December 6, 2019

ತಾಲ್ಲೂಕು ಕಚೇರಿಗೆ ಜಿಲ್ಲಾಧಿಕಾರಿ ದಿಢೀರ್ ಭೇಟಿ

ನಿಗದಿತ ವೇಳೆಗೆ ಕಚೇರಿಗೆ ಬಾರದ 28 ಸಿಬ್ಬಂದಿಗೆ ನೋಟಿಸ್

ದಾವಣಗೆರೆ : ತಾಲ್ಲೂಕು ಕಚೇರಿಗೆ ಸೋಮವಾರ ಬೆಳಿಗ್ಗೆ 10 ಗಂಟೆಗೆ ಅನಿರೀಕ್ಷಿತವಾಗಿ ಭೇಟಿ ನೀಡಿದ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಅವರು, ಅಲ್ಲಿರುವ ವ್ಯವಸ್ಥೆಗಳನ್ನು ಪರಿಶೀಲಿಸಿ ನಿಗದಿತ ಕಚೇರಿ ವೇಳೆಗೆ ಬಾರದಿದ್ದ 28 ಸಿಬ್ಬಂದಿಗಳಿಗೆ ನೋಟಿಸ್ ಜಾರಿ ಮಾಡಲು ಸೂಚಿಸಿದರು.

 ಸಾರ್ವಜನಿಕರು ತಮ್ಮ ಅಗತ್ಯ ಕಾರ್ಯಗಳ ನಿಮಿತ್ತ ತಾಲ್ಲೂಕು ಕಚೇರಿಗೆ ಭೇಟಿ ನೀಡಿದಾಗ ಸಿಬ್ಬಂದಿಗಳು ಕಚೇರಿಯಲ್ಲಿ ಲಭ್ಯವಿಲ್ಲದಿದ್ದರೆ ಅವರ ಕೆಲಸ ಕಾರ್ಯಗಳು ಆಗುವುದಾದರೂ ಹೇಗೆ? ಇದರಿಂದ ಸಾರ್ವಜನಿಕರಿಗೆ ಬಹಳ ತೊಂದರೆಯಾಗು ತ್ತಿದ್ದು, ಇಂತಹ ಪ್ರಕರಣಗಳು ಕಂಡುಬಂದರೆ ಮುಂದಿನ ದಿನಗಳಲ್ಲಿ ಅಂತಹ ನೌಕರರ ವಿರುದ್ಧ ಶಿಸ್ತಿನ ಕ್ರಮಗಳನ್ನು ಕೈಗೊಳ್ಳಲಾಗುವುದು ಹಾಗೂ ಕರ್ತವ್ಯ ಲೋಪವೆಸಗಿದ ಸಿಬ್ಬಂದಿಗಳ ಸಂಬಳ ತಡೆ ಹಿಡಿಯಲಾಗುವುದು ಎಂದು ಎಚ್ಚರಿಸಿದರು.

ಆಧಾರ್ ಕೇಂದ್ರದ ಬಳಿ ಉದ್ದನೆಯ ಸರತಿ ಸಾಲಿನಲ್ಲಿ ನಿಂತ್ತಿದ್ದ ಸಾರ್ವಜನಿಕರು, ಪುಟ್ಟ ಮಕ್ಕಳೊಂದಿಗೆ ಬಂದ ಮಹಿಳೆಯರ ಅಹವಾಲು ಆಲಿಸಿ, ತ್ವರಿತಗತಿಯಲ್ಲಿ ಕಾರ್ಯನಿರ್ವಹಿಸುವಂತೆ ಸಿಬ್ಬಂದಿಗಳಿಗೆ ಸೂಚಿಸಿದರು. 

ಜಿಲ್ಲೆಯ ಎಲ್ಲಾ ಸರ್ಕಾರಿ ಕಚೇರಿಗಳಿಗೆ ದಿಢೀರ್ ಭೇಟಿಯನ್ನು ಯಾವ ಸಮಯದಲ್ಲಾದರೂ ನೀಡಿ, ಕರ್ತವ್ಯ ಲೋಪ ಮತ್ತು ಗೈರು ಹಾಜರಾತಿ ಕಂಡುಬಂದಲ್ಲಿ ಶಿಸ್ತಿನ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದರು.