March 18, 2019

ಜಿಲ್ಲಾ ಅಭಿವೃದ್ಧಿಗೆ ಕಲ್ಲು ಹಾಕಿದ ಕಾಂಗ್ರೆಸ್

ಶ್ರೀ ತರಳ ಬಾಳು ಜಗದ್ಗುರು

ಕೇಂದ್ರ ಸರ್ಕಾರದಿಂದ ಸಾಕಷ್ಟು ಯೋಜನೆಗಳನ್ನು ಮಂಜೂರು ಮಾಡಿಸಿದ್ದೇನೆ. ಆದರೆ ಅವು ಕಾರ್ಯರೂಪಕ್ಕೆ ಬಂದರೆ ನನಗೆ ಒಳ್ಳೆಯ ಹೆಸರು ಬರುತ್ತದೆ ಎಂಬ ದ್ವೇಷದ ರಾಜಕಾರಣ ಮಾಡಿದ ಕಾಂಗ್ರೆಸ್, ಅಭಿವೃದ್ಧಿಗೆ ಕಲ್ಲುವ ಹಾಕುವ ಕೆಲಸ ಮಾಡಿತು ಎಂದು ಸಂಸದರೂ, ಲೋಕಸಭಾ ಕ್ಷೇತ್ರದ ಬಿಜೆಪಿ ಸಂಭಾವಿತ ಅಭ್ಯರ್ಥಿಯೂ ಆದ ಜಿ.ಎಂ. ಸಿದ್ದೇಶ್ವರ ಕಿಡಿಕಾರಿದರು.

ನಗರದ ರೇಣುಕ ಮಂದಿರದಲ್ಲಿ ಬಿಜೆಪಿ ದಕ್ಷಿಣ ವಿಧಾನಸಭಾ ಕ್ಷೇತ್ರದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಬೃಹತ್ ಕಾರ್ಯಕರ್ತರ ಸಮಾವೇಶವನ್ನುದ್ದೇಶಿಸಿ ಅವರು ಮಾತನಾಡಿದರು.

ಕೇಂದ್ರದ ಯೋಜನೆಗಳು ಹಾಗೂ ತಮ್ಮ ಅವಧಿಯಲ್ಲಿ ಮಂಜೂರಾದ ಯೋಜನೆಗಳ ಬಗ್ಗೆ ವಿವರಿಸಿದ ಅವರು, ನಾವು ಮಾಡಿದ ಕೆಲಸ ನಾವು ಹೇಳುತ್ತೇನೆ. ಅವರು ಮಾಡಿದ ಕೆಲಸ ಅವರು ಹೇಳಿಕೊಳ್ಳಲಿ. ಆದರೆ ಅವರು ನನ್ನನ್ನು ಮನೆಗೆ ಕಳುಹಿಸುತ್ತೇನೆ ಎಂದು ಹೇಳುತ್ತಿದ್ದಾರೆ. ಮೊದಲು ಅವರನ್ನು ಹುಚ್ಚಾಸ್ಪತ್ರೆಗೆ ಕಳುಹಿಸಬೇಕಿದೆ ಎಂದು ತಿರುಗೇಟು ನೀಡಿದರು.

ನರೇಂದ್ರ ಮೋದಿಯವರನ್ನು ಮತ್ತೊಮ್ಮೆ ಪ್ರಧಾನಿಯಾಗಿಸಲು ನನ್ನನ್ನು ಗೆಲ್ಲಿಸಿ. ಆ ಮೂಲಕ ಕ್ಷೇತ್ರಕ್ಕೆ ನಾನು ಮತ್ತಷ್ಟು ಸೇವೆ ಮಾಡಲು ಅವಕಾಶ ಮಾಡಿಕೊಡಿ. ರೈತರು, ಮಕ್ಕಳು, ಆರೋಗ್ಯ, ಶಿಕ್ಷಣಕ್ಕೆ ಹೆಚ್ಚಿನ ಒತ್ತು ಕೊಟ್ಟು ಮತ್ತಷ್ಟು ಕೆಲಸ ಮಾಡುವ ಆಸೆ ಇದೆ ಎಂದು ಹೇಳಿದರು.

ಲೋಕಸಭಾ ಚುನಾವಣೆಯ ಬಿಜೆಪಿ ಉಸ್ತುವಾರಿ ಆಯನೂರು ಮಂಜುನಾಥ್ ಮಾತನಾಡುತ್ತಾ,  ಪ್ರಧಾನಿ ಮೋದಿಯವರು ಕಾಂಗ್ರೆಸ್ ಮುಕ್ತ ಭಾರತ ಮಾಡುತ್ತೇವೆಂದು ಘೋಷಿಸಿದಾಗ ನಮಗೂ ಅನುಮಾನವಿತ್ತು. ಆದರೆ ಈಗ ಕರ್ನಾಟಕ ಹಾಗೂ ಪಂಜಾಬ್ ರಾಜ್ಯ ಹೊರತುಪಡಿಸಿದರೆ ಬೇರೆಡೆ  ಕಾಂಗ್ರೆಸ್ ಪಕ್ಷವನ್ನು ಹುಡುಕವಂತಹ ಸ್ಥಿತಿ ಎದುರಾಗಿದೆ ಎಂದು ಹೇಳಿದರು.

ಪ್ರಧಾನಿ ಮೋದಿಯವರು ಸರ್ಜಿಕಲ್ ಸ್ಟ್ರೈಕ್ ಹಾಗೂ ಏರ್ ಸ್ಟ್ರೈಕ್ ಮಾಡಿ ಪಾಕಿಸ್ತಾನಕ್ಕೆ ಬಿಸಿ ಮುಟ್ಟಿಸಿದರು. ಹಾಗೆಯೇ ನಾವೂ ಸಹ ಕಾಂಗ್ರೆಸ್ ಗೆ ಬಿಸಿ ಮುಟ್ಟಿಸಬೇಕು. ನಮ್ಮ ದಾಳಿ ಮೇಲಿನಂದಲೋ ಕೆಳಗಿಂದಲೋ ಗೊತ್ತಾಗದಂತೆ ಮಾಡಬೇಕಿದೆ ಎಂದು ಹೇಳಿದರು.

ಶಾಸಕ ಎಸ್.ಎ. ರವೀಂದ್ರನಾಥ್ ಮಾತನಾಡುತ್ತಾ, ದಾವಣಗೆರೆ ದಕ್ಷಿಣ ಕ್ಷೇತ್ರ ಅನೇಕ ಹೋರಾಟಗಳ ಮೂಲಕ ಎತ್ತರಕ್ಕೆ ಬೆಳೆದ ಕ್ಷೇತ್ರವಾಗಿದೆ. ಆದರೆ ಇದುವರೆಗೆ ಆ ಕ್ಷೇತ್ರದಿಂದ ಓರ್ವ ಬಿಜೆಪಿ ಶಾಸಕ ಗೆಲ್ಲಲು ಸಾಧ್ಯವಾಗಿಲ್ಲ. ಈ ಬಾರಿ ಲೋಕಸಭಾ ಚುನಾವಣೆಯಲ್ಲಿ 50 ಸಾವಿರ ಲೀಡ್ ಕೊಟ್ಟು ಗೆಲ್ಲಿಸಬೇಕು ಎಂದು ಹೇಳಿದರು.

ಬಿಜೆಪಿ ಜಿಲ್ಲಾಧ್ಯಕ್ಷ ಯಶವಂತರಾವ್ ಜಾಧವ್ ಮಾತನಾಡುತ್ತಾ, ಹಿಂದೆ ಕಾಂಗ್ರೆಸ್ ಪಕ್ಷದಿಂದ ಟಿಕೆಟ್ ತರಬೇಕೆಂದರೆ ಹರಸಾಹಸ ಪಡಬೇಕಿತ್ತು. ಟಿಕೆಟ್ ಸಿಕ್ಕವರೇ ಸಂಸದರಾಗಿ ಗೆಲ್ಲುತ್ತಿದ್ದರು. ಆದರೆ 2014ರ ನಂತರ ಪ್ರಧಾನಿ ಮೋದಿಯವರು ದೇಶದ ಚಿತ್ರಣವನ್ನೇ ಬದಲಿಸಿದ್ದಾರೆ. ಕಾಂಗ್ರೆಸ್ ಪಕ್ಷದಿಂದ ಚುನಾವಣೆಗೆ ನಿಲ್ಲಲು ಯೋಚಿಸಬೇಕಾದ ಪರಿಸ್ಥಿತಿ ಬಂದಿದೆ. 120 ವರ್ಷಗಳ ಇತಿಹಾಸದ ಕಾಂಗ್ರೆಸ್ ಗೆ ಇಂತಹ  ಸ್ಥಿತಿ ಬಂದಿದೆ ಎಂದರೆ ಬಿಜೆಪಿ ಕಾರ್ಯಕರ್ತರು ಯಾವ ರೀತಿ ಕೆಲಸ ಮಾಡಿದ್ದಾರೆ ಎಂಬುದನ್ನು ಚಿಂತಿಸಬೇಕು ಎಂದರು.

ಯುವ ಮುಖಂಡ ಹೆಚ್.ಎಸ್. ನಾಗರಾಜ್ ಮಾತನಾಡುತ್ತಾ, ದೇಶದ ಕಾಂಗ್ರೆಸ್ ನಾಯಕ ಎಲ್ಲರಿಗೂ ಜೀ ಎಂದು ಹೇಳಿಕೊಂಡು ಹೋಗುತ್ತಿದ್ದಾರೆ. ಇನ್ನು ಸ್ಥಳೀಯವಾಗಿ ನಾಯಕರು ಮನೆ ಬಿಟ್ಟು ಹೊರ ಬರುತ್ತಿಲ್ಲ. ಇಂತಹ ಸ್ಥಿತಿಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಯಾವ ರೀತಿ ಮತ ಕೇಳಬೇಕೆಂಬ ಗೊಂದಲದಲ್ಲಿದ್ದಾರೆ ಎಂದು ಕಿಚಾಯಿಸಿದರು.

ರಾಜನಹಳ್ಳಿ ಶಿವಕುಮಾರ್, ಜೀವನಮೂರ್ತಿ, ರಮೇಶ್ ನಾಯ್ಕ, ರುದ್ರಮುನಿ ಸ್ವಾಮಿ, ಡಾ.ಮಂಜುನಾಥ ಗೌಡ, ವೈ.ಮಲ್ಲೇಶ್ , ಕೊಳೇನಳ್ಳಿ ಸತೀಶ್, ಎಲ್.ಡಿ. ಗೋಣೆಪ್ಪ, ಪ್ರಭು ಕಲಬುರ್ಗಿ ಮತ್ತಿತರರು ಸಮಾರಂಭದಲ್ಲಿ ಉಪಸ್ಥಿತರಿದ್ದರು.