March 31, 2020

ದಾವಣಗೆರೆಯಲ್ಲಿ ಖರೀದಿಗೆ ಮುಗಿ ಬಿದ್ದ ಜನ

ದಾವಣಗೆರೆ, ಮಾ. 23- ನಿನ್ನೆ ತಾನೇ ಕೊರೊನಾ ಸೋಂಕು ನಿಯಂತ್ರಣಕ್ಕೆ ಜನತಾ ಕರ್ಫ್ಯೂಗೆ ಅಭೂತ ಪೂರ್ವ ಬೆಂಬಲ ನೀಡಿದ್ದ ಜನತೆ ಇಂದು ಕೊರೊನಾ ಭಯವೇ ನಮಗಿಲ್ಲ ಎಂಬಂತೆ ವಿವಿಧ ವಸ್ತುಗಳ ಖರೀದಿಗೆ ಮುಗಿ ಬಿದ್ದಿತ್ತು. ಸೋಮವಾರ ಬೆಳಿಗ್ಗೆಯಿಂದಲೇ ದಾವಣ ಗೆರೆಯ ಮಾರುಕಟ್ಟೆ ಪ್ರದೇಶ ಜನ ಜಂಗುಳಿಯಿಂದ ತುಂಬಾ ತೊಡಗಿತು. ಮಧ್ಯಾಹ್ನದ ಹೊತ್ತಿಗೆ ಗ್ರಾಮೀಣ ಪ್ರದೇಶದ ಜನತೆ ಹೆಚ್ಚಾಗಿತ್ತು. ಮಂಡಿಪೇಟೆ, ಜಯಚಾಮರಾಜ ವೃತ್ತ, ತರಕಾರಿ ಮಾರುಕಟ್ಟೆ, ಗಡಿಯಾರ ಕಂಬ, ಚೌಕಿಪೇಟೆ ಇತರೆಡೆ ಜನ ದಟ್ಟಣೆ ಹೆಚ್ಚಾಗಿ ಆಗಾಗ ಟ್ರಾಫಿಕ್ ಜಾಮ್ ಆಗುತ್ತಿತ್ತು.

ಬುಧವಾರದ ಯುಗಾದಿ ಹಬ್ಬಕ್ಕೆ ಅಗತ್ಯವಾದ ವಸ್ತು ಗಳನ್ನು ಖರೀದಿಸುವಲ್ಲಿ ಜನರು ಮಾರುಕಟ್ಟೆಗೆ ದಾಂಗುಡಿ ಇಟ್ಟಿದ್ದರು. ಇದರಲ್ಲಿ ಗ್ರಾಮೀಣರೇ ಹೆಚ್ಚಾಗಿದ್ದರು. ಆದರೆ ನೂರಾರು ಜನರು ಒಟ್ಟಾಗಿದ್ದರೂ ಯಾರಲ್ಲೂ ಕೊರೊನಾ ವೈರಸ್ ಭಯ ಕಂಡು ಬರಲಿಲ್ಲ. ಕೇವಲ ಬೆರಳೆಣಿಕೆಯಷ್ಟು ಜನರು ಮಾತ್ರ ಮಾಸ್ಕ್ ಧರಿಸಿ ಒಡಾಡುತ್ತಿದ್ದರು.

ನಿನ್ನೆಯಷ್ಟೇ ಜನತಾ ಕರ್ಫ್ಯೂ ದೇಶಾದ್ಯಂತ ಯಶಸ್ವಿ ಯಾಗಿತ್ತು. ಆದರೆ ಇಂದು ಸಾಮಾಜಿಕವಾಗಿ ಅಂತರ ಕಾಪಾಡಿಟ್ಟುಕೊಳ್ಳಬೇಕೆಂಬ ಎಚ್ಚರಿಕೆಗೆ ಯಾರೂ ಕೇರ್ ಮಾಡಲಿಲ್ಲ. ನಾ ಮುಂದು, ತಾ ಮುಂದೆ ಎಂದು ಹಣ್ಣು, ಹೂ, ತರಕಾರಿ, ದಿನಸಿ, ಬಟ್ಟೆ ಖರೀದಿಸಿದರು.

ಜಿಲ್ಲೆಯಲ್ಲಿ 144ನೇ  ಸೆಕ್ಷನ್ ಜಾರಿಗೊಳಿಸಿದ್ದನ್ನು ಜನತೆ ಸಾಮೂಹಿಕವಾಗಿ ಬಹಿಷ್ಕಾರ ಮಾಡಿದಂತೆ ಕಂಡು ಬಂತು. ಇನ್ನೂ ಬಟ್ಟೆ ಅಂಗಡಿಗಳನ್ನು ಬಂದ್ ಮಾಡಿಸಿರುವುದಾಗಿ ಜಿಲ್ಲಾಧಿಕಾರಿಗಳು ಹೇಳಿದ್ದರೂ, ಅರ್ಧ ಬಾಗಿಲು ತೆರೆದು ಬಟ್ಟೆ ವ್ಯವಹಾರ ನಡೆಸಲಾ ಯಿತು. ಜನತೆಯೂ ಸಹ ಬಟ್ಟೆ ಖರೀದಿಗೆ ಯಾವ ಆತಂಕವೂ ಇಲ್ಲದೆ ಅಂಗಡಿಯೊಳಗೆ ನುಗ್ಗುತ್ತಿದ್ದರು.

ಮಂಡಿಪೇಟೆಯಲ್ಲಿನ ಬಟ್ಟೆ, ಬಂಗಾರದ ಅಂಗಡಿ ಸೇರಿ ವಿವಿಧ ಅಂಗಡಿಗಳನ್ನು ಬೆಳಿಗ್ಗೆ  ಪೊಲೀಸರು ಬಂದ್ ಮಾಡಿಸುತ್ತಾ ಸಾಗುತ್ತಿದ್ದರೆ, ಪೊಲೀಸರು ಅತ್ತ ಸಾಗುತ್ತಲೇ ಮರು ಓಪನ್ ಮಾಡುತ್ತಿದ್ದರು. 

ತಳ್ಳುಗಾಡಿಗಳಲ್ಲಿ ಹಣ್ಣುಗಳ ಮಾರಾಟ ಸಂಜೆಯಾಗುತ್ತಲೇ ಜೋರಾಗಿತ್ತು. ಬೇಡಿಕೆ ಹೆಚ್ಚಾಗಿದ್ದನ್ನು ಕಂಡ ವ್ಯಾಪಾರಸ್ಥರು ನಿಗದಿತ ದರಕ್ಕಿಂತ ಹೆಚ್ಚಿನ ದರಕ್ಕೆ ಮಾರಾಟ ಮಾಡುತ್ತಿದ್ದರು. ಒಟ್ಟಿನಲ್ಲಿ ದಾವಣಗೆರೆ ಸಂಜೆ ಪುಲ್ ರಶ್ ಆಗಿತ್ತು.