November 21, 2019

ಜ್ಞಾನ, ಪರಿಣಿತಿಗಾಗಿ ಅಧ್ಯಯನ : ಕುಲಪತಿ ಹಲಸೆ

ದಾವಣಗೆರೆ : ಜ್ಞಾನ ಹಾಗೂ ಪರಿಣಿತಿಗಾಗಿ ಅಧ್ಯಯನದಲ್ಲಿ ತೊಡಗಬೇಕೇ ವಿನಃ ಪ್ರಮಾಣ ಪತ್ರಕ್ಕಾಗಿ ಅಲ್ಲ ಎಂದು ದಾವಣಗೆರೆ ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ಎಸ್.ವಿ. ಹಲಸೆ ತಿಳಿಸಿದ್ದಾರೆ.

ನಗರದ ಎಸ್‌ಬಿಸಿ ಪ್ರಥಮ ದರ್ಜೆ ಮಹಿಳಾ ಕಾಲೇಜು ಮತ್ತು ಅಥಣಿ ಸ್ನಾತಕೋತ್ತರ ಕೇಂದ್ರಗಳ ವಿದ್ಯಾರ್ಥಿ ಸಂಘದ ಉದ್ಘಾಟನಾ ಸಮಾರಂಭದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡುತ್ತಿದ್ದರು.

ಗುರುಕುಲ ವ್ಯವಸ್ಥೆಯಲ್ಲಿ ಪ್ರಮಾಣ ಪತ್ರ ಇರಲಿಲ್ಲ. ಪರಿಣಿತಿಗಾಗಿ ವಿದ್ಯಾರ್ಥಿಗಳು ಶ್ರಮಿಸುತ್ತಿದ್ದರು. ಇದರಿಂದಾಗಿ ಜ್ಞಾನ ದೊರೆಯುತ್ತಿತ್ತು ಎಂದವರು ಹೇಳಿದರು.

ಜ್ಞಾನ ಇಲ್ಲದ ಪ್ರಮಾಣ ಪತ್ರ ನಿರುಪಯುಕ್ತ. ಹೀಗಾಗಿ ರಾಂಕ್ ಪಡೆಯಲು ಅಧ್ಯಯನ ಮಾಡುವ ಜೊತೆ ಜೊತೆಗೆ ಜ್ಞಾನಾರ್ಜನೆಯನ್ನೂ ಹೊಂದಬೇಕು. ಇದೆಲ್ಲದರ ಜೊತೆ ಮೌಲ್ಯಗಳನ್ನು ಎತ್ತಿ ಹಿಡಿದರೆ ಮುಂದಿನ ಜೀವನದಲ್ಲಿ ನೆಮ್ಮದಿ ಸಿಗುತ್ತದೆ ಎಂದವರು ಹೇಳಿದರು.

ವಿದ್ಯಾರ್ಥಿ ಜೀವನದಲ್ಲಿ ಅಧ್ಯಯನ ನಿರಂತರವಾಗಿರಬೇಕು. ಕಾಲೇಜಿನ ಹಾಜರಾತಿ ಗರಿಷ್ಠವಾಗಿರಬೇಕು ಹಾಗೂ ವೇಳಾಪಟ್ಟಿ ಮತ್ತು ಸಮಯ ಪಾಲನೆ ಇರಬೇಕು. ಪರಿಶ್ರಮದ ಮನೋಭಾವ ರೂಢಿಸಿಕೊಳ್ಳಬೇಕು ಎಂದು ಹೇಳಿದರು.

ಮುಖ್ಯ ಅತಿಥಿಯಾಗಿ ಮಾತನಾಡಿದ ದಾವಣಗೆರೆ ಹರಿಹರ ಅರ್ಬನ್ ಕೋ ಆಪರೇ ಟಿವ್ ಬ್ಯಾಂಕ್ ಅಧ್ಯಕ್ಷ ಎನ್.ಎ. ಮುರುಗೇಶ್, ಕ್ರೀಡೆಯಿಂದ ನಾಯಕತ್ವದ ಗುಣ ಬೆಳೆಯು ತ್ತದೆ. ಕ್ರೀಡೆ ಗರಡಿ ಮನೆಯಂತೆ ದೇಹವನ್ನು ಸದೃಢಗೊಳಿಸುತ್ತದೆ ಎಂದು ತಿಳಿಸಿದರು.

ಶಿಸ್ತು, ವಿಧೇಯತೆ ಹಾಗೂ ಬದ್ಧತೆಯಿಂದ ಸಾಧನೆ ಸಾಧ್ಯ. 

ತಂದೆ – ತಾಯಿಗಳ ಬಗ್ಗೆ ಗೌರವ, ಗುರುಗಳ ಬಗ್ಗೆ ಶಿಸ್ತು ಹಾಗೂ ಗುರಿಯ ಬಗ್ಗೆ ಬದ್ಧತೆ ಇರಬೇಕು ಎಂದವರು ಹೇಳಿದರು.

ಕುವೆಂಪು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ಬಿ.ಪಿ. ವೀರಭದ್ರಪ್ಪ ಮಾತನಾಡಿ, ಎಡೆಬಿಡದೆ ಶ್ರಮ ಇದ್ದರೆ ಸಾಧನೆ ಎಲ್ಲರಿಂದಲೂ ಸಾಧ್ಯ. ಓದಿ ಜಾಣರಾಗದಿದ್ದರೆ ಪ್ರಯೋಜನವಿಲ್ಲ. ಓದಿ ಓದಿ ಕೂಚುಭಟ್ಟರಾಗದೇ, ವಿದ್ಯೆಯನ್ನು ಮೈಗೂಡಿಸಿಕೊಳ್ಳಬೇಕು ಎಂದು ತಿಳಿಸಿದರು.

ಎಸ್‌ಬಿಸಿ ಪ್ರಥಮ ದರ್ಜೆ ಮಹಿಳಾ ಕಾಲೇಜು ಪ್ರಾಂಶುಪಾಲ ಡಾ. ಕೆ. ಷಣ್ಮುಖ ಪ್ರಾಸ್ತಾವಿಕವಾಗಿ ಮಾತನಾಡಿದರು.

ವೇದಿಕೆಯ ಮೇಲೆ ವಿನಾಯಕ ಎಜುಕೇಷನ್ ಟ್ರಸ್ಟ್‌ನ ಟ್ರಸ್ಟಿಗಳಾದ ಕೆ.ಜಿ. ಸುಗಂಧರಾಜು, ಅಥಣಿ ಪ್ರಶಾಂತ್, ಅಥಣಿ ಪಿಯು ಕಾಲೇಜು ಪ್ರಾಂಶುಪಾಲ ರಾಜಶೇಖರ್‌ ಉಪಸ್ಥಿತರಿದ್ದರು. ಟ್ರಸ್ಟಿ ಎಸ್.ಕೆ. ವೀರಣ್ಣ ಅಧ್ಯಕ್ಷತೆ ವಹಿಸಿದ್ದರು.

ಉಷಾರಾಣಿ ಮತ್ತು ಸಂಗಡಿಗರು ಪ್ರಾರ್ಥಿಸಿದರೆ, ಕಾವ್ಯಶ್ರೀ ಸ್ವಾಗತಿಸಿದರು. ಬಿ.ಕೆ. ಅರ್ಪಿತ ನಿರೂಪಿಸಿದರು. ಪೂಜಾ ವಂದಿಸಿದರು.