ಭಾಷಣ ಮಾಡಿದ ಜಿಲ್ಲಾ ವೀರಶೈವ ಸದ್ಭೋಧನಾ ಸಂಸ್ಥೆ ಅಧ್ಯಕ್ಷ ದೇವರಮನೆ ಶಿವಕುಮಾರ್, ಹತ್ತು ದಿನಗಳ ಕಾಲ ನಡೆದ ಈ ಕಾರ್ಯಕ್ರಮದ ಯಶಸ್ಸಿಗೆ ಪ್ರೋತ್ಸಾಹಿಸಿ, ಸಹಕರಿಸಿದ  ಎಲ್ಲರನ್ನೂ ಸ್ಮರಿಸಿ, ಕೃತಜ್ಞತೆ ಸಲ್ಲಿಸಿದರು.
`ಕಳೆದ 32 ವರ್ಷಗಳ ಹಿಂದೆ ನಗರದಲ್ಲಿ ನಡೆದ ರಂಭಾಪುರಿ ಜಗದ್ಗುರುಗಳ ದಸರಾ ಧರ್ಮ ಸಮ್ಮೇಳನದಲ್ಲಿ ನನ್ನ ತಾಯಿ ತನ್ನನ್ನು ಕರೆದುಕೊಂಡು ಬಂದಿದ್ದರು. ಅಂದು ನಾನು 8ನೇ ತರಗತಿಯಲ್ಲಿ ಓದುತ್ತಿದ್ದೆ. ಅಂದಿನ ಧರ್ಮ ಸಮ್ಮೇಳನವನ್ನು ನೋಡಿ, ನಾನೂ ಒಂದು ದಿನ ಇಂತಹ ಕಾರ್ಯಕ್ರಮ ಮಾಡಬೇಕೆಂಬ ಹಂಬಲ ಮೂಡಿತ್ತು. ಅದು ಈಗ ಕೂಡಿ ಬಂದಿದೆ.
ಸಮ್ಮೇಳನವೂ ಯಶಸ್ವಿಯಾಗಿದೆ’ ಎಂದು ಶಿವಕುಮಾರ್ ಸಂಸತ ವ್ಯಕ್ತಪಡಿಸಿದರು.
`ಸತತ ಹತ್ತು ದಿನಗಳ ಈ ಕಾರ್ಯಕ್ರಮವನ್ನು ನಡೆಸಬೇಕೆಂದು ಕಳೆದ 10 ವರ್ಷಗಳ ಹಿಂದಿನಿಂದಲೂ ನಾನು ಜಗದ್ಗುರುಗಳವರನ್ನು ಕೇಳಿಕೊಂಡು ಬರುತ್ತಿದ್ದೆ. ಜಗದ್ಗುರುಗಳು ಮುಂದಕ್ಕೆ ಹಾಕುತ್ತಲೇ ಬಂದಿದ್ದರು. ಕಳೆದ ವರ್ಷ ಜಗದ್ಗುರುಗಳೇ ನನ್ನನ್ನು ಕರೆದು ಮುಂದಿನ ವರ್ಷ ಕಾರ್ಯಕ್ರಮ ನಡೆಸು ಎಂದಾಗ, ಆ ಕ್ಷಣ ನನ್ನಲ್ಲಿ ಆದ ಸಂತೋಷ ಅಷ್ಟಿಷ್ಟಿಲ್ಲ. 32 ವರ್ಷಗಳ ಕನಸು ಈಗ ಈಡೇರಿತು ಎಂದು ಖುಷಿಯಿಂದ ಜಗದ್ಗುರುಗಳಿಗೆ ಧನ್ಯವಾದ ಹೇಳಿದೆ’ ಎಂದು ಶಿವಕುಮಾರ್ ಭಾವನಾತ್ಮಕವಾಗಿ ತಿಳಿಸಿದರು.
`ಇಂತಹ ದೊಡ್ಡ ಕಾರ್ಯಕ್ರಮವನ್ನು ನಡೆಸುವುದು ಅಷ್ಟೊಂದು ಸುಲಭದ ಮಾತಲ್ಲ. ಸಂಘಟನೆ ಮಾಡುವುದು ಅತ್ಯಂತ ದೊಡ್ಡ ಕೆಲಸ. ಆ ಎಲ್ಲಾ ಕೆಲಸಗಳು ಯಾವುದೇ ತೊಂದರೆಯಿಲ್ಲದೇ ನಡೆದಿವೆ. ಇದಕ್ಕೆ ನನಗೆ ಬೆನ್ನು ತಟ್ಟಿ ಸತತ ಮಾರ್ಗದರ್ಶನ ನೀಡಿದವರು ಶಾಸಕರಾದ ಡಾ. ಶಾಮನೂರು ಶಿವಶಂಕರಪ್ಪ ಮತ್ತು ಲೆಕ್ಕಪರಿಶೋಧಕ ಅಥಣಿ ವೀರಣ್ಣ ಅವರುಗಳಲ್ಲದೇ ನನ್ನ ತಾಯಿ-ತಂದೆ ಮತ್ತು ಸಹೋದರರು’ ಎಂದು ಹೇಳಿದ ಶಿವಕುಮಾರ್, ಸಹಕಾರ ನೀಡಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು.
ದಿ. ಗಣ್ಯರುಗಳಾದ ಈ ಹಿಂದಿನ ಜಗದ್ಗುರುಗಳ ಪರಮ ಭಕ್ತರಾಗಿದ್ದ ಅಥಣಿ ಕೊಟ್ರಪ್ಪ, ಹಳ್ಳೂರು ನಾಗರಾಜಪ್ಪ, ಎನ್.ಕೆ. ಚನ್ನವೀರಪ್ಪ, ಟಿ. ಜಯದೇವಪ್ಪ, ಡಿ.ಹೆಚ್. ಮುರುಗಯ್ಯ, ಎನ್​ಎಂಜೆಬಿ ಆರಾಧ್ಯ, ಎಸ್.ಎಂ. ಕೊಟ್ರಯ್ಯ, ದಾನಪ್ಪ ಜತ್ತಿ ಮತ್ತಿತರರು ರಂಭಾಪುರಿ ಜಗದ್ಗುರುಗಳ ಕುರಿತು ಮತ್ತು ಸಮ್ಮೇಳನ ನಡೆಸುವ ಬಗ್ಗೆ ತನಗೆ ಮಾರ್ಗದರ್ಶನ ನೀಡಿದ್ದರು. ಆದರೆ, ಆ ಗಣ್ಯರಾರು ಇಂದು ನಮ್ಮೊಂದಿಗಿಲ್ಲದಿರುವುದು ದುರದೃಷ್ಟಕರ. ಅವರು ಇದ್ದಿದ್ದರೆ ಇನ್ನೂ ಅದ್ಧೂರಿಯಾಗಿ ಸಮ್ಮೇಳನವನ್ನು ನಡೆಸಬಹುದಿತ್ತು ಎಂದು ಶಿವಕುಮಾರ್ ಅಭಿಪ್ರಾಯಪಟ್ಟರು.
ಸಮ್ಮೇಳನಕ್ಕೆ ಸಹಕಾರ ನೀಡಿದ ರೇಣುಕ ಸಾಂಸ್ಕೃತಿಕ ಸಂಘದ ಪದಾಧಿಕಾರಿಗಳು, ಬೆಳ್ಳುಳ್ಳಿ ಶಿವಕುಮಾರ್, ದೇವರಮನೆ​ ಶಿವರಾಜ್, ಇಟ್ಟಿಗುಡಿ ಮಹಾದೇವಪ್ಪ, ವೀರಣ್ಣ ಬಿ.ಶೆಟ್ಟರ್, ದೇವರಮನೆ ಮುರುಗೇಶ್, ಗುಂಡಗತ್ತಿ ರಾಜಶೇಖರ್, ಗಿರೀಶ್ ಎಸ್. ದೇವರಮನೆ, ಎಲ್. ಎಸ್. ದೇವೇಂದ್ರಪ್ಪ, ಆಲದಹಳ್ಳಿ ಸಿದ್ದರಾಮೇಶ್, ಅಲ್ದಿ ವಿಶ್ವನಾಥ್ ಮುಂತಾದವರ ಹೆಸರನ್ನು ಅವರು ಮೆಲುಕು ಹಾಕಿದರು.

ಅಡ್ಡಪಲ್ಲಕ್ಕಿ ಮಹೋತ್ಸವ: ವಿಜಯದಶಮಿಯ ನಿಮಿತ್ಯ ರಂಭಾಪುರಿ ಜಗದ್ಗುರುಗಳವರ ಅಡ್ಡಪಲ್ಲಕ್ಕಿ ಮಹೋತ್ಸವವು ನಗರದ ಶ್ರೀಮದ್ ಅಭಿನವ ರೇಣುಕ ಮಂದಿರದಿಂದ ಆರಂಭಗೊಂಡು, ಪಿ.ಬಿ ರಸ್ತೆ, ಪ್ರವಾಸಿ ಮಂದಿರ ರಸ್ತೆ, ಜಯದೇವ ವೃತ್ತ, ಡಾ. ಬಿ.ಆರ್. ಅಂಬೇಡ್ಕರ್ ವೃತ್ತ, ಜನತಾ ಬಜಾರ್ ರಸ್ತೆಯ ಮುಖಾಂತರ ಸಕಲ ಜಾನಪದ ವಾದ್ಯ ವೈಭವ ಮೇಳ, ಕಳಸ-ಕನ್ನಡಿ, ಭಕ್ತರ ಜಯಘೋಷ ಗಳೊಂದಿಗೆ ಸಹಸ್ರಾರು ಭಕ್ತರೊಂದಿಗೆ ಹೊರಟು ಸರ್ಕಾರಿ ಪ್ರೌಢಶಾಲಾ ಆವರಣ ತಲುಪಿತು. 

ಶಮೀ ಸೀಮೋಲ್ಲಂಘನೆ: ದಸರಾ ಧರ್ಮ ಸಮ್ಮೇಳನದ ಸಮಾರೋಪ ದಿನದಂದು ವಿಜಯ ದಶಮಿಯ ಪರ್ವ ಕಾಲದಲ್ಲಿ ಬಾಲಕರ ಸರ್ಕಾರಿ ಪ್ರೌಢಶಾಲಾ ಆವರಣದಲ್ಲಿ ವಿಶೇಷವಾಗಿ ನಿರ್ಮಿಸಲಾಗಿದ್ದ ಶಮೀವೃಕ್ಷದ ಕಟ್ಟೆಯಲ್ಲಿ ಬನ್ನಿ ವೃಕ್ಷಕ್ಕೆ ವಿಧಿವತ್ತಾಗಿ ಪೂಜೆ ನೆರವೇರಿಸಿದ ಶ್ರೀ ರಂಭಾಪುರಿ ಜಗದ್ಗುರುಗಳು ಶಮೀಸೀಮೋಲ್ಲಂಘನೆ ನೆರವೇರಿಸಿ, ಭಕ್ತಗಣಕ್ಕೆ ಆಶೀರ್ವದಿಸಿದರು. 

ಬೇಲೂರಿನಲ್ಲಿ ಮುಂದಿನ ದಸರೆ : ಶ್ರೀ ಜಗದ್ಗುರು ರಂಭಾಪುರಿ ವೀರಸಿಂಹಾಸನ ಮಹಾಸಂಸ್ಥಾನ ಪೀಠದ 2020 ನೇ ಸಾಲಿನ ಪ್ರಸ್ತುತ ಶ್ರೀ ರಂಭಾಪುರಿ ಜಗದ್ಗುರುಗಳವರ 29ನೇ ಶರನ್ನವರಾತ್ರಿ ದಸರಾ ಧರ್ಮ ಸಮ್ಮೇಳನವು ಹಾಸನ ಜಿಲ್ಲೆಯ ಐತಿಹಾಸಿಕ ಬೇಲೂರು ತಾಲ್ಲೂಕು ಕೇಂದ್ರದಲ್ಲಿ ಜರುಗಲಿದೆ. 

ಬೇಲೂರಿನ ಶಾಸಕ ಕೆ. ಎಸ್. ಲಿಂಗೇಶ್, ಹಾಸನ ಜಿಲ್ಲಾ ವೀರಶೈವ ಸಮಾಜದ ಅಧ್ಯಕ್ಷ ಬಿ. ಪಿ. ಐಸಾಮಿಗೌಡ್ರ, ತಾಲ್ಲೂಕು ವೀರಶೈವ ಸಮಾಜದ ಅಧ್ಯಕ್ಷ ಕೊರಟಗೆರೆ ಪ್ರಕಾಶ್  ಮುಂತಾದ ಭಕ್ತರು ತಮ್ಮಲ್ಲಿ ಭಿನ್ನವಿಸಿಕೊಂಡ ಮೇರೆಗೆ ರಂಭಾಪುರಿ ಜಗದ್ಗುರುಗಳು ಸಮ್ಮತಿಸಿದರು.  

ಸಮಾರಂಭದ ಕೊನೆಯಲ್ಲಿ ಶ್ರೀ ರಂಭಾಪುರಿ ಜಗದ್ಗುರುಗಳವರಿಗೆ ಸದ್ಭಕ್ತರಿಂದ ಭಕ್ತಿಯ ಭಿನ್ನವತ್ತಳೆ ಸಮರ್ಪಿಸಲಾಯಿತು. ಅನಂತರ ಜಗದ್ಗುರುಗಳವರಿಗೆ ಆಗಮಿಸಿದ್ದ ಸರ್ವ ಸದ್ಭಕ್ತರು ಬನ್ನಿ ನೀಡಿ ಕಾಣಿಕೆ ಅರ್ಪಿಸಿ ಆಶೀರ್ವಾದ ಪಡೆದರು.  

ಪೀಠದ ಆಡಳಿತಾಧಿಕಾರಿ ಎಸ್.ಬಿ.ಹಿರೇಮಠ, ಮುಕ್ತಿಮಂದಿರ, ಹಲಗೂರು, ಕುಪ್ಪೂರು, ಮಳಲಿ, ಸಂಗೊಳ್ಳಿ, ಸೂಡಿ, ಚನ್ನಗಿರಿ, ಹರಪನಹಳ್ಳಿ, ಬೇರುಗಂಡಿ, ಎಸಳೂರು, ಕಪಿಲಾಧಾರ, ಬಿಳಕಿ, ಕಾರ್ಜುವಳ್ಳಿ, ಮಾದಿಹಳ್ಳಿ, ತಾವರೆಕೆರೆ, ಉಕ್ಕಡಗಾತ್ರಿ, ಪುಣ್ಯಕೋಟಿಮಠ ಸೇರಿದಂತೆ ಅನೇಕ ಮಠಗಳ ಶ್ರೀಗಳು ಪಾಲ್ಗೊಂಡಿದ್ದರು. 

ಜಿಲ್ಲಾ ವೀರಶೈವ ಸದ್ಭೋದನಾ ಸಂಸ್ಥೆ ಅಧ್ಯಕ್ಷ ದೇವರಮನೆ ಶಿವಕುಮಾರ್ ಸ್ವಾಗತಿಸಿದರು. ಪೀಠದ ವಾರ್ತಾ ಸಂಯೋಜನಾಧಿಕಾರಿ ಸಿ.ಹೆಚ್.ಬಾಳನಗೌಡ್ರ, ವಾರ್ತಾ ಕಾರ್ಯದರ್ಶಿ ಗುರುಮೂರ್ತಿ ಯರಗಂಬಳಿಮಠ ಪ್ರಶಸ್ತಿ ವಾಚನ ಮಾಡಿದರು. ಸವಣೂರಿನ ಡಾ|| ಗುರುಪಾದಯ್ಯ ಸಾಲಿಮಠ ಮತ್ತು ಶಿವಮೊಗ್ಗದ ಶಾಂತಾ ಆನಂದ ನಿರೂಪಿಸಿದರು.