June 18, 2019

ದಾವಣಗೆರೆ ನೂತನ ಐಜಿಪಿಯಾಗಿ ಸೌಮೇಂದು ಮುಖರ್ಜಿ

ದಾವಣಗೆರೆ : ಪೂರ್ವ ವಲಯ ದಾವಣಗೆರೆಯ ನೂತನ ಪೋಲಿಸ್ ಮಹಾ ನಿರೀಕ್ಷಕರಾಗಿ ಸೌಮೇಂದು ಮುಖರ್ಜಿ ಇಂದು ಅಧಿಕಾರ ಸ್ವೀಕರಿಸಿದರು. 

ಬಿಹಾರ ಮೂಲದವರಾದ ಸೌಮೇಂದು ಮುಖರ್ಜಿ ಅವರು 1998ರ ಐಪಿಎಸ್ ಬ್ಯಾಚ್‍ನ ಅಧಿಕಾರಿ ಯಾಗಿದ್ದಾರೆ. ಈ ಹಿಂದೆ ಗುಲ್ಬರ್ಗಾದಲ್ಲಿ ಎಎಸ್‌ಪಿಯಾಗಿ, ಉತ್ತರ ಕನ್ನಡ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದಾರೆ. ಬೆಂಗಳೂರು ನಗರ ಆಗ್ನೇಯ ವಿಭಾಗದ ಡಿಸಿಪಿಯಾಗಿ ಹಾಗೂ ಆಂತರಿಕ ಭದ್ರತೆಯ ಐಜಿಪಿಯಾಗಿ ಸೇವೆ ಸಲ್ಲಿಸಿದ್ದು, ಅಗ್ನಿ ಶಾಮಕ ಮತ್ತು ಕೆಎಸ್‍ಆರ್‍ಟಿಸಿ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ. 

ನಗರದ ಐಜಿಪಿ ಕಚೇರಿಯಲ್ಲಿಂದು ಸಂಜೆ ಅಧಿಕಾರ ವಹಿಸಿಕೊಂಡು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ತಮ್ಮ ಪರಿಚಯದೊಂದಿಗೆ ತಾವು ಹಿಂದೆ ನಿರ್ವಹಿಸಿರುವ ಕರ್ತವ್ಯಗಳ ಬಗ್ಗೆ ವಿವರಿಸಿದರು.

ಈ ಭಾಗದಲ್ಲಿ ಇದೇ ಮೊದಲ ಬಾರಿಗೆ ಕಾರ್ಯನಿರ್ವಹಿಸುತ್ತಿದ್ದು, ಇಲಾಖೆಯ ತಂಡದ ನಾಯಕನಾಗಿ ಅಧಿಕಾರಿ ಮತ್ತು ಸಿಬ್ಬಂಧಿಗಳೊಂದಿಗೆ ಸೌಜನ್ಯದಿಂದ ಸಮನ್ವಯ ಸಾಧಿಸಿ ಕಾರ್ಯನಿರ್ವಹಿಸಲಾಗುವುದೆಂದರು. 

ಲೋಕಸಭಾ ಚುನಾವಣೆಯ ಬಂದೋಬಸ್ತ್ ಬಗ್ಗೆ ಪ್ರತಿಕ್ರಿಯಿಸಿದ ಅವರು, ಈ ಹಿಂದಿನ ಚುನಾವಣೆಗಳಲ್ಲಿ ಕಾರ್ಯನಿರ್ವಹಿಸಿರುವ ಅನುಭವವಿದ್ದು, ಚುನಾವಣೆಗೆ ತಕ್ಕಂತೆ ಸ್ಪಂದಿಸಿ ಸೂಕ್ತ ಬಂದೋಬಸ್ತ್ ವ್ಯವಸ್ಥೆ ಕೈಗೊಳ್ಳಲಾಗುವುದು. ಇತ್ತೀಚಿನ ದಿನಗಳಲ್ಲಿ ಇಲಾಖೆಯಲ್ಲಿ ತಂತ್ರಜ್ಞಾನ ಮೇಲ್ಮಟ್ಟದಲ್ಲಿದ್ದು, ಅದನ್ನು ಯಶಸ್ವಿಯಾಗಿ ಬಳಸಲಾಗುವುದೆಂದು ತಿಳಿಸಿದರು. 

ಜಿಲ್ಲೆಯಲ್ಲಿ ಇತ್ತೀಚೆಗೆ ಸರ್ಕಾರಿ ಮತ್ತು ಖಾಸಗಿ ಬಸ್‌ಗಳಿಂದ ಅಪಘಾತಗಳು ಹೆಚ್ಚಾಗಿವೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಇಲ್ಲಿಗೆ ಬರುವ ಮುನ್ನ ಜಿಲ್ಲೆಯ ಅಂಕಿ ಅಂಶಗಳನ್ನು ಗಮನಿಸಿದ್ದೇನೆ. ಅಪಘಾತಗಳಾಗುತ್ತಿರುವುದು ತಿಳಿದು ಬಂದಿದೆ. ಸಂಚಾರ ಸುಧಾರಣೆ ಮತ್ತು ಅಪಘಾತ ತಡೆಗೆ ಸಂಬಂಧಿಸಿದಂತೆ ಅಧಿಕಾರಿಗಳೊಂದಿಗೆ ಚರ್ಚಿಸಿ ಅಪಘಾತಗಳಿಗೆ ಕಾರಣಗಳನ್ನು ಹುಡುಕಲಾಗುವುದು ಎಂದು ಹೇಳಿದರು. 

ಈ ಹಿಂದೆ ಕೆಎಸ್‍ಆರ್‍ಟಿಸಿ ಇಲಾಖೆಯಲ್ಲಿ ಕಾರ್ಯನಿರ್ವಹಿಸಿದ ಅನುಭವವಿದ್ದು, ಈ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲಾಗುವುದು ಹಾಗೂ ಕೆಎಸ್‍ಆರ್‍ಟಿಸಿ ಇಲಾಖೆಯೊಂದಿಗೆ ಚರ್ಚಿಸಿ ಅಗತ್ಯ ಕ್ರಮಗಳನ್ನು ಕೈಗೊಳ್ಳಲು ಪ್ರಯತ್ನಿಸಲಾಗುವುದು. ಯಾವುದೇ ವಿಷಯಕ್ಕೆ ಸಂಬಂಧಿಸಿದ ಬಗ್ಗೆ ಪರಿಶೀಲಿಸಿ ಪರಾಮರ್ಷಿಸದೇ ಕ್ರಮಕೈಗೊಳ್ಳುವ ಭರವಸೆ ನೀಡಲಾಗುವುದಿಲ್ಲವೆಂದರು.

ಎಸ್ಪಿ ಆರ್‌. ಚೇತನ್‌ ಸೇರಿದಂತೆ ಅಧಿಕಾರಿ ಮತ್ತು ಸಿಬ್ಬಂಧಿ ವರ್ಗವು ನೂತನ ಐಜಿಪಿ ಸೌಮೇಂದು ಮುಖರ್ಜಿ ಅವರಿಗೆ ಹೂಗುಚ್ಛ ನೀಡಿ ಆತ್ಮೀಯವಾಗಿ ಸ್ವಾಗತಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಆರ್. ಚೇತನ್, ಹೆಚ್ಚುವರಿ ಪೋಲಿಸ್ ವರಿಷ್ಠಾಧಿಕಾರಿ ಟಿ.ಜೆ. ಉದೇಶ್‌ ಸೇರಿದಂತೆ ವಿವಿಧ ಪೊಲೀಸ್‌ ಠಾಣೆಗಳ ಪಿಎಸ್‌ಐ ಮತ್ತು ಇಲಾಖೆಯ ಅಧಿಕಾರಿಗಳು, ಸಿಬ್ಬಂಧಿಗಳು ಇದ್ದರು. 

Please follow and like us: