May 21, 2019

ತಂದ್ರೆ ಬಂದ್ರೆ ಮದುವಿ ಛಲೋ..!

ವಿಶ್ವಕರ್ಮ ಸಮಾಜ ಸಂಘದ 36ನೇ ವರ್ಷದ
ಸಾಮೂಹಿಕ ವಿವಾಹ ಮಹೋತ್ಸವದಲ್ಲಿ ಶ್ರೀ ವೀರೇಂದ್ರ ಸ್ವಾಮೀಜಿ

ದಾವಣಗೆರೆ : ಜೀವನದಲ್ಲಿ ಜವಾ ಬ್ದಾರಿಯನ್ನು ರೂಢಿಸಿಕೊಂಡು, ವ್ಯವಹಾರ ಚತುರರಾದರೆ, ಬೇರೆಯವರನ್ನು ಅವಲಂಬಿಸದೆ ಸ್ವಾಭಿಮಾನಿಗಳಾದರೆ ಮಾತ್ರ ವೈವಾಹಿಕ ಜೀವನ ಉತ್ತಮವಾಗಿರುತ್ತದೆ ಎಂದು ನವಲಗುಂದ ಕ್ಷೇತ್ರದ ಜಗದ್ಗುರು ಅಜಾತ ನಾಗಲಿಂಗ ಮಹಾಸ್ವಾಮಿ ಮಠದ ಶ್ರೀ ವೀರೇಂದ್ರ ಸ್ವಾಮೀಜಿ ತಿಳಿಸಿದ್ದಾರೆ.

ನಗರದ ಕಾಳಿಕಾ ರಸ್ತೆಯಲ್ಲಿರುವ ಶ್ರೀ ಕಾಳಿಕಾಂಬ ವಿಶ್ವಕರ್ಮ ಕಲ್ಯಾಣ ಮಂಟಪದಲ್ಲಿ ವಿಶ್ವಕರ್ಮ ಸಮಾಜ ಸಂಘದ ವತಿಯಿಂದ ಆಯೋಜಿಸಲಾಗಿದ್ದ 36ನೇ ವರ್ಷದ ಸಾಮೂ ಹಿಕ ಉಪನಯನ ಹಾಗೂ ವಿವಾಹ ಮಹೋ ತ್ಸವದ ಧಾರ್ಮಿಕ ಸಭಾ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡುತ್ತಿದ್ದರು.

ವೈವಾಹಿಕ ಜೀವನದಲ್ಲಿ ಕಷ್ಟ – ಸುಖ ಎರಡೂ ಇರುತ್ತದೆ. ಎರಡನ್ನೂ ಸಹಿಸಿಕೊಳ್ಳಬೇಕು. ಧರ್ಮದಿಂದ ಕರ್ತವ್ಯ ನಿರ್ವಹಿಸಬೇಕು. ಉದಾತ್ತ ಜೀವನ ನಡೆಸಬೇಕು. ಲೋಕಾರೂಢಿಯಾಗಿ ಮದುವೆ ಮಾಡಿಕೊಂಡ ರಾಯಿತು ಎಂಬ ಭಾವನೆ ಬೇಡ ಎಂದು ತಿಳಿಸಿದರು.

ಮದುವೆ ನಿರ್ವಹಿಸಲು ಜಾಣತನವೂ ಬೇಕು. ಇದಕ್ಕಾಗಿ ಒಂದು ಪರೀಕ್ಷೆ ಆಯೋಜಿಸಿ ಅದರಲ್ಲಿ ಉತ್ತೀರ್ಣರಾದವರಿಗೆ ಮಾತ್ರ ಮದುವೆ ಯಾಗಲು ಅವಕಾಶ ಕೊಡುವ ಬಗ್ಗೆ ಯೋಚಿಸಿ ದರೂ ತಪ್ಪೇನಿಲ್ಲ ಎಂದು ಶ್ರೀಗಳು ಹೇಳಿದರು.

ಉಣಕಳ್‌ ಸಿದ್ದಪ್ಪ ಮಹಾರಾಜ್ ಅವರಿಗೆ ವಿವಾಹಿತನೋರ್ವ, `ನೀವೂ ಮದುವೆ ಮಾಡಿಕೊಂಡು ನನ್ನಂತೆ ಆರಾಮಾಗಿರಿ’ ಎಂದು ಹೇಳಿದ. ಆಗ ಸಿದ್ದಪ್ಪ ಮಹಾರಾಜ್ ಅವರು, `ತಂದ್ರ ಬಂದ್ರ ನಿಂದ ಛಲೋ… ತೊಂದ್ರಿ ಬಂದ್ರ ನಂದೆ ಛಲೋ’ ಎಂದಿದ್ದರು. ಅಂದರೆ ನೀನು ತಂದು ಬಂದು ಜೀವನ ಮಾಡಿದರೆ ವೈವಾಹಿಕ ಜೀವನ ಒಳ್ಳೆಯದೇ. ಆದರೆ, ತೊಂದರೆ ಬಂದರೆ ಸನ್ಯಾಸಿಯಾಗಿರುವುದೇ ಉತ್ತಮ ಎಂದಿದ್ದರು ಎಂದು ಶ್ರೀಗಳು ತಿಳಿಸಿದರು.

ಹೀಗಾಗಿ ಮದುವೆ ಮಾಡಿಕೊಂಡವರು ಸಂಸಾರಕ್ಕೆ ಅಗತ್ಯವಾದ ಜವಾಬ್ದಾರಿಗಳನ್ನು ನಿಭಾಯಿಸಬೇಕು. ದೈವ – ಗುರು ಭಕ್ತಿ, ಬಂದವರಿಗೆ ಆತಿಥ್ಯ, ಪ್ರಾಣಿಗಳ ಬಗ್ಗೆ ಭೂತ ದಯೆ ಇತ್ಯಾದಿ ಗುಣಗಳನ್ನು ಬೆಳೆಸಿಕೊಳ್ಳಬೇಕು ಎಂದು ತಿಳಿಸಿದರು.

ಸಾಧು ಸದ್ಧರ್ಮ ವೀರಶೈವ ಸಂಘದ ಅಧ್ಯಕ್ಷ ಕೆ.ಆರ್. ಜಯದೇವಪ್ಪ ಮಾತನಾಡಿ, ಮದುವೆ ಕೇವಲ ಎರಡು ಜೀವಗಳ ಬೆಸುಗೆಯಲ್ಲ. ಅದು ಎರಡು ಮನೆತನಗಳ ನಡುವಿನ ಬಾಂಧವ್ಯ. ನವ ವಿವಾಹಿತರು ಮನೆಗೆ – ಮನೆತನಕ್ಕೆ ಒಳ್ಳೆಯ ಹೆಸರು ತರಬೇಕು ಎಂದು ಕಿವಿಮಾತು ಹೇಳಿದರು.

ಜವಳಿ ಉದ್ಯಮಿ ಬಿ.ಸಿ. ಉಮಾಪತಿ ಮಾತನಾಡಿ, 36 ವರ್ಷಗಳಿಂದ ಅಚ್ಚುಕಟ್ಟಾಗಿ ಸಾಮೂಹಿಕ ವಿವಾಹ ಆಯೋಜಿಸುತ್ತಾ ಬಂದಿರುವುದಕ್ಕೆ ಹರ್ಷ ವ್ಯಕ್ತಪಡಿಸಿದರು. ಶಾಸಕ ಎಸ್.ಎ.ರವೀಂದ್ರನಾಥ್ ಮಾತನಾಡಿ, ಸಾಮೂಹಿಕ ವಿವಾಹದಲ್ಲಿ 25ಕ್ಕೂ ಹೆಚ್ಚು ಜೋಡಿಗಳು ಮದುವೆಯಾದರೆ ಸರ್ಕಾರದಿಂದ ಸವಲತ್ತುಗಳು ದೊರೆಯುತ್ತವೆ. ಈ ಬಗ್ಗೆ ಹೆಚ್ಚು ಪ್ರಚಾರ ಕೊಡಬೇಕು ಎಂದು ಕರೆ ನೀಡಿದರು.

ಬಿಐಇಟಿ ನಿರ್ದೇಶಕ ವೈ. ವೃಷಭೇಂದ್ರಪ್ಪ, ವಿಶ್ವಕರ್ಮ ಸಮಾಜದ ಗೌರವಾಧ್ಯಕ್ಷ ಬಿ.ಎಲ್. ಸೀತಾರಾಮಾಚಾರ್ ಮಾತನಾಡಿದರು.

ವೇದಿಕೆಯ ಮೇಲೆ ಜಿಲ್ಲಾ ವಿಶ್ವಕರ್ಮ ಸಮಾಜದ ಅಧ್ಯಕ್ಷ ಕೆ.ಪಿ ಮರಿಯಾಚಾರ್ ಉಪಸ್ಥಿತರಿದ್ದರು. ವಿಶ್ವಕರ್ಮ ಸಮಾಜ ಸಂಘದ ಅಧ್ಯಕ್ಷ ಬಸಾಪುರದ ಬಿ.ನಾಗೇಂದ್ರಾಚಾರ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.

Please follow and like us: