March 31, 2020

ದಾವಣಗೆರೆ ಸಂಪೂರ್ಣ ಸ್ತಬ್ಧ

ದಾವಣಗೆರೆ, ಮಾ. 22 – ಜನರಿಂದ, ಜನರಿಗಾಗಿ, ಜನರಿಗೋಸ್ಕರ ಕರೆ ನೀಡಲಾಗಿದ್ದ ಜನತಾ ಕರ್ಫ್ಯೂಗೆ ನಗರದಲ್ಲಿ ಹಿಂದೆಂದೂ ಕಂಡು ಕೇಳರಿಯದ ರೀತಿಯ ಸ್ಪಂದನೆ ದೊರೆತಿದೆ. ಕೊರೊನಾ ವೈರಸ್ ವಿರುದ್ಧದ ಹೋರಾಟದಲ್ಲಿ ಒಗ್ಗಟ್ಟಿನ ದೃಢತೆ ತೋರುವಲ್ಲಿ ನಗರದ ಜನತೆ ಯಶಸ್ವಿಯಾಗಿದ್ದಾರೆ.

ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಕರೆ ನೀಡಿದ್ದ ವಿನೂತನ ಜನತಾ ಕರ್ಫ್ಯೂ ಜನರಿಂದ ನಿರೀಕ್ಷೆಗೂ ಮೀರಿದ ಸ್ಪಂದನೆ ಪಡೆದಿದೆ. ಕೇವಲ ಮಾರುಕಟ್ಟೆ, ಮುಖ್ಯ ಬೀದಿಗಳು, ಪ್ರಮುಖ ವಾಣಿಜ್ಯ ತಾಣಗಳಷ್ಟೇ ಅಲ್ಲದೇ ನಗರದ ಮೂಲೆ ಮೂಲೆಗಳಲ್ಲಿರುವ ರಸ್ತೆಗಳೂ ಸಹ ಬೆಳಿಗ್ಗೆಯಿಂದಲೇ ನಿರ್ಜನವಾಗಿದ್ದವು.

ಸಾಮಾನ್ಯ ಬಂದ್‌ಗಳು ಅತಿ ತೀವ್ರವಾದರೂ ಸಹ ಮಾರುಕಟ್ಟೆ ಹಾಗೂ ಪ್ರಮುಖ ಬೀದಿಗಳಿಗೆ ಸೀಮಿತವಾಗಿರುತ್ತಿದ್ದವು. ಬಡಾವಣೆಗಳಲ್ಲಿ ಸಣ್ಣ ಅಂಗಡಿಗಳು ಎಂದಿನಂತೆ ಕಾರ್ಯ ನಿರ್ವಹಿಸುವುದು ಮಾಮೂಲಿಯಾಗಿತ್ತು. ಆದರೆ, ಭಾನುವಾರದ ಜನತಾ ಕರ್ಫ್ಯೂ ನಗರದ ಮೂಲೆ ಮೂಲೆಗಳನ್ನು ಬಿಡದೇ ತಲುಪಿತ್ತು.

ಜನರು ಮನೆಯಿಂದ ಹೊರಗೆ ಕದಲದೇ ಭಾನುವಾರ ಕುಟುಂಬದ ಜೊತೆ ಇದ್ದರು. ಆಸ್ಪತ್ರೆ, ಔಷಧದ ಅಂಗಡಿ, ಪೆಟ್ರೋಲ್ ಬಂಕ್ ಮುಂತಾದ ಅಗತ್ಯ ಸೇವೆಗಳನ್ನು ಹೊರತು ಪಡಿಸಿದರೆ ಉಳಿದೆಲ್ಲವೂ ಬಂದ್ ಆಗಿದ್ದವು. ನಗರದ ಪಿ.ಬಿ. ರಸ್ತೆಯಲ್ಲಿ ಅಲ್ಲೊಬ್ಬ ಇಲ್ಲೊಬ್ಬ ಬೈಕ್ ಸವಾರ, ಪಾದಚಾರಿ ಹೊರತು ಪಡಿಸಿದರೆ ಬೇರಾರೂ ಕಂಡು ಬರಲಿಲ್ಲ.

ರೈಲ್ವೇ ನಿಲ್ದಾಣದಲ್ಲಿ ಎಸೆಯಲಾಗಿದ್ದ ಆಹಾರ

ರೈಲುಗಳು ಶನಿವಾರ ರಾತ್ರಿಯಿಂದಲೇ ಕಾರ್ಯ ನಿರ್ವಹಿಸಲಿಲ್ಲ. ಸಾರಿಗೆ ಬಸ್‌ ಹಾಗೂ ನಗರ ಸಾರಿಗೆ ಬಸ್‌ಗಳು ಬೆಳಿಗ್ಗೆಯಿಂದ ಸ್ಥಗಿತಗೊಂಡಿದ್ದವು. ಆಟೋಗಳು ಸಂಪೂರ್ಣ ವಿರಳವಾಗಿದ್ದವು. ಬಂದ್‌ಗೆ ಕರೆ ನೀಡಿದಾಗ ಮಧ್ಯಾಹ್ನದವರೆಗೆ ಅಂಗಡಿಗಳ ಬಾಗಿಲು ಮುಚ್ಚಿ, ನಂತರ ತೆರೆಯುವ ಪ್ರವೃತ್ತಿಯೂ ಭಾನುವಾರ ಕಂಡು ಬರಲಿಲ್ಲ. ಜನರು ಮನೆಯಿಂದ ಹೊರಗೆ ಕಾಲಿಡುವುದಕ್ಕೆ ಒಂದು ದಿನ ಸಂಪೂರ್ಣ ವಿರಾಮ ನೀಡಿದ್ದರು.

ಒಂದೆಡೆ ಊಟವಿಲ್ಲ, ಇನ್ನೊಂದೆಡೆ ತಿನ್ನುವವರಿಲ್ಲ!
ಜನತಾ ಕರ್ಫ್ಯೂ ಕಾರಣದಿಂದಾಗಿ ನಗರದ ಹೋಟೆಲ್‌ಗಳು ಸಂಪೂರ್ಣವಾಗಿ ಬಂದ್ ಆಗಿದ್ದವು. ಹುಡುಕಾಡಿದರೂ ಹಿಡಿ ಅನ್ನವಿರಲಿ ಬಿಸ್ಕಿಟ್ – ಚಾಕೋಲೇಟ್ ಸಿಗದ ಪರಿಸ್ಥಿತಿ ಉಂಟಾಗಿತ್ತು.
ಊಟಕ್ಕಾಗಿ ಹೋಟೆಲ್ ಅವಲಂಬಿಸಿದ್ದ ಅವಿವಾಹಿತ ಜೀವಿಗಳು, ಹೋಟೆಲ್ ನೋಡಿದಿರಾ… ತೆರೆದಿರುವ ಹೋಟೆಲ್ ನೋಡಿದಿರಾ… ಎನ್ನುತ್ತಾ ಅಲೆದಾಡುತ್ತಿದ್ದುದು ಕಂಡು ಬಂತು. ಸರಕು ಸಾಗಣೆ ವಾಹನಗಳನ್ನು ನಗರಕ್ಕೆ ತಂದ ಚಾಲಕರು ದಣಿವಿನ ಜೊತೆಗೆ, ಊಟಕ್ಕಿಲ್ಲದ ಪರಿಸ್ಥಿತಿ ಎದುರಿಸಬೇಕಾಯಿತು.
ಮತ್ತೊಂದೆಡೆ ರೈಲ್ವೆ ನಿಲ್ದಾಣದಲ್ಲಿ ತಿಂಡಿ ತಿನ್ನುವ ವರಿಲ್ಲದೇ ಅದನ್ನು ಕಸಕ್ಕೆ ಎಸೆದು ಹೋಗಲಾಗಿತ್ತು. ರೈಲು ಸಂಚಾರವನ್ನು ಶನಿವಾರ ರಾತ್ರಿಯಿಂದಲೇ ರದ್ದುಗೊಳಿಸಲಾಯಿತು. ಆನಂತರ ಭಾನುವಾರದಂದು ದೇಶಾದ್ಯಂತ ಪ್ರಯಾಣಿಕರ ರೈಲು ಸಂಚಾರವನ್ನು ಮಾರ್ಚ್ 31ರವರೆಗೆ ವಿಸ್ತರಿಸುವುದಾಗಿ ಕೇಂದ್ರ ಸರ್ಕಾರ ಘೋಷಿಸಿತು.
ಇದರಿಂದ ರೈಲಿನಲ್ಲಿ ಮಾರಲು ತಂದಿದ್ದ ತಿಂಡಿಯನ್ನು ಮಾರಾಟಗಾರರು ನಿಲ್ದಾಣದಲ್ಲಿ ಎಸೆದು ಹೋಗಿದ್ದು ಕಂಡು ಬಂತು.
ಪೆಟ್ರೋಲ್‌ ಬಂಕ್‌ ನಿರಾಳ
ನಗರದ ಪೆಟ್ರೋಲ್ ಬಂಕ್‌ಗಳು ಎಂದಿನಂತೆ ತೆರೆದಿದ್ದವು. ಆದರೆ, ಪೆಟ್ರೋಲ್ ಹಾಕಿಸಿಕೊಳ್ಳಲು ಬಂದ ಬಹುತೇಕರು ಸೆಲ್ಫಿ, ವಿಡಿಯೋ ಗೀಳಿನ ಯುವಕರೇ ಆಗಿದ್ದರು. ಜಯದೇವ ಸರ್ವೀಸ್ ಸ್ಟೇಷನ್ ವ್ಯವಸ್ಥಾಪಕ ಕೊಟ್ರೇಶ್ ಮಾತನಾಡಿ, ಆಗೊಮ್ಮೆ ಈಗೊಮ್ಮೆ ಗ್ರಾಹಕರು ಬರುತ್ತಿದ್ದಾರೆ. ನಮ್ಮದು ಅಗತ್ಯ ಸೇವೆಯಾದ ಕಾರಣ ಬಂದ್ ಮಾಡುವಂತಿಲ್ಲ. ಹೋಟೆಲ್‌ಗಳು ಬಂದ್ ಆಗಿರುವ ಕಾರಣ ಕೆಲಸ ಗಾರರಿಗೆ ಮನೆಯಿಂದಲೇ ತಿಂಡಿ ತರಿಸುವ ವ್ಯವಸ್ಥೆ ಮಾಡಿದ್ದೇನೆ ಎಂದರು.
ಔಷಧಿಗೂ ಡಿಮ್ಯಾಂಡ್ ಇಲ್ಲ
ನಗರದಲ್ಲಿ ಔಷಧಿ ಅಂಗಡಿಗಳು ಎಂದಿನಂತೆ ಕಾರ್ಯ ನಿರ್ವಹಿಸಿ ದವು. ಆದರೆ, ಅಲ್ಲಿಯೂ ಗ್ರಾಹಕರ ಕೊರತೆ ಇತ್ತು. ಅಂಗಡಿಯಲ್ಲಿ ಆಗೊಮ್ಮೆ ಈಗೊಮ್ಮೆ ಗ್ರಾಹಕರ ದರ್ಶನವಾಗುತ್ತಿತ್ತು. ಬೆಳಿಗ್ಗೆ ಹತ್ತು ಗಂಟೆಗೆ ಮೂರು ಸಾವಿರ ವಾದರೂ ವ್ಯಾಪಾರ ಆಗುತ್ತಿತ್ತು. ಇಂದು ಬೆಳಿಗ್ಗೆಯಿಂದ ಇಬ್ಬರು ಮೂವರಷ್ಟೇ ಬಂದಿದ್ದಾರೆ ಎಂದು ಔಷಧಿ ಅಂಗಡಿ ನಾಗರಾಜ್ ತಿಳಿಸಿದರು.
ಬಾಲ್ಕನಿಯಲ್ಲಿ ಚಪ್ಪಾಳೆ‌ ಎಂದರೆ ಗುಂಪಾದರು
ಬೆಳಿಗ್ಗೆ ಜನತಾ ಕರ್ಫ್ಯೂ ಮಾಡಿ ಸಂಜೆ 5 ಗಂಟೆಗೆ ಜನತೆಯ ಆರೋಗ್ಯ ಕಾಪಾಡಲು ಶ್ರಮಿಸಿದ‌ವರಿಗೆ ಚಪ್ಪಾಳೆ ಮೂಲಕ ಕೃತಜ್ಞತೆ ಸಲ್ಲಿಸಿ ಎಂದು ಪ್ರಧಾನಿ‌ ಕರೆ ನೀಡಿದ್ದರು.
ಆದರೆ ವಿದ್ಯಾನಗರಿಯ ಜನತೆ ಮಾತ್ರ ಮನೆಯಿಂದ ಬೀದಿಗೆ ಬಂದು  ಹಲವಾರು‌ ಮನೆಯವರೆಲ್ಲಾ ಸೇರಿ ಚಪ್ಪಾಳೆ ತಟ್ಟಿ ಪೋಟೋಗಳಿಗೆ ಪೋಸ್ ಕೊಟ್ಟು ಸಾಮಾಜಿಕ ಜಾಲ ತಾಣಗಳಲ್ಲಿ ಹಂಚಿಕೊಂಡರು. ಭಗತ್ ಸಿಂಗ್ ನಗರದ‌ ಮನೆಯೊಂದರಲ್ಲಿ ಮನೆ ಮಂದಿ ಚಪ್ಪಾಳೆ ತಟ್ಟಿದ ವೀಡಿಯೋ ಮಾಡುವುದು‌ ಮರೆತ ಕಾರಣಕ್ಕಾಗಿ ಮತ್ತೊಮ್ಮೆ‌ ಅಕ್ಕ‌ಪಕ್ಕದ‌ ಮನೆ ಯವರನ್ನು ಸೇರಿಸಿ ಚಪ್ಪಾಳೆ ತಟ್ಟಿ ವೀಡಿಯೋ ಮಾಡಿಕೊಂಡ ಘಟನೆ ಯೂ‌ ನಡೆಯಿತು. 
ಐದು ಜನಕ್ಕಿಂತ ಹೆಚ್ಷು ಸೇರಬಾರದೆಂದು‌ ಸೆಕ್ಷನ್‌ ಜಾರಿ ಇದ್ದರೂ,  ವೈರಸ್‌ ತಡೆಗೆ ಸಾಮಾಜಿಕ ಅಂತರ‌ ಕಾಪಾಡಿಕೊಳ್ಳಬೇಕೆಂದು ಅರಿವು ಮೂಡಿಸಿದರೂ ಸಹ ಪ್ರಧಾನಿಯವರ ಆಶಯವನ್ನು ಸರಿಯಾಗಿ ತಿಳಿಯದ ಜನ ಗುಂಪಾಗಿಯೇ ಸೇರಿದ್ದರು. ಕೆಲವರು ಮಾತ್ರ ಬಾಲ್ಕಾನಿಯಲ್ಲಿ ನಿಂತು ಕೃತಜ್ಞತೆ ಸಲ್ಲಿಸಿದರು.
ಅದರಲ್ಲೂ ಜಿಲ್ಲೆಯ ಶಾಸಕರೊಬ್ಬರು ಗುಂಪು ಸೇರಿಸಿಯೇ ಚಪ್ಪಾಳೆ ತಟ್ಟಿದರು.

ಭಾನುವಾರ ನಡೆಯಬೇಕಿದ್ದ ಸಂತೆಯನ್ನು ರದ್ದುಗೊಳಿಸಲಾಗಿತ್ತು. ಹೀಗಾಗಿ ಕಳೆದ ವಾರ ಕೊರೊನಾ ವೈರಸ್ ಭೀತಿಯ ನಡುವೆಯೂ ಎಗ್ಗಿಲ್ಲದೇ ನಡೆದಿದ್ದ ಸಂತೆ, ಈ ವಾರ ಸಂಪೂರ್ಣ ನಿರ್ಜನವಾಗಿತ್ತು. ಇಡೀ ಮಾರುಕಟ್ಟೆ ಬಣಗುಡುತ್ತಿತ್ತು.

ನಿರ್ಜನವಾಗಿರುವ ರಸ್ತೆಗಳ ವಿಡಿಯೋ ಹಾಗೂ ಫೋಟೋಗಳು ವೈರಲ್ ಆಗಿ ಹರಿದಾಡಿದವು. ಈ ರೀತಿಯ ವಾತಾವರಣವನ್ನು ಜೀವನದಲ್ಲೇ ಕಂಡಿರದ ಹಲವಾರು ಯುವಕರು ತಮ್ಮ ಮೊಬೈಲ್‌ನಲ್ಲಿ ಚಿತ್ರೀಕರಿಸುತ್ತಾ ಹಂಚಿಕೊಳ್ಳುತ್ತಿದ್ದರು. ರಸ್ತೆಗಳಲ್ಲಿ ಅಗತ್ಯ ಕೆಲಸಗಳಿಗೆ ತೆರಳುವವರಿಗಿಂತ ವಿಡಿಯೋ ಹಾಗೂ ಚಿತ್ರಗಳನ್ನು ತೆಗೆಯುತ್ತಿದ್ದವರ ಸಂಖ್ಯೆಯೇ ಹೆಚ್ಚಾಗಿತ್ತು.

ಹಲವಾರು ಭಾರತ್ ಬಂದ್, ಮುಷ್ಕರಗಳನ್ನು ಕಂಡಿದ್ದೇವೆ. ಆದರೆ, ಇಷ್ಟರ ಮಟ್ಟಿಗೆ ಯಶಸ್ವಿಯಾದ ಕರ್ಫ್ಯೂ ಅನ್ನು ಎಂದೂ ಕಂಡಿರಲಿಲ್ಲ. ಒಬ್ಬರು ಬಂದ್‌ಗೆ ಕರೆ ನೀಡಿದರೆ, ಇನ್ನೊಬ್ಬರು ವಿರೋಧಿಸುತ್ತಿದ್ದರು. ಹೀಗಾಗಿ ಕೆಲವರಾದರೂ ಧಿಕ್ಕರಿಸಿ ನಿಲ್ಲುತ್ತಿದ್ದರು. ಆದರೆ, ಈ ಬಾರಿ ಜನತೆ ಒಗ್ಗಟ್ಟಾಗಿ ವೈರಸ್ ಸೋಂಕಿನ ವಿರುದ್ಧ ಬದ್ಧತೆಯನ್ನು ತೋರಿದ್ದಾರೆ ಎಂದು  ಸಾರ್ವಜನಿಕರು ಮಾತನಾಡುತ್ತಿದ್ದುದು ಕೇಳಿ ಬಂತು.

ಕೊರೊನಾ ವೈರಸ್ ಆತಂಕ ಹೆಚ್ಚುತ್ತಿರುವ ನಡುವೆಯೇ ಕರೆ ನೀಡಲಾಗಿದ್ದ ಜನತಾ ಕರ್ಫ್ಯೂ ಮೂಲಕ ದೇಶದ ಜನರು ಅಗತ್ಯ ಎದುರಾದರೆ ನಾವು ಕಠಿಣ ನಿರ್ಧಾರಗಳಿಗೆ ಸಿದ್ಧವಿದ್ದೇವೆ ಎಂಬ ಬದ್ಧತೆಯನ್ನು ತೋರಿಸಿದ್ದಾರೆ. ಇದು ವೈರಸ್ ವಿರುದ್ಧದ ಹೋರಾಟದಲ್ಲಿ ಆಶಾ ಭಾವನೆಗೆ ಕಾರಣವೂ ಆಗಿದೆ.